Sunday, April 19, 2015

ಮಗನನ್ನು ಪ್ರಾಮಾಣಿಕವಾಗಿ ಬೆಳೆಸಬೇಕೆಂದುಕೊಂಡಿದ್ದೆ...

ಮಗನನ್ನು ಪ್ರಾಮಾಣಿಕವಾಗಿ ಬೆಳೆಸಬೇಕೆಂದುಕೊಂಡಿದ್ದೆ...

ಬದುಕ ಬೇಕು ಮತ್ತು ಹೇಗಾದರೂ ಬದುಕಬೇಕು ಇವೆರಡರ ನಡುವೆ ವ್ಯತ್ಯಾಸವಿದೆ ಮಗು. ಪ್ರಾಮಾಣಿಕವಾಗಿ ಎಲ್ಲರಿಗಾಗಿ ಸಮಾಜಕ್ಕಾಗಿ ಬದುಕುವುದು ಒಂದು ಕಡೆಯಾದರೆ, ತನ್ನ ಬೇಳೆ ಬೇಯಿಸಿಕೊಳ್ಳಲು ಯಾವ ಮಟ್ಟಕ್ಕಾದರೂ ಹೋಗಿ ಬದುಕುವುದು ಮತ್ತೊಂದು ಕಡೆ. ನೀನು ಪ್ರಾಮಾಣಿಕವಾಗಿ ಬದುಕು ಎಂದು ನಿನಗೆ ಬೋಧಿಸಿ ಬೆಳೆಸಬೇಕೆಂದುಕೊಂಡಿದ್ದೆ. ಹೇಗೆ ಬೆಳೆಸಲಿ ಮಗು, ಯಾರ ಬೆದರಿಕೆಗೂ ಬಗ್ಗದೆ ನ್ಯಾಯವಾಗಿ ಬದುಕು ಎನ್ನಲೆ, ಆ ಜಿಲ್ಲೆಯ ಅಶಿಕ್ಷಿತ ಶಾಸಕ ಧಮ್ಕಿ ಹಾಕಿ ನಿನ್ನನ್ನು ಎತ್ತಂಗಡಿ ಮಾಡಿಸುತ್ತಾನೆ, ನಿನ್ನ ಧೈರ್ಯ ಕುಂದಿಬಿಡುವುದೋ ಎಂಬ ಭಯವಿದೆ, ಯಾವ ಆಸೆಗೂ ಬಲಿಯಾಗದೆ ಪ್ರಾಮಾಣಿಕವಾಗಿ ಜವಾಬ್ದಾರಿಯನ್ನು ನಿರ್ವಹಿಸು ಎನ್ನಲೆ, ರೌಡಿ ಶೀಟರಾಗಲರ್ಹ ವ್ಯಕ್ತಿಯೊಬ್ಬ ಮಂತ್ರಿಯಾಗಿ ನಿನ್ನನ್ನು ತನ್ನ ಚೇಲಾಗಳಿಂದ ಕೊಲ್ಲಿಸುತ್ತಾನೆ ಎಂಬ ಭಯವಿದೆ, ಇವೆಲ್ಲವಕ್ಕೂ ಮೀರಿ ನಿನ್ನನ್ನು ನೀನಿರುವಂತೆಯೇ ಅಥವಾ ಸತ್ತರೂ ಕೂಡ ಚಾರಿತ್ರ್ಯವಧೆ ಮಾಡುವ ಪತ್ರಕರ್ತರಿದ್ದಾರೆ, ಹೇಗೆ ಬದುಕುವೆ ಈ ಕರಾಳನಾಡಿನಲ್ಲಿ. ನಿನ್ನನ್ನು ಬೆಳೆಸಲಿ ಹೇಗೆ?
ಮೋಸಗಾರರು , ಕುತಂತ್ರಿಗಳು ದುಷ್ಟರು ತುಂಬಿದ ಊರಿನಲ್ಲಿ ನೀನೊಬ್ಬಗೆ ಹೇಗೆ ಬದುಕಬಹುದು. ಬದುಕಿದರೆ ಹುಲಿಯ ಹಾಗೆ ನಾಲ್ಕು ದಿನ ಬದುಕಬೇಕು ಎನ್ನುವ ಮಾತು ಸತ್ಯ, ಆದರೆ ಅದರೆ ಪ್ರತಿಫಲವೇನು. ನಿನ್ನೆದುರಿಗೆ ಹಲವಾರು ಉದಾಹರಣೆಗಳಿವೆ ಮಗು, ನಿನ್ನೊಳಗೆ ಋಣಾತ್ಮಕವಾದ ಅಂಶಗಳನ್ನು ತುಂಬುತ್ತಿದ್ದೇನೆ ಎಂದುಕೊಳ್ಳಬೇಡ. ಎಲ್ಲವೂ ಎಲ್ಲ ಕಾಲದಲ್ಲೂ ಇತ್ತು ಆದರೆ ಈ ಹೊತ್ತಿನಲ್ಲಿ ಅಸಹ್ಯವನ್ನೂ ಆಸ್ವಾದಿಸುವ ಅದನ್ನೇ ವೈಭವೀಕರಿಸುವ ಲಂಕಾರಾಜ್ಯದವರಿಗೆ ಕೊರತೆಯಿಲ್ಲ.ಇಷ್ಟಕ್ಕೂ ಅಧಿಕಾರಿಗಳನ್ನು ನೇಮಿಸಿದ್ದೇಕೆ ಎಂದರೆ  ಸಾವಿರಾರು ಜನಕ್ಕೆ ತಮ್ಮದೇ ಆದ ಕೆಲಸಗಳಿರುತ್ತವೆ, ದಿನದ ಪಾಡು ಹೊಟ್ಟೆ ಪಾಡು ಸಂಸಾರ ಹೀಗೆಲ್ಲ ಇವೆ, ಅವರಿಗೆ ಊರಿನ ಸಮಸ್ಯೆಗಳನ್ನು ನೋಡಿಕೊಳ್ಲುವ ಸಮಯವಿಲ್ಲದ ಕಾರಣ ಅಧಿಕಾರಿಯನ್ನು ಆರಿಸಿ ಕೂರಿಸುತ್ತಾರೆ ಆ ಅಧಿಕಾರಿಗೆ ಸಮಸ್ಯೆಗಳನ್ನು ನೋಡುವುದೇ ಕೆಲಸ. ಮತ್ತು ಅದನ್ನು ಬಗೆಹರಿಸುವುದೇ ಕೆಲಸ. ಅದಕ್ಕೆಂದೇ ಅವನಿಗೆ ಸಂಬಳವನ್ನು ಕೊಡಲಾಗುತ್ತದೆ. ಆದರೆ ಅವನೇ ಸಮಸ್ಯೆಯಾದರೆ...
ಇಲ್ಲಿ ನಡೆದದ್ದು ಅದೆ , ಜವಾಬ್ದಾರಿಯಿಂದ ನಿಷ್ಠೆಯಿಂದ ಕೆಲ್ಸ ಮಾಡುತ್ತಿದ್ದವನನ್ನು, ಹಲವಾರು ರೀತಿಯ ಪರೀಕ್ಷೆಗಳನ್ನು ಪಾಸು ಮಾಡಿ ಅರ್ಹತೆ ಪಡೆದು ಬಂದವನನ್ನು ನಾಲ್ಕನೆ ಕ್ಲಾಸನ್ನು ಓದದ ಮಂತ್ರಿಯೊಬ್ಬ ಬೈಯುತ್ತಾನೆ, ಅವನು ಹೇಳಿದಂತೆ ದುಷ್ಕೃತ್ಯಗಳನ್ನು ಮಾಡಲು ಹೇಳುತ್ತಾನೆ ಮಾಡದಿದ್ದರೆ ಧಮ್ಕಿ ಹಾಕುತ್ತಾನೆ, ನಾಳೆ ನೀನು ಅರ್ಹತೆಯನ್ನು ಪಡೆದು ಸರ್ಕಾರಿ ಕೆಲ್ಸಕ್ಕೆ ಸೇರಿದರೆ ಇಂತಹ ಪುಂಡರ ಮಾತನ್ನು ಕೇಳಬೇಕೇ ಬೇಡವೆ ಇದು ನನಗೂ ಪ್ರಶ್ನೆಯಾಗಿ ನಿಂತುಬಿಟ್ಟಿದೆ. ಸ್ಕೂಲಿನಲ್ಲಿ ಪೆನ್ಸಿಲ್ ಕದ್ದ ಹುಡುಗನ ಜೊತೆ ಸ್ನೇಹ ಬೇಡವೆಂದು ಹೇಳಿದರೆ, ಕಾಲೇಜಿನಲ್ಲಿ ಹುಡುಗಿಯರನ್ನು ಚುಡಾಯಿಸುವ ಗೆಳೆಯನ ಜೊತೆ ನಿನ್ನನ್ನು ಸೇರಬೇಡವೆಂದು ಹೇಳಿದರೆ ನೀನು ಒಂಟಿಯಾಗಿಬಿಡುತ್ತೀಯೆ. ಇದ್ದಾರೆ ಮಗು, ನಮ್ಮ ನಡುವೆ ಇಂಥವರು ಇದ್ದಾರೆ ಸಾಧ್ಯವಾದರೆ ಅವರ ತಪ್ಪುಗಳನ್ನು ತಿಳಿಸುವ ಪ್ರಯತ್ನ ಮಾಡಬೇಕು ಜೊತೆಗೆ ಅದು ತಪ್ಪು ಎಂಬುದು ನಮಗೆ ಗೊತ್ತಿರಬೇಕು, ಅಷ್ಟು ನೈತಿಕತೆಯನ್ನು ನಿನಗೆ ತಿಳಿಸಿಕೊಡಬೇಕೆಂದುಕೊಂಡಿದ್ದೆ, ಹೇಗೆ ಹೇಳಲಿ ಪುಟ್ಟ?, ಕದ್ದ ಹುಡುಗ ಕಳ್ಳತನವನ್ನು ನಿನ್ನ ಮೇಲೆ ಹಾಕಿದಾಗ, ಚುಡಾಯಿಸಿದವ ನಿನ್ನನ್ನೇ ಅಪರಾಧಿಯನ್ನಾಗಿ ಮಾಡಿದಾಗ ನಿನ್ನ ನೈತಿಕ ಸ್ಥೈರ್ಯ ಉಡುಗುವುದನ್ನು ತಪ್ಪಿಸಲಿ ಹೇಗೆ? ಹಾಗಾದರೆ ಪ್ರಾಮಾಣಿಕವಾಗಿ ಬದುಕಲು ಆಗದೆ? ಈ ಪ್ರಶ್ನೆಗೆ ಉತ್ತರವಿಲ್ಲ. ಕೇವಲ ಪ್ರಶ್ನೆಯಷ್ಟೆ
ಹೇಗಾದರೂ ಬದುಕಬೇಕು ಎನ್ನುವವರಿಗೆ ಪ್ರಶ್ನೆ ಉದ್ಭವಿಸುವುದಿಲ್ಲ ಅವರಿಗೆ ಯಾರ ಕಾಲನ್ನಾದರೂ ನೆಕ್ಕಿ ಬದುಕಿಬಿಡುತ್ತಾರೆ. ನಮ್ಮಲ್ಲಿ ಆ ಬಗೆಯ ವ್ಯಕ್ತಿಗಳನೇಕರಿದ್ದಾರೆ, ಆದರೆ ಹೀಗೇ ಬದುಕಬೇಕು ಎನ್ನುವವರು