Thursday, September 22, 2016

ಮದುವೆ_ಲಹರಿ_ಕವನ

೧೧
ಚಂದಿರನ ಮೇಲೊಂದು ಮೆತ್ತೆಯನು ಹಾಸಿ
ಜೋಗುಳವ ಹಾಡುವೆನು ಒಲವನ್ನು ಪೂಸಿ
ಬೆಳದಿಂಗಳಂತಿರಲು ನಿನ್ನ ನುಡಿಹಾಲು
ತಾರೆಗಳ ಮೆರವಣಿಗೆ,ದೀಪಗಳ ಸಾಲು

೧೨
ಸಪ್ತಪದಿ ಭಾವ
*********************
ಸಖಾ ಏಕಪದಿ ಭವ...
ಹೆಜ್ಜೆಯೊಂದು ಬೆಳಕಿನೆಡೆಗೆ
ಸ್ನೇಹದೊಡನೆ ಒಲವ ಬೆಸುಗೆ
ಕಾಲದೊಡನೆ ಜಗದ ಜೊತೆಗೆ
ಸಾಗುವೆವು ಭವ್ಯದೆಡೆಗೆ
ದ್ವಿಪದಿ ಭವ...
ಹೆಜ್ಜೆಯೆರಡು ಶಕ್ತಿಯೆಡೆಗೆ
ನೋವು ನಲಿವು ವಿಧಿಯ ಹಿರಿಮೆ
ಒಳಿತಿನೆಡೆಗೆ ನಮ್ಮ ಒಲುಮೆ
ಸವಿಯ ಮಾತು ಮನೆಯ ಗರಿಮೆ
ಸಾಗುವೆವು ದಿವ್ಯದೊಡನೆ
ತ್ರಿಪದಿ ಭವ...
ಹೆಜ್ಜೆ ಮೂರು ನಂಬಿಕೆಯದು
ನಾನು ನೀನು ದ್ವೈತವಳಿದು
ಜೇನು ಹಾಲಿನಂತೆ ಬೆರೆತು
ಪ್ರೀತಿಯನ್ನೆ ನಂಬಿಕೊಂಡು
ಸಾಗುವೆವು ಎಲ್ಲರೊಡನೆ
ಚತುಷ್ಪದಿ ಭವ...
ನಾಲ್ಕನೆಯದು ನಗುವಿನೆಡೆಗೆ
ಮನೆಯ ನಗುವು ನಮ್ಮ ದನಿಯು
ಮನೆಯ ದನಿಯೆ ನಮ್ಮ ನಗುವು
ಸಾಕು ಮಾತುಗಳನು ನೂಕಿ
ಮಧುರ ಧುನಿಯ ಸಾಗಿಸುವೆವು
ಪಂಚಪದಿ ಭವ...
ಐದನೆಯದು ಜಗಕೆ ಕೊಡುಗೆ
ನಮ್ಮ ಪ್ರೀತಿಯುಸಿರು ಜಗಕೆ
ಅಮ್ಮತನವೆ ಮಿಗಿಲು ಇಳೆಗೆ
ಮೊಮ್ಮಗುವಿನ ಸಣ್ನ ದನಿಗೆ
ಚಿಮ್ಮಲಿ ಮನ ಬಾಲ್ಯದೆಡೆಗೆ
ಷಟ್ಪದಿ ಭವ...
ಆರನೆಯದು ಋತುಗಳೆಡೆಗೆ
ಚೈತ್ರದೊಳಗೆ ಚಿತ್ರದಂತೆ
ಶ್ರಾವಣದಲಿ ಪರ್ವದಂತೆ
ಆಷಾಢದ ವಿರಹದಂತೆ
ಋತುಗಳೊಡನೆ ಹೊರಳಲಿಹೆವು
ಸಪ್ತಪದಿ ಭವ...
ಏಳನೆಯದು ಅರಿವಿನೆಡೆಗೆ
ತಿಳಿದು ಬದುಕೆ ಸೊಗಸು ಬಾಳ್ಗೆ
ಬೆರೆತು ನಡೆಯಲದುವೆ ಏಳ್ಗೆ
ಪ್ರಿತಿಯೊಂದು ವಿಧಿಯ ಕಾಣ್ಕೆ
ಸಹಜೀವನ ನಮ್ಮ ಹೆಮ್ಮೆ
ನಗುತ ಬದುಕ ಸಾಗಿಸುವೆವು

No comments: