Tuesday, May 5, 2015

ನೆನಪಾದವನಿಗೆ

ನೆನಪಾದವನಿಗೆ
ಯಾವುದೋ ತೀರದ ಮೌನದಲ್ಲಿ ನಾನಿಲ್ಲ ಹುಡುಗ, ಮರೆತಿದ್ದೇನೆ ಎನ್ನಲೂ ಆಗುತ್ತಿಲ್ಲ, ನನ್ನೊಳಗೆ ಸ್ಫೋಟಗೊಂಡ ವಜ್ರಗಳನ್ನು ನಾನೇ ನುಂಗುತ್ತೇನೆ, ಹೌದು! ನಿನ್ನೊಂದಿನ ಒಡನಾಟ ನನಗೆ ವಜ್ರಗಳೇ ಆದರೆ ವಜ್ರಗಳನ್ನು ಮುಷ್ಠಿಯಲ್ಲಿ ಹಿಡಿದಿಡುವುದು ಅಪಾಯ, ಮಾಲೆಯಾಗಿಸಿದರೆ ಚೆಂದವಿತ್ತು ಕೊರಳಿನ ಸುತ್ತಾ ನನ್ನ ನಿನ್ನ ಕನಸುಗಳ ವಜ್ರದ ಹಾರವನ್ನು ಮೆರೆಸಬೇಕೆಂದುಕೊಂಡಿದ್ದೆ, ಇಡೀ ಜಗತ್ತಿಗೇ ಫಳಗುಟ್ಟುವ ಬೆಳಕನ್ನು ತೋರಿಸಬೇಕೆಂದಿದ್ದೆ. ಅದ್ಯಾವುದೂ ಆಗಲೇ ಇಲ್ಲ, ನಮ್ಮದೇ ಸಂಸಾರದ ಕನಸು, ಪ್ರತಿದಿನ ಇಬ್ಬರೂ ಒಟ್ಟಿಗೆ ಆಫೀಸಿಗೆ ಹೋಗುವಿಕೆ, ದಾರಿಗಳು ಬೇರಾಗುವಾಗ ’ಹುಶಾರು ಮುದ್ದು’, ಎನ್ನುವ ಕಾಳಜಿಯ ಮಾತುಗಳು , ಸಂಜೆ ಬರುವಾಗ ದಿನವಿಡೀ ದೂರಾಗಿ
ಕೆಲಸದಲ್ಲಿ ಕಳೆದುಹೋಗಿ, ಮುಚ್ಚಿಟ್ಟ ಪ್ರೀತಿಯನ್ನು ನೀನು ’ಮಲ್ಲಿಗೆ’ಯಲ್ಲಿ, ನಾನು ಕಣ್ಣಂಚಿನ ತುಂಟತನದಲ್ಲಿ ತೋರಿಸುವಿಕೆ, ಓಹ್ ! ಅವೆಲ್ಲಾ ಕನಸಾಗಿಯೇ ಉಳಿದುಬಿಟ್ಟವು, ವಜ್ರದ ಮಾಲೆ ಕೊರಳೇರಲೇ ಇಲ್ಲ. ಮುಷ್ಠಿಯೊಳಗೆ ಮಾತ್ರ ಬಂಧಿಸಿಟ್ಟುಕೊಂಡಿದ್ದೇನೆ, ಮಾಲೆ ಹೆಣೆಯಲು ಬರಿಯ ಹರಳುಗಳು ಸಾಲದು ಗೆಳೆಯ, ತಂತುವೊಂದು ಇರಬೇಕು ಅದು ನನ್ನ ನಿನ್ನ ಮದುವೆಯಾಗಿತ್ತು, ನೀನು ತಂತು ಹರಿದೆ, ನಾನು ಹರಳುಗಳಲ್ಲಿ ಉಳಿದೆ
ವರ್ಷವಾಯಿತಲ್ಲ ಗೆಳೆಯ, ನನ್ನ ನಿನ್ನ ಭೇಟಿಯಾಗಿ, ’ಮರೆತುಬಿಡು ಹುಡುಗಿ’, ಎನ್ನುತ್ತಾ ಬೆನ್ನು ಹಾಕಿ ಹೋಗಿ ವರ್ಷವಾಯ್ತು , ಒಮ್ಮಯಾದರೂ ನೀನು  ತಿರುಗಿ ನೋಡಿದ್ದರೆ ನನ್ನ ಮೌನದೊಳಗಿನ ಬಿಕ್ಕಳಿಕೆಯನ್ನು ಕೇಳಿಸಿಕೊಳ್ಳಬಹುದಿತ್ತು ನೀನು ಯಾವ ಕಾರಣವನ್ನೂ ಹೇಳದೆ ಮೌನವಾದೆ, ನಾನು ಮೌನಿಯಾದೆ, ಮೊನ್ನೆ ಅಚಾನಕ್ಕಾಗಿ ನನ್ನ ಕಣ್ಣೆದುರಿಗೆ ಸಿಕ್ಕಾಗ ಈ ನೆನಪುಗಳ ಸಂತೆಯಲ್ಲಿ ಮುಳುಗಿಬಿಟ್ಟೆ ಗೆಳೆಯ. ತಿರಸ್ಕಾರವನ್ನು ಅನುಭವಿಸಿ ಪ್ರೀತಿಯ ಮೇಲೆ ನಂಬಿಕೆಯೂ ಕಳೆದುಕೊಳ್ಳದೆ ನಿನ್ನ ನನ್ನ ನೆನಪುಗಳನ್ನು ಮೂಲೆಗೆ ತಳ್ಳಲಾರದೆ, ಚೌಕಟ್ಟು ಹಾಕಿ ಗೋಡೆಗೆ ನೇತು ಹಾಕಿದ್ದೇನೆ. ನೋಡಬೇಕೆನಿಸಿದರೆ ನೋಡುತ್ತೇನೆ, ಆದರೆ ಮೊನ್ನೆಯಿಂದ ಪ್ರತಿ ದಿನ ಆ ಗೋಡೆಯ ಚಿತ್ತಾರದ ಪಟದೆಡೆಗೆ ನೋಡುತ್ತಿದ್ದೇನೆ. ಎಷ್ಟು ಬಣ್ಣಗಳಿದ್ದವು ಎಷು ರೇಖೆಗಳಿದ್ದವು, ಪ್ರಾಯಶಃ ನಾನು ಅತಿಭಾವುಕಳಾಗಿದ್ದರೆ ನನ್ನ ಕಣ್ಣೀರಿನಿಂದ ಆ ಬಣ್ಣಗಳೆಲ್ಲಾ ಕಲಸಿಹೋಗುತ್ತಿದ್ದವೇನೋ ಗಟ್ಟಿಗೊಂಡುಬಿಟ್ಟಿದ್ದೇನೆ ಗೆಳೆಯ, ಅತ್ತುಬಿಟ್ಟರೆ ನೆನಪುಗಳು ಅಳಿಸಿಹೋಗಬಹುದೆಂದು ಗಟ್ಟಿ ಹಿಡಿದ ಕೂತಿದ್ದನ ನೀನು ಬರುವೆಯೆಂಬ ನಂಬಿಕೆಯಿಲ್ಲದಿದ್ದರೂ ಹುಚ್ಚು ನಂಬಿಕೆಯಿದೆ.  ನಿನ್ನನ್ನು ಭರ್ತ್ಸ್ಯನೆ ಮಾಡಲು ಇವೆಲ್ಲಾ ಹೇಳುತ್ತಿಲ್ಲ, ನಿನಗೆ ಹಿಂಸೆಕೊಡಬೇಕೆಂದೂ ಹೇಳುತ್ತಿಲ್ಲ. ನಿನ್ನ ವರ್ತನೆಯೇ ನನಗೆ ಅಚ್ಚರಿಯನ್ನು ತಂದದ್ದು, ನೀನೇ ತಿರಸ್ಕರಿಸಿದೆ, ಯಾರದೋ ಬಲವಂತವಿರಬಹುದು, ಭಯವಿರಬಹುದು, ಏನಿದ್ದರೂ ಸರಿ, ಮತ್ತೆ ನೀನೇ ಬಂದು ನನ್ನನ್ನು ಮಾತನಾಡಿಸಿದ್ದಾದರೂ ಏಕೆ?  ಪರೀಕ್ಷೆಯೇ? ಇವಳು ಇನ್ನೂ ನನ್ನನ್ನು ಪ್ರೀತಿಸುತ್ತಿದ್ದಾಳೆಯೇ ಎಂಬ ಪರೀಕ್ಷೆಯೆ? ಅಥವಾ ನಿನ್ನ ಅಹಂನ್ನು ಎಲ್ಲರೆದುರಿಗೆ ತೋರಿಸುವ ಉತ್ಸಾಹವೇ, ’ಇವಳೇ ನನ್ನ ಹುಡುಗಿ ನಾನು ತಿರಸ್ಕರಿಸಿದ ಹುಡುಗಿ’, ಎಂದು ನಿನ್ನ ಗೆಳೆಯರೆದುರು ಹೇಳುವ ಕ್ರೂರ ಹಪಹಪಿಯೇ? ಛೆ ನೀನಂಥವನಲ್ಲ, ನಾನು ಪ್ರೀತಿಸಿದ ಹುಡುಗ ಯೋಗ್ಯ, ಸಭ್ಯ ಎಂಬ ಭ್ರಮೆ ನನಗಿರಲಿ ನಿನ್ನ ಕಣ್ಣುಗಳಲ್ಲಿ ಹುಸಿ ಪ್ರಾಮಾಣಿಕತೆಯ ನೋಟವಿತ್ತು ಮೊನ್ನೆ, ಗಂಡಸಿನ ಅಹಮಿಕೆಯ ನೆರಳು ಕಾಣುತ್ತಿತ್ತು, "ಏನು ಇತ್ತೀಚೆಗೆ ಮೆಸೇಜುಗಳಿಲ್ಲ" ಎಂದೆಯಲ್ಲ, ನಿನ್ನ ಇನ್ ಬಾಕ್ಸ್ ನೋಡು, ವರ್ಷಗಳ ಹಿಂದೆ ಕಳುಹಿಸಿದ ತಿಂಗಳ ಹಿಂದೆ ಕೂಡ ಕಳುಹಿಸಿದ್ದ ಮೆಸೇಜುಗಳು (ನೀನು ಉಳಿಸಿಕೊಂಡಿದ್ದರೆ) ಇದ್ದಾವು, ಸಣ್ಣದೊಂದು ನಂಬಿಕೆಯಿಂದ ಇನ್ನೂ ನಿನಗೆ ಮೆಸೇಜ್ ಮಾಡುತ್ತಿದ್ದೆ, ಉತ್ತರ ಬಾರದ, ಆದರೆ ಬರುವುದೇನೋ ಎಂಬ ನಿರೀಕ್ಷೆಯಲ್ಲಿ.
ಸಾಧ್ಯವಾಗದ ಬಂಧ ಇನ್ನು ಉಳಿಯಬೇಕೇ ಗೆಳೆಯ, ನಿನ್ನೊಂದಿಗಿನ ನೆನಪು ಮಾಸದು ನಿಜ, ಆದರೆ ನನಗೆ ನನ್ನದೇ ಬದುಕಿದೆ, ಎಲ್ಲವನ್ನೂ ಕಾಲಲ್ಲಿ ಒದ್ದು ನಿನಗಾಗಿ, ಕೇವಲ ನಿನಗಾಗಿ ಕೊರಗಲಾರೆ, ಪ್ರೀತಿ ದೊಡ್ಡದು ಇನಿಯ ಆದರೆ ಬದುಕು ಅದಕ್ಕಿಂತಲೂ ದೊಡ್ಡದು, ಬೆಳೆದಿದ್ದೇನೆ ಬೌದ್ಧಿಕವಾಗಿ, ಮಾನಸಿಕವಾಗಿ. ಪ್ರೀತಿಸಿದ ತಪ್ಪಿಗೆ ದಿನವೂ ಕೊರಗುತ್ತಾ ಕುಳಿತರೆ ನನ್ನ ಸುತ್ತಲಿನ ಜನಕ್ಕೆ ಸಂತೋಷ ನೀಡಲಿ ಹೇಗೆ? ನನ್ನ ಬದುಕು ನನ್ನ ಇಷ್ಟ , ನಿಜ, ಆದರೆ ಪ್ರೀತಿ ಎನ್ನುವ ಭಾವ ಬರಿಯ ಪ್ರಿಯಕರನ ಪ್ರೇಮಭಾವವೇ? ನನ್ನೊಂದಿಗೆ ಅಮ್ಮನಿದ್ದಾಳೆ, ತಮ್ಮನಿದ್ದಾನೆ, ನನ್ನನ್ನೇ ಆದರ್ಶವಾಗಿ ಕಾಣುವ ತಂಗಿಯೂ ಇದ್ದಾಳೆ, ಅವರೆಲ್ಲರೆದುರಿಗೆ ನಾನು ಮೌನಿಯಾಗಿ , ನಿಲ್ಲುವುದು ಕ್ರೌರ್ಯ,  ಏನಂದೆ ಪ್ರೀತಿ ವಸ್ತುವಲ್ಲ ಒಂದು ಹೋದರೆ ಮತ್ತೊಂದು ಕೊಳ್ಳಲು, ಹೌದು ಗೆಳೆಯ ಪ್ರೀತಿ ವಸ್ತುವಲ್ಲ, ಭಾವ, ಆದರೆ ಆ ಭಾವಕ್ಕೆ ನೀ ಕೊಟ್ಟ ಪೆಟ್ಟು ದೊಡ್ಡದು ನಿನ್ನೊಳಗೆ ಈಗಲೂ ಪ್ರೀತಿ ಇರಬಹುದು ಆದರೆ ನಿನಗೆ ಬಂಧನವಿದೆ ದಾಟಿ ಬರಲಾರೆ, ಯಾರನ್ನೂ ನೋಯಿಸಿದ ನಿನ್ನ ಮನೋಭಾವ ನನಗಿಷ್ಟ, ಹೀಗಿರುವಾಗ ಆಗದ ಹೋಗದ ಸಂಬಂಧದ ನಿರೀಕ್ಷೆಯಲ್ಲಿ ಇರಲಿ ಹೇಗೆ?  ಕಾಯುವಿಕೆ ಪ್ರೀತಿಯಲ್ಲಿನ ತುಂಟಭಾವ, ಆದರೆ ಬಾರನೆಂಬುದನ್ನರಿತೂ ಕಾಯುವುದು ಮೂರ್ಖತನ,  ಬಿಡುತ್ತಿದ್ದೇನೆ ಗೆಳೆಯ ನಿನ್ನನ್ನು ನನ್ನ ಕಣ್ಣ ಮುಂದಿನ ದೃಶ್ಯದಂತೆ ಬಿಡುತ್ತಿದ್ದೇನೆ ಆದರೆ  ಮನದ ಮೂಲೆಯಲ್ಲಿ ನಿನ್ನ ನೆನಪುಗಳ ಚಾದರವಿದೆ, ಬೇಕೆನಿಸಿದಾಗ ಹೊದ್ದು ಮಲಗಬಹುದು,  ಮುಗಿದ ಕತೆಯೆಂದೋ ಅಥವ ಕಾಡಿದ / ಕಾಡುವ ಕತೆಯೆಂದೋ ನಕ್ಕು ಸುಮ್ಮನಾಗಬಹುದು,
ಬದುಕಿಷ್ಟೇ ...
ಇತಿ ಏನೂ ಆಗದ ನಿನ್ನ ಪ್ರಜ್ಞಾ

3 comments:

Badarinath Palavalli said...

ಅಗಲಿಕೆಯ ನೋವು ಪ್ರತಿ ಅಕ್ಷರದಲ್ಲೂ ಅಚ್ಚೊತ್ತಿದೆ!

ಮನಸಿನಮನೆಯವನು said...

ಹೆಣ್ಮನಸ ಹಂಬಲ,ಕೊರಗು,ಒಂಟಿ ಮಾತುಗಳನ್ನು ತುಂಬಾ ಸೊಗಸಾಗಿ ಹೇಳಿದ್ದೀರಿ..

ಮನಸಿನಮನೆಯವನು said...

ಹೆಣ್ಮನದ ಮರುಕ ಕಾತರಿಕೆ ಹಂಬಲ ಅಹವಾಲು ಒಂಟಿತನದ ಭಾವಗಳನ್ನು ಸೊಗಸಾಗಿ ಹೇಳಿದ್ದೀರಿ