Thursday, September 22, 2016

ಮದುವೆ_ಲಹರಿ_ಕವನ


ಸಿರಿಗೌರಿ ಬರುತಿಹಳು ನನ್ನೆದೆಯ ಕಡೆಗೆ
ತಿರುತಿರುಗಿ ನೋಡುವಳು ತೌರೂರ ಕಡೆಗೆ
ಗಟ್ಟಿಗೊಂಡಿಹುದೇನೋ ಸಂಕಟವು ಒಳಗೆ
ಭುಜಕೊರಗಿ ಮಲಗಿಹಳು, ಮಲ್ಲಿಗೆಯು ಮುಡಿಗೆ

ಉಂಗುರದ ಬೆರಳೊಳಗೆ
ಬಂಗಾರದುಂಗುರವು
ಕಂಗೊಳಿಸಿ ಕರೆಯುತಿದೆ
ಮಲ್ಲಿಗೆಯ ವಧುವನ್ನು, ಮೆಲ್ಲುಲಿಯ ಸಖಿಯನ್ನು

ಹೆಗಲಿಗೊರಗಿದೆ ನೀನು
ಹೆಗಲಾಗಲು ಬರುವೆಯಾ
ಹಗಲಿರುಳು ಪ್ರೀತಿಸುವೆ
ಜಗವಾಗಲು ಬರುವೆಯಾ

ದೇಗುಲದ ತುಂಬೆಲ್ಲ ಘಂಟೆಗಳ ನಾದ
ಅಂಗಳದ ತುಂಬೆಲ್ಲಾ ಮಲ್ಲಿಗೆಯ ಕಂಪು
ಬಂಗಾರ ತೇರೊಳಗೆ ಶ್ರೀಲಕ್ಷ್ಮಿ ಮೂರ್ತಿ
ಕಂಗೊಳಿಪ ಸಿರಿಗೌರಿ ನೀನೆಮ್ಮ ಕೀರ್ತಿ

ಎದೆಯ ಮೇಲೆ ಕುಣಿದ ಕೂಸು
ಅಳಿಯನೊಡನೆ ಹೊರಟಿದೆ
ಹಿತ್ತಲಲ್ಲಿ ಮಲ್ಲೆ ಬಳ್ಳಿ
ಮೌನದಲ್ಲಿ ಅಳುತಿದೆ
ಮನೆಯ ಮುಂದೆ ರಂಗವಲ್ಲಿ
ಬಾನಿನೊಡನೆ ಸಾಗಿದೆ
ಹೊಸ ಮನೆಯ ಅಂಗಳದಲಿ
ಚಿತ್ತಾರವ ಬಿಡಿಸಿದೆ


ತವರೂರ ಅಂಗಳದಿ ನೆನಪುಗಳ ಬಳ್ಳಿ
ಕೂಸು ಕೊಂಗಾಟದ ಮಾತುಗಳೆ ಅಲ್ಲಿ
ತಮ್ಮನೊಡನಾಟವನು ನೆಟ್ಟು ಬಂದಿಹೆನಲ್ಲಿ
ಅಳುತಿಹುದೋ ಏನೋ ಮಲ್ಲಿಗೆಯ ಬಳ್ಳಿ


ಕಾದಿರುವೆ ಕಾರ್ತೀಕ ದೀಪಗಳಿಗಾಗಿ
ಚೆಂಬೆಳಕ ನೀಡುವ ಪ್ರಣತಿಗಳಿಗಾಗಿ
ಹೊರಟಿಹೆನು ಸವಿಯೂರ ಹೊಸಪರ್ವದೆಡೆಗೆ
ಕೈಮುಗಿದು ನಮಿಸುವೆನು ತೌರೂರ ಕಡೆಗೆ


ನಿಮಗವಳು ಮಗಳು
ಎಮಗವಳು ಬೆಳಕು
ಹರಸಿ ನಮ್ಮಿಬ್ಬರನು
ಹಸಿರಾಗಲಿ ಬದುಕು
ಅಳುತ ನಿಲ್ಲದಿರಿ ಮಾವನವರೆ

ಮಲ್ಲಿಗೆಯ ಬೆಳಸಿದಿರಿ
ಒಲವೆರದು ಕಾಯುವೆನು
ಚೆಲುವಾಗಲೀ ಬದುಕು
ನಲಿವೊಂದೆ ನೀಡುವೆನು
ಅಳುತ ಕಳುಹದಿರಿ ಅತ್ತೆಯವರೆ
ತೇಲಿಬಿಡುವೆ ಮುತ್ತುಗಳನು
ತುಂಗೆಯೂರ ದಂಡೆಯೆಡೆಗೆ
ಹಣತೆ ಸಾಲು ತೇಲಿ ಬರಲಿ
ಬಯಲು ಸೀಮೆ ಮುಗಿಲ ಕಡೆಗೆ
೧೦
ನೀ ಹೊರಟ ಪಯಣದೊಳು
ಜೊತೆ ನಾನು,ಪಯಣಿಗನು
ಏರುವೆನು ಇಳಿಯುವೆನು
ಬಾಳ್ಗನಸು ಕಾಣುವೆನು

No comments: