Thursday, September 22, 2016

ಅಚ್ಚರಿಯ ಕಣ್ಣಿನವನಿಗೆ...

ಅಚ್ಚರಿಯ ಕಣ್ಣಿನವನಿಗೆ...
ಒಂದಷ್ಟು ಓಡಾಟದೊಂದಿಗೆ ಬಿಡುವಾಗಿ ನಿನ್ನೆದುರು ಕುಳಿತಿದ್ದೇನೆ ಹುಡುಗ. ಪೆನ್ನು ಹಾಳೆಗಳ ನಡುವೆ ನೀನೆಂಬ ಪ್ರೀತಿಯ ಅಕ್ಷರಗಳನ್ನು ಹೊಸೆಯುವ ನಿನ್ನ ಗರ್ವವಾಗಿ. ಹೌದು ಹುಡುಗ ನಾನು ಗರ್ವಿಯೇ, ನಿನ್ನ ನನ್ನ ಭೇಟಿಯಾದಾಗಲೇ ನನಗೆ ಕೊಬ್ಬು ಹೆಚ್ಚಾದದ್ದು. ಪ್ರೀತಿ ಹೆಚ್ಚಾದರೆ ಕೊಬ್ಬು ಶೇಖರಣೆ ಆಗುತ್ತದಂತೆ (:) ಯಾವ ಬೇಜಾರಿಲ್ಲದೆ ಮನಸ್ಸು ಸುಮ್ಮನೆ ಹಾರಾಡುತ್ತಿದೆ. ಒಂದಿಲ್ಲೊಂದು ಜವಾಬ್ದಾರಿಗಳನ್ನು, ಚುಚ್ಚು ಮಾತುಗಳನ್ನು, ಕಟ್ಟುಪಾಡುಗಳನ್ನು ಹೇರಿಸಿಕೊಂಡು ಬದುಕುತ್ತಿದ್ದ ನನಗೆ ಸ್ವಲ್ಪ ನೆಮ್ಮದಿ ಕೊಟ್ಟದ್ದು ನೀನು. ಹಾಗಾಗಿ ನಾನು ಸ್ವಲ್ಪ ಹಗುರಾಗಿದ್ದೇನೆ ಹಾಗಾಗಿಯೇ ನನಗೆ ಕೊಬ್ಬು. ನೀನು ಪ್ರೀತಿಯಿಂದ ಕೊಬ್ಬು ಎಂದಾಗಲೆಲ್ಲ ಆ ಕೊಬ್ಬಿಗೆ ನೀನೆ ಕಾರಣ ಕಣೋ ಎಂದುಬಿಡೋಣ ಎನಿಸುತ್ತದೆ.
ನಾನು ಮಾತುಗಳನ್ನು ಹೆಚ್ಚು ಇಷ್ಟ ಪಡುತ್ತೇನೆ. ಹಾಗೆಂದು ಮಾತಾಳಿಯಲ್ಲ. ಒಮ್ಮೊಮ್ಮೆ ಮೌನಕ್ಕೆ ಮೊರೆಹೋಗುವುದುಂಟು. ನಮ್ಮಿಬ್ಬರ ಜಾತಕಗಳು ಕೂಡಿ ಮದುವೆ ಎಂದು ನಿಶ್ಚಯವಾದಂದಿನಿಂದ ನಿನ್ನೊಂದಿಗೆ ಹೆಚ್ಚು ಮಾತನಾಡಬೇಕೆಂಬ ದುರಾಸೆ ಹೆಚ್ಚಿಬಿಟ್ಟಿತು. ಆದರೆ ಕೆಲಸದ ಒತ್ತಡದಲ್ಲಿ ಮೆಸೇಸುಗಳ ಗಲಿಬಿಲಿಯಲ್ಲಿ ಕಳೆದು ಹೋಗಿಬಿಟ್ಟೆವು ನಾವು. ನಿನಗೆ ಮೆಸೇಜುಗಳು ಅಪಥ್ಯ, ನನಗೆ ಮೆಸೇಜುಗಳೇ ಆಹಾರ. ಕಾರಣ ಮಾತನಾಡಲು ಆಗದಂಥ ಅಸಹಾಯಕತೆ. ಒಂದೆಡೆ ಕೆಲಸ ಇನ್ನೊಂದೆಡೆ ನಾನೆ ವಿಧಿಸಿಕೊಂಡ ಅಥವ ರೂಢಿಯಾಗಿಬಿಟ್ಟ ನನ್ನ ಚೌಕಟ್ಟು. ನಿನಗೆ ಆಫೀಸಿನಲ್ಲಿ ಕೆಲಸದ ಒತ್ತಡ ಮನೆಗೆ ಹೋದ ಮೇಲೆ ಮಾತಾಡಲು ನಿನಗೆ ಪುರುಸೊತ್ತು ನನಗೆ ಮನೆಗೆ ಹೋದ ಮೇಲೆ ಅಲ್ಲಿನವರನ್ನು ಮತ್ತು ಅಲ್ಲಿನ ಕೆಲಸಗಳನ್ನು ನಿಭಾಯಿಸುವ ಅನಿವಾರ್ಯತೆ. ಹೀಗಾಗಿ ರಾತ್ರಿಗಳೇ ನಮ್ಮ ಪಾಲಿಗೆ ಮಿಕ್ಕ ಸಮಯ. ಇಷ್ಟೆಲ್ಲಾ ಜಂಜಡಗಳಲ್ಲಿ ನಿದ್ದೆ ಆವರಿಸಿಬಿಡುವುದು ಗೊತ್ತೇ ಆಗುವುದಿಲ್ಲ. ನಿನಗೋ ಕೋಪ! ಏನು ಮಾಡಲಿ ಗೆಳೆಯ. ಇದೆಲ್ಲವನ್ನೂ ಮತ್ತು ಪ್ರೀತಿಯೆಂಬ ಮಳೆಯ ಶಬ್ದವನ್ನು ಕೇಳಿಸುವ ಸಲುವಾಗಿ ಈ ಪತ್ರ.
ಅಂದ ಹಾಗೆ ನನಗೆ ಮಳೆಯೆಂದರೆ ಇಷ್ಟ ಎಂದು ನಿನಗೆ ಹೇಳಿದ್ದೇನಾ? ಇಲ್ಲವಲ್ಲ. ಯಾವುದೊ ಸಿನಿಮಾ ನೋಡಿ ಇಷ್ಟಪಟ್ಟದ್ದಲ್ಲ ಹುಡುಗ. ಚಿಕ್ಕಂದಿನಿಂದಲೂ ನನಗೆ ಮಳೆಯೆಂದ ಅವ್ಯಕ್ತ ಪ್ರೇಮ. ಅದು ನನ್ನ ಮತ್ತು ನಮ್ಮೂರು ಶಿರಸಿಯ ಹಾಗೆಯೇ. ಸಮಯದಲ್ಲಿ ಸಮ್ಮಾ ಸುರಿಯುತ್ತದೆ ಮತ್ತು ಮೌನಿಯಾಗಿರುತ್ತದೆ. ಒಂಟಿಯಾಗಿ ಮಳೆಯಲ್ಲಿ ನೆನೆಯುತ್ತಾ ಒಂದಷ್ಟು ಕನಸು ಕಟ್ಟುತ್ತಾ ಹೋಗುವುದು ನನ್ನಿಷ್ಟದ ಅಭ್ಯಾಸ. ಮನೆಗೆ ಬಂದೊಡನೆ ಅಪ್ಪನ ಬೈಗುಳ ಅಮ್ಮನ ಕೊಂಗಾಟ ಎಲ್ಲವೂ ಗೊತ್ತಿದ್ದೇ ಮಳೆಯಲ್ಲಿ ನೆನೆಯುತ್ತೇನೆ. ಮುಂದಿನ ಮಳೆಗಾಲದ ಹೊತ್ತಿಗೆ ನಿನ್ನನ್ನು ನೆನೆಸುವ ಇರಾದೆಯಿದೆ. ನೆನೆಯಲು ಸಿದ್ಧನಾಗಿರು :). ಸಾಗರದ ದಟ್ಟ ಮರಗಳ ಹಾದಿಗುಂಟ ಮೌನವಾಗಿ ನಡೆದುಬಿಡೋಣ. ನಮ್ಮ ಹೃದಯಗಳಷ್ಟೇ ಮಾತನಾಡಿಕೊಳ್ಳಲಿ. ಗಿಡಗಳ, ಮರಗಳ ಮತ್ತು ಮಳೆಯ ’ಶ್’ ಶಬ್ದ ಮಾತ್ರ ಕಿವಿಗೆ ಬೀಳಲಿ.
ಹಾರುವಷ್ಟು ದೂರ ನಿನ್ನೊಡನೆ ಮತ್ತು ನಿನ್ನೊಳಗೆ ಹಾರಬೇಕಿದೆ ಗೆಳೆಯ. ಮೋಡಗಳ ಪಕ್ಕದಲ್ಲಿ ಗಾಳಿಗೆದುರಾಗಿ ಹಾರಾಡೋಣ. ಕೈಗಳನ್ನ ಚಾಚಿ ಆಕಾಶದಲ್ಲಿ ತೇಲಾಡೋದು ಎಂತ ಸಂಭ್ರಮದ ಕ್ಷಣ. ದೇಹ ಹಗುರಾಗಿ ನಾನು ಅನ್ನೋದೇ ಇಲ್ಲವಾಗುವ ಘಳಿಗೆಗಳು ಅವು. ಹೌದು ಗೆಳೆಯ ಇಡೀ ಪ್ರಪಂಚ ಚುಕ್ಕಿಯ ಹಾಗೆ ಕಾಣುತ್ತಾ ನಮ್ಮೊಳಗಿನ ಅಹಂಕಾರವನ್ನ ಸೊನ್ನೆಯಾಗಿಸಿಬಿಡುವ ಸ್ಕೈ ಡೈವಿಂಗ್ ನನ್ನ ಕನಸು. ಭಯಕ್ಕೋ ಏನೋ ಅಪ್ಪ ಅದು ಬೇಡ ಅಂದು ಬಿಟ್ಟಿದ್ದರು. ಇದೇ ಭಾವ ನೀರಿನಲ್ಲಿಯೂ ಆಗುತ್ತದಂತೆ. ಅದಕ್ಕೂ ಹೋಗೋಣ. ಆಸೆಗಳು ಹೆಚ್ಚಾಯ್ತಾ ಹುಡುಗ. ಮದುವೆಯ ದಿನಗಳು ಹತ್ತಿರಾದಷ್ಟು ಭವಿಷ್ಯದ ಕನಸುಗಳ ಚುಕ್ಕಿಗಳು ಆಕಾಶದ ತುಂಬ ಮಿನುಗುತ್ತಿವೆ. ಅವುಗಳನ್ನ ಸೇರಿಸಿ ಅಂಗಳಕ್ಕೆ ತರುವೆಯಲ್ಲವೇ?
ಮೊನ್ನೆ ಹದಿನಾರಕ್ಕೆ ನನ್ನ ನಿನ್ನ ಮೊದಲ ಮಾತು ಕತೆಯಾಗಿ, ಕನಸಾಗಿ ಕಾವ್ಯಾವಾಗಿ ಒಂದು ತಿಂಗಳಾಯ್ತು. ನೀನು ಹೆಚ್ಚು ಮಾತುಗಾರನಲ್ಲ. ಫೋನಿನಲ್ಲೂ ಕೂಡ ನಾನೇ ಮಾತಾಡಬೇಕು ನೀನು ಆಗೊಮ್ಮೆ ಈಗೊಮ್ಮೆ ಹ್ಮ್ ಹೇಳು, ಊಟವಾಯ್ತ? ಏನು ತಿಂಡಿ? ಇವಿಷ್ಟೆ ಇವು ಬಿಟ್ಟರೆ ಕಂಪನಿ ಹೇಗೆ ಏನು ಇತ್ಯಾದಿ ಪ್ರೊಫೆಷನ್ ಸಂಬಂಧಿ ಮಾತುಗಳು. ಓಯ್ ಗಂಡ (ಮೊದಲ ಬಾರಿಗೆ ಹೀಗೆ ಹೇಳುತ್ತಿದ್ದೇನೆ ಇನಿಯ) ಸ್ವಲ್ಪ ರೊಮಾಂಟಿಕ್ ಮಾತುಗಳನ್ನು ಕಲಿ. ಇಲ್ಲಿಯವರೆಗಿನ ಮಾತುಗಳಲ್ಲಿ ಒಮ್ಮೆಯಾದರೂ ಪ್ರೇಮ ನಿವೇದನೆ ಮಾಡಿದ್ದೀಯ? ನಿನ್ನಲ್ಲಿ ಪ್ರೀತಿಯಿದೆ, ನನಗೆ ಗೊತ್ತು ಆದರೆ ಅದು ನನ್ನ ಕಿವಿಗಳನ್ನು ತಾಕಲಿ. ನಾನಾಗಿಯೇ ಕೇಳಲು ನನಗೆ ಸಂಕೋಚ ಮೇಲಾಗಿ ಕೊಬ್ಬು(ನಿನ್ನದೇ ಮಾತಿನಲ್ಲಿ). ಆದರೂ ಹೇಳಿದ್ದೇನೆ ಹುಡುಗ. ಮೊನ್ನೆ ನಿನ್ನ ಹುಟ್ಟುಹಬ್ಬಕ್ಕೆ ಕೊಟ್ಟ ಗಿಫ್ಟ್ ನಲ್ಲಿ ನನ್ನ ಪ್ರೀತಿಯಿದೆ. ನಿನಗದು ಸರ್ಪ್ರೈಸ್. ಈ ಗಿಫ್ಟ್ ಕೊಡುವಾಗ ನಾನೇ ಮೊದಲು ಪ್ರೇಮ ನಿವೇದನೆ ಮಾಡಿದೀನಿ ಸೊ ನಾನೆ ಫಸ್ಟ್ . ನಾನು ಹೇಳಿದಾಗ ನಿನ್ನ ಅಚ್ಚರಿಯ ಮುಖ ನನ್ನ ಎದೆಯಲ್ಲಿ ಅಚ್ಚಳಿಯದೆ ಉಳಿದಿದೆ ಹುಡುಗ. ನೀನು ಪೂರ್ಣವಾಗಿ ಶಾಕ್ ನಲ್ಲಿದ್ದೆ. ಇನ್ನಾದರೂ ಸ್ವಲ್ಪ ತುಂಟತನವನ್ನು ಕಲಿಯುತ್ತೇನೆಂಬ ಭರವಸೆ ಕೊಡು.
ಬದುಕಿನ ಈ ಘಟ್ಟದಲ್ಲಿ ಉಳಿಯಬಹುದಾದ ಅತಿ ದೊಡ್ಡ ಘಟನೆಗಳೆಂದರೆ ಇವೇ ಹುಡುಗ, ಒಂದು ಪತ್ರ, ಮಾತು, ಸಣ್ನಗಿನ ತುಂಟತನ, ಸಾವಿರ ಸರ್ಪ್ರೈಸ್ ಗಳು, ಮದುವೆಯಾದ ಮೇಲೆ ಇವು ಕಡಿಮೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು, ನಮ್ಮದು. ಬರಲೇ ಗೆಳೆಯ. ಆಕಾಶದ ಉದ್ದಕ್ಕೂ ಮಳೆ ಮೋಡಗಳನ್ನು ಕೂಡಿಸಿ ಬೆಳ್ಳಿಯ ರೇಖೆಗಳನ್ನು ಬದಿಯಲ್ಲಿ ನಿಲ್ಲಿಸಿ ಗಟ್ಟಿಗೊಂಡ ಪ್ರೀತಿಯ ಭಾವಗಳನ್ನು ಮಲ್ಲಿಗೆಯಾಗಿಸಿ ದಾರಿಯುದ್ದಕ್ಕೂ ಹಾಸಿರುತ್ತೇನೆ. ಮಲ್ಲಿಗೆಯನ್ನು ತುಳಿಯದೇ ಮಾಲೆಯಾಗಿಸುತ್ತಾ ಬಾ ಗೆಳೆಯ.
ನಿನ್ನ ವಿವಿನ

No comments: