Friday, November 6, 2015

ಮೌನವೇಕಿಷ್ಟು ಕಾಡುತಿದೆ



ಭಾವಸಾಗರವೇ...
ಹಳೆಯದೊಂದು ಕವನ, ನಾನೇ ನಿನಗಾಗಿ ಬರೆದದ್ದು ಹೀಗೆ ಸುಮ್ಮನೆ ನೆನಪಾಯ್ತು

ದೀಪಗಳ ಬೆಳಕಿನಲ್ಲಿ ನಿಲ್ಲಬೇಕಿದೆ
ಹಣತೆಯೊಂದ ಹಚ್ಚುವೆಯಾ ಗೆಳೆಯ
ನಿಶ್ಶಬ್ಧ ಮೌನದೊಳಗೆ
ಬೆಳಕಿನ ಮೆಲುದನಿ ಮಾತ್ರ ಕೇಳಿಸಲಿ
ನಿನ್ನ ಕಣ್ಣೊಳಗಿನ ಅಗಾಧ ಪ್ರೀತಿಯನ್ನು
ನೋಡುತ್ತಲೇ ಹಣತೆಯಾಗುತ್ತಾನೆ
ಸೊಡರ ಕುಡಿಯ ಬೆಳಗಾಗುತ್ತೇನೆ
ಮತ್ತು ಮೌನದೊಳಗೆ ಲೀನವಾಗುತ್ತೇನೆ
ಪ್ರೀತಿಯೆನ್ನುವ ಮಾತಿಲ್ಲ ಮೌನಕ್ಕೆ
ನನ್ನಾತ್ಮವನ್ನು ಶರಣಾಗಿಸುತ್ತೇನೆ
ಹೌದು ಗೆಳೆಯ ಮೌನ ಮತ್ತು ಪ್ರೀತಿ ಎರಡೂ ನನಗೆ ಮೆಚ್ಚಿನವು, ಅದೇಕೋ ಗೊತ್ತಿಲ್ಲ ಮಾತಾಳಿಯಾದ ನಾನು ಪ್ರೀತಿಸಲಾರಂಭಿಸಿದೆ ಮೇಲೆ ಮೌನಿಯಾದೆ. ನೀರವತೆ ಮೊಗೆ ಮೊಗೆದು ಕೊಡಿದು ಒಳಗೆ ಧ್ವನಿಯಾಗುತ್ತೇನೆ, ನೀನು ಬರುವ ತನಕ ನಾನು ಔಟ್ ಲೆಟ್ ಒಂದನ್ನು ಹುಡುಕುತ್ತಾ ಕಾಯುತ್ತಿದ್ದೆ. ನಾನು ನನ್ನೊಳಗಿನ ಎಲ್ಲವನ್ನು ಕಾರಿಕೊಳ್ಳಲು ಒಂದು ಜೀವ ಬೇಕಿತ್ತು. ನನ್ನ ಮನೆಯಲ್ಲೊಂದು ಪುಟ್ಟ ನಾಯಿಯಿದೆ, ಅದರ ಕಣ್ಣುಗಳಲ್ಲಿ ನನ್ನೆಡೆಗೆ ವಿಶ್ವಾಸವಿದೆ. ನನ್ನೆಲ್ಲಾ ನೋವನ್ನು ಖುಷಿಯಲ್ಲಿ ಅದರೊಂದಿಗೆ ಹಂಚಿಕೊಳ್ಳುತ್ತಿದ್ದೆ
ಅದು, ಪಾಪದ್ದು, ಸುಮ್ಮನೆ ಪಿಳಿ ಪಿಳಿ ಕಣ್ಣು ಬಿಟ್ಟು ಕೆಲವೊಮ್ಮೆ ಕುಯ್ ಎಂದು ಸುಮ್ಮನಾಗುತ್ತಿತ್ತು, ಮಾತು ಬೇಕಿತ್ತು ಗೆಳೆಯು
ನನ್ನ ಹೌದು ಗಳಿಗೆ ಹೌದೆನ್ನುವ ಇಲ್ಲವೆನ್ನುವ ಮಾತಿನ ವ್ಯಕ್ತಿ ಬೇಕಿತ್ತು ನೀನು ಸಿಕ್ಕೆ, ಅಗಾಧ ನೀಲ ರಾಶಿಯ ನಡುವೆ  ಪುಟ್ಟದೊಂದು ನಾವೆಯನ್ನು ಹುಟ್ಟುಹಾಕುತ್ತಾ ನೀನು ಬರುತ್ತಿದ್ದೆ,
ನೀನು ಸಾಧಾರಣವಾಗಿದ್ದೆ, ಅಲ್ಪ ಸ್ವಲ್ಪ ಮಾತು , ಹೆಚ್ಚು ಪರಿಚಯವಾದರೆ ತುಸು ಜಾಸ್ತಿ ಇನ್ನೂ ಹೆಚ್ಚಿನ ಸಲುಗೆಯಾದರೆ "ಪುಟ್ಟ" ಎನ್ನುತ್ತಿದ್ದೆ ಕಾವಲಿನ ಅಪ್ಪನ ಹಾಗೆ ಕಾಯುತ್ತಿದ್ದೆ. ಇರಬಹುದಾ ಅಪ್ಪನೆಂದರೆ ಹೀಗೆ ಹೋದ ಕಡೆ ಬಂದ ಕಡೆ ಅನುಮಾನಿಸಿದೆ, ನನ್ನ ಮಗಳು ನಾನು ಬೆಳೆಸಿದ ಮಗಳು ನನ್ನ ಹಾಗೆ, ಬೌದ್ಧಿಕವಾದ ಮನಸ್ಸಿನವಳು, ಹೆಮ್ಮೆಯಿಂದ ಹೇಳಿಕೊಳ್ಳುವ ತಂದೆ
ಇರಬಹುದಾ? ನೀನಿದ್ದೆ ಗೆಳೆಯ, ನೀನು ತಂದೆಯಲ್ಲ..... ಗಂಡನಲ್ಲಿ ತಂದೆಯಂಥ ಗುಣವನ್ನು ಹುಡುಕುವ ಎಲ್ಲ ಹುಡುಗಿಯರ ಹಾಗೆ ನಾನೂ ಕೂಡ.
ಒಳಗಿನ ಮೌನವನ್ನ ಹೊರಗೆ ತೋರಿಸಿಕೊಳ್ಳಲಾರದೆ ಮಾತಾಡುತ್ತಲೇ ಇದ್ದವಳಿಗೆ ನೀನೇಕೆ ಕಂಡೆ? ಗಟ್ಟಿಗೊಂಡ ಭಾವದ ಮೌನವನ್ನು ಒಡೆದೆ , ಮಾತಾಳಿಯನ್ನು ಮೂಕವಾಗಿಸಿದೆ. ನಿನ್ನ ಪ್ರೀತಿಯ ಶಕ್ತಿಗೆ ನಾನು ಅರ್ಹಳೇ ಗೆಳೆಯ?  ಎಲ್ಲರ ಮನಸ್ಸಿನೊಳಗಿಳಿದು ಅವರಾಗುವಿಕೆ ನಿನ್ನ ಗುಣ ಮೆಚ್ಚುವಂತದ್ದೆ ಆದರೆ ಈ ಪ್ರಕ್ರಿಯೆಯಲ್ಲಿ ನೀನು ನಿನ್ನತನವನ್ನು  ಕಳೆದುಕೊಳ್ಳುವೆಯೆಂಬ ಅತಂಕವಿದೆ ಇನಿಯ, ವ್ಯಕ್ತಿತ್ವ ಬದಲಾಗದೆ ಇದೇ ಗುಣವನ್ನು ಉಳಿಸಿಕೊಳ್ಳುವೆಯಾದರೆ ಚೆನ್ನ.
ಈ ಗುಣ ನಿನಗೆ ಅಹಂಕಾರವನ್ನು ತಂದುಕೊಟ್ಟಿತಾ? ನಾನು ಮೇಧಾವಿ ಎಂಬ ಅಹಂ ಬೆಳೆದುಬಿಟ್ಟಿತಾ? ಎಲ್ಲರನ್ನು ಮಾತಿಗೆಳೆದು ಅವರನ್ನು ಸರಿಮಾಡುವ ಅಥವಾ ಅವರ ನೋವನ್ನು ಹಂಚಿಕೊಳ್ಳುವ ಶಕ್ತಿ ನನಗೊಬ್ಬನಿಗೇ ಇದೆ ಎನ್ನುವ ಅಹಂಕಾರಕ್ಕೆ ಬಿದ್ದೆಯಾ?
ಹುಡುಗ... ಪ್ರಪಂಚದ ತುಂಬ ಭಾವಗಳಿವೆ, ಕಲ್ಲು ಮರ ಜನ ದನ ಎಲ್ಲವಕ್ಕೂ ಎಲ್ಲವನ್ನೂ ತಿಳಿಯಲು ಸಾಧ್ಯವೇ? ಗೊತ್ತಿದೆ ಹುಡುಗ ನೀನು ಬುದ್ಧಿವಂತ, ಎಲ್ಲರನ್ನೂ ಸೇರಿಸಿಕೊಂಡೇ ಬದುಕಬೇಕೆನ್ನುವ ಜಾಣ, ಆದರೂ ನಿಷ್ಟುರವಿರಲಿ ಹುಡುಗ, ಕೆಲವರೊಂದಿಗಾದರೂ
ನಿನ್ನನ್ನೇ ತುಳಿಯಬಂದವರನ್ನೂ ನೀನು ಆದರಿಸಿ ದೈವತ್ವಕ್ಕೇರುವುದು ತಪ್ಪು ಮನುಷ್ಯದ ಸಹಜ ಸ್ವಭಾವವನ್ನು ತುಳಿದರೆ ಅತಿಮಾನುಷನಾಗಬಹುದು ಆದರೆ ಅತಿಮಾನುಷತನ ರಾಕ್ಷಸತ್ವಕ್ಕೆ ಎಡೆ ಮಾಡುತ್ತದೆ,
ಈಗ ಮೌನವಾಗಿದ್ದೇನೆ ಹುಡುಗ ಒಳಗೂ ಹೊರಗೂ
ನೀ ತೊರೆದ ದಿನ ನನ್ನ ಕಣ್ಣೀರಿನಂಗಡಿಯಲ್ಲಿ ನಾನೊಬ್ಬಳೇ...ನಿರ್ಧಾರ ನನ್ನದು ತೊರೆದದ್ದು ನೀನು, ಇನ್ನೊಬ್ಬರ ನೋವನ್ನು
ಹಂಚಿಕೋ ಎಂದೆ ನೀನು, ನನ್ನದೇ ಹಾಸಿ ಹೊದೆಯುವಷ್ಟಿದೆ ಎಂದೆ ನಾನು ಬದುಕು ಏಕಮುಖವಾಗಬಾರದು ಮಗು ಎಂದೆ, ನಾನು ಮನುಷ್ಯಳು ಎಂದೆ ಮಾತಿಗೆ ಮಾತು ಚಿಕ್ಕ ವಿಷಯವೇ ಆದರೆ ನಿನ್ನೊಡನೆ ಮುಂದಿನ ದಾರಿ ಕಷ್ಟ ಎಲ್ಲರಿಗಾಗಿ ನೀನು , ಎಲ್ಲರ ಖುಷಿಗಾಗಿ ನೀನು ಏನನ್ನಾದರೂ ಮಾಡಲು ಸಿದ್ದ ನನಗಾಗಿ ನಿನ್ನೀ ಗುಣ ಬಿಡಲಾರೆಯಾ? ನೀನು ಮನಸೋದುಗ ಅದರೆ ನೀನು ನನ್ನವನು, ನನಗಾಗಿ ಮಾತ್ರ, ಇದು ನನ್ನೊಳಗಿನ  ಭಾವ, ಬರುವೆಯಾ ಹುಡುಗ ಮತ್ತೆ ನನ್ನೊಂದಿಗೆ  ಮೌನದಿಂದ ಮತ್ತೆ ನಮ್ಮ
ಪ್ರೀತಿಯನ್ನು ಆರಂಭಿಸೋಣ
ಇತಿ ನಿನ್ನ ಮೌನಿ

2 comments:

Unknown said...

ಪ್ರೀತಿ ಅನ್ನೋದೆ ಹೀಗೆ, ಮೊದಲು ಎಲ್ಲವನ್ನೂ ಎಲ್ಲರನ್ನೂ ಅರ್ಥ ಮಾಡಿಕೊಂಡು ಬದುಕುವ ಜೊತೆಗಾರರನ್ನೇ ಹುಡುಕುತ್ತೇವೆ. ಪ್ರೀತಿ ಸಿಕ್ಕ ಬಳಿಕ ಅದು ನಮಗೆ ಮಾತ್ರವೇ ಮೀಸಲಾಗಿರಬೇಕು ಅಂತ ಮನಸ್ಸು ಹೇಳುತ್ತೆ. ಅದು ಸೌರ್ಥನೋ ಅಥವಾ ಪ್ರೀತಿನೋ ತಿಳೀದು. ಅದನ್ನು ತಪ್ಪು ಅಂತ ಹೇಳಲೂ ಆಗದು.. ಯಾಕೆ ಈ ಪ್ರೀತಿ ಹೀಗೆ....? ಈ ಪ್ರಶ್ನೇಗೆ ಉತ್ತರ..... ಪ್ರೀತಿನೇ ಹಾಗೆ.....!

Unknown said...

ಪ್ರೀತಿ ಅನ್ನೋದೆ ಹೀಗೆ, ಮೊದಲು ಎಲ್ಲವನ್ನೂ ಎಲ್ಲರನ್ನೂ ಅರ್ಥ ಮಾಡಿಕೊಂಡು ಬದುಕುವ ಜೊತೆಗಾರರನ್ನೇ ಹುಡುಕುತ್ತೇವೆ. ಪ್ರೀತಿ ಸಿಕ್ಕ ಬಳಿಕ ಅದು ನಮಗೆ ಮಾತ್ರವೇ ಮೀಸಲಾಗಿರಬೇಕು ಅಂತ ಮನಸ್ಸು ಹೇಳುತ್ತೆ. ಅದು ಸೌರ್ಥನೋ ಅಥವಾ ಪ್ರೀತಿನೋ ತಿಳೀದು. ಅದನ್ನು ತಪ್ಪು ಅಂತ ಹೇಳಲೂ ಆಗದು.. ಯಾಕೆ ಈ ಪ್ರೀತಿ ಹೀಗೆ....? ಈ ಪ್ರಶ್ನೇಗೆ ಉತ್ತರ..... ಪ್ರೀತಿನೇ ಹಾಗೆ.....!