Sunday, April 19, 2015

ಮರೆಯಾದವನಿಗೆ...

ಮರೆಯಾದವನಿಗೆ...

ಅಂದುಬಿಡಲೇ ಗೆಳೆಯ ಹೀಗೆ? ಮರೆಯಾಗಿಬಿಟ್ಟೆಯಾ ನನ್ನೊಲವ ಪರಿಧಿಯಿಂದ?ನಿನಗೆಂದಾದರೂ ಚೌಕಟ್ಟನ್ನು ಕೊಟ್ಟಿದ್ದೆನಾ ನಾನು? ಇಲ್ಲವಲ್ಲ, ನಿನಗೆ ಬೇಕಾದಂತೆ ಇರಬಹುದು, ನನ್ನನ್ನು ಪ್ರೀತಿಸಿದರೆ ಸಾಕಿತ್ತು. ನಿನ್ನ ಪ್ರತಿಯೊಂದು ನೋವುಗಳನ್ನು ಹಂಚಿಕೊಳ್ಳಬಲ್ಲವಳು ನಾನು ಎಂಬ ಅಹಂಕಾರವನ್ನು ಕೊಟ್ಟರೆ ಸಾಕಿತ್ತು. ನಿನಗೆ ಸಂತೋಷವನ್ನು ಮಾತ್ರ ಕೊಡುವ ಪ್ರೇಯಸಿ ನಾನು ಎಂಬ ಹೆಮ್ಮೆಯನ್ನು ನನಗೆ ಕೊಟ್ಟರೆ ಸಾಕಿತ್ತು. ಲೋಕದ ಯಾವ ಗಡಿಗಾದರೂ ನಿನ್ನೊಡನೆ ಬರಲು ನಾನು ಸಿದ್ದವಿದ್ದೆ. ನಾನು ನಿನ್ನವಳು ಎಂಬ ಗರ್ವವನ್ನು ಕೊಟ್ಟಿದ್ದರೆ ಸಾಕಿತ್ತು. ಆದರೆ ಹಾಗೆ , ಏನೂ ಹೇಳದೆ, ಹೋಗಿಬಿಡುವ ಅನಿವಾರ್ಯತೆ ಏನಿತ್ತು? ನಿನ್ನೆಲ್ಲ ಜಂಜಾಟಗಳನ್ನು ಗೊಂದಲಗಳನ್ನು ನೀನು ಹೇಳದಿದ್ದರೂ ನಿನ್ನ ಮುಖದೊಳಗಿನ‘ ಬಿಂಬವನ್ನು ನೋಡಿಯೇ ತಿಳಿದುಕೊಳ್ಳುತ್ತಿದ್ದ ನನಗೆ ಮುಖವನ್ನೂ ತೋರಿಸದೆ ಮರೆತುಬಿಡು ಎಂದು ದ್ವನಿಯಲ್ಲಿ ಹೇಳಿ ಹೋಗಿಬಿಡುವುದು ಸರಿಯೇ? ಕೆಲವೊಮ್ಮೆ ಧ್ವನಿ ಮೋಸ ಮಾಡಿಬಿಡುತ್ತದೆ. ನೀನು ತೊರೆದದ್ದು ನಿಜವೇ? ಅಥವಾ ನಿನ್ನನ್ನು ನೀನು ಮೋಸ ಮಾಡಿಕೊಳ್ಳುತ್ತಿರುವೆಯಾ? ನಿನಗೆ ನಾನು ಹಿಂಸೆ ಎನಿಸಿದರೆ ಹೇಳಿಬಿಡಬೇಕಿತ್ತು ಗೆಳೆಯ ನಿನ್ನ ನಗುವೊಂದೆ ನನಗೆ ಬೇಕಿದ್ದುದು. ನಾನು ದೂರವುಳಿಯುತ್ತಿದ್ದೆ. ನನ್ನನ್ನು ಪೂರ್ಣವಾಗಿ ತಿಳಿದಿಕೊಂಡಿರುವೆಯೆಂದುಕೊಂಡಿದ್ದೆ, ನೆನಪಿದೆಯಾ ಗೆಳೆಯ ನಮ್ಮ ಪರಿಚಯದ ದಿನಗಳು. ನೆನಪಿಸಲೇ..

ಕಾಲೇಜಿನ ಕೊನೆಯ ವರ್ಷಗಳು ಅವು, ಯಾರನ್ನೂ ಹೆಚ್ಚಾಗಿ ಹಚ್ಚಿಕೊಳ್ಳದ ನಾನು ನಿಧಾನಕ್ಕೆ ಕಾಲೇಜಿಗೆ ಪರಿಚಯವಾಗುತ್ತಿದ್ದೆ. ಸುಮಾರು ಮೂರು ವರ್ಷಗಳು ಅದೇ ಕಾಲೇಜಿನಲ್ಲಿದ್ದರೂ ನಾನು ಮೌನಿ. ಪ್ರಜ್ಞಾ ಎಂದರೆ ಓದು ಮಾರ್ಕ್ಸ್ ಇಷೇ ಗೊತ್ತಿದ್ದ ಕಾಲೆಜಿನಲ್ಲಿ ನಾನು ನಿಧಾನವಾಗಿ ಪರಿಚಯವಾಗುತ್ತಿದ್ದೆ.  ನನ್ನ ಕವನಗಳು ನೋಟೀಸ್ ಬೋರ್ಡಿನಲ್ಲಿ ಬರುವುದಕ್ಕೆ ಆರಂಭವಾಯ್ತು. ಕನ್ನಡ ಪ್ರೊಫೆಸರ್ ನನ್ನ ಕವನಗಳ ವಿಮರ್ಶೆ ಮಾಡುತ್ತಿದುದು ಒಂದು ದೊಡ್ಡ ತೂಕವನ್ನೇ ನನಗೆ ಕೊಡುತ್ತಿತ್ತು. ನೀನು ನನ್ನದೇ ಕ್ಲಾಸಿನಲ್ಲಿದ್ದವನು. ನಿನ್ನ ಹೆಸರೇ ನನಗೆ ಗೊತ್ತಿರಲಿಲ್ಲ. ಆ ದಿನ ಸಣ್ಣದೊಂದು ಚರ್ಚೆ ಏರ್ಪಟ್ಟಿತ್ತು. ಅದೇ ಕನ್ನಡ ಪ್ರೊಫೆಸರ್ ಹಿಂಸೆಯನ್ನು ಅನುಭವಿಸುವವರು ಗಂಡೋ ಹೆಣ್ಣೋ ಎಂಬುದಾಗಿ ಪ್ರಶ್ನಿಸಿದ್ದರು. ನೀನು ಗಂಡಿನ ಪರವಾಗಿ ಮಾತನಾಡುತ್ತಿದ್ದೆ. ನಾನು ಚರ್ಚೆಯಲ್ಲಿರಲೇ ಇಲ್ಲ. ನಾನು ಮೌನಿಯಾಗಿದ್ದೆ. "ಗಂಡು ಜವಾಬ್ದಾರಿಯನ್ನು ಹೊತ್ತವ ಹೆಂಗಸರು ಜವಾಬ್ದಾರಿಯನ್ನು ಹೇರುವವರು, ಗಂಡು ಎಲ್ಲವನ್ನು ಎಲ್ಲರನ್ನು ಉಪಚರಿಸುತ್ತಾನೆ ಗಣನೆಗೆ ತೆಗೆದುಕೊಂಡು ಕಾರ್ಯ ನಿರ್ವಹಿಸುವ ವ್ಯಕ್ತಿಯಾಗಿರುತ್ತಾನೆ, ಆ ಹಂತದಲ್ಲಿ ಪ್ರತಿ ಸನ್ನಿವೇಶದಲ್ಲೂ ಹಿಂಸೆಯನ್ನು ಅನುಭವಿಸಬೇಕಾಗುತ್ತದೆ, ತನ್ನಂತೆ ಬದುಕಲಾಗದೆ ಇನ್ನೊಬ್ಬರ ಮರ್ಜಿಗೆ ಬದುಕುವ ಗಂಡು ಹೆಚ್ಚು ಹಿಂಸೆಯನ್ನು ಅನುಭವಿಸುತ್ತಾನೆ" ಇದು ನಿನ್ನ ವಾದವಾಗಿತ್ತು. ನಾನು ಅದುವರೆಗೂ ತಲೆ ತಗ್ಗಿಸಿ ಕೂತಿದ್ದವಳು ಅದೇಕೆ ಎದ್ದು ನಿಂತೆನೋ ಗೊತ್ತಿಲ್ಲ. ಜಗತ್ತಿನಲ್ಲಿ ಎಲ್ಲರ ಮರ್ಜಿಗೆ ಬೀಳುವವಳು ಹೆಣ್ಣು, ಹುಟ್ಟಿದಂದಿನಿಂದ ಮದುವೆಯವರೆಗೆ ತಂದೆಯು ಹೇಳಿದಂತೆ ಅದೂ ಸರ್ಪಗಾವಲಿನಲ್ಲಿ, ಸ್ವತಂತ್ರ್ಯವಿಲ್ಲದೆ, ಸ್ವಂತ ಆಲೋಚನೆ ಮಾಡದಂತೆ ಪ್ರತಿಬಂಧಿಸಿ, ಯಾರೋ ಏನೋ ಮಾಡುತ್ತಾರೆಂದು ಹೆದರಿ ಬಾಳುವಂತೆ ಮಾಡುವ ಆ ನಿರ್ಬಂಧಗಳ ಬೇಲಿಯಲ್ಲಿ ಬೆಳೆಯುವ ನಾವುಗಳು ಹಿಂಸೆಯನ್ನು ಅನುಭವಿಸುವವರಲ್ಲವೇ? ಮದುವೆಯಾಗುವ ಕಾಲದಲ್ಲಿ ಗಂಡನಾಗುವವನ ಕಾವಲಿನಲ್ಲಿ. ಮತ್ತದೇ ಸ್ವತಂತ್ರ್ಯವಿಲ್ಲದೆ ಇನ್ಯಾರೋ ಕಣ್ಣು ಹಾಕುವವರೆಂಬ ಅವನ ಭಯದಲ್ಲಿ ನಮ್ಮ ಸ್ವತಂತ್ರ್ಯವನ್ನು ಕಳೆದುಕೊಂಡು ಬದುಕುವ ನಾವು ಹಿಂಸೆಯನ್ನು ಅನುಭವಿಸುವವರಲ್ಲವೇ? ಮದುವೆಯಾಗಿ  ಸಾಯುವವರೆಗೂ  ಗಂಡನ ಮರ್ಜಿಯಲ್ಲಿ ಬದುಕುತ್ತಾ ಲೋಕದ ಕಣ್ಣಲ್ಲಿ ಸ್ವತಂತ್ರ್ಯದಂತೆ ಕಂಡರೂ , ಇಲ್ಲದ ಸ್ವತಂತ್ರ್ಯವನ್ನು ಆರೋಪಿಸಿಕೊಂಡು ಬದುಕುವವರು ನಾವು, ಹಿಂಸೆಯನ್ನು ಅನುಭವಿಸುವವರಲ್ಲವೇ?" ಒಂದೆರಡು ಕ್ಷಣ ಮೌನವಾಗಿದ್ದ ಕ್ಲಾಸ್ ಚಪ್ಪಾಳೆಗಳಲ್ಲಿ ಮುಳುಗೆದ್ದಿತು, ನೀನು ನನ್ನೆಡೆಗೆ ನೋಡಿ ನಗುತ್ತಿದ್ದೆ ಮತ್ತು ಚಪ್ಪಾಳೆ ತಟುತ್ತಿದ್ದೆ. ನಾನು ನಾಚಿ ತಲೆತಗ್ಗಿಸಿ ಕೂತುಬಿಟ್ಟಿದ್ದೆ. "ಮಿಸ್ ಪ್ರಜ್ಞಾ ಹೆಲೋ ನಿಲ್ರಿ ತುಂಬಾ ಚೆನ್ನಾಗಿ ಮಾತಾಡಿದ್ರಿ ಹೆಲೋ" ಅಷ್ಟೆ ನಿನ್ನ ಮಾತು ನಾನು ಮಾತನಾಡಿಸದೆ ಹೊರಟುಬಿಟ್ಟಿದ್ದೆ. ಹೌದು ನಾನು ನನ್ನ ಕತೆಯನ್ನೇ ಹೇಳಿದ್ದೆ. ಅದೇ ರೀತಿಯ ಚೌಕಟ್ಟಿನಲ್ಲಿ ಬೆಳೆದವಳು ನಾನು. ಅಪ್ಪ ಪ್ರತಿಬಾರಿ ಹೇಳುತ್ತಿದ್ದುದು ಒಂದೇ  ಮಾತು "ಕಾಲ ಚೆನ್ನಾಗಿಲ್ಲ ಮಗು, ಹೆಚ್ಚು ಮಾತಾಡದಿರು" ಎಂದು. ಈಗಿನ ನನ್ನ ಸ್ಥಿತಿಯನ್ನು ನೋಡಿದರೆ ಅವರ ಮಾತು ಸತ್ಯ ಎನಿಸುತ್ತದೆ. ಮಾರನೆಯ ದಿನ ನನ್ನ ನಿನ್ನ ಮಾತು ಚಿಕ್ಕದಾಗಿ ಚೊಕ್ಕವಾಗಿ ಆರಂಭವಾಯ್ತು, ನಿನ್ನ ಮಾತುಗಳಲ್ಲಿ ತೂಕವಿತ್ತು , ನನ್ನ ಮನೆಯಲ್ಲಿನ ಗಂಡಿನಲ್ಲಿ ಕಾಣದ ಜವಾಬ್ದಾರಿಯ ಮತ್ತು ಹೆಣ್ಣನ್ನು ಅಳುವ ಮನೋಭಾವವಿಲ್ಲದ ಮನಸ್ಥಿತಿಯನ್ನು ನಿನ್ನಲ್ಲಿ ಗುರುತಿಸಿದೆ.

ಪರಿಚಯ ಪ್ರೇಮವಾಗಿದ್ದು ಹೇಗೆ? ನಿಜಕ್ಕೂ ಗೊತ್ತಿಲ್ಲ ಇದುವರೆಗೂ ನಾನು ನಿನಗೆ ನೀನು ನನಗೆ ಪ್ರೇಮ ನಿವೇದನೆಯನ್ನು ಮಾಡಿಕೊಂಡಿಲ್ಲ,ಪ್ರೀತಿಸಿದ್ದೇವಷ್ಟೆ. ನಿನಗೇ ಗೊತ್ತಿಲ್ಲದೆ ನಿನ್ನ ಸಮಸ್ಯೆಗಳನ್ನು ನಾನು ತಿಳಿದುಕೊಂಡದ್ದಿದೆ, ಅದರ ಪರಿಹಾರವನ್ನು ಇಬ್ಬರೂ ಸೇರಿ ಮಾಡಿದ್ದಿದೆ, ನಿನಗೆ ನೆನಪಿರಬಹುದು, ನೀನು ಬೇಸರಗೊಂಡ ದಿನ, ನಿನ್ನ ಧ್ವನಿ ಮತ್ತು ಮುಖವನ್ನು ನೋಡಿಯೇ ನಾನು ಮನೆಯಲ್ಲಿ ಏನೋ ತೊಂದರೆಯಿದೆ ಅದೇನೆಂದು ಕೇಳಿದ್ದೆ, ನೀನು ಮಾತಿನಲ್ಲಿ ತೇಲಿಸಿದರೂ ನಂತರ ಫೋನಿನಲ್ಲಿ ನಿನಗೆ ಹೇಗೆ ಗೊತ್ತಾಯ್ತು ಎಂದು ಕೇಳಿದ್ದೆ. ನಾನು ನಿನ್ನನ್ನು ಪ್ರೀತಿಸಿದ್ದೆ ಗೆಳೆಯ.  ನಿನ್ನೊಳಗಿನ ಪ್ರತಿಯೊಂದು ಸಂವೇದನೆಗಳನ್ನು ನಾನು ತಿಳಿದುಕೊಳ್ಳುತ್ತಿದ್ದೆ ಅದಕ್ಕೆ ಯಾವ ಜ್ಯೋತಿಷಿಯ ಅವಶ್ಯಕತೆಯಿಲ್ಲ , ಪ್ರೀತಿಸುವ ಹೃದಯವೊಂದಿದ್ದರೆ ಸಾಕು. ಅದಾದ ನಂತರ ನೀನು ಪ್ರತಿಯೊಂದನ್ನೂ ನನ್ನೊಡನೆ ಹಂಚಿಕೊಳ್ಳುತ್ತಿದ್ದೆ. ಆದರೆ ಈಗ ಹೀಗೇಕೆ?

ನಿನ್ನ ಮನೆಯಲ್ಲಿ ನಮ್ಮ ಮದುವೆಗೆ ಒಪ್ಪಿಗೆ ಇರಲಿಲ್ಲವೆಂದರೆ ಹೇಳಬೇಕಿತ್ತು, ಹೌದು! ಅದನ್ನು ನಾನು ಒಪ್ಪಿಕೊಳ್ಳುತ್ತಿದ್ದೆ, ಕೆಲವೊಂದು ಸಂಪ್ರದಾಯಗಳ ಭಿನ್ನತೆಯನ್ನು ಹಿರಿಯರು ಒಪ್ಪಿಕೊಳ್ಳುವುದು ಕಷ್ಟ, ಆದರೆ ದೂರಾಗಲು ಕಾರಣವಾದರೂ ಸಿಗುತ್ತಿತ್ತು, ಆಸ್ತಿ ಅಂತಸ್ತಿನ ವಿಷಯವಾದರೆ ಹೇಳಬೇಕಿತ್ತು, ಹೌದು! ಕೆಲವರಿಗೆ ಅದು ಮುಖ್ಯವಾಗುತ್ತದೆ, ಅದನ್ನು ಒಪ್ಪಿಕೊಂಡು ದೂರಾಗುತ್ತಿದ್ದೆ, ಯಾವ ಕಾರಣವನ್ನೂ ಹೇಳದೆ ದೂರಾದದ್ದು ನನ್ನ ನೋವಿಗೆ ಕಾರಣ, ಗೆಳೆಯ. ನಿನಗ್ಯಾವ ಒತ್ತಡವಿತ್ತೋ ಅಥವಾ ಅದ್ಯಾವ ತೊಂದರೆಯಿತ್ತೋ ಗೊತ್ತಿಲ್ಲ ಆದರೆ ಅದನ್ನು ಹೇಳಬೇಕಿತ್ತು. ನೀನು ನನ್ನನ್ನು ಒಪ್ಪಿಸುವುದು ಬೇಡ ಗೆಳೆಯ ಆದರೆ ಕಾರಣವನ್ನಾದರೂ ಹೇಳು. ಸಂಕಟವಾಗಿ ಪಕ್ಕೆಗಳಲ್ಲಿ ಸಣ್ಣಗೆ ನೋವು, ಗಂಟಲಿನಲ್ಲಿ ಮಾತು ಹೊರಡದೆ, ಕೊರಳುಬ್ಬಿ ಬಿಕ್ಕಳಿಸಿದ್ದೇನೆ, ಪ್ರೀತಿ ದೂರವಾಯ್ತೆಂದಲ್ಲ, ಏನೂ ಹೇಳದೆ ಎದ್ದು ಹೋದದ್ದೇಕೆಂದು ತಿಳಿಯದೆ. ನನ್ನ ತಪ್ಪುಗಳೇನಾದರು ಇದ್ದರೆ ತಿಳಿಸಬಾರದೆ, ಈ ಮೌನ ಮತ್ತೆ ನನ್ನನ್ನು ಅದೇ ವರ್ತುಲಕ್ಕೆ ಸೇರಿಸುತ್ತಿದೆ. ನಾನು ಮೌನಿಯಾಗಿದ್ದರೆ ಎಷ್ಟೋ ಚೆಂದವಿರುತ್ತಿತ್ತು. ನಾನು ಶೂನ್ಯಳಾಗಿದ್ದೇನೆ, ನಿನ್ನ ತಪ್ಪುಗಳನ್ನು ನಾನೇ ಸಮರ್ಥಿಸಿಕೊಳ್ಳುತ್ತಿದ್ದೇನೆ, ನಾನೆ ಕಾರಣಗಳನ್ನು ಕೊಟ್ಟುಕೊಳ್ಳುತ್ತಿದ್ದೇನೆ, ತಪ್ಪುಗಳನ್ನು ನಾನೇ ಹೊರಿಸಿಕೊಳ್ಳುತ್ತಿದ್ದೇನೆ, ನಾನು ಮೂಕವಾಗುತ್ತಿದ್ದೇನೆ, ಈ ಮೌನ ತಪ್ಪು. ಗೊತ್ತಿದೆ ಆದರೆ ಸ್ವಲ್ಪ ಕಾಲ ಇದು ಬೇಕಿದೆ.


ಇತಿ ನಿನ್ನ ... ಪ್ರಜ್ಞಾ

No comments: