Friday, October 30, 2015

ನಿನ್ನ ತೋಳು ನನ್ನದೇ

ಆತ್ಮೀಯ ಬಂಧು
ಬೇಸರದಿಂದಲೋ ಇಲ್ಲಾ ಸಿಟ್ಟಿನಿಂದಲೋ ನಿನ್ನನ್ನು ಬಂಧು ಎನ್ನುತ್ತಿಲ್ಲ, ಗೊತ್ತಿದೆ ಹುಡುಗಿ ಬಂಧು ಎನ್ನುವ ದೂರವಾಚಕ ಶಬ್ದ ನಿನ್ನನ್ನು ಇರಿಯಬಹುದು! ಆದರೆ ಸಧ್ಯಕ್ಕೆ ಅದೇ ಸರಿಯಾದ ಸಂಭೋದನೆ, ನಿನಗೆ ನೋವುಂಟು ಮಾಡಬೇಕೆಂಬ ಅಸೆಯಿಲ್ಲ, ಪ್ರೀತಿಯಿಂದ ಕರೆದರೆ ಮತ್ತೆ ನೀನು ಹತ್ತಿರವಾಗಿ ನಿನ್ನ ಸ್ವಂತಿಕೆಯನ್ನು ಕಳೆದುಕೊಂಡು ನಾನಾಗಿಬಿಡುತ್ತೀಯೇನೋ ಎಂಬ ಭಯ. ನಿನಗೆ ನಿನ್ನದೇ ಆದ ಅಭಿಪ್ರಾಯವಿದೆ, ನಿರ್ಧಾರಗಳಿವೆ, ಮತ್ತು ಯೋಚನಾಕ್ರಮವಿದೆ, ನೀನು ನನ್ನಂತಾಗುವುದು ಬೇಡ, ಆದ್ದರಿಂದಲೇ ಈ ದೂರವಾಚಕ.ಇದು ಕೊನೆಯ ಪತ್ರ, ಇನ್ನೆಂದಿಗೂ ನಿನಗೆ ನನ್ನ ಕಡೆಯಿಂದ ಪತ್ರಗಳು ಬರಲಾರವು, ಇನ್ನು ಮುಂದೆ ಅವು ನನ್ನ ಮೇಜನ್ನು ಮಾತ್ರ ಅಲಂಕರಿಸುತ್ತವೆ. ನನ್ನ ನಿನ್ನ ಬೌದ್ಧಿಕ ಪ್ರೇಮದ ನೆನಪಿನಲ್ಲಿ.
ಹೇಗೆ ಆರಂಭಿಸಲಿ? ಆರಂಭವೆನ್ನುವುದು ಇದೆಯೇ ಪ್ರೀತಿಗೆ? ನಮ್ಮಿಬ್ಬರ ಪ್ರೀತಿಗೆ ಆರಂಭ ಬಿಂದು ನಾಟಕವೊಂದರ ಶೋ! ರಂಗದ ಮೇಲೆ ಕಲಾವಿದರು ಅದ್ಭುತವಾಗಿ ಅಭಿನಯಿಸುತ್ತಿದ್ದರೆ ನಾನು ಅದೆಲ್ಲವನ್ನೂ ರೆಕಾರ್ಡ್ ಮಾಡಿಕೊಳ್ಳುತ್ತಾ ಕೆಲವೊಮ್ಮೆ ಕತ್ತಲಲ್ಲೇ ನೋಟ್ ಬುಕ್ ತೆಗೆದು ಅದೇನನ್ನೋ ಗೀಚುತ್ತಿದ್ದೆ. ನಿನ್ನ ಇರುವಿಕೆ ಗೊತ್ತೇ ಇರಲಿಲ್ಲ. ನೋವಿನ ವ್ಯಂಗ್ಯದ ಅಸಹಾಯಕತೆಯ ಮಾತುಗಳನ್ನು ನಟ ಶುಷ್ಕ ನಗುವಿನ ಮೂಲಕ ಹೇಳುತ್ತಿದ್ದಾಗ ಹಿಂದಿನ ಸಾಲಿನ ಪ್ರೇಕ್ಷಕ ಮತ್ತು ಕೆಲವರು ಅದನ್ನು ಜೋಕ್ ಎಂಬಂತೆ ನಗುತ್ತಿದ್ದರು, ಹೌದು ಮೇಲ್ನೋಟಕ್ಕೆ ಅದು ತಮಾಷೆಯ ಮಾತುಗಳಂತೆ ಕಂಡರೂ ಅದರಲ್ಲಿ ಅಸಹಾಯಕತೆಯಿತ್ತು. ನಾನು ಛಿಟ್ಟನೆ ತಲೆಕೊಡವಿ ಹಿಂದೆ ನೋಡಿದೆ ಅದೇ ಸಮಯದಲ್ಲಿ ನೀನೂ ಸಹ ಹಿಂದೆ ನೋಡಿ ಹುಶ್! ಎಂದು ಅವರಿಗೆ ಸನ್ನೆ ಮಾಡಿದ್ದೆ. ಕತ್ತಲಲ್ಲಿ ನಿನ್ನನ್ನು ನೋಡಿದ್ದು. ನಾನು ಮೆಲ್ಲನೆ ’ ಸೂಕ್ಷ್ಮತೆಯಿಲ್ಲದ ಜನ’ ಎಂದೆ ನೀನು ’ಹೌದು’ ಎಂದೆ. ಮುಂದೆ ಥಿಯೇಟರ್ ನಿಂದ ಹೊರಬಂದು ಬೆಳಕಿನಲ್ಲಿ ನಿನ್ನನ್ನು ನೋಡಿದ್ದು.
’ಜನ ಭಾವ ತೀವ್ರತೆಯನ್ನು ತಿಳಿದುಕೊಳ್ಳಲಾರದಷ್ಟು ಒಣಗಿಹೋಗಿದ್ದಾರ ಸರ್?’
ಇದ್ದಕ್ಕಿಂದಂತೆ ನೀನು ಮಾತಿಗಾರಂಭಿಸಿದೆ,
ಇಲ್ಲಮ್ಮ, ಅವರಿಗೆ ರಿಲಾಕ್ಸೇಶನ್ ಬೇಕಿರುತ್ತೆ, ಇಲ್ಲೂ ಅದೇ ನೋವು ಅಥವಾ ಕಾಡುವಿಕೆ ಅವರಿಗೆ ನಿರಾಸೆಯನ್ನ ಕೊಟ್ಟಿರಬಹುದು. ಅಥವಾ ಸಿನಿಮಾಗಳನ್ನು ನೋಡಿ ನೋಡಿಎಲ್ಲವನ್ನೂ ನೇರವಾಗಿ ಗ್ರಹಿಸುವ ಮನಸ್ಥಿತಿಗೆ ಬಂದುಬಿಟ್ಟಿರಬೇಕು, ಇಲ್ಲಿ ಕಾರುಣ್ಯವನ್ನ ಅಸಹಾಯಕತೆಯನ್ನ, ನೋವನ್ನ ಒದ್ದೆ ಬಟ್ಟೆಯಲ್ಲಿ ಸುತ್ತಿ ಕೊಡುತ್ತಾರೆ, ಹೊರಗೆ ಹಸಿಒಳಗೆ ಕಾವು ,
ಸರ್ ನೀವು ತುಂಬಾ ಆಳಕ್ಕಿಳಿದುಬಿಟ್ರಿ, ನೀವು ಪತ್ರಕರ್ತರಾ
ಇಲ್ಲಮ್ಮ ಸಾಹಿತ್ಯಾಭ್ಯಾಸಿ, ರಂಗಭೂಮಿಯಲ್ಲಿ ಹವ್ಯಾಸಿ, ವೃತ್ತಿಯಲ್ಲಿ ಸಾಫ್ಟ್ ವೇರ್ ಉದ್ಯೋಗಿ
ಸರ್ ನಾನು ಪ್ರಜ್ಞಾ, ನಾನು ಹರಿ. ಕೆ ಹೆಚ್ ಕಲಾಸೌಧ ನಮ್ಮನ್ನು ನೋಡಿ ನಕ್ಕಿರಬಹುದು.
ನಾನು ನಡೆದೆ ನೀನು ನನ್ನೊಳಗೆ ಬೆಳೆದೆ, ಮಾತು ಆಸಕ್ತಿ ಬಿಂಬ ಪ್ರತಿಬಿಂಬದ ಹಾಗಿದ್ದವು.ನಿನ್ನೊಳಗೆ ಮತ್ತು ನನ್ನೊಳಗೆ ಒಂದೊಂದು ಕತೆಯಿತ್ತು.ಆ ಈ ಕತೆಗಳಲ್ಲಿ ನಾವಿಳಿಯಲೂ ಇಲ್ಲ ಸುಳಿಯಲೂ ಇಲ್ಲ. ಪ್ರಜ್ಞಾ ನಿನ್ನಲ್ಲೊಂದು ಅಹಂಕಾರವಿತ್ತು ಅದನ್ನು ಪೋಷಿಸಿಕೊಂಡೇ ಬಂದೆ ಮತ್ತು ಅದ ನಿನ್ನ ಪಾಲಿನ ಅಲಂಕಾರವೂ ಹೌದು, ಅದರ ಪೋಷಣೆಯಲ್ಲಿ ಮತ್ತೊಂದೆರಡು ಅಹಂ ನ ಶಿಶುಗಳು ಹುಟ್ಟಿದ್ದೇ ಇವೆಲ್ಲದಕ್ಕೂ ಕಾರಣವಾ? ನಿನ್ನ ನಿರ್ಧಾರಗಳುಸಾರ್ವಜನಿಕವಾಗತೊಡಗಿತ್ತು, ನಾನು ಒಪ್ಪುತ್ತಲೇ ನಿನ್ನನ್ನು ತಿದ್ದತೊಡಗಿದೆ ಆದರೆನನ್ನ ತಿದ್ದುವಿಕೆ ನಿನಗೆ ಬಂಧನವಾಗಿರಬೇಕು? ನಿನ್ನ ಎಲ್ಲ ವಿಷಯಗಳಿಗೂತಾರ್ಕಿಕ ಅಂಶಗಳನ್ನು ಹೆಣೆದು ನಿನ್ನದೇ ನೇರಕ್ಕೆ ಅವನ್ನು ಜೋಡಿಸಿ ಒಪ್ಪಿಸುತ್ತಿದ್ದೆ.
ಮುದ್ದು ನೀನು ಜಾಣೆ ಗೊತ್ತು ಆದರೆ ದಡ್ಡಿಯೂ ಹೌದು ಬದುಕು ನಾಟಕದ ಸಂಭಾಷಣೆಯಲ್ಲ, ಸೀಮಿತ ಆವಧಿಯವರೆಗೆ ನಡೆದು ಮತ್ತೆ ರಂಗದಿಂದ ಇಳಿಯುವ ನಟನೆಯಲ್ಲ, ಇದು ಕಾಲವೂ ಬದುಕಬೇಕಾದದ್ದು. ಇಲ್ಲಿ ನೈಜತೆಯೇ ಜೀವ ನಟನೆಯಲ್ಲ,
ನನ್ನನ್ನು ಅಗಾಧವಾಗಿ ಪ್ರೀತಿಸಿದವಳು ಅದೇಕೆ ನನ್ನನ್ನು ಬೇರೆಯವನು ಎಂದೆ, ಇದು ಇವತ್ತಿಗೂ ನನಗೆ ಬಗೆಹರಿಯದ ಒಗಟಾಗಿದೆ. ನನ್ನ ನಿರ್ಧಾರಗಳಲ್ಲಿ ನಿನ್ನ ಸಲಹೆಗಳು ಹೇಗೋ ಅದೇ ರೀತಿ ನಿನ್ನವುಗಳಲ್ಲಿ ನನ್ನ ಸಲಹೆಗಳೇಕ ಬೇಡವಾದವು ಚಿಕ್ಕದೊಂದು ವಸ್ತುವನ್ನು ನಿನಗೆ ತೋರಿಸಲು ಕಾತರಿಸುತ್ತಿದ್ದ ನನಗೆ ನಿನ್ನ ಕೆಲಸದ ವಿಷಯ ಗೊತ್ತಾಗಲೇ ಇಲ್ಲ,
ಎಲ್ಲಿದೀ ಪ್ರಜ್ಞಾ ಎಂದದ್ದಕ್ಕೆ ಇವತ್ತು ಫಸ್ಟ್ ಡೇ ಕಣೋ ಆಫೀಸಿಗೆ ವಿಷ್ ಮಿ  ಗುಡ್ ಲಕ್ ಎಂದೆ, ದಿನಾ ಸಂಜೆ ಫೋನಿನಲ್ಲಿ "ಎಲ್ಲಿದಿಯೋ" ಎನ್ನುತ್ತಿದ್ದ ನೀನು ಕ್ರಮೇಣ ’ಇವತ್ತು ಲೇಟಾಗುತ್ತೆ, ನೀನು ಹೊರಡು’ ಎಂದೆ, ನಿನ್ನನ್ನು ಮುದ್ದಿನಿಂದ ನೋಡುತ್ತಿದ್ದ ನನಗೆ ನಿನ್ನ ವಿಷಯದಲ್ಲಿ ಕಾಳಜಿ ಅತಿಯಾಯ್ತ ಎನಿಸುತ್ತದೆ. ಯಾವುದೋ ಚಿಕ್ಕ ವಿಷಯಕ್ಕೆ ಅದಲ್ಲ ಇದು ಎಂದೆ ನೀನು ಬೇರೆಯವರಿಗೆ ಇಷ್ಟವಿಲ್ಲ ಅಂದ್ರ ನಾನೇನ್ ಮಾಡ್ಲಿ, ನಾನರೋದು ಹೀಗೆ ಎಂದೆ
ನೀನಿಲ್ಲ ಬಂಧು , ನನ್ನ ಪ್ರಜ್ಞಾ ನನಗೆ ಬಂಧುವಾಗಿ ಮಾತ್ರ ಸಿಗುತ್ತಿದ್ದಾಳೆ. ಎಲ್ಲವನ್ನೂ ಹಂಚಿಕೊಳ್ಲಲೇಬೇಕೆಂದಿಲ್ಲ ಆದರೆ ’ಹಂಚಿಕೊಳ್ಳಬೇಕೆಂದಿದ್ದೆ ಉತ್ಸಾಹದಲ್ಲಿ ಮರೆತೆ’ ಎಂಬ ಸುಳ್ಳಾದರೂ ಸಾಕಿತ್ತು. ನನ್ನ ಪ್ರತಿ ಸಲಹೆಗಳನ್ನು ತೆಗೆದುಕೊಳ್ಳಲೇಬೇಕೆಂದಿಲ್ಲ ಅದನ್ನು ಕೇಳಿ ವಿಮರ್ಶಿಸಿದ್ದರೆ ಸಾಕಿತ್ತು ಎಲ್ಲ ನಿರ್ಧಾರಗಳನ್ನು ನನ್ನ ಕೇಳಬೇಕೆಂದಿಲ್ಲ ಆದರೆ ಆ ನಿರ್ಧಾರಗಳಲ್ಲಿ ನನ್ನ ನೆನಪಾಗಿದ್ದರೆ ಸಾಕಿತ್ತು.
ತೋಳಿಗೊರಗಿ ಸಾಂತ್ವನ ಬಯಸಿ ನೆಮ್ಮದಿಯನ್ನು ಪಡೆಯುತ್ತಿದ್ದೆ ಈಗ ನಿನ್ನ ತೋಳು ನನ್ನದೇ ಎನ್ನುವ ಮಾತುಗಳು ಕತೆಯಾಗುತ್ತಿದೆ

No comments: