Sunday, May 10, 2015

ಆ ಈ ಲೋಕದೊಳಗೆ


ಮೊದಲೆಲ್ಲಾ ನನ್ನಡುಗೆ ನನಗೆ ಬಹಳ ಪ್ರಿಯ
ಕ್ಯಾರೇಟಿನಲಿ ಬೋಂಡ, ಖಾಲಿ ಈರುಳ್ಳಿ ಪಲ್ಯ,
ನನ್ನವೇ ಪ್ರಯೋಗ, ಮಾಡಿ ತಿನ್ನುವವ ನಾನೇ,
ಹೇಗಿದ್ದರೂ ಚೆನ್ನ, ಬ್ರಹ್ಮಚಾರಿಯ ಬರಿಯನ್ನ.

ಮೊನ್ನೆ ನೀ ಹೊರಟಾಗ ನಾನೊಬ್ಬನೇ ಆದಾಗ
ಬ್ರಹ್ಮಚಾರಿ ವಕ್ಕರಿಸಿದ್ದ, ಅಕ್ಕಿ ಬೇಳೆಗಿಟ್ಟೆ
ಪುಸ್ತಕದೊಳಗಿಳಿದಿದ್ದೆ, ಅಕ್ಕಿಯಿಂಗಾಲವಾಗಿ
ಬೇಳೆ ಮೊಸರಾಗಿತ್ತು, ಸಮಯವರಿಯದೆ ಕೆಟ್ಟೆ

ಇದ್ದ ತರಕಾರಿ ಸೇರಿಸಿ, ಪುಡಿಗಳ ಬೆರೆಸಿ
ಸಾಲದೆಂಬಂತೆ ಉಪ್ಪಿನಕಾಯನ್ನೂ ಹಾಕಿ
ಕುದಿಸಿದೆ, (ನಾನೂ ಕುದಿಯುವುದು ಬಾಕಿ)
ಘಮಕ್ಕೆ ಸೋತು ಹೊರಟವು ಕೀಟಕುಲ
ಮತ್ತೊಂದು ಮನೆಯ ಅಡುಗೆಯ ಅರಸಿ

ನನ್ನ ಬೆನ್ನು ಚಪ್ಪರಿಸಿಕೊಂಡು ಕೂತೆ
ಹತ್ತಾರು ವರ್ಷಗಳ ಅನುಭವ ಮರೆತೆ
ನೀನಿಲ್ಲದೆ ಅಡುಗೆಗೆ ರುಚಿಯಿಲ್ಲ ರುಚಿಸಿಲ್ಲ
ನಿನ್ನಡಿಗೆ ನೆನೆದು ನಡೆದೆ ಮೆಸ್ಸಿನ ಕಡೆಗೆ

ಈ ದಿನ ಸರಿಯಾಯ್ತು, ಕೈ ಕುದುರಿದೆ
ತುಂಟತನಕೆ ನೀನಿಲ್ಲದೆ ಸೊರಗಿದೆ
ಅಡುಗೆ ಸಾಮ್ರಾಜ್ಯದೊಳಗೆ ನಾ ನೀ
ಪ್ರೇಮದಡಿಗೆ ನಾ ರಾಜ ನೀ ರಾಣಿ

No comments: