Sunday, April 19, 2015

ದುರ್ವಾಸನೆ

ಅದು ಇದು
ತೀರಾ, ಬಚ್ಚಲು ಮನೆಯಲ್ಲಿ
ಕೂತು ಕಾರಿಕೊಳ್ಳುವವ
ಇತ್ತೀಚೆಗೆ ಹೊರಗಡೆ ಕಾರುತ್ತಿದ್ದೆ
ಅದು ಹೀಗೆ ಇದು ಹಾಗೆ
ಆ ಹಾಗೆ ಹೀಗೆ ಗಳ ನಡುವೆ
ಅವನಿದ್ದ, ಬದುಕಿದ್ದ ಮತ್ತು ಇದ್ದ ಅಷ್ಟೆ...

ಹೆಚ್ಚು ಬಾರಿ ಕಾರಿಕೊಂಡು
ಬಚ್ಚಲಿನ ನಾತ ಹೆಚ್ಚಾಗಿ,
ಹೆಂಡತಿ ಸತ್ತು, ಇಲಿ ಹೆಗ್ಗಣಗಳು
ಮೂಗು ಮುಚ್ಚಿಕೊಂಡು
ಮನೆ ಬಿಟ್ಟಾಗ.
ಹೆಮ್ಮೆಯಿಂದ ಬೀಗಿದವನು
"ನನ್ನ ಮಾತಿಗೆ ಹೆದರಿಬಿಟ್ಟರು"
ದುರ್ವಾಸನೆಗೆ ಮೂಗುಜ್ಜಿಕೊಂಡವರು
ಸುಮ್ಮನೆ ನಕ್ಕುಬಿಟ್ಟರು.

ವಾತಾಯನದ ಸಮಸ್ಯೆಗೆ
ಹೊರಗೆ ಬಂದರೆ ತಂಗಾಳಿ.
ಇಂಗಾಲವಿಲ್ಲದ ಮಂದಾನಿಲ
ಯಾಕೋ ಒಗ್ಗದೆ
ಭಗ ಭಗನೆ ಉಸುರಿದ
ಪರಿಚಿತವಲ್ಲದ ಊರಿನಲ್ಲಿ
ನನ್ನ ಪರಿಚಯ ಹೇಗೆ?
ನನ್ನದೇ ಛಾಪಿರಲಿ ಇಲ್ಲಿ.
ಬಿಲದ ಬಾಯಿಯ ಭಗವಾನ
ಕಾರಿಕೊಂಡಿದ್ದು ಹೀಗೆ,
ನಾತದೊಳಗೆ ದುರ್ನಾತ ಮುದ್ದು
ನನ್ನ ವಾಸನೆ ಅದನೆ ಹೊದ್ದು
ಮಲಗಿದೆ, ಇದು ಸತ್ಯ, ಸತ್ಯ, ಸತ್ಯ

ಯಾರ ಯಾರದೋ ಬೆಡ್ ರೂಮಿನ
ಕಿಟಕಿಗೆ ಕಳ್ಳಗಿವಿಯಿಟ್ಟು ನೋಡುತ್ತಾನೆ
ಅವರಿತ್ತ ಆದರ್ಶಗಳ ಮರೆತು
ತನ್ನ ಚಟಗಳ ಅವರಲ್ಲಿ ಕಾಣುವ
ಹುಂಬನುದ್ರೇಕಕೆ ಹುಚ್ಚೆದ್ದವರು
ಹಿಂಬಾಲಿಸುತ್ತಾರೆ,
ಕಕ್ಕುತ್ತಾರೆ, ಅದೇ ವಾಂತಿಯನು ನೆಕ್ಕಿ
ಕುಣಿದಾಡುತ್ತಾರೆ.

ಎಲ್ಲೋ ಕೂತಿದ್ದ ಕಡತಗಳ ಹೆಕ್ಕಿ
ಸಾಲುಗಳ ಹೊಕ್ಕಿ , ಅದನು ಮುಕ್ಕಿ
ಇನ್ಯಾವುದೋ ಮಕ್ಕಿ ಕಾ ಮಕ್ಕಿ.
ಅಲ್ಲಿಗೆ ಇವನ ನಾತವೀಕ್ಷಣೆ
ಸ್ಲಂಶೋಧನೆ, ಮುಗಿದು
ಈಗ ಚೆಲ್ಲುತ್ತಾನೆ ಅಪಾನವಾಯು.
ಗಾಳಿಯಲ್ಲಿ ತೇಲಿಬಿಟ್ಟ ಮಾತ್ರಕ್ಕೆ
ಗಾಳಿಗಂಧ ವಾಸನೆಯೇ?
ಜನ ದೂರವಿಟ್ಟು ಜರುಗಿಸುತ್ತಾರೆ
ಅಪರ ಕಾರ್ಯ.

ಈಗಲೂ ಅವನಿದ್ದಾನೆ
ಇದ್ದಾನೆ
ಬದುಕಿದ್ದಾನೆ
ಅವನದೇ ರೀತಿಯಲ್ಲಿ
ಅದೇ ಬಚ್ಚಲುಮನೆಯಲ್ಲಿ
ಬಾಯೆಂಬ ಬಚ್ಚಲಿನಲ್ಲಿ
ಇದ್ದಾನೆ
ಇದ್ದಾನೆ..

No comments: