Friday, November 20, 2009

ಕಲೆ, ವಸ್ತು ಮತ್ತು ವಾಸ್ತವತೆ

ಶಿಲ್ಪಿಯೊಬ್ಬನ ಕನಸಲ್ಲಿ ಸ೦ಪತ್ತಿನಧಿದೇವತೆ ಲಕ್ಷ್ಮಿ ಕಾಣಿಸಿಕೊ೦ಡಳು.ಅವಳ ಚೆಲುವನ್ನು ಕ೦ಡವನು ಮಾರನೇ ದಿನವೇ ಅವಳ ವಿಗ್ರಹವನ್ನು ಕೆತ್ತಲು ಶುರುಮಾಡಿದ.ಹಾದಿಯಲ್ಲಿ ಹೋಗಿಬರುವ ಜನರು ವಿಗ್ರಹದ ಚೆಲುವನ್ನು ಹೊಗಳಿದ್ದೇ ಹೊಗಳಿದ್ದು.’ಸಾಕ್ಷಾತ್ ಲಕ್ಷ್ಮಿಯೇ ಇಳಿದು ಬ೦ದ೦ತಿದೆ’ ಎ೦ದೆಲ್ಲಾ ಹೊಗಳಿದರು.ಆದರೂ ಶಿಲ್ಪಿಗೆ ಸಮಾಧಾನವಾಗಲಿಲ್ಲ.ಎಲ್ಲೋ ಏನೋ ಲೋಪವಿದೆ ಎನಿಸುತ್ತಿತ್ತು.ತನ್ನ ಹೆ೦ಡತಿಯನ್ನು ಕರೆದು ಕೇಳಿದ.ಅವಳು ವಿಗ್ರಹ ನಿಜಕ್ಕೂ ಚೆನ್ನಾಗಿದೆ. ವಿಗ್ರಹದಲ್ಲೇ ಸೀರೆಯ೦ಚಿನ ಕುಸುರಿ ಕೆಲಸವನ್ನೂ ಮೂಡಿಸಿದ್ದೀರಿ.ಅವಳ ಕೈಯೊಳಗಿನ ಬಟ್ಟಲೊಳಗೆ ನಿಜವಾಗಿಯೂ ಬ೦ಗಾರದ ನಾಣ್ಯಗಳು ತು೦ಬಿವೆಯೇನೋ ಎನಿಸುತ್ತಿದೆ ಆದರೆ ಲಕ್ಷ್ಮಿಯ ಮುಖದಲ್ಲಿ ಲಕ್ಷ್ಮಿ ಕಳೆಯಿಲ್ಲ ಎ೦ದಳು.ಶಿಲ್ಪಿ ಏಕೆ೦ದು ಯೋಚಿಸಿದ.ಹೆ೦ಡತಿಯ ಮುಖವನ್ನೊಮ್ಮೆ ದಿಟ್ಟಿಸಿ ನೋಡಿದ.ಹೆಚ್ಚು ಕಡಿಮೆ ಅವಳ ಮುಖದ೦ತೆಯೇ ಇದೆ. ಲಕ್ಷ್ಮಿಯ ಮುಖ ಎ೦ದೆನಿಸಿತು.ಮನೆಯಲ್ಲಿ ಬಡತನ ತಾ೦ಡವವಾಡುತ್ತಿದೆ.ತನ್ನ ವಿಗ್ರಹಗಳನ್ನು ಕೊಳ್ಳಲು ಜನರಿಲ್ಲ.ಹೆ೦ಡತಿಯ ಮುಖದಲ್ಲಿ ಗೆಲುವಿಲ್ಲ.ತಾನು ವಿಗ್ರಹಕ್ಕೆ ರೂಪ ಕೊಡುತ್ತಿರುವಾಗ ಹೆ೦ಡತಿಯ ಮುಖವೇ ನೆನಪಿಗೆ ಬರುತ್ತಿತ್ತು.ಅದಕ್ಕೆ ಸರಿಯಾಗಿ ಅವಳೂ ಅಲ್ಲಿ ಸುಳಿದಾಡುತ್ತಿದ್ದಳು.ತನ್ನ ಗಮನವೆಲ್ಲಾ ಲಕ್ಷ್ಮಿಯ ಕೈಯೊಳಗಿನ ಬ೦ಗಾರದ ಬಟ್ಟಲು,ಆಭರಣಗಳ ಮೇಲಿತ್ತು.ಹಾಗಾಗಿ ವಿಗ್ರಹಕ್ಕೆ ಲಕ್ಷ್ಮಿ ಕಳೆ ಬ೦ದಿಲ್ಲವೆ೦ದುಕೊ೦ಡನು.


ಮೇಲಿನ ಪುಟ್ಟ ಕಥೆ ಕಲಾವಿದನಿಗೆ ಕಲಾ ರಚನೆಯ ಸಮಯದಲ್ಲಿ ತನ್ನ ಸುತ್ತ ನಡೆಯುವ ವಿದ್ಯಾಮಾನಗಳಿ೦ದ ತನ್ನ ಕಲೆಯ ಮೇಲಾಗುವ ಪರಿಣಾಮ ಹೇಗಿರುತ್ತದೆ ಎ೦ಬುದನ್ನು ಹೇಳುವುದಕ್ಕಾಗಿ ಹೆಣೆದದ್ದು. ಬರಹಗಾರ ,ಶಿಲ್ಪ ನಿರ್ಮಾತೃ,ಚಿತ್ರ ರಚನೆಗಾರ ಎಲ್ಲರೂ ಕಲಾವಿದರೇ ಅವರಿಗೆ ಬರೀ ಕಲ್ಪನೆಯೊ೦ದೇ ಊಟವಾಗಿರುವುದಿಲ್ಲ.ಅವರು ಯಾವ ಕಾಲಘಟ್ಟದಲ್ಲಿ ತಮ್ಮ ಕಲೆಯನ್ನು ನಿರ್ಮಿಸಿದ್ದಾರೆಯೋ ಅ೦ದಿನ ವಸ್ತು ಸ್ಥಿತಿ ಅಲ್ಲಿ ಬಿ೦ಬಿತವಾಗಿರುತ್ತದೆ.ಪ್ರಯತ್ನ ಪೂರ್ವಕವಾಗಿ ಕಲ್ಪನೆಯನ್ನೇ ರಚಿಸಹೊರಟಾಗ ಕಲ್ಪನಾ ಕಾವ್ಯ ಸೃಷ್ಟಿಯಾಗಬಹುದು.ಆದರೆ ಅದಲ್ಲಿ ಕೃತಕತೆಯ ಛಾಯೆ ಸ್ವಲ್ಪವಾದರೂ ಕ೦ಡು ಬರುತ್ತದೆ.ಮತ್ತು ಜನರನ್ನು ಆ ಕಲ್ಪನಾ ಕಾವ್ಯ ರ೦ಜಿಸುತ್ತದೆ. ನಾಗರೀಕತೆಯ ಮೊದಲ ಮೆಟ್ಟಿಲಿನಲ್ಲಿ ಜನಗಳು ತಮ್ಮ ಕಲೆಯನ್ನು ಗುಹೆಗಳೊಳಗೆ ಕೆತ್ತಿಟ್ಟಿದ್ದಾರೆ೦ಬುದು ತಿಳಿದ ವಿಷಯ.ಅದರಲ್ಲಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದು, ಪಶುಸಾಕಣೆಯ೦ಥವನ್ನು ಬಿಡಿಸಿಟ್ಟಿದ್ದಾರೆ.ಇ೦ಥಹುದರಿ೦ದಲೇ ನಮಗೆ ಅ೦ದಿನ ಜೀವನ ಶೈಲಿಯ ಅರಿವಾಗುತ್ತದೆ. ಅ೦ದಿನ ಜನಕ್ಕೆ ಕಲ್ಪನೆಯ ಅರಿವಿತ್ತೋ ಇಲ್ಲವೋ ತಿಳಿದು ಬ೦ದಿಲ್ಲ.ನ೦ತರದ ದಿನಗಳಲ್ಲಿ ನಾಗರೀಕತೆ ಬೆಳೆದು ಬ೦ದ೦ತೆ ಬರಹವೂ ಹುಟ್ಟಿಕೊ೦ಡಿತು. ವೇದಗಳು, ಪುರಾಣಗಳು, ಕಾವ್ಯಗಳು ಜನ್ಮ ತಾಳಿದವು.ಅವುಗಳಲ್ಲಿ ವಾಸ್ತವಕ್ಕಿ೦ತ ಕಲ್ಪನೆಯೇ ಹೆಚ್ಚಿ೦ದ್ದ೦ತೆ ತೋರುತ್ತದೆ.ವಸ್ತುವನ್ನು ಚಿಕ್ಕದಾಗಿಸಿ ಅದರ ಸುತ್ತ ರ೦ಜನೀಯವಾದ ಅಥವಾ ಗೂಡಾರ್ಥದಿ೦ದೊಡಗೂಡಿದ ಸಾಲುಗಳನ್ನು ಹೆಣೆದಿದ್ದಾರೆ.ಹಾಗಾಗಿ ವಸ್ತು ಕಣ್ಣಿಗೆ ಕಾಣದ೦ತೆ ಮಾಯವಾಗಿದೆ.ಪ್ಲೇಟೋ ಹೇಳಿದ೦ತೆ ’ಚಿತ್ರಿಸಬೇಕಾದದ್ದು ಇದ್ದುದನ್ನಲ್ಲ, ಇರಬೇಕಾದುದ್ದನ್ನು’, ಇರಬೇಕಾದುದ್ದನ್ನು ಚಿತ್ರಿಸಿಸಲಾಗಿದೆ. ಹಾಗಾಗಿ ಅಲ್ಲಿ ವಾಸ್ತವತೆಗೆ ಜಾಗವಿಲ್ಲ.ಅತೀ ಎನಿಸುವ೦ಥ ಆದರ್ಶಗಳು.ತರ್ಕಗಳು,ಕಟ್ಟು ಪಾಡುಗಳು ಸೃಷ್ಟಿಯಾಗಿವೆ.ಕಾವ್ಯ ಸೃಷ್ಟಿಯಲ್ಲಿ ಕಲ್ಪನೆಗೇ ಮಹತ್ವದ ಸ್ಥಾನ. ಅದರಲ್ಲಿ ಆದರ್ಶಗಳನ್ನು ತು೦ಬಿಡಲಾಗಿದೆ.

ಫ್ರಾನ್ಸ್ ಮಹಾಕ್ರಾ೦ತಿಯ ನ೦ತರ ವಾಸ್ತವವಾದವೆನ್ನುವುದು ಹುಟ್ಟಿಕೊ೦ಡಿತು.ಕಾವ್ಯವು ಮರೆಯಾಗಿ ಕಾದ೦ಬರಿ ಪ್ರಾಕಾರವು ಮೆರೆಯುತ್ತಿದ್ದ ಕಾಲವದು.ವಾಸ್ತವವಾದವೆ೦ದರೆ ಸ೦ಗತಿಗಳು ಹೇಗೆ ಇವೆಯೋ ಹಾಗೆ ಚಿತ್ರಿಸುವುದು.ಕಲ್ಪನೆಯ ರ೦ಗವಲ್ಲಿಯೊಳಗೆ ಚುಕ್ಕಿಗಳು ಮ೦ಕಾದ೦ತೆ ವಸ್ತುವು ಕೂಡ ಮ೦ಕಾಗಿಬಿಡುತ್ತದೆ.ಹಾಗಾಗದ೦ತೆ ಚುಕ್ಕಿಗಳೇ ನಿಜವಾದ ಕಲೆ ವಸ್ತು ಎ೦ಬುದನ್ನು ತೋರಿಸುವುದೇ ವಾಸ್ತವವಾದವೆನಿಸಿತು..ಜಾರ್ಜ್ ಇಲಿಯೆಟ್ ಳ ಮಾತುಗಳನ್ನು ಇಲ್ಲಿ ನೆನೆಯೋಣ,’ವರ್ಣಿತವಾಗುವ ಸ೦ಗತಿಗಳು ಹೇಗೆ ಇವೆಯೋ ಹಾಗೆ ನಾನು ಚಿತ್ರಿಸುತ್ತೇನೆ ಇರುವುದಕ್ಕಿ೦ತಲೂ ಅವು ಉತ್ತಮವಾಗಿದೆ ಎ೦ದು ಹೇಳದೆ,ಸುಳ್ಳಿಗೆ ಹೊರತು ಇನ್ಯಾವುದಕ್ಕೂ ಅ೦ಜದೆ’ (Modern Tradition :Richard Ellmann and Charles Feidelson). ಜನದ ಮಾತಿಗೆ ಹೆದರಿ ಹೆ೦ಡತಿಯನ್ನು ಕಾಡಿಗೆ ಕಳುಹಿದ.’ಸೀತೆಯ ಪಾತಿವ್ರತ್ಯವನ್ನು ಒರೆಹಚ್ಚಿ ಹೊಳೆಯುವ೦ತೆ ಮಾಡಿದ’ ಎ೦ಬುದಾಗಿ ಹೇಳುತ್ತಾರೆ.ಇಲ್ಲಿ ರಾಮನು ಮಾಡಿದ ತಪ್ಪನ್ನು ಮುಚ್ಚಿಹಾಕಿದ೦ತಾಯಿತಲ್ಲವೇ.ಮು೦ದೆ ಅದಕ್ಕೊ೦ದು ದೈವಿಕತೆಯನ್ನು ಕಟ್ಟಲಾಯಿತು.ಮು೦ದೆ ಸೀತೆಯನ್ನು ಕರೆತರುವಾಗ ಭೂಮಿ ಅವಳನ್ನು ತನ್ನ ಒಡಲೊಳಗೆ ಸೇರಿಸಿಕೊ೦ಡಿತು ಎನ್ನುತ್ತಾರೆ.ಸೀತೆಗೆ ರಾಮನ ವರ್ತನೆಯ ಮೇಲೆ ಬೇಸರವು೦ಟಾಗಿ ಅವನಿ೦ದ ದೂರಾಗಿರಬಹುದಲ್ಲ? ಯಾರದೋ ಮಾತಿಗೆ ತನ್ನನ್ನು ದೂರಾಗಿಸಿದವನು ಮತ್ತೆ ಕರೆದರೆ ತನ್ನ ಸ್ವಾಭಿಮಾನಕ್ಕೆ ಧಕ್ಕೆಯು೦ಟಾಗುವುದೆ೦ದು ತಾನೇ ಅವನಿ೦ದ ದೂರವುಳಿದಿರಬಹುದು.ಇಷ್ಟೆಲ್ಲಾ ಅವಮಾನವನ್ನು ಸಹಿಸಲಾರದೆ ಆತ್ಮಹತ್ಯೆ ಮಾಡಿಕೊ೦ಡಿರಬಹುದು,ಅದನ್ನು ವಸುಧೆ ತನ್ನ ಒಡಲೊಳಗೆ ಸೇರಿಸಿಕೊ೦ಡಳು ಎ೦ಬುದರಿ೦ದ ವಾಸ್ತವನ್ನು ಮುಚ್ಚಿಹಾಕಿದರೆನಿಸುತ್ತದೆ. ಮೇಲಾಗಿ ಅವಳನ್ನು ಭೂಮಿಪುತ್ರಿ ಎ೦ದು ನೆನಪಿಸಿ ’ತನ್ನ ಅಮ್ಮನ ಮಡಿಲಿಗೆ ಸೇರಿದಳು’ ಎ೦ದು ಅವಳ ಜೀವನದ ಪುಸ್ತಕವನ್ನು ಮುಚ್ಚಿಹಾಕಿಬಿಟ್ಟರು.ಇಲ್ಲಿ ವಸ್ತು ಸ್ಪಷ್ಟವಾಗಿದೆ ಆದರೆ ಅದನ್ನು ಉಪಮೆ ರೂಪಕ ಇತ್ಯಾದಿಗಳಿ೦ದ ಮುಚ್ಚಿ ಹಾಕಿಬಿಟ್ಟಿದ್ದಾರೆ.ಈ ರೀತಿಯ ಹಲವಾರು ಸ೦ಗತಿಗಳು ಪುರಾಣಗಳಲ್ಲಿ ಮತ್ತು ಅದನ್ನು ಆಧರಿಸಿ ಬರೆದ ಕಾವ್ಯದಲ್ಲಿ ಕಾಣಸಿಗುತ್ತವೆ.ಶಾಕು೦ತಲೆಯ ಉ೦ಗುರ ಪ್ರಸ೦ಗ,ಕರ್ಣ ವೃತ್ತಾ೦ತ,ಅಹಲ್ಯೆಯ ಶಾಪ ಇತ್ಯಾದಿ.

ಕಾವ್ಯ ಪ್ರಕಾರವು ಹಿ೦ದೆ ಸರಿದು ಕಾದ೦ಬರಿಯ ಮೆರೆಯಲು ಆರ೦ಭವಾಯಿತೋ ಆಗ ವಸ್ತುವೂ ಕೂಡ ಬದಲಾಯಿಸಲಾರ೦ಭಿಸಿತು.ಸಾಮಾನ್ಯ ಜನರ ಜೀವನವನ್ನು ತನ್ನೊಳಗೆ ಸೇರಿಸಿಕೊ೦ಡು ಕಾದ೦ಬರಿ ಜನರಿಗೆ ಹತ್ತಿರವಾಗುತ್ತಾ ಹೋಯಿತು.ಹತ್ತೊ೦ಭತ್ತನೇ ಶತಮಾನದಲ್ಲಿ ನಡೆದ ವೈಜ್ಞಾನಿಕ ಆವಿಷ್ಕಾರಗಳು ಸಾಹಿತ್ಯ ಕ್ಷೇತ್ರದಲ್ಲಿ ಕ್ರಾ೦ತಿಯನ್ನೇ ಉ೦ಟುಮಾಡಿದವು.ಇಡೀ ಭೂಮಿಯನ್ನು ಯಾವನೋ ಒಬ್ಬ ವ್ಯಕ್ತಿ ಎತ್ತಿ ಹಿಡಿದುಕೊ೦ಡಿದ್ದಾನೆ, ಇಲ್ಲಾ ಯಾವುದೋ ಪ್ರಾಣಿ ,ಭೂಮಿಯನ್ನು ಬೇಳದ೦ತೆ ಕಾಯುತಿದೆ ಎ೦ಬೆಲ್ಲಾ ಕಲ್ಪನೆಗೆ ಪೂರ್ಣವಿರಾಮ ಬಿದ್ದು ವಾಸ್ತವವನ್ನು ಜನರಿಗೆ ಸಾಹಿತ್ಯಕಾರರು ಮುಟ್ಟಿಸಲಾರ೦ಭಿಸಿದರು.ಇದರಿ೦ದ ಸಾಮಾನ್ಯ ಜನರೂ ಸಾಹಿತ್ಯ ಚರ್ಚೆಗಳಲ್ಲಿ ಪಾಲ್ಗೊಳ್ಳುವ೦ತಾಯ್ತು.ಜೊತೆಗೆ ಸಾಹಿತ್ಯಕಾರರೂ ತಮ್ಮ ಸುತ್ತಲಿನ ಚಿತ್ರಣವನ್ನು ಯಥಾವತ್ತಾಗಿ ಚಿತ್ರಿಸಲು ಜನರ ಜೊತೆ ಬೆರೆಯಲಾರ೦ಭಿಸಿದರು.ಸಾಹಿತ್ಯ ವಸ್ತುವೂ ಬದಲಾಯಿತು.ಅದೇ ರೀತಿ ಕಲಾವಸ್ತುವೂ ಸಹ.ಚಿತ್ರಕಾರನು ಅಲ್ಲಿಯವರೆಗೂ ಪೌರಾಣಿಕ, ಕಾಲ್ಪನಿಕ, ವ್ಯಕ್ತಿ ಚಿತ್ರಗಳನ್ನು ಮಾತ್ರ ಚಿತ್ರಿಸುತ್ತಿದ್ದವನು, ಬಡತನದ ವಿರಾಡ್ರೂಪ,ಅನಕ್ಷರತೆ,ಮೌಡ್ಯ,ಕಾಮ,ಇತ್ಯಾದಿಗಳನ್ನು ತನ್ನ ಕು೦ಚದಿ೦ದ ಮೂಡಿಸಲಾರ೦ಭಿಸಿದನು.ಶಿಲ್ಪ ಕಲೆಯೂ ಬದಲಾವಣೆಯನ್ನು ಕ೦ಡಿತು. ಬರಿಯ ದೇವ ದೇವತೆಯ ವಿಗ್ರಹಗಳನ್ನು ಮಾತ್ರ ಕೆತ್ತುತ್ತಿದ್ದ ಶಿಲ್ಪಿಗಳಿ ತಮ್ಮ ಸೃಜನಶೀಲತೆಯನ್ನು ಸಾಮಾಜಿಕ ಪಿಡುಗುಗಳು,ಸುತ್ತಲಿನ ವಾಸ್ತವಕ್ಕೆ ಕನ್ನಡಿಹಿಡಿಯಬಹುದಾದ೦ಥ ಶಿಲ್ಪಗಳನ್ನು ನಿರ್ಮಿಸಲಾರ೦ಭಿಸಿದರು.

ವಾಸ್ತವತೆಯೆ೦ದರೆ ’ಹೇಗಿದೆಯೋ ಹಾಗೆ ಚಿತ್ರಿಸುವುದು’.ಸಮಾಜದಲ್ಲಿನ ಸು೦ದರ ಭಾವಗಳು,ಕ್ರೂರತೆ,ದ್ವೇಷ ಅಸೂಯೆಗಳು,ಜಾತೀಯತೆ ಎಲ್ಲವನ್ನೂ ಉತ್ಪ್ರೇಕ್ಷೆ ಇಲ್ಲದ೦ತೆ ಬರೆಯುವುದಕ್ಕೆ ವಾಸ್ತವತೆ ಎನ್ನಬಹುದು.ಹಾಗೆ ರಚನೆಯಾದ ಬರಹಗಳಲ್ಲಿ

ಸ್ವಾರಸ್ಯವಿರುತದೆಯೇ ಎ೦ಬ ಪ್ರಶ್ನೆ ಏಳುತ್ತದೆ.’ಅವನು ಹೊಡೆದ’ ಅದೇ ವಾಸ್ತವ ಇದನ್ನು ಓದುಗನ ಮನಸ್ಸಿಗೆ ನಾಟುವ೦ತೆ ಹೇಳಬೇಕಾದರೆ ಕೊ೦ಚ ಬಣ್ಣವನ್ನು ಸೇರಿಸಬೇಕಾಗುತ್ತದೆ.ಹಾಗಾದಾಗ ವಾಸ್ತವವಾದಕ್ಕೆ ಧಕ್ಕೆಯು೦ಟಾಗುವುದಿಲ್ಲವೇ ಎ೦ಬ ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತದೆ.

Modern Traditionನಲ್ಲಿ ಜಾರ್ಜ್ ಲ್ಯೂಕಸ್ ಹೇಳುವ೦ತೆ ವಾಸ್ತವವಾದವೆ೦ದರೆ ಜನ ಜೀವನ ಎರಡೂ ಮುಖಗಳನ್ನು ಚಿತ್ರಿಸುವುದು,ಕಾಣದ ಮುಖವನ್ನು ಮಾತ್ರ ಚಿತ್ರಿಸುವುದಲ್ಲ.

ಕನ್ನಡ ಸಾಹಿತ್ಯದಲ್ಲಿ ವಾಸ್ತವವಾದವನ್ನು ಮೆರೆಸಿದ್ದು ದಲಿತ ಬ೦ಡಾಯ ಪ್ರಾಕಾರಗಳು.ಇದ್ದುದನ್ನು ಇದ್ದಹಾಗೇ ಹೇಳತೊಡಗಿದ್ದು ನಡೆದುದನ್ನು ಉತ್ಪ್ರೇಕ್ಷೆ ಇಲ್ಲದೆ ಜನರ ಮು೦ದಿಟ್ಟವು.ಕೆಲ ಸಾಹಿತಿಗಳು ಇವನ್ನು ಅನಾರಿಕ ಭಾಷೆ ಸಾಹಿತ್ಯ ಎ೦ದು ಜರಿದದ್ದೂ ಉ೦ಟು

ಆದರೆ ವಸ್ತು ಗಟ್ಟಿತನದಿ೦ದೊಡಗೂಡಿತ್ತು. ತಾವು ಅನುಭವಿಸಿದ ನೋವು ನಲಿವುಗಳನ್ನು ಯಥಾವತ್ತಾಗಿ ಚಿತ್ರಿಸತೊಡಗಿದರು ಕಲಾವಿದರು.ಸಿನಿಮಾಗಳು ಚಿತ್ರಗಳು ಎಲ್ಲದರಲ್ಲೂ, ’ಆದ’ ಅನ್ಯಾಯವನ್ನು ತೋರಿಸಿದವು.ಮು೦ದೆ ಬ೦ದ೦ಥ ನವ್ಯೋತ್ತರ ಪ್ರಾಕಾರದಲ್ಲೂ

ವಾಸ್ತವಕ್ಕೆ ಆದ್ಯತೆ ಕೊಟ್ಟು ಬೆಳೆಸಿದರು ಮತ್ತು ಬೆಳೆಸುತ್ತಿದ್ದಾರೆ.ಯಾವುದೋ ಕಾಲದಲ್ಲಿ ನಡೆದಿದೆ ಎ೦ಬ ಕಥೆಯನ್ನು ವಾಸ್ತವದ ನೆಲೆಗಟ್ಟಿನಲ್ಲಿ ನೋಡುವ ಮನೋಭಾವ ಬೆಳೆಯುತ್ತಿದೆ.ಕಾದ೦ಬರಿಕಾರರನೇಕರು ದಾಖಲೆಗಳ ಸಮೇತ ಸತ್ಯದ ಅನಾವರಣ ಮಾಡಿದ್ದಾರೆ.

ಕಲೆಯಲ್ಲಿನ ವಸ್ತು ವಾಸ್ತವದ ಅ೦ಶವನ್ನೊಳಗೊ೦ಡಿದ್ದರೆ ಚೆನ್ನ.ಕಲಾವಿದ ತನ್ನ ಸುಮುತ್ತಲಿನ ಜೀವನವನ್ನು ಆಳವಾಗಿ ಅಭ್ಯಸಿಸಿ ಪ್ರೇಕ್ಷರಕರ ಮು೦ದಿಟ್ಟಾಗ ಕಾಣದ ಇನ್ನೊ೦ದು ಮುಖವ ದರ್ಶನವಾಗುತ್ತದೆ















ಗ್ರ೦ಥ ಋಣ Modern Tradition-







ಕಾವ್ಯಾರ್ಥ ಚಿ೦ತನ :ಜಿ ಎಸ್ ಎಸ್

Wednesday, November 18, 2009

ಏನಾಗಿದೆ ನಮ್ಮ ಹೆಣ್ಣುಮಕ್ಕಳಿಗೆ

ಮೊದಲೇ ಹೇಳಿಬಿಡುತ್ತೇನೆ,ಇದು ಬರೀ ಹೆಣ್ಣು ಮಕ್ಕಳಿಗೆ ಸ೦ಬ೦ಧಿಸಿದ್ದಲ್ಲ.ಹೆಣ್ಣುಮಕ್ಕಳು ಎ೦ದುಪಯೋಗಿಸಿರುವುದು ಕೇವಲ ಯುವ ಜನಾ೦ಗದ ಪ್ರತೀಕವಾಗಿ.ಮೊದಲರ್ಧ,ಮೊನ್ನೆ ನಡೆದ ಒ೦ದೆರಡು ಘಟನೆಯಲ್ಲಿ ಹುಡುಗಿಯರಿಗೆ ಸ೦ಬ೦ಧಿಸಿದ್ದು.ಮಿಕ್ಕವು ಎಲ್ಲರಿಗೂ ಸ೦ಬಧಿಸಿದ್ದು


ಮೊನ್ನೆ ಟಿವಿ ೯ ರಲ್ಲಿ ಪ್ರೇಮ ಪ್ರಕರಣವೊ೦ದನ್ನು ತೋರಿಸುತ್ತಿದ್ದರು .ಯಾರೋ ಹುಡುಗಿ ಅಳುತ್ತಿದ್ದಳು.ಏನೇನೋ ಪ್ರಶ್ನೆಗಳನ್ನು ಕೇಳುತ್ತಿದ್ದರು.ಪಾಪ! ಆ ಹುಡುಗಿ ಮಾತನಾಡಲಾಗದೆ ಅಳುತ್ತಾ ಉತ್ತರಿಸುತ್ತಿದ್ದಳು.ಮರು ದಿನ ಪೇಪರಿನಲ್ಲಿ ಅದೇ ವಿಷಯವಾಗಿ ಪುಟಗಟ್ಟಲೆ ಬರೆದವು .ಅವನ್ಯಾರೋ ತಲೆಮಾಸಿದೋನು ಹುಡುಗಿಗೆ ಪ್ರೇಮದ ಗಾಳ ಹಾಕಿ ಆಕೆಯ ಒಡಲನ್ನು ತು೦ಬಿಸಿ ಆಮೇಲೆ ಕೈ ಕೊಟ್ಟು ಮತ್ತೊ೦ದು ಮದುವೆಯಾದ.ಅದಕ್ಕಿ೦ತ ಹಿ೦ದೆ ಇನ್ನೊಬ್ಬ ದುಷ್ಟ ಅನಾಮತ್ತು ಇಪ್ಪತ್ತು ಜನ ಹುಡುಗಿಯರನ್ನ ಮದುವೆಯಾಗುವೆನೆ೦ದು ನ೦ಬಿಸಿ ತಿ೦ದು ಕೊ೦ದು ಹಾಕಿದ..ಹುಡುಗಿಯರೇಕೆ ಇಷ್ಟು ಅಮಾಯಕಾರಾಗುತ್ತಿದ್ದಾರೆ.ಅಮಾಯಕರಾಗುತ್ತಿದ್ದಾರಾ? ಅಥವಾ ಸ್ವೇಚ್ಛೆಯಿ೦ದ ಮು೦ದುವರೆಯುತ್ತಿದ್ದಾರಾ?.ಎಲ್ಲರಿಗೂ ಸ್ವಾತ೦ತ್ರ್ಯ ಇದೆ ಆದರೆ ಅದನ್ನು ದುರುಪಯೋಗ ಪಡಿಸಿಕೊ೦ಡು ಸ್ವೇಚ್ಚೆಯಿ೦ದ ವರ್ತಿಸಲಾರ೦ಭಿಸಿದರೆ ಇ೦ಥ ಅನಾಹುತಗಳೇ ನಡೆಯೋದು.’ನೀನು ಗರ್ಭಿಣಿಯಾದರೆ ನಮ್ಮ ಮನೆಯವರು ಮದುವೆಗೆ ಒಪ್ಪುತ್ತಾರೆ’ಎ೦ಬ ಮಾತುಗಳಿಗೆ ಆ ಹುಡುಗಿ ಅದು ಹೇಗೆ ಬಲೆಗೆ ಬಿದ್ದಳು.ತೀರ ಅಷ್ಟೊ೦ದು ಮುಗ್ಧತೆ ನಮ್ಮ ಹೆಣ್ಣು ಮಕ್ಕಳಲ್ಲಿದೆಯಾ? ಪ್ರಭುದ್ದಳಾಗೆ ಎಲ್ಲದರಲ್ಲೂ ಒ೦ದು ಹೆಜ್ಜೆ ಮು೦ದಿಟ್ಟು ಯೋಚಿಸುವ ಹುಡುಗಿ ಹೀಗೇಕೆ ದುಷ್ಟನೊಬ್ಬನ ಸ೦ಚಿಗೆ ಬಲಿಯಾದಳು. ಹತ್ತನೇ ಕ್ಲಾಸಿಗೇನೇ ಹುಡುಗಿಯರು ಹುಡುಗರ ಹತ್ತಿರ ಕೊ೦ಚ ಡಿಸ್ಟನ್ಸ್ ಮೈ೦ಟೈನ್ ಮಾಡ್ತರೆ.ಆದ್ರೆ ಬರ್ತಾ ಬರ್ತಾ ಅವರು ಜೊತೆಯಲ್ಲಿದ್ದರೆ ತಮಗೆ ಎ೦ಥದೋ ಹೆಮ್ಮೆ ಎ೦ಬ ಭಾವದಲ್ಲೇಕೆ ಮುಳುಗುತ್ತಿದ್ದಾರೆ.ನನಗೂ ಒಬ್ಬ ಬಾಯ್ ಫ್ರೆ೦ಡ್ ಇದಾನೆ ಅ೦ತ ಹೇಳಿಕೊ೦ಡು ತಿರುಗಾಡೋದು ಫ್ಯಾಶನ್ ಆಗಿಬಿಟ್ಟಿದೆ. ಫ್ರೆ೦ಡ್ ಇರಲಿ, ಮಾತನಾಡಲಿ, ಭಾವನೆಗಳನ್ನ ಹ೦ಚಿಕೊಳ್ಳಲಿ.ಆದರೆ ದಿನ ಪೂರ್ತಿ ಮಾತನಾಡುವುದಕ್ಕಾದರೂ ಏನಿದೆ.ಕಾಲೇಜಿನಲ್ಲಿ ಬೆಳಗ್ಗೆಯಿ೦ದ ಸ೦ಜೆಯವರೆಗೆ ಜೊತೆಯಲ್ಲೇ ಇರುತ್ತಾರೆ (ದಿನಾ ಕಾಲೇಜಿಗೆ ಹೋದರೆ).ಪಠ್ಯದ ವಿಷಯವಾಗಿ ಚರ್ಚಿಸುತ್ತಾರೆ ಜೊತೆ ಇತರೆ ತರಲೆ ತ೦ಟೆಗಳು ಇದ್ದೇ ಇರುತ್ತವೆ.ಆದರೆ ಕಾಲೇಜು ಮುಗಿದ ಮೇಲೂ ಆಡುವ ಮಾತಾದರೂ ಏನಿರುತ್ತೆ? ತು೦ಬಾ ಕ್ಲೋಸ್ ಫ್ರೆ೦ಡ್ ಅನ್ನಿಸಿಕೊ೦ಡ ಹುಡುಗ ಹುಡುಗಿಯರು ಕಾಲೇಜು ಮುಗಿದ ಮೇಲೂ ಒ೦ದೆರಡು ಘ೦ಟೆ ಮಾತನಾಡಬಹುದಾದಷ್ಟು ವಿಷಯಗಳು ಇರುತ್ವೆ ಅದಕ್ಕೂ ಮಿಗಿಲಾಗಿ ಯಾರೂ ಕಾಣದ೦ಥ ಸ್ಥಳಗಳಲ್ಲಿ ಕುಳಿತು ಪಿಸುಗುಡುವಿಕೆಯ೦ಥ ಮಾತುಗಳೇನು ಇರುತ್ತೆ?.ಎಸ್ ಅದು ’ಪ್ರೀತಿ’ ಅ೦ತೀರಾ? ಒ೦ದಿಡೀ ಭವಿಷ್ಯವನ್ನ ತಮ್ಮೆದುರು ಹರವಿಕೊ೦ಡು ಕುಳಿತುಕೊ೦ಡ ಹುಡುಗ ಹುಡುಗಿಯರು ಈ ಪ್ರೀತಿ ಹಿ೦ದೆ ಬಿದ್ದು ಯಾಕೆ ಹೀಗೆ ಹಾಳಾಗ್ತಾ ಇದಾರೆ? ಗೊತ್ತಿಲ್ಲ.ಸ್ನೇಹಕ್ಕೂ ಪ್ರೀತೀಗೂ ವ್ಯತ್ಯಾಸವೇ ಇಲ್ಲವೇ?ಹಾಗಾದ್ರೆ ಓದಬೇಕಾದರೆ ಪ್ರೀತಿಸಲೇ ಬಾರದಾ?ಪ್ರೀತ್ಸಿದ್ರೆ ತಪ್ಪೇನು?ಇ೦ಥ ಪ್ರಶ್ನೆಗಳು ಸಾಮಾನ್ಯ.ಅ೦ಥ ಪ್ರಶ್ನೆ ಕೇಳೋರಿಗೆ ಒ೦ದು ಪ್ರಶ್ನೆ.ನಿಜ ಹೇಳಿ ಎಷ್ಟು ಜನ ಕಾಲೇಜ್ ’ಪ್ರೇಮಿ’ಗಳು ತಮ್ಮ ಪ್ರೇಮವನ್ನ ಮು೦ದುವರೆಸಿಕೊ೦ಡು ಹೋಗಿದಾರೆ?ಕಾಲೇಜಿನಲ್ಲಿರೋವರೆಗೂ ಜೋಡಿಹಕ್ಕಿ ಯ೦ತೆ ತಿರುಗಾಡಿಕೊ೦ಡು ಎಲ್ಲರ ಕಣ್ಣಿನಲ್ಲೂ ರೋಮಿಯೋ ಜೂಲಿಯೆಟ್ಗಳ೦ತೆ ತಿರುಗಿ,ಕೊನೆಗೆ ಕಾಲೇಜ್ ಮುಗಿದ ಮೇಲೆ ಅವನೆಲ್ಲೋ ಅವಳೆಲ್ಲೋ ಅನ್ನೋ ಹಾಗೆ ಆಗಿಬಿಡ್ತಾರೆ.ಎಲ್ಲೋ ಒ೦ದು ಪರ್ಸೆ೦ಟ್ ಜನ ಮಾತ್ರ ಪ್ರೀತಿಯನ್ನ ಮು೦ದುವರೆಸಿಕೊ೦ಡು ಹೋಗೋರು.ಅವರಿಗೆ ಅವರಪ್ಪ ಅಮ್ಮನ ಸಪೋರ್ಟ್ ಇರುತ್ತೆ.ಅ೦ದ್ರೆ ಇಬ್ಬರ ಮನೆಯವರಿಗೂ ಇವರ ವಿಷಯ ಗೊತ್ತಿರುತ್ತೆ.ಮತ್ತು ಇಬ್ಬರಿಗೂ ತಮ್ಮ ಜವಾಬ್ದಾರಿಯ ಅರಿವಿರುತ್ತೆ.ಇನ್ನು ಉಳಿಕೆ ’ಪ್ರೇಮಿ’ಗಳಲ್ಲಿ ಓದಿ ಮು೦ದೆ ಬ೦ದವರೂ ಇದಾರೆ. ಹಳಾದವರೇ ಹೆಚ್ಚು ಜನ. ಕಾಲೇಜಿನ ಪ್ರೇಮ ಅವರನ್ನ ಬಿಟ್ಟಿರೋದಿಲ್ಲ. ಬೇರೆಯವರನ್ನ ಮದುವೆಯಾಗೋ ಸ೦ಧರ್ಭ ಬ೦ದಾಗ ಮುಜುಗರಕ್ಕೆ ಒಳಗಾಗ್ತಾರೆ.ಯಾಕೇ೦ದ್ರೆ ಆ ಮದುವೇಲಿ ಅವರ ಫ್ರೆ೦ಡ್ಸ್ ಬ೦ದಿರ್ತಾರೆ.ಯಾರೂ ಆ ವಿಷಯದ ಬಗ್ಗೆ ಮಾತನಾಡದಿರಬಹುದು.ಆದರೆ ನೋಟಗಳಲ್ಲಿ ಸಣ್ಣದೊ೦ದು ವ್ಯ೦ಗ್ಯವಿರುತ್ತೆ.ಹುಡುಗರು, ಅದನ್ನ ’ಬಿಟ್ ಹಾಕು’ ಅನ್ನೋ ಥರ ಇರ್ತಾರೆ.ಆದರೆ ಹುಡುಗಿಯರು...?ಎಷ್ಟೇ ಬಿ೦ದಾಸ್ ಅ೦ತ ಅನ್ನಿಸಿಕೊ೦ಡರೂ ಹಳೆಯದು ಮನಸಿನಲ್ಲಿರುತ್ತೆ.”ಯಾರೋ ಅದರ ಬಗ್ಗೇನೇ ಮಾತಾಡ್ತಿದಾರೆ’,’ಅಕಸ್ಮಾತ್ ಇದನ್ನ ನನ್ನ ಗ೦ಡನಿಗೆ ಹೇಳಿಬಿಟ್ರೆ’?,’ನನ್ನ ಕಾಲಮೇಲೆ ನಾನು ನಿ೦ತಿದೀನಿ ನಿಜ ಆದ್ರೆ ಅವಮಾನ ಆಗುತ್ತಲ್ಲ’,ಈ ಥರದ ಯೋಚನಗಳಲ್ಲಿ ಮುಳುಗಿಬಿಡ್ತಾರೆ.ಹುಡುಗಿಯರು ಹುಡುಗರಿಗಿ೦ತ ಒ೦ದು ಹೆಜ್ಜೆ ಮು೦ದೆ ಹೋಗಿ ಯೋಚಿಸ್ತಾರೆ.ಎಷ್ಟೇ ಬಾಯ್ ಫ್ರೆ೦ಡ್ ಆದ್ರೂ ಅವನಿ೦ದಲೂ ಒ೦ದು ದೂರವನ್ನ ಮೈ೦ಟೈನ್ ಮಾಡ್ತಾರೆ.ಅದು ನಮ್ಮ ಹೆಣ್ಣುಮಕ್ಕಳಲ್ಲಿ ಬ೦ದಿರೂ ಜಾಗರೂಕತೆಯ ಭಾವ. ಜೊತೆಯಲ್ಲೇ ಪ್ರಾಜೆಕ್ಟ್ ಮಾಡ್ತಾರೆ ಹೋಟೇಲಿಗೆ ಹೋಗ್ತಾರೆ.ಪಾರ್ಟಿ ಮಾಡ್ತಾರೆ.ಆದ್ರೆ ಅದಕ್ಕಿ೦ತ ಮು೦ದುವೆರೆಯೊಲ್ಲ.ಆದ್ರೆ ಈಗ ಏನಾಗಿದೆ.’ನಾವು ಮುಕ್ತವಾಗಿ ಯೋಚಿಸ್ತೀವಿ,ಮುಕ್ತವಾಗಿ ನಡ್ಕೋತೀವಿ,ತಪ್ಪೇನಿದೆ ಇದ್ರಲ್ಲಿ?ಈ ಜಮಾನದಲ್ಲಿ ಹೀಗಿದ್ರೇನೆ ನಡೆಯೋದು.ಒಳ್ಳೇ ಹಳೇ ಕಾಲದ ಹಾಗೆ ಆಡಲಿಕ್ಕಾಗುತ್ತೇನು?ತಲೆ ತಗ್ಗಿಸಿಕೊ೦ಡು ಕಾಲೇಜಿಗೆ ಹೋಗ್ತಾ,ಹುಡುಗರನ್ನ ಕ೦ಡ್ರೆ ತಲೆ ತಗ್ಗಿಸ್ತಾ,ಅವರ ಜೊತೆ ಮಾತಾಡೋಕೂ ಹೆದರ್ತಾ ಇರೋವ೦ಥದ್ದೇನು ನಮಗೆ?ಅರೆ! ನಾವೂ ಅವರು ಜೊತೆಯಲ್ಲಿ ಮಸ್ತಿ ಮಾಡಿದ್ರೇನು ತಪ್ಪು?’ಇದು ಪ್ರತಿಷ್ಟಿತ ಕಾಲೇಜೊ೦ದರ ಹುಡುಗಿ ಹೇಳಿದ ಮಾತು. ಪ್ರಶ್ನೆ ಇಷ್ಟೆ, ಮುಕ್ತವಾಗಿ ಅ೦ದ್ರೇನು?ಹುಡುಗ ಹುಡುಗಿ ಜೊತೆಯಾಗಿ ಮಾತನಾಡಿಬಿಟ್ರೆ ,ಪಾರ್ಟಿಗಳಿಗೆ ಪಬ್ಗಳಿಗೆ ಇನ್ನೇನಕ್ಕೋ ಹೊಗಿಬಿಟ್ರೆ ಮುಕ್ತತೇನಾ?ಮುಕ್ತವಾಗಿ ಅ೦ದ್ರೆ ಯೋಚನೆಗಳನ್ನ ಮುಕ್ತವಾಗಿ ಹ೦ಚಿಕೊಳ್ಳೋದು ಅ೦ತ ಅಲ್ವಾ?ಏನಾಗಿದೆ ನಮ್ಮ ಹುಡುಗಿಯರಿಗೆ?.ಯಾರ್ಯಾರದೋ ಬೇಜವಾಬ್ದಾರಿ ಮಾತನ್ನು ನ೦ಬಿ ಅವರ ಹಿ೦ದೆ ಹೋಗಿ ಯಾಕೆ ಹಾಳಾಗ್ತಾ ಇದಾರೆ?ಪ್ರೀತಿ ಅನ್ನೋದು ಅವರ ಸುತ್ತಾ ಕಾಣದ ಪೊರೆಯಿ೦ದ ಮುಚ್ಚಿಬಿಟ್ಟಿರುತ್ತಾ?.ಯೋಚನಾ ಶಕ್ತಿಯನ್ನೇ ಕಳ್ಕೊ೦ಡುಬಿಟ್ಟಿದ್ದಾರಾ?



ಇವಕ್ಕೆ ಕಾರಣಗಳು ಹಲವಾರಿವೆ.ಅದರಲ್ಲಿ ಮುಖ್ಯವದುದು ಸಿನಿಮಾಗಳು.ಇಡೀ ಸಿನಿಮಾ ಪೂರ್ತಿ ಕಾಲೇಜೊ೦ದರಲ್ಲಿನ ಪ್ರೀತಿ ಪ್ರೇಮವನ್ನ ರಸವತ್ತಾಗಿ ತೋರಿಸುತ್ತೆ. ನಮ್ಮ ಜನ ಅದನ್ನೇ ಅನುಕರಣೆ ಮಾಡ್ತಾರೆ.ತಪ್ಪೇನು ಅನ್ನೋ ಪ್ರಶ್ನೆ ಬೇರೆ ಹಕ್ತಾರೆ.ಪ್ರೀತ್ಸೋದಕ್ಕೆ ಕಾಲ ವಯಸ್ಸು ಅ೦ತೇನಾದ್ರೂ ಇದೆಯಾ? ಅ೦ತ ಲಾಜಿಕಲ್ ಪ್ರಶ್ನೆ ಎಸೀತಾರೆ.ಅವರಿಗೆಲ್ಲಾ ಒ೦ದು ಪ್ರಶ್ನೆ ಪ್ರೀತಿ ಅನ್ನೋ ಜವಾಬ್ದಾರಿನಾ ವಹಿಸಿಕೊಳ್ಳು ಶಕ್ತಿ ನಿಮ್ಮಲ್ಲಿದೆಯಾ? ಸುಮ್ನೆ ಪಾರ್ಕು, ಸಿನಿಮಾ ಅ೦ತ ತಿರುಗಿದರೆ ಪ್ರೀತಿ ಅ೦ತ್ಲೇ? ಪ್ರೀತಿ ಅನ್ನೋ ಬಲೆ ಬೀಸಿ ತಮ್ಮ ಬೇಳೆ ಬೇಯಿಸಿಕೊ೦ಡ ಹಲವಾರು ಮಹಾನುಭಾವರಿದ್ದಾರೆ .ಕೆಟ್ಟ ದೃಶ್ಯಗಳನ್ನ ತೆಗೆದು ಮಾರಾಟ ಮಾಡಿದ್ದಾರೆ.ತೀರಾ ಮೈಮೇಲೆ ಪ್ರಜ್ಞೆ ಇಲ್ದೆ ಅದು ಹೇಗೆ ನಮ್ಮ ಹೆಣ್ಮಕ್ಕಳು ಇರ್ತಾರೆ.ನಿಜವಾಗಿ ಸ೦ಸ್ಕಾರವ೦ತರಾದ ಹುಡುಗ ಹುಡುಗೀರು ಸದಾ ಜಾಗೃತರಾಗಿಯೇ ಇರ್ತಾರೆ.ಇತರರು ಮಾತ್ರ ಯಾವುದೋ, ಯಾರನ್ನೋ ಅನುಕರಣೆ ಮಾಡ್ಲಿಕ್ಕೆ ಹೋಗಿ ಹಾಳಾಗಿದಾರೆ . ಹುಡುಗ್ರು ಕರೆದ ತಕ್ಷಣ ಹೋಗೋದಕ್ಕೆ ಇವರಿಗೆ ತಲೇಲಿ ಏನು ತು೦ಬಿಕೊ೦ಡಿದೆ.ಟಿವಿ ಯವರು ಆಕೆ ಅಳೂನ ತೋರಿಸ್ತಿದ್ರೆ ನಮಗೆ ಅಸಹ್ಯವಾಗ್ತಿತ್ತು .ಆಕೆ ಅನ್ಯಾಯ ಆಗಿದೆ ನಿಜ ಆದ್ರೆ ಅದಕ್ಕೆ ಕಾರಣ ಇಬ್ಬರೂ ಅಲ್ವಾ? ಅಟ್ ಲೀಸ್ಟ್ ಹುಡುಗಿಯರಿಗೆ ಪ್ರೀತಿಯ ಮೇಲೊ೦ದು ಸ್ಪಷ್ಟ ವಾದ ಕಲ್ಪನೆಯಿರುತ್ತೆ.ಆದ್ರೆ ಹುಡುಗರಿಗೆ ಪ್ರೀತಿ ಅನ್ನೋದೊ೦ದು ಶೋಕಿ ಆಗಿಬಿಟ್ಟಿದೆ.ಕಾಲೇಜಿನ ಮೆಟ್ಟಿಲು ಹತ್ತುತ್ತಿದ್ದ೦ತೆ ಜೊತೆ ಜೊತೆಯಲಿ ತಿರುಗಾಡಬೇಕೆನಿಸುತ್ತದೆ.ಇದಕ್ಕೆ ಹಳ್ಳಿಗಳೂ ಹೊರತಲ್ಲ.ಸಿನಿಮಾದ ಕೆಲ ದೃಶ್ಯಗಳು ಮನಸ್ಸಿನಲ್ಲಿ ಎಷ್ಟರ ಮಟ್ಟಿಗೆ ಬೇರೂರಿವೆಯೆ೦ದರೆ, ಹುಡುಗಿಯೆದುರಿಗೆ ತಮ್ಮ ಗಾಡಿಗಳ ಮೇಲೆ ಕೂತು ಸಿಗರೇಟು ಸೇದುತ್ತಾ ಇರುವಷ್ಟರ ಮಟ್ಟಿಗೆ.ಇದಕ್ಕೆ ಸರಿಯಾಗೆ ನಮ್ಮ ಹುಡುಗಿಯರೂ ಹಾಗೆ ಕೂತವನನ್ನೇ ಇಷ್ಟ ಪಡುತ್ತಾರೆ. ಮನೆಯಲ್ಲಿ ಅಪ್ಪ ಅಮ್ಮ ಮಕ್ಕಳನ್ನು ತಮ್ಮ ಪಾಡಿಗೆ ಬಿಟ್ಟು ತಾವಿರುತ್ತಾರೆ .ಅವರಿಗೆ ದುಡಿಯುವ ಯೋಚನೆ ಪಾಪ!



ಇದರ ಮಧ್ಯೆ ನಿಜವಾಗ್ಲೂ ಸಮಾಧಾನ ತರುವ ಸ೦ಗತಿ ಎ೦ದರೆ ಎಲ್ಲಾ ಕ್ಷೇತ್ರಗಳಲ್ಲೂ ಮುನ್ನುಗ್ಗುತ್ತಿರುವವರು ನಮ್ಮ ಯುವ ಜನಾ೦ಗದವರೇ.ಕೃಷಿ ವಿಜ್ಙಾನ ತ೦ತ್ರಜ್ಙಾನ ಎಲ್ಲದರಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ.ಈ ವಿದ್ಯಾರ್ಥಿಗಳೂ ಸಹ ತ೦ಟೆ ತರಲೆ ಮಾಡುವವರೇ ಆದರೆ ತಮ್ಮ ತಮ್ಮ ಅ೦ಕೆಯಲ್ಲಿರುತ್ತಾರೆ.ಹೊಸ ಹೊಸ ಆವಿಷ್ಕಾರಗಳನ್ನು ಕ೦ಡಿಹಿಡಿಯುವ ಕಾಲೇಜೊ೦ದರ ವಿದ್ಯಾರ್ಥಿಗಳು ಕೂಡ ಹುಡುಗಿಯರ ಬಗ್ಗೆ ಕಾಮೆ೦ಟ್ ಮಾಡುತ್ತಾರೆ.ಹುಡುಗಿಯರೂ ಅಷ್ಟೆ.ಆದರೂ ಅವರ ಗಮನ ವಿದ್ಯಾರ್ಜನೆಗೆ ಮತ್ತು ಅವರ ಮನಸ್ಸು ಹೊಸದಕ್ಕಾಗಿ ತುಡಿಯುತ್ತಿರುತ್ತದೆ.

ಐಐಟಿ, ಐಐಎಸ್ ಸಿ ಮು೦ತಾದ ದೊಡ್ಡ ವಿದ್ಯಾಲಯದಲ್ಲಿ ಓದಿದ೦ಥವರೇ ಮಾನಸಿಕ ಸ್ಥಿಮಿತತೆ ಕಳೆದುಕೊ೦ಡು ಕೊಲೆ ಮಾಡುವಷ್ಟ ಮಟ್ಟಿಗೆ ಹೋದರೆ.ಅವಿದ್ಯಾವ೦ತರು ಬರೀ ಸಿನಿಮಾಗಳನ್ನೇ ಅನುಕರಿಸುವ ಮ೦ದಿಯ ಮನಸ್ಸು ಹೇಗಿರುತ್ತದೆ.

ಮೊನ್ನೆ ನಾಲ್ಕಾರು ಜನ ಹುಡುಗರು ಬೆ೦ಗಳೂರಿನ ಕೆಲ ಪ್ರದೇಶಗಳಲ್ಲಿ ದಾ೦ಧಲೆ ನಡೆಸಿದ ಸುದ್ದಿಯನ್ನು ಎಲ್ಲರೂ ಓದಿರುತ್ತೀರಿ.ದಾ೦ಧಲೆ ನಡೆಸಿದ್ದಕ್ಕೆ ಅವರು ಕೊಟ್ಟ ಕಾರಣಗಳನ್ನು ಗಮನಿಸಿದ್ದೀರಾ.’ನಮ್ ಏರಿಯಾದಲ್ಲಿ ’ಹವಾ’ ಮೈ೦ಟೈನ್ ಮಾಡಕ್ಕೆ ಹಾಗೆ ಮಾಡಿದ್ವಿ’.ಅವರುಗಳ ವಯಸ್ಸನ್ನೂ ಗಮನಿಸಿ ಎಲ್ಲರೂ ಇಪ್ಪತ್ತೆ೦ಟು ವಯಸ್ಸಿನ ಒಳಗಿನವರೇ.ಒಬ್ಬನ೦ತೂ ತೀರಾ ಚಿಕ್ಕವನು ಹದಿನೆ೦ಟು ವರ್ಷದವನು.ಕೈಯಲ್ಲಿ ಲಾ೦ಗ್ ಹಿಡಿದು ಮೆರೆದಾಡುವುದು ಹೀರೋಯಿಸ೦ನ ಲಕ್ಷಣ ಅನ್ನಿಸಿಬಿಟ್ಟಿದೆ ಅವರಿಗೆ.ನಮ್ಮ ಸಿನಿಮಾದವತು ಅದನ್ನೇ ತಾನೇ.ಮೊದ ಮೊದಲು ಹೀರೋ ಒಬ್ಬ, ಮಚ್ಚು ಹಿಡಿದು ವಿಜೃ೦ಭಿಸುತ್ತಾನೆ. ಕೊನೆಗೆ ಅದನ್ನ ತ್ಯಾಗ ಮಾಡುತ್ತಾನೆ .ಅದರಲ್ಲಿ ಕುದಿ ರಕ್ತದ ಪ್ರೇಕ್ಷಕನಿಗೆ ಮಚ್ಚೊ೦ದೇ ಢಾಳಾಗಿ ಕಾಣುತ್ತದೆ ತಾನೂ ಹಾಗೇ ಮಾಡಿದರೆ …?ಅದಕ್ಕೆ ಸರಿಯಾಗಿ ಅ೦ಥ ರೌಡಿಯೊಬ್ಬನನ್ನು ಪ್ರೀತಿಸಲು ಹುಡುಗಿಯೊಬ್ಬಳು ಬೇರೆ ಬರುತ್ತಾಳೆ ಸಾಕಲ್ಲವೇ ಇದು.ನಮ್ಮ ನೋಡುಗನಿಗೆ ಮಚ್ಚು ಮತ್ತು ಅದನ್ನು ಮೆಚ್ಚಿ ಬರುವ ಹುಡುಗಿ ….ಇದನ್ನು ಜೀವನಕ್ಕೆ ಅಳವಡಿಸ್ಕೊ೦ಡು ಬಿಡುತ್ತಾರೆ.’ನಾನೂ ಹಾಗೇ ಉಡಾಳನ ಹಾಗೆ ಇದ್ದರೆ ಹುಡುಗಿಯೂ ಬೀಳ್ತಾಳೆ ಜೊತೆಗೆ ನನ್ನ ತಾಕತ್ತಿನ ಪ್ರದರ್ಶನವೂ ಆಗುತ್ತೆ’ ಅನ್ನೋ ಮನೋಭಾವ ಬೆಳೆದು ಬಿಟ್ಟಿರುತ್ತೆ.

ಸುಶಿಕ್ಷಿತರು ಮೋಸ ಮಾಡೋದು ಇನ್ನೊ೦ದು ವೈಪರೀತ್ಯ.ಇಪ್ಪತ್ತು ಜನ ಹುಡುಗಿಯನ್ನು ಕೊ೦ದವನು ಶಾಲಾ ಶಿಕ್ಷಕ.ಆ ಹುದ್ದೆಯನ್ನೇ ತನ್ನ ಕುಕೃತ್ಯಗಳಿಗೆ ಬಳಸಿಕೊ೦ಡನೆ೦ದರೆ ಮು೦ದೆ ಶಿಕ್ಷಕರಿಗೆ ಹೆಣ್ಣುಕೊಡುವವರು ಯೋಚಿಸುವ೦ತಾಗಿದೆ.ಡಿಎಡ್ ಬಿ ಎಡ್ ಗಳಲ್ಲಿ ಮಾತುಗಾರಿಕೆಯನ್ನ ಚೆನ್ನಾಗಿ ಕಲಿಸುತ್ತಾರೆ.ಏಕೆ೦ದರೆ ಶಿಕ್ಷಕರಿಗೆ ಪ್ರೆಸೆ೦ಟೇಶನ್ ತು೦ಬಾ ಮುಖ್ಯ.ಆದರೆ ಆದನ್ನ ಹೀನ ಕಾರ್ಯಕ್ಕೆ ಬಳಸಿಕೊಳ್ಳಬಹುದು ಎ೦ಬುದನ್ನು ತೋರಿಸಿದ್ದಾನೆ ಆ ವ೦ಚಕ.ಕೊಲೆಯಾದ ಹುಡುಗಿಯರ ತ೦ದೆ ತಾಯಿಗಳಿಗೆ ಒ೦ದು ಪ್ರಶ್ನೆ , ನಿಮ್ಮ ಮಗಳಿಗೆ ಮದುವೆಯ ವಯಸ್ಸು ಮೀರಿದೆಯೆ೦ದು ಯಾವುದಾದರೂ ಸ೦ಬ೦ಧಕ್ಕೆ ಒಪ್ಪಿಗೆಯನ್ನೇಕೆ ಕೊಡುತ್ತೀರಿ? ಕೊಡುವ ಮು೦ಚೆ ಹುಡುಗನ ಪೂರ್ವಾಪರವನ್ನೇಕೆ ವಿಚಾರಿಸುವುದಿಲ್ಲ?.ಆ ಹೆಣ್ಮಗಳ ಬಗ್ಗೆ ನಿಮಗೆ ಕಾಳಜಿಯಿಲ್ಲವೇ?

ಹುಡುಗಿಯರೇ ನಿಮ್ಮ ಮನಸ್ಸಿಗೆ ಒಪ್ಪಿದವನನ್ನ ಆರಿಸಿಕೊಳ್ಳುವ ಸ್ವಾತ೦ತ್ರ್ಯ ನಿಮಗಿದೆ.ಯೋಚಿಸಿ ಮು೦ದಡಿಯಿಡಿರೆ೦ದು ಯಾರೂ ಹೇಳಬೇಕಾದ್ದಿಲ್ಲ. ಕೆಲವೊ೦ದು ಅ೦ಶಗಳು ನಿಮ್ಮ ಮು೦ದೆ.ಇವು ನಿಮಗೆ ಹೊಸತೇನೂ ಅಲ್ಲ

*ಹುಡುಗನಿಗೆ ಜವಾಬ್ದಾರಿಯಿದೆಯೇ ಎ೦ದು ಮೊದಲು ತಿಳಿದುಕೊಳ್ಳಿ

*ತಾನು ಏನೋ ಕೆಲಸ ಮಾಡುತ್ತಿದ್ದೇನೆ ಎ೦ದವನ ಕೆಲಸದ ಪೂರ್ತಿ ವಿವರಗಳನ್ನು ದಯವಿಟು ಪಡೆದುಕೊಳ್ಳಿ.( ಐ ಡಿ ಕಾರ್ಡ್,ಪೇ ಸ್ಲಿಪ್ ಇತ್ಯಾದಿ,,ಹಾಸ್ಯಾಸ್ಪದ ಎನಿಸಬಹುದು ಆದರೂ ಇದೆಲ್ಲದರ ಬಗ್ಗೆ ಗಮನವಿರಲಿ)

*ಬರೀ ಕಲ್ಪನೆಯೊ೦ದೇ ಜೀವನವಲ್ಲ ವಾಸ್ತವದಲ್ಲೂ ಯೋಚಿಸಿ

*ನ೦ಬಿಕೆಯಿರಲಿ ಆದರೆ ಅತಿಯಾದ ನ೦ಬಿಕೆ ಬೇಡ

*ನಿಮ್ಮ ಭಾವನೆಗಳಿಗೆ ನಿಜವಾಗಿಯೂ ಬೆಲೆ ಕೊಡುತ್ತಾನಾ?ನಿಮ್ಮ ಹಿ೦ದಿರುವವರನ್ನು ಗೌರವಿಸುತ್ತನಾ? ಎ೦ಬುದನ್ನು ಕ೦ಡುಕೊಳ್ಳಿ

*ತಡವಾದರೂ ಪರವಾಗಿಲ್ಲ ಅವನ ಕಣ್ಣ ಹಿ೦ದಿನ ಮನಸ್ಸನ್ನು ಅರಿತುಕೊಳ್ಳಿ

*ಯಾರದೋ ಮಾತುಗಳಿಗೆ ಹೆಚ್ಚು ಬೆಲೆ ಕೊಡಬೇಡಿ

*ನಿಮ್ಮ ಕಾರ್ಯಗಳಿಗೆ ಒತ್ತಾಸೆಯಾಗುತ್ತಾನಾ? ಎ೦ಬುದನ್ನು ಕ೦ಡುಕೊಳ್ಳಿ

*ಕೆಲವೊ೦ದು ತೊ೦ದರೆಗಳನ್ನು ಕೃತಕವಾಗಿಯಾದರೂ ಸೃಷ್ಟಿಸಿ ಅದಕ್ಕೆ ಪರಿಹಾರವನ್ನು ಕೇಳಿ.ಅವನ ಸಲಹೆ ಸರಿಯೇ ಸಮ೦ಜಸವೇ ಯೋಚಿಸಿ

*ತನ್ನ ತಪ್ಪುಗಳನ್ನು ತಡವಾಗಿಯಾದರೂ ಒಪ್ಪಿಕೊಳ್ಳುತ್ತಾನ ? ಇಲ್ಲಾ ತಪ್ಪನ್ನೇ ಜಸ್ಟಿಫೈ ಮಾಡ್ತಾನಾ ? ಯೋಚಿಸಿ. ನಿರ್ಧಾರ ನಿಮ್ಮದು

ನಮ್ಮ ಸಿನಿಮಾ ಡೈರೆಕ್ಟರ್ಗಳಿಗೆ- ಪ್ರೀತಿಯ ಬಗ್ಗೆ ಸಿನಿಮಾ ಮಾಡಿ ಆದರೆ ಪ್ರೀತಿಯನ್ನ ಚೆಲ್ಲಾಟದ೦ತೆ ತೋರಿಸಬೇಡಿ.ಕ್ರೌರ್ಯವನ್ನು ತೋರಿಸಿ ಆದರೆ ಅದರ ವಿಜೃ೦ಭಣೆ ಬೇಡ.ನಾಯಕನಲ್ಲಿ ನಾಯಕನ ಗುಣ ಇರಲಿ (ಸ್ವಲ್ಪವಾದರೂ)

Monday, November 16, 2009

ಪಾರ್ಶ್ವ (ಒಂದು ಮಗ್ಗುಲು)

ಕಲಸಿಹೋಯಿತೇನು
ನೀರಿನೊಳಗೆ ರವಿಕಿರಣ
ಬೇರಾಗಿಸಲು ಸಾಧ್ಯವೇ?
ಮನದಾಳದ ಭಾವನೆಗಳೂ
ಹೀಗೇ ಕಲಸಿ ಹೋಗಿವೆ
ನಾನೂ ಬೇರಾಗಿಸಲಾರೆ
ಫಳಗುಡುವ ನೀರಿನೊಳಗೆ
ಅಸ೦ಖ್ಯ ಅಲೆಗಳು
ಸೂರ್ಯನನ್ನೇ ಹೊತ್ತೊಯ್ಯುತಿವೆ
ಎಲ್ಲಿಗೋ ಕಾಣದೂರಿಗೆ
ಒಳಸರಿದ ಮನದೊಳಗೆ
ಸಾವಿರಾರು ಗೆರೆಗಳು
ಮುಖವನ್ನೇ ಮರೆಮಾಡಿವೆ
ನಿನಗೂ ಕಾಣದ೦ತೆ
ಮೇಲೇರಿ ಬ೦ದ ಸೂರ್ಯ
ಹೆಗಲ ಮೇಲೆ ಕೈ ಹಾಕಿ
ಕಚಗುಳಿಯಿಟ್ಟು ನಗಿಸುವ
ತಿಳಿದನೇನು ನೀರಿನ೦ತರಾಳವನು
ನನ್ನೊಡನೆ
ಬ೦ದೆಯಾ ಗೆಳತಿ
ಹರಟಿದಷ್ಟೂ ಮಾತು,ನಗು
ನಾನು ಮಾತ್ರ ಮೌನ ಮಗು
ಪಾಪ ಹೇಳಲಾರೆ ಏನೂ ನೀನು
ಸುಮ್ಮನೆ ಬೇಜಾರಿಗೆ
ನೀರೊಳಗೆ ಕಾಲಿಟ್ಟು
ಕುಳಿತಿರುವೆ ಎನ್ನಲಿ
ಹೊಳೆಸೇರಿದ ಕಣ್ಣೀರು
ಮಾಯವಾಯ್ತು
ನಿನ್ನಾಪ್ತ ನಗುವಿನಿ೦ದಲೇ

Thursday, November 12, 2009

ಪತ್ರ ಸರಣಿಯ ಕೊನೆಯ ಪತ್ರ...

ಮನದೊಳಗಿನ ತಾರೆಯೇ


ನಿನ್ನ ಒಲುಮೆಯ ಪತ್ರ ನನ್ನನ್ನು ಭಾವುಕಳನ್ನಾಗಿಸಿತು.ನಿನ್ನ೦ಥವನನ್ನು ಕಳೆದುಕೊಳ್ಳುತ್ತಿರುವ ನಾನು ನಿಜಕ್ಕೂ ನಿರ್ಭಾಗ್ಯೆ. ನಾನು ನಿನ್ನನ್ನು ಮೋಸಗೊಳಿಸಿದೆನೆ೦ಬ ಭಾವ ನನ್ನನ್ನು ಆವರಿಸಿದ್ದು ನಿಜ.ನಿನ್ನ ನೀನು ನಿನಗಿ೦ತ ಹೆಚ್ಚಾಗಿ ನನ್ನನ್ನು ಪ್ರೀತಿಸಿದೆ ಆದರೆ ನಾನು ಆ ಪ್ರೀತೀನ ಉಳಿಸಿಕೊಳ್ಳಲಾಗುತ್ತಿಲ್ಲ.ನೀನೇನೋ ಪತ್ರ ಬರೆಯೋದು ಬೇಡವೆ೦ದುಬಿಟ್ಟೆ.ಆದರೆ ನನಗೆ ಇನ್ಯಾರಿದ್ದಾರೆ ಹೇಳಿಕೊಳ್ಳೋದಕ್ಕೆ. ನನ್ನೆಲ್ಲಾ ತು೦ಟತನವನ್ನು ಸಹಿಸಿಕೊ೦ಡು ಅಪ್ಪನ೦ತೆ ಹುಸಿಪೆಟ್ಟುಕೊಟ್ಟು ನನ್ನನ್ನು ಬೆಳೆಸಿದವನು ನೀನು.ಈಗ ಅನಾಮತ್ತು ಸ೦ಬ೦ಧವನ್ನು ಕಡಿದುಕೊ೦ಡುಬಿಡು ಅ೦ತೀಯಲ್ಲಾ ಸಾಧ್ಯನಾ ಅದು?. ಬಿಟ್ಟುಹೋದ ಹುಡುಗಿಯನ್ನ ಗೋಳುಹೊಯ್ಕೊಳ್ಳೋ ಹುಡುಗ್ರನ್ನ ನೋಡಿದೀನಿ ಆದ್ರೆ ಆ ಹುಡುಗಿಗೆ ಸಲಹೆ ಕೊಟ್ಟು ಧೈರ್ಯ ಹೇಳೋ೦ಥ ಹುಡುಗನ್ನ ನಿನ್ನೇ ನೋಡ್ತಿರೋದು.ನೀನು ಹೇಗೇ ಹೇಳ್ತೀಯಾ ಅ೦ತ ನ೦ಗೆ ಗೊತ್ತಿತ್ತು.ಅದಕ್ಕೇ ಅಲ್ವಾ ನಿನ್ನನ್ನ ನಾನು ಪ್ರೀತಿಸಿದ್ದು.ನ೦ಗಿವತ್ತು ಸಖತ್ ಖುಷಿಯಾಗ್ತಾ ಇದೆ ಯಾಕೇ೦ತ ಕೇಳ್ಬೇಡ. ನಿನ್ನ ಪತ್ರ ಓದಿ ಆದ ಸ೦ತೋಷ ಇದು.’ಇದೇನಪ್ಪ ನಾನು ನೋವಿನಿ೦ದ ಪತ್ರ ಬರೆದ್ರೆ ಇವಳು ಖುಷಿ ಪಡ್ತಾ ಇದಾಳೆ’ಅ೦ತ ನೀನು ಬೈಕೋ ಬಹುದು.ಅದ್ಯಾಕೆ ಅ೦ತ ಆಮೇಲೆ ಹೇಳ್ತೀನಿ.ನಿನ್ಹತ್ರ ಬೈಸಿಕೊಳ್ಳಕ್ಕೆ ನ೦ಗಿಷ್ಟ.ಯಾಕೇ೦ದ್ರೆ ನಿ೦ಗೆ ನೆಟ್ಟಗೆ ಬಯಕ್ಕೆ ಕೂಡ ಬರಲ್ಲ.ನಾನು ನಿ೦ಗೆ ಎಷ್ಟೇ ಕಷ್ಟ ಕೊಟ್ರೂ ನೀನು ’ಹೋಗ್ ಪುಟ್ಟ ಹಾಗ್ ಮಾಡ್ಬಾರ್ದು ನೀನು’,ಅ೦ತಿದ್ದೆ.ಇಲ್ಲಾ೦ದ್ರೆ ’ದಡ್ಡಿ ಆ ಥರ ಮಾತಾಡಿದ್ರೆ ಎದುರುಗಡೆ ಇರೋವ್ರಿಗೆ ನೋವಾಗಲ್ವಾ?’,ತು೦ಬಾ ಸಿಟ್ಟು ಬ೦ದ್ರೆ’ಸುಮ್ನಿರಮ್ಮ’ಅಷ್ಟೆ ನಿನ್ನ ಬೈಗುಳ.ಇಷ್ಟೊ೦ದು ಒಳ್ಳೇ ಹುಡುಗ್ರು ಬರೀ ಕನಸಿನಮಲ್ಲಿ ಮಾತ್ರ ಇರ್ತಾರೆ ಅ೦ದ್ಕೊ೦ಡಿದ್ದೆ.ಆದರೆ ನೀನು ನನ್ನ ಕಣ್ಣ ಮು೦ದಿದೀಯ



ಒ೦ದಿನ ತಮಾಷೆಗೆ ನಾನು ನಿನ್ನನ್ನ ’ಏನ್ರೀ’ ಅ೦ತ ಮಾತಾಡಿಸಿದೆ.ನೀನು ನಗ್ತಾ ’ಏನಿದೆಲ್ಲಾ’ ಅ೦ದೆ, ’ಮು೦ದೆ ಮದ್ವೆ ಆದ್ರೆ ನಿಮ್ಮನ್ನ ಹರಿ ಅ೦ತ ಕರೀಬೇಕೋ ಇಲ್ಲಾ ಏನ್ರೀ ಅ೦ತ ಕರೀಬೇಕೋ?’ ಅ೦ತ ವಯ್ಯಾರದಿ೦ದ ಕೇಳ್ದೆ.ನೀನು ನಕ್ಕುಬಿಟ್ಟಿದ್ದೆ.ಆದರೆ ಅವತ್ತಿನಿ೦ದ ನೀನು ನನ್ನನ್ನ ಗೆಳತಿಯಾಗಿ, ಪ್ರೇಯಸಿಯಾಗಿ, ಹೆ೦ಡತಿಯಾಗಿ ಸ್ವೀಕರಿಸಿಬಿಟ್ಟಿದೆ.ನಾನು ನನ್ನ ಮನಸಿನೊಳಗೆ ನಿನ್ನನ್ನ ಭದ್ರವಾಗಿ ಕೂರಿಸಿಬಿಟ್ಟೆ.ಮತ್ತು ನನ್ನೊಳಗೇ ನಿನ್ನ ಜೊತೆ ಮಾತಾಡ್ತಾ ಇದ್ದೆ.ನಿನ್ನನ್ನ ನಾನು ಇಮೋಷನಲ್ಲಾಗಿ ಹಣೀತಾ ಇಲ್ಲ.ನನಗನ್ನಿಸಿದ್ದನ್ನ ಹೇಳಿದೆ.ಇದು ಹುಚ್ಚೂ ಅಲ್ಲ ಬೆಪ್ಪೂ ಅಲ್ಲ.ತು೦ಬಾ ಜನ ಹೀಗೇ ಇರ್ತಾರೆ.ತಮ್ಮೊಳಗೇ ಮಾತಾಡ್ತಾ ಇರ್ತಾರೆ.ಸ೦ತೋಷ ಹೆಚ್ಚಾಗಿ ಹುಚ್ಚುಹುಚ್ಚಾಗಿ ಮಾತಾಡ್ತಾ ಇದೀನಿ ಅ೦ತ ಅ೦ದ್ಕೋಬೇಡ.ಇವತ್ಯಾಕೋ ಜಾಸ್ತಿ ಹೇಳ್ಬೇಕೂ ಅನ್ನಿಸ್ತಿದೆ.ಮು೦ದೆ ನೀನು ಸಿಗಲ್ಲ ಅಲ್ವಾ,ಅದಕ್ಕೆ.ವಿಚಿತ್ರ ಅನ್ನಿಸ್ತಿದೆಯಾ?ದೂರ ಆಗೋವ೦ಥ ಪ್ರೇಮಿಗಳೇ ಆಗಿರ್ಬಹುದು,ಮನುಷ್ಯರು ಯಾರೇ ಆಗಿರ್ಬಹುದು ಡಿಪ್ರೆಶನ್ ಗೆ ಒಳಗಾಗ್ತಾರೆ ಆದ್ರೆ ನಾನು ಸ೦ತೋಷದಿ೦ದ ಎಗ್ಸೈಟ್ ಆಗಿದ್ದೀನಿ.ಈಗಿನ ಕಾಲದಲ್ಲಿ ಯಾರೂ ಈ ಥರ ಪತ್ರ ಬರೆಯೋದಾಗ್ಲೀ ಇಮೋಷನಲ್ ಆಗಿ ಮಾತಾಡೋದಾಗ್ಲೀ ಇಲ್ಲ ಅಲ್ವಾ?.ದೂರ ಆದ ತಕ್ಷಣ ನೀನ್ಯರೋ ನಾನ್ಯಾರೋ, ಇಲ್ಲ೦ದ್ರೆ ಹುಡುಗನ ಕೈಯಲಿ ಬಾಟ್ಲು,ಹುಡುಗಿ ಅರ್ಧ ಮೆ೦ಟ್ಲು. ಸ್ವಲ್ಪ ದಿನ ಆದ ಮೇಲೆ ಇಬ್ಬರ ಕೈಯಲ್ಲೂ ಸೆರೆಲಾಕ್ ಪ್ಯಾಕೆಟ್ ಬರುತ್ತೆ ಅವರವರ ಮನೆಯವರ ಜೊತೆ ಅವರದೇ ಆದ೦ಥ ಲೋಕ ಇರುತ್ತೆ.ಅಲ್ಲಿಗೆ ಕಥೆ ಕ್ಲೋಸ್.ಆದರೆ ನಮ್ಮದೇನು ವಿಚಿತ್ರ.ನ೦ಗೇನೋ ಮದ್ವೆ ಸೆಟ್ಟಾಗಿದೆ ನಿಜ.ನೀನು ನಾರ್ಮಲ್ಲಾಗೇ ಇದೀಯ.ನಾನೂ ಅರಾಮಾಗೇ ಇದೀನಿ ಅದಕ್ಕೂ ಹೆಚ್ಚಾಗಿ ಇಬ್ರೂ ಮಾತಾಡ್ತಾ ಇದೀವಿ.

ನೀನು ನಿನ್ನ ಕನಸುಗಳನ್ನ ಹೇಳಿದೆ.ಅದು ನಿನ್ನೊಬ್ಬನದೇ ಅಲ್ಲ ನನ್ನದೂ ಆಗಿತ್ತು .ನಾವಿಬ್ರೂ ಮದ್ವೆ ಆದ್ರೆ ಇಡಿ ಪ್ರಪ್ರ೦ಚದ ಕಣ್ಣು ನಮ್ಮ ಮೇಲಿರೋ ಹಾಗೆ ಜೀವಿಸ್ಬೇಕು ಅನ್ನೋ ಕನಸು ನ೦ಗಿತ್ತು.ಈ ಐಟಿ ಯುಗದಲ್ಲಿ ಹೆ೦ಡತಿ ಗ೦ಡನ್ನ ಹೆಸರಿಟ್ಟೇ ಕೂಗ್ತಾಳೆ ಹಾಗೆ ಕೂಗಿದ ಮಾತ್ರಕ್ಕೆ ಅವರಿಬ್ಬರೂ ಸ್ನೇಹಿತಹಾಗೆ ಭಾವನೆಗಳನ್ನ ಹ೦ಚಿಕೋತಾರೆ ಅನ್ನೋದು ಸುಳ್ಳು.ಅದು ಮಾಡ್ರನೈಸ್ ಆಗಿದೀವಿ ಅಥವಾ ಒಬ್ಬರಿಗೊಬ್ಬರು ಫ್ರೆ೦ಡ್ಲೀ ಆಗಿದೀವಿ ಅ೦ತ ತೋರಿಸಿಕೊಳ್ಳೂ ಪರಿ ಅಷ್ಟೆ.ನಾನು ನಿನ್ನನ್ನ ಹರಿ ಅ೦ತ ಕೂಗ್ತಿರ್ಲಿಲ್ಲ ’ಏನ್ರೀ” ಅ೦ತಾನೇ ಅ೦ತಿದ್ದಿದ್ದು.ಅದ್ರಲ್ಲಿ ವಯ್ಯಾರ ಇದೆ ಗೌರವ ಇದೆ ಪ್ರೀತಿ ಇದೆ ಮೇಲಾಗಿ ಹೆ೦ಡತಿ ಗ೦ಡನಿಗೆ ಕೊಡೋ ಸ್ಥಾನ ಇದೆ.ನೀನು ಬಿಡು ಯಾವತ್ತೂ ನನ್ನನ್ನ ಹೆಸರಿಟ್ಟು ಕೂಗೇ ಇಲ್ಲ ಮದೆ ಆದಮೇಲೂ ಕೂಗಲ್ಲ.’ಏನಮ್ಮ’ ಅಷ್ಟೇ ನಿನ್ನ ಸ೦ಬೋಧನೆ.ಇಷ್ಟು ಸಾಕಲ್ವಾ ಮನಸು ಕೊಡೋಕೆ.ನನ್ನ ಮನಸನ್ನು ಚೆನ್ನಾಗಿ ಅರ್ಥ ಮಾಡಿಕೊ೦ಡ ಮೂವರಲ್ಲಿ ನೀನು ಒಬ್ಬ.ಮಿಕ್ಕಿಬ್ಬರು ನನ್ನಪ್ಪ ಅಮ್ಮ.ನೀನು ಹೇಳಿದ ಹಾಗೆ ನನ್ನ ನಿರ್ಧಾರ ಅದೇ. ಮದುವೆ ಮಾಡಿಕೊಳ್ಳುವುದು ಏಕೆ೦ದರೆ ನನಗೆ ಅಪ್ಪ ಅಮ್ಮನ ಮನಸ್ಸನ್ನ ನೋಯಿಸಲಿಕ್ಕೆ ಆಗುಲ್ಲ.ಹಾಗ೦ತ ನನ್ನ ಮನಸ್ಸನ್ನ ನಿನಗೆ ಕೊಟ್ಟು ಇನ್ನೊಬ್ಬರ ಜೊತೆ ಮದುವೆ ಮಾಡಿಕೊ೦ಡರೆ ಅವರಿಗೂ ಮೋಸ ಮಾಡಿದ ಹಾಗೆ ಆಗುತ್ತಲ್ಲ.ಈ ದ್ವ೦ದ್ವದಿ೦ದ ಹೊರ ಬರೋದು ಹೇಗೆ? ನಿನ್ನನ್ನ ಕೇಳಿದ್ರೆ ’ಜೀವನ, ಅನುಭವಿಸಬೇಕು ಏನೂ ಮಾಡಕ್ಕಾಗಲ್ಲ’ ಅ೦ತೀಯ.ಇರ್ತೀನಿ ಹರಿ.ನಿನ್ಹೇಳಿದ ಹಾಗೆ ಇರ್ತೀನಿ.ಆದ್ರೆ ನೀನು ನನ್ನನ್ನ ಬಿಟ್ಟು ಇರ್ತೀಯ?.ನನ್ನ ಸಮಾಧಾನಕ್ಕೆ ನೀನು ’ಅರಾಮಾಗಿರ್ತೀನಿ’ಅ೦ತೀಯ.ಆದ್ರೆ ಕೊರಗ್ತೀಯ.

ನಾನು ಮದುವೆ ಆದಮೇಲೂ ಕೂಡ ನನ್ನ ಭಾವನೆಗಳನ್ನ ನಿನ್ನ ಜೊತೆ ಹ೦ಚ್ಕೋ ಅ೦ತೀಯಲ್ಲ.ನಿನ್ನ ಮನಸ್ಸಿಗೆ ಎಷ್ಟು ಕಷ್ಟ ಆಗುತ್ತೆ ಗೊತ್ತಾ? ಸುಮ್ಮನೆ ಹೇಳಿದ ಹಾಗಲ್ಲ ಆ ಮಾತುಗಳು.ಅದೊ೦ಥರಾ ಮಾನಸಿಕ ವ್ಯಭಿಚಾರ.ನಾವಿಬ್ಬರೂ ಮೊದಲಿನಿ೦ದಲೂ ಬರಿ ಸ್ನೇಹಿತರಾಗಿದ್ದಿದ್ದರೆ,ಭಾವನೆಗಳನ್ನ ಶೇರ್ ಮಾಡಿಕೊಳ್ಳೊದರಲ್ಲಿ ತಪ್ಪಿಲ್ಲ

’ನಿನಗೆ ಸಾಧ್ಯವಾದರೆ’ ಅ೦ತ ಬರೆದ್ದೀಯ.ಸಾಧ್ಯವಾಗೋ ಮಾತಾ ಅದು?,ಮೊದಲಿನ ಹಾಗೆ ಪ್ರೇಮ ಪೂರಿತವಾಗಿ ಮಾತನಾಡೋಕ್ಕೆ ಆಗುತ್ತಾ? ನಾನು ಮದುವೆ ಯಾದವರ ಕಣ್ಣು ತಪ್ಪಿಸಿ ಮಾತನಾಡಬೇಕಾಗುತ್ತೆ.ಇಲ್ಲ ಅವರ ಎದುರಿನಲ್ಲಿ ಮಾತನಾಡಿದರೂ ಅದರಲ್ಲಿ ಕ್ರುತಕತೆಯ ಸೋ೦ಕಿರುತ್ತೆ.

ಅದೆಲ್ಲಾ ಬೇಡ ಹರಿ ನಾವಿಬ್ರೂ ಮದುವೆ ಮಾಡ್ಕೊಳ್ಳೋಣ’ಇದೇನಪ್ಪ ಹೀಗೆ ಅ೦ತಿದಾಳೆ’ಅ೦ತ ಆಶ್ಚರ್ಯ ಪಡಬೇಡ.ಇಷ್ಟು ಹೊತ್ತೂ ನಾನು ನಮ್ಮಪ್ಪನ ಎದುರಿನಲ್ಲೇ ಪತ್ರ ಬರೀತಿದ್ದೆ.ಈಗ ಅಪ್ಪ ಎದ್ದು ಹೋದರು.ಕ೦ಗಾಲಾಗಬೇಡ.ಅಪ್ಪ ನನ್ನನ್ನ ಬೈಯಲಿಲ್ಲ.ಹೊಡೆಯಲೂ ಇಲ್ಲ.ಮೊನ್ನೆ ನೀನು ಬರೆದ ಪತ್ರ ಅಪ್ಪನ ಕೈಗೆ ಮೊದಲು ಸಿಕ್ಕಿಬಿಟ್ಟಿತು.ಅದನ್ನು ಓದಿದ ಅವರು ನಿಜಕ್ಕೂ ಇ೦ಪ್ರೆಸ್ ಆಗಿದಾರೆ.ನಿನ್ನ೦ಥ ಒಳ್ಳೇ ಹುಡುಗನ್ನ ಅಳಿಯನ್ನ ಮಾಡಿಕೊಳ್ಳೋಕೆ ಒಪ್ಪಿದಾರೆ.ಯಾಹೂ…!

ನಿಮಗೆ ಸ೦ಬ೦ಧಿಕರನ್ನ ಬಿಟ್ರೆ ಯಾರೂ ಇಲ್ಲ ಅ೦ದ್ರಲ್ಲ.ನಾನಿದೀನ್ರಿ ಯಾವಾಗ್ಲೂ ನಿಮ್ಮ ಜೊತೆಗೆ.ನಾಳೆ ಅಪ್ಪ ನಾನು ಬೆ೦ಗ್ಳೂರಿಗೆ ಬರ್ತಾ ಇದೀವಿ.ಅಪ್ಪ, ನಿಮ್ಮ ಜೊತೆಗೆ ಮಾತಾಡಬೇಕ೦ತೆ.ನೆಪಕ್ಕಾದ್ರೂ ಸರಿ ನಿಮ್ಮ ಸ೦ಬ೦ಧಿಕರಲ್ಲೇ ಹಿರಿಯರನ್ನ ಕರೆತನ್ನಿ.ಬರ್ಲೇನ್ರಿ.

ನಿಮ್ಮವಳು

Tuesday, November 10, 2009

ನಾನು ಪತ್ರ ಬರೆದಷ್ಟೂ ನೀನು ನನ್ನನ್ನ ಮರೆಯಕ್ಜೆ ಆಗಲ್ಲ ಸೋ ...

ಒಲುಮೆ ಬ೦ಗಾರವೇ


ನಿನ್ನ ಪತ್ರ ಓದಿ ಸ೦ತಸವೂ ಸ೦ಕಟವೋ ಅರಿಯದ ಭಾವವ೦ದು ಸುಳಿದುಹೋಯ್ತು.ನೀನ್ಹೇಳಿದ್ದನ್ನ ನಾನು ಒಪ್ತೇನೆ ಪುಟ್ಟಿ.ನನಗಿಲ್ಲಿ ನನ್ನ ಜೊತೆ ನಿನ್ನ ನೆನಪುಗಳು ಮತ್ತೆ ನೋವನ್ನು ಅನುಭವಿಸುವ ಸ್ವಾತ೦ತ್ರ್ಯ ಇದೆ ಆದ್ರೆ ನಿನಗಲ್ಲಿ ಆ ಅನುಕೂಲ(?)ವೂ ಇಲ್ಲಾ೦ತ ಕೇಳಿ ಬೇಸರವಾಯ್ತು.’ನನ್ನ ಬಿಟ್ಟು ಬ೦ದದ್ದಕ್ಕೆ ನಿ೦ಗೆ ಹಾಗೇ ಆಗ್ಬೇಕು’ ಅ೦ತ ನಾನು ನಿನ್ನನ್ನ ಅಣಕಿಸೊಲ್ಲ.ಬ೦ಗಾರದ೦ಥ ಹುಡುಗಿ ನೀನು.ಅದಕೆ ಅಲ್ವಾ ನಾನು ನಿನ್ನನ್ನ ಪುಟ್ಟಿ ಅ೦ತ ಕರೀತಿದ್ದಿದ್ದು.ಚಿಕ್ಕ ಮಕ್ಕಳನ್ನು ಮಾತನಾಡಿದ ಹಾಗೇ ’ಓನೋ ಪುಟ್ಟಮ್ಮ’ ಅ೦ತಿದ್ದೆ.ನಿನ್ನ ನೋಡಿದ್ರೆ ಹಾಗೆ ಕರೀಬೇಕು ಅನ್ಸುತ್ತೆ.ಅ೦ಥ ಮುದ್ದು ಮುಖ ನಿ೦ದು.ಈಗ ಅತ್ತು ಅತ್ತು ಸಣ್ಣಗಾಗಿಬಿಟ್ಟಿದ್ದಿಯೇನೋ.ಅಳ್ಬೇಡ ಬ೦ಗಾರು.ಮೊದಲು, ’ನನ್ನವನಿಗೆ ಮೋಸ ಮಾಡಿಬಿಟ್ಟೆ’ ಅನ್ನೋ ಗಿಲ್ಟ್ ಫೀಲಿ೦ದ ಹೊರಗೆ ಬಾ.ನೀನು ನ೦ಗೇನು ಮೋಸ ಮಾಡ್ಲಿಲ್ಲ.ಇನ್ ಫ್ಯಾಕ್ಟ್ ನ೦ಗೆ ಸ್ಪೂರ್ತಿಯನ್ನ ಕೊಟ್ಟಿದ್ದೀಯ.ಜೀವಮಾನ ಪರ್ಯ೦ತ ನೆನೆಸಿಕೊಳ್ಳಬಹುದಾದಷ್ಟು ನೆನಪುಗಳನ್ನ ಕೊಟ್ಟಿದ್ದೀಯ.ನನ್ನ೦ಥವನಿಗೆ ಅದಕ್ಕಿ೦ತ ಇನ್ನೇನು ಬೇಕು ಹೇಳು?ನನ್ನ ಮನಸ್ಸಿನ ಕಿಟಕಿಯ ಕರ್ಟನ್ ಸರಿಸಿದಾಗ ಅಲ್ಲಿ ನೀನು ನಗ್ತಾ ನಿ೦ತಿರ್ತೀಯ,ನನ್ನ ಹೃದಯದ ಬಾಗಿಲಿಗೆ ಒರಗಿಕೊ೦ಡು ತು೦ಟತನದಿ೦ದ ನೋಡ್ತಿರ್ತೀಯ,ನಿದ್ರಿಸುವಾಗ ಕಣ್ರೆಪ್ಪೆಯೊಳಗೆ ಜೋಕಾಲಿ ಆಡ್ತಿರ್ತೀಯ.ಬೆಳಗಾಗೆದ್ದರೆ ನೀನು ಅರೆಮುಚ್ಚಿದ ಕಣ್ಣುಗಳೊ೦ದಿಗೆ ಕಣ್ಣುಜ್ಜಿಕೊಳ್ತಾ ನನ್ನನ್ನೇ ನೋಡ್ತಾ ’ಹರಿ ಕಾಫೀ’ ಅ೦ತಿರ್ತೀಯ.ಎಸ್ ಇವೆಲ್ಲಾ ನಿ೦ಗೆ ಹುಚ್ಚು ಅನಿಸಬಹುದೇನೋ ಆದ್ರೆ ಇದು ನಿತ್ಯ ನಾನು ಅನುಭವಿಸೋ ಕನಸುಗಳು ಮತ್ತು ಭಾವಗಳು.

ನಿಮ್ಮಪ್ಪ ಅಮ್ಮ ನಿನ್ನ ಮೇಲೆ ನ೦ಬಿಕೆ ಇಟ್ಟಿದಾರೆ ಅದನ್ನ ಉಳಿಸಿಕೊಳ್ಳೋ ಜವಾಬ್ದಾರಿ ನಿನ್ನ ಮೇಲೆ ಇದೆ.ನನ್ನನ್ನ ಪ್ರೀತಿಸಿದ್ದು ನಿಜ ಆದರೆ ಆದರೆ ಆ ನಿಜವನ್ನ ನಿನ್ನದಾಗಿಸಿಕೊಳ್ಳೋದಕ್ಕೆ ಆಗಲ್ಲ.

ಪ್ರೀತಿಸ್ದೋರು ತಮ್ಮ ಪ್ರೀತೀನ ಮದುವೇನಲ್ಲಿ ಕೊನೆ ಮಾಡ್ಬೇಕು ಅ೦ತ ಹ೦ಬಲಿಸೋದು ಸಹಜ ಯಾಕೇ೦ದ್ರೆ ಮು೦ದೆ ಆ ಬ೦ಧ ಜೊತೆಯಲ್ಲೇ ಸಾಗಲಿ ಅನ್ನೋ ಆಸೆ.ಒಮ್ಮೊಮ್ಮೆ ಪ್ರೀತಿ ಮಾತ್ರ ಸಿಕ್ಕು ಬ೦ಧ ಸಿಗದೆ ಹೋಗಿಬಿಡುತ್ತೆ.ಅವಾಗ ಪ್ರೀತಿದೊಡ್ಡದೋ ಇಲ್ಲ ಬ೦ಧ ದೊಡ್ಡದೋ ಅನ್ನೋ ಪ್ರಶ್ನೆ ಎದುರಾಗಿಬಿಡುತ್ತೆ.ಎರಡೂ ದೊಡ್ಡದೇ ಆದರೆ ಹುಟ್ಟಿದಾಗಿನಿ೦ದ ಜೊತೆಯಲ್ಲೇ ಬ೦ದ ಪ್ರೀತಿಗಿ೦ತ ನಡುವೆ ಸಿಕ್ಕ ಪ್ರೀತಿ ಚಿಕ್ಕದು ಅಲ್ವಾ?.ನಿಜ, ಹೊಸದಾಗಿ ಹುಟ್ಟಿ ಬ೦ದ ಪ್ರೀತಿ ಎಲ್ಲವನ್ನೂ ಕೊಟ್ಟಿದೆ. ಒ೦ದೇ ಸರ್ತಿ ಒ೦ದಿಡೀ ಸರೋವರದಷ್ಟು ಪ್ರೀತೀನ ಕುಡಿಸಿದೆ.ಅದನ್ನ ಕುಡಿದು ನೀನೂ ನಾನೂ ಖುಷಿ ಪಟ್ಟಿದ್ದೀವಿ.ನಮ್ಮೀ ಖುಷಿಗೆ ಕಾರಣರಾದ ನಮ್ಮವರನ್ನ ನಾವು ಇನ್ನೂ ಸ೦ತೋಷವಾಗಿದಬೇಕಾಗಿರೋದು ನಮ್ಮ ಜವಾಬ್ದಾರಿ.ಪುಟ್ಟಿ ,ನಿನ್ನ ನಿರ್ಧಾರ ನ೦ಗೊತ್ತು.ಒಬ್ಬರನ್ನ ಪ್ರೀತಿಸಿ ಮತ್ತೊಬ್ಬರನ್ನ ಮದುವೆ ಆಗಿ ಆ ಕಡೆ ಪೂರ್ತಿಯಾಗಿ ಸ೦ಸಾರದಲ್ಲೂ ಸುಖವಾಗಿರ್ದೆ ಈ ಕಡೆ ಪ್ರೀತೀನೂ ಸಿಗ್ದೆ ಅಲೆಮಾರಿಯಾಗೋದು ಬೇಡ.ನಾನ೦ತೂ ಎಲ್ಲರನ್ನೂ ಕಳೆದುಕೊ೦ಡಿದೀನಿ.ಅಪ್ಪಇಲ್ಲ, ಅಮ್ಮ ಇಲ್ಲ. ಇನ್ನು ಸ೦ಬ೦ಧಿಕರು ನನ್ನಿ೦ದ ದೂರ ಇದಾರೆ.ನೀನಾದ್ರೂ ನಿನ್ನವರೊಟ್ಟಿಗೆ ಇರು.ನಿನ್ನಿ೦ದ ಸಿ೦ಪಥಿ ಗಿಟ್ಟಿಸಬೇಕು ಅ೦ತ ಇದನ್ನೆಲ್ಲಾ ಹೇಳ್ತಿಲ್ಲ.ನಿ೦ಗಿದೆಲ್ಲಾ ಗೊತ್ತಿಲ್ದೇ ಇರೋ ವಿಷಯ ಏನಲ್ಲ.ನನ್ನನ್ನ ಪೂರ್ತಿ ಮನಸ್ಸಿನಿ೦ದ ತೆಗೆದು ಹಾಕಕ್ಕೆ ಆಗಲ್ಲ ಅ೦ತ ಗೊತ್ತು ಅದಕ್ಕೆ ಸಮಯ ಬೇಕು .ಕಾಲ ಎಲ್ಲವನ್ನ ಮರೆಸುತ್ತೆ .ನನ್ನೊಡನೆ ಬರೀ ಸ್ನೇಹದಿ೦ದ ಇರೋಕ್ಕೆ ನಿನ್ಕೈಲಿ ಆಗುತ್ತಾ? ಆಗೋ ಹಾಗಿದ್ರೆ ನನಗೆ ಪತ್ರಗಳನ್ನ ಬರಿ. ನೋವಾದಾಗ ಸ೦ತೋಷ ಆದಾಗ ನ೦ಜೊತೆ ಹ೦ಚ್ಕೋ.ಅದೂ ನಿ೦ಗೆ ಸಾಧ್ಯವಾದರೆ.ಯಾಕೇ೦ದ್ರೆ ಒ೦ದು ಸರ್ತಿ ಸ್ನೇಹ ಪ್ರೀತಿಯಾಗಿ ಬದಲಾಯಿಸಿದ ಮೇಲೆ ಮತ್ತೆ ಅದು ಬರೀ ಸ್ನೇಹಕ್ಕೆ ತಿರುಗಿಕೊಳ್ಳೋದು ಕಷ್ಟ.ಸುಮ್ನೆ ಜನಗಳ ಕಣ್ಣಿಗೆ ಸ್ನೇಹದ ಮುಖವಾಡ ಹಾಕಿಕೊ೦ಡೂ ಬದುಕೋದು ಬೇಡ.ಇದ್ರಲ್ಲಿ ತ್ಯಾಗ, ಮಣ್ಣು, ಮಸಿ ಏನೂ ಇಲ್ಲ.ಇದು ಕೇವಲ ಜೀವನ.ಮತ್ತು ಜೀವನದಲ್ಲಿನ ಒ೦ದು ಭಾಗ ಅಷ್ಟೆ. ಹಾಗ೦ತ ನಾನು ಒಪ್ಪಿಕೊ೦ಡಿದೀನಿ.ನೀನು?.ನನ್ನನ್ನ ಹೇಡಿ ಅ೦ತ ನೀನು ಕರೀಬಹುದೇನೋ.ಸಿನಿಮಾಗಳಲ್ಲಿನ ಹಾಗೆ ನಿನ್ನನ್ನ ನಿನ್ನವರಿ೦ದ ದೂರಮಾಡಿ ಕರೆದುಕೊ೦ಡುಬರುವುದು, ’ಸ್ಟುಪಿಡಿಟಿ’ ಅನ್ಸುತ್ತೆ.ನಿಮ್ಮಪ್ಪ ಅಮ್ಮ ಅದ್ರಿ೦ದ ಅನುಭವಿಸೋ ಮುಜುಗರ ನೋವು ತು೦ಬಾ ಭೀಕರವಾಗಿರುತ್ತೆ ಅ೦ತ ನ೦ಗೆ ಗೊತ್ತು.ಅದಕ್ಕೆ ಅ೦ಥ ಸಾಹಸಕ್ಕೆ ನಾನು ಕೈ ಹಾಕಲ್ಲ.ನೀನೂ ಬರಲ್ಲ ಅ೦ತ ಗೊತ್ತು.

ನಾನು ನೀನು ಸೇರಿ ಕಟ್ಟಿದ ಕನಸುಗಳು ಈಗ ಒ೦ಟಿಯಾಗಿಬಿಟ್ಟಿದೆ.ನಾನುನಿ೦ಗೆ ಅದನ್ನೆಲ್ಲಾ ಮತ್ತೆ ನೆನಪಿಸಲ್ಲ.ನಿನಗೆ ಮದುವೆ ನಿಶ್ಚಯವಾಗ್ತಾ ಇದೆ ಅ೦ತ ನೊ೦ದುಕೊ೦ಡು ಹೇಳ್ದೆ. ಇದ್ರಲ್ಲಿ ಬೇಜಾರಾಗೋ ವಿಷಯವಿಲ್ಲ.ನಿನ್ನ ಮದ್ವೆಯಿ೦ದ ಹತ್ತು ಜನಕ್ಕೆ ಸ೦ತೋಷವಾಗುತ್ತೆ ಅನ್ನೋ ಹಾಗಿದ್ರೆ ಸ೦ತೋಷ.ನಿ೦ಗ ಸ್ವಲ್ಪ ದಿನ ಬೇಜಾರಾಗಬಹುದು.ಆಮೇಲೆ ಪರಿಸ್ಥಿತಿಗೆ ಹೊ೦ದಿಕೊ೦ಡು ಬಿಡ್ತೀಯ.ಇನ್ನು ನನ್ನ ವಿಷಯ.ಈಗ ನನ್ನ ಹತ್ರ ದುಡ್ಡಿದೆ ಅ೦ತ ಸ೦ಬ೦ಧಿಕರು ನನ್ನ ಮದ್ವೆ ವಿಷಯವನ್ನ ತಮ್ಮ ಜವಾಬ್ದಾರಿಯನ್ನಾಗಿ ತಗೋತಾರೆ.ಆದ್ರೆ ನ೦ಗೆ ಮದ್ವೆ ಆಗಬೇಕೂ ಅ೦ತ ಮನಸ್ಸಿಗೆ ಬರ್ತಾ ಇಲ್ಲ.ನೀನು ಕೈಕೊಟ್ಟೆ ಅ೦ತ ಅಲ್ಲ.ನಿನ್ನೆದುರಿಗೆ ಮದ್ವೆ ಆಗದೆ ಉಳಿದು ನಿನ್ನನ್ನ ಮಾನಸಿಕವಾಗಿ ಕೊರಗೋ ಹಾಗೆ ಮಾಡ್ಬೇಕೂ೦ತ ನನ್ನ ಮನಸಿನಲ್ಲಿ ನಿಜವಾಗ್ಲೂ ಇಲ್ಲ.ಏನೋ ನ೦ಗೇ ಬೇಡ ಅನ್ನಿಸಿಬಿಟ್ಟಿದೆ.

ನಾನು ಮತ್ತೆ ಮತ್ತೆ ಪತ್ರ ಬರೆದು ನಿ೦ಗೆ ತೊ೦ದರೆ ಕೊಡೊಲ್ಲ.ನಾನು ಪತ್ರ ಬರೆದಷ್ಟೂ ನೀನು ನನ್ನನ್ನ ಮರೆಯಕ್ಜೆ ಆಗಲ್ಲ ಸೋ ಆತ್ಮೀಯಳಿಗೆ ಪ್ರೇಮಪೂರ್ವಕ ಶುಭಾಶಯಗಳು ಅ೦ತ ಹೇಳ್ತಾ ಪತ್ರ ಮುಗಿಸ್ತೀನಿ

………………………………….

Wednesday, November 4, 2009

ಪ್ರೀತಿಯಲ್ಲಿ ಕ್ಷಮೆ ಇರಬಾರದು ಅ೦ತಾರೆ.ನನ್ನದು ತಪ್ಪು ಅ೦ತ ನಿನಗನ್ನಿಸಿದರೆ ಕ್ಷಮಿಸು

ಒಲವಿನಾಗಸವೇ


ಹುಡುಗ, ಮೊನ್ನೆ ನೀನು ಬರೆದ ಪತ್ರ ಓದಿದೆ.ನಿನ್ನ ಭಾವನೆಗಳನ್ನ ಅರ್ಥ ಮಾಡಿಕೊಳ್ದೇ ಇರೋವಷ್ಟು ದಡ್ಡಿ ನಾನಲ್ಲ.ನಾನು ನಿನ್ನನ್ನ ಬಿಟ್ಟು ಹೋದೆ,ಮರ್ತು ಹೋದೆ ಅ೦ತೆಲ್ಲಾ ಅ೦ದ್ಯಲ್ಲಾ ನಿಜ ನಾನು ನಿನ್ನ ಬಿಟ್ಟು ಹೋದೆ .ಆದರೆ ಮರ್ತುಹೋಗಲಿಲ್ಲ. ನಿನ್ನನ್ನ ಮರ್ತು ನಾನು ಬದುಕೋದಾದ್ರೂ ಹೇಗೆ, ಗೆಳೆಯ?ಈ ದೂರದೂರಿನಲ್ಲಿ ನಿನ್ನ ನೆನಪುಗಳನ್ನು ನೆನೆಸಿಕೊಳ್ತಾ ಇದೀನಿ.ಹಾರೋ ಜೋಡಿ ಹಕ್ಕಿಗಳನ್ನು ಕ೦ಡಾಗ ಅಸೂಯೆಯಾಗುತ್ತೆ. ಹಾಗೇ ನೀನು ನನಗೇ೦ತ ಕೊಟ್ಟ ಮೊದಲ ಕಾಣಿಕೆ ನೆನಪಾಗುತ್ತೆ.ನೆನಪಿದ್ಯಾ ಹುಡುಗ,ನನ್ನ ಮೊದಲನೇ ಬರ್ತ್ ಡೇಗೆ ನೀನು ಕೊಟ್ಟ ಗಿಫ್ಟ್ ಜೋಕಾಲಿಯಲ್ಲಿ ತೂಗ್ತಾ ಇರೋ ಜೋಡಿ ಹಕ್ಕಿ.ನಾನದನ್ನ ನನ್ನ ಜೊತೆಗೆ ಈಗ್ಲೂ ತ೦ದಿದೀನಿ.ಇದೇ ಹೇಳುತ್ತೆ ನಾನು ನಿನ್ನನ್ನ ಮರೆತಿಲ್ಲ ಅ೦ತ.ಅದು ಬಿಡು,ಅ೦ಗೈಯಲ್ಲಿ ಆ ಗಿಫ್ಟನ್ನ ಹಿಡ್ದು ಜೋಕಾಲಿಯನ್ನ ತೂಗಿದಾಗಲೆಲ್ಲಾ ಹಕ್ಕಿಗಳು ನನ್ನನ್ನ ನೋಡಿ ನಗ್ತಾ ಇದ್ಯೇನೋ ಅನ್ಸುತ್ತೆ.ನಾವಿಬ್ಬರೂ ಹಾಗೇ ಜೀವವಿಲ್ದೇ ಇರೋ ಜೋಡಿ ಹಕ್ಕಿಗಳಾಗಿಬಿಟ್ಟಿದ್ರೆ ನಮ್ಮನ್ನ ಯಾರೂ ದೂರಾ ಮಾಡ್ತಿರ್ಲಿಲ್ಲವೇನೋ?ನಿನ್ನಿ೦ದ ದೂರಾದ ನೋವನ್ನು ನಿನಗಿ೦ತ ಜಾಸ್ತಿ ಅನಿಭವಿಸಿದ್ದು ನಾನು.ಯಾಕೇ೦ತ ಹೇಳ್ತೀನಿ ಕೇಳು

ನಾನು ಯಾವತ್ತೂ ಫ್ರೆ೦ಡ್ ಶಿಪ್ಪುಗಳ೦ಥವುದಕ್ಕೆ ಹೋಗಿರಲಿಲ್ಲ.ನನಗಿದ್ದುದ್ದು ಇಬ್ಬರೇ ಫ್ರೆ೦ಡ್ಸ್ ಇಬ್ರೂ ಹುಡುಗೀರೇ.ಹುಡುಗರ ಜೊತೆ ಮಾತೂ ಆಡ್ತಾ ಇರ್ಲಿಲ್ಲ.ನಾನಾಯ್ತು ನನ್ನ ಕ್ಲಾಸಾಯ್ತು.ಇಷ್ಟೇ ನನ್ನ ಪ್ರಪ೦ಚ.ಒ೦ದಿನ ನಿನ್ನ ಕವನವನ್ನ ನೋಟೀಸ್ ಬೋರ್ಡಿನಲ್ಲಿ ನೋಡಿದೆ.ಪ್ರೀತಿಯನ್ನ ಎಷ್ಟು ಸರಳವಾಗಿ ಬರೆದಿದ್ದಿ ಅದ್ರಲ್ಲಿ .ನಿಜಕ್ಕೂ ನಾನು ಮೆಚ್ಚಿದೆ.ನಿನ್ನ ಕನಸಿನ ಹುಡುಗಿ ಹೇಗಿರಬೇಕು ಅ೦ತ ಬರೆದಿದ್ಯಲ್ಲ.’ಹಣೆಗೊ೦ದು ಸಿ೦ಧೂರ’ ’ಮುಡಿಗೊ೦ದು ಮ೦ದಾರ’ ಅ೦ತ,ನಾನಿದ್ದುದು ಹಾಗೇ.ನನ್ನನ್ನೇ ನೋಡಿ ಬರೆದ್ಯೋನೋ ಅ೦ದ್ಕೊ೦ಡಿದ್ದೆ.ಆಮೇಲೆ ನಿನ್ನನ್ನ ನೋಡ್ಬೇಕು ಅನ್ನಿಸ್ತು.ಆದ್ರೂ ಭಯ ನಾಚಿಕೆ.ಒ೦ದಿನ ಕ್ಲಾಸಿನಲ್ಲಿ ನಿನ್ನ ಸೆಮಿನಾರನ್ನ ನೋಡಿದೆ.ನಿನ್ನ ಮಾತಿನ ಶೈಲಿ ಎಲ್ಲ ಇಷ್ಟ ಆಯ್ತು.ಮಾತಾಡಿಸ್ಬೇಕು ಅ೦ತ ಹತ್ತಿರ ಬ೦ದೆ ಆದ್ರೆ ನೀನು ಮುಗುಳ್ನಕ್ಕು ಹೋಗಿಬಿಟ್ಟಿದ್ದೆ.ಧೈರ್ಯ ಮಾಡಿ ನಾನೇ ಒ೦ದಿನ ನೋಟ್ಸ್ ಕೇಳೋ ನೆಪದಲ್ಲಿ ನಿನ್ನ ಮಾತನಾಡಿಸಿದೆ.ಯೆಸ್ ನೀನು ಹೆಣ್ಣು ಮಕ್ಕಳಿಗೆ ಕೊಡೋ ಗೌರವ ಅವರ ಜೊತೆ ನಡ್ಕೊಳ್ಳೋ ರೀತಿ ಎಲ್ಲಾ ನ೦ಗಿಷ್ಟ ಆಗಿಬಿಡ್ತು.ನಿನ್ನ ಮೃದು ಮನಸ್ಸು ಅದರೊಳಗಿನ ಭಾವನೆ,ನಿನ್ನ ಸ೦ಸ್ಕಾರ ಎಲ್ಲದಕ್ಕೂ ಹ೦ಡ್ರೆಡ್ ಔಟ್ ಆಫ್ ಹ೦ಡ್ರೆಡ್ ಕೊಟ್ಟುಬಿಟ್ಟಿದ್ದೆ.ಯಾರಿಗೆ ತಾನೆ ಇಷ್ಟ ಆಗಲ್ಲ ನಿನ್ನ೦ಥ ಹುಡುಗ .ಆದರೆ ನೀನು ನನಗೆ ಮಾತ್ರ ಬೇಕು ಅನ್ನೋ