ಸಾಯಲು ಸಿದ್ದರಾಗುತ್ತಾರೆ. ರವಿ ಅಂಕಲ್ ಬದುಕಿದ್ದು ಹೀಗೆ. ಜವಾಬ್ದಾರಿ ಮತ್ತು ಪ್ರಾಮಾಣಿಕತೆ, ಯಾರ ಮಾತನ್ನೂ ಕೇಳದೆ ನ್ಯಾಯವಾದ ಮಾರ್ಗದಲ್ಲಿ ನಡೆಯುವುದು. ಜಿಲ್ಲಾಧಿಕಾರಿಯ ಕೊಠಡಿಯೊಳಗೆ ರೌಡಿ ಮಂತ್ರಿಯೊಬ್ಬ ನುಗ್ಗುತ್ತಾನೆ, ಕಾಲ ಮೇಲೆ ಕಾಲು ಹಾಕಿ ಅಬ್ಬರಿಸುತ್ತಾನೆ, ರವಿ ಅಂಕಲ್ ಮಾಡಿದ್ದು ಸಾತ್ವಿಕವಾದ ನಡೆ, ಆದರೆ ಆ ಕಣ್ಣಲ್ಲಿ ಕಠಿಣತೆಯನ್ನು ಕಾಣಬೇಕಿತ್ತು ನೀನು. ’ಸರಿಯಾಗಿ ಕುಳಿತುಕೊಳ್ಳಿ’, ಮಂತ್ರಿ ’ಆ!’ ಎಂದು ಅಬ್ಬರಿಸಿದರೆ, ರವಿ- ’ನನ್ನ ಹತ್ರ ಇವೆಲ್ಲಾ ನಡೆಯಲ್ಲ ಸರಿಯಾಗಿ ಕೂತು ಮಾತನಾಡಿ ಸಮಸ್ಯೆ ಹೇಳಿ ಹೊರಡಿ’ . ಅದು ಖಡಕ್ ತನ, ಪೆನ್ಸಿಲ್ ಕದ್ದ ಹುಡುಗನನ್ನು ನೀನು ದೂರವಿಡಬೇಡ ಅವನ ತಪ್ಪನ್ನು ತಿಳಿ ಹೇಳುವ ಕೆಲ್ಸವಾಗಬೇಕಷ್ಟೆ ಅದೂ ಕೂಡ ಸಾತ್ವಿಕವಾಗಿ, ಇದರ ಪ್ರತಿಫಲ ರವಿ ಅಂಕಲ್ ನ ಎತ್ತಂಗಡಿ, ಏನನ್ನಿಸಿರಬಹುದು ಅಂಕಲ್ ಗೆ. "ನನ್ನ ತಪ್ಪಾದರೂ ಏನಿತ್ತು? ತಪ್ಪು ಮಾಡಿದವರನ್ನು ಕಾಡಿದ್ದು ತಪ್ಪೇ? ನ್ಯಾಯವಾಗಿ ಆಗಬೇಕಾದದ್ದು ಹಳ್ಳ ಹಿಡಿದಾಗ ಸರಿಮಾಡಿದ್ದು ತಪ್ಪೆ?" ಅನ್ನಿಸಿರಬಹುದು ಮತ್ತು ಮುಂದೆ ಹೇಗೆ ಕೆಲ್ಸ ಮಾಡಲಿ ಎಂಬ ಪ್ರಶ್ನೆಯೂ ಬಂದಿರಬಹುದು. ಆದರೆ ರವಿ ಅಂಕಲ್ ಅಂದುಕೊಂಡದ್ದು ಒಂದೇ ’ಎಲ್ಲೇ ಹಾಕಲಿ ನಾನು ಪ್ರಾಮಾಣಿಕನಾಗಿರುತ್ತೇನೆ, ಯಾರ ಮರ್ಜಿಗೂ ಬೀಳದೆ ನ್ಯಾಯವಾಗಿರುತ್ತೇನೆ’ ಇದು ಬದುಕುವ ಸರಿದಾರಿ.
ನಮ್ಮ ನಡುವೆ ಎಲ್ಲ ಬಗೆಯ ಜನರಿದ್ದಾರೆ ಮಗು, ಸತ್ಯವಾಗಿ ಸತ್ವಯುತವಾಗಿ ಬದುಕುವುದು ದೊಡ್ಡದು, ಸತ್ತರೂ ಚಿಂತೆಯಿಲ್ಲ, ಪ್ರಾಮಾಣಿಕವಾಗಿಯೇ ಬದುಕು, ನಿನ್ನ ಮೇಲೆ ನಂಬಿಕೆಯಿದೆ, ನಿನ್ನ ವ್ಯಕ್ತಿತ್ವದ ಮೇಲೆ ನಂಬಿಕೆಯಿದೆ, ನೀನು ಯಾವ ಮೋಹಕ್ಕೂ ಬಿದ್ದವನಲ್ಲ ಎಂಬ ನಂಬಿಕೆಯಿದೆ, ಎಷ್ಟೇ ಅಸಹ್ಯಗಳೂ ಒದರಾಡಿದರೂ ಅವರ ಹೊಲಸು ಮುಖದ ಅನಾವರಣವಾಗುತ್ತದೆಯೇ ಪರಂತು ನಿನ್ನ ವ್ಯಕ್ತಿತ್ವಕ್ಕೇನು ಧಕ್ಕೆಯಿಲ್ಲ, ನೀನು ಬದುಕಿದ್ದಾಗ ಏನೂ ಮಾಡಲಾಗದವರು ಸತ್ತ ಮೇಲೆ ನಿನ್ನ ನಡತೆಯನ್ನು ಪ್ರಶ್ನಿಸಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ನೀಚರು ಎಲ್ಲ ಕಾಲದಲ್ಲೂ ಇದ್ದಾರೆ ಮಗು, ಅವರಿಗೆ ಒಂದೇ ಪ್ರಶ್ನೆ ಅವರ ನಡತೆಯ ಮೇಲೂ ಇದೇ ರೀತಿ ನಿರಾಧಾರವಾಗಿ ಆರೋಪ ಹೊರಿಸಿದರೆ...    
ತಪ್ಪು ಮಗು ನಾವು ಅವರಂತಾಗುವುದು ಬೇಡ.
ನಿನ್ನನ್ನು ಪ್ರಾಮಾಣಿಕವಾಗಿ ಬೆಳೆಸುತ್ತೇನೆ. ಏನಾದರೂ ಸರಿ,

*********************

ದಿನಗಳು ಏಳಾಗಿವೆ. ಸಿ ಐ ಡಿ ತನಿಖೆ ನಡೆಯುತ್ತಿದೆ , ಪ್ರಾಯಃ ಸೋಮವಾರ ಮಧ್ಯಂತರ ವರದಿ ಬರಬಹುದು. ನಂತರ ಅದನ್ನು ಸಿ ಬಿ ಐ ಗೆ ಕೊಡುವುದಾಗುತ್ತದೆ. ಆದರೆ ಪ್ರಶ್ನೆಗಳಿಷ್ಟೆ , ತನಿಖೆಗಳಲ್ಲಿ ಸ್ವಲ್ಪವಾದರೂ ಸಾಮ್ಯತೆಗಳಿರುತ್ತವೆ, ಅವರು ನಡೆಸುವ ತನಿಖೆಗೂ ಇವರು ನಡೆಸುವ ತನಿಖೆಗೂ ವ್ಯತ್ಯಾಸವಿದ್ದರೂ ಎಲ್ಲವೂ ಪೋಲೀಸ್ ರೀತಿಯೇ ಅಲ್ಲವೇ, ಎಲ್ಲೆಲ್ಲಿ ಸಾಕ್ಷ್ಯಗಳು ಸಿಕ್ಕಿದ್ದವು, ಅದನ್ನು ಹೇಗೆ ತಿರುಚಬೇಕು, ಮುಚ್ಚಿಡಬೇಕು, ಯಾವುದನ್ನು ಒಪ್ಪಿಸಬೇಕು (ಸರಕಾರದ ಪರವಾಗಿ) ಎಂಬುದನ್ನು ತಿಳಿಸುವ ಸಲಹೆಗಾರರೂ ಇದ್ದಾರೆ. ಇದು ಸಿ ಐ ಡಿ ಯ ಮೇಲೆ ಅಪನಂಬಿಕೆಯ ಪ್ರಶ್ನೆಯಲ್ಲ. ರಾಜಕಾರಣಿಗಳ ಮೇಲೆ ಮತ್ತು ಮಾಫಿಯಾ, ರಿಯಲ್ ಎಸ್ಟೇಟ್ ದಂಧೆಕೋರರು, ಟ್ಯಾಕ್ಸ್ ಕಳ್ಳರ ಮೇಲೆ ಮತ್ತವರ ಪೋಷಕರ ಮೇಲೆ. ಸಿ ಬಿ ಐ ಗಳ ಕಣ್ಣಿಗೆ ಕಾಣದೆ ಹೇಗೆಲ್ಲಾ ಮುಚ್ಚಿಡಬಹುದು ಎಂಬುದನ್ನು ಅವರಂತೆಯೇ ಕೆಲಸ ಮಾಡುವವರಿಗೆ ಹೇಳಿಕೊಡಬೇಕಿಲ್ಲ. ಇದರರ್ಥ ಅವರು ಹಾಗೆ ಮಾಡುತ್ತಾರೆ ಎಂದಲ್ಲ , ಮಾಡಬೇಕಾದ ಸ್ಥಿತಿಗೆ ತರುತ್ತಾರೆ. ಅಲ್ಲಿಗೆ ರವಿಯವರ ಕೇಸ್ ಏನಾಗುತ್ತದೆ ಎಂಬುದು ಸ್ಪಷ್ಟ. ಇವೆಲ್ಲದರ ನಡುವೆ ಪೀತ ಪತ್ರಿಕೆಯ ಕೆಲ ಅಮೇಧ್ಯಗಳು ಅವರ ಚಾರಿತ್ಯವನ್ನು ಕುರಿತಾಗಿ ಅಸಹ್ಯವಾಗಿ ಬರೆಯುತ್ತಿವೆ. ಒಂದು ಬಾರಿ ಯೋಚಿಸಲಿ ಅವರ ಮನೆಯವರಿಗೆ ಏನೆನ್ನಿಸಬಹುದು? ಇಲ್ಲಿಯವರೆಗೂ ಸಂಸಾರ ಮಾಡಿದ ಗಂಡನ ಮೇಲೆ ಇಟ್ಟುಕೊಂಡ ಪ್ರೀತಿ ನಂಬಿಕೆ ಎಲ್ಲವನ್ನೂ ಯಾವುದೋ ತುಚ್ಚ ಜಂತುವೊಂದು ಪ್ರಶ್ನಿಸುತ್ತಿದೆ ಎಂದರೆ... ಮನಸ್ಸನ್ನು ಹಂಚಿಕೊಂಡವನ ಮಾನವನ್ನು ಮೂರು ಕಾಸಿಗೆ ಹರಾಜು ಹಾಕುತ್ತಿದ್ದರೆ ಆ ಹೃದಯಕ್ಕೆ ಏನೆನ್ನಿಸಬೇಡ? ಇದೇ ಇವರ ಮಗನೋ ಮಗಳೋ ಅಥವಾ ಅವರ ಮೇಲೆ ಇಂಥಹುದೇ ಆರೋಪವನ್ನು ಹೊರಿಸಿದರೆ ಸುಮ್ಮನಿದ್ದಾರೆಯೆ? ನಿರ್ಲಜ್ಜ ಸಲಹೆಗಾರನ ಬಳಿ ತಮ್ಮತನವನ್ನು ಒತ್ತೆಯಿಟ್ಟು ಆರೋಪ ಹೊರಿಸಿದವನನ್ನು ಜೈಲಿಗಟ್ಟುವ/ಬೆದರಿಸುವ ಇವರ ವ್ಯಕ್ತಿತ್ವವೆಂತಹುದು?
ಗುಜರಾತನ್ನು ಅಥವಾ ಇನ್ಯಾವುದೋ ಕೇಸನ್ನು ಎಳೆದು ತಂದು ಸಿ ಬಿ ಐ ಬೇಡವೆನ್ನುವ ಇವರ ಬಾಲಿಶ ಪ್ರವೃತ್ತಿಗೆ ಏನೆನ್ನೋಣ, ಸಾಮಾನ್ಯ ಜ್ಞಾನವಿಲ್ಲದ ದರಿದ್ರ ಮನಸ್ಸುಗಳಿಗೆ ಥೂ!,ತಲೆಬುಡವಿಲ್ಲದ ಪ್ರಶ್ನೆಗಳನ್ನು ಕೇಳುವ ಪತ್ರಕರ್ತ(?) ರ ಬಗ್ಗೆ ಮರುಕವಿದೆಯಷ್ಟೆ. ಬೆಳೆಯಿರಿ ಇನ್ನಾದರೂ ಬೌದ್ಧಿಕವಾಗಿ ಬೆಳೆಯಿರಿ

No comments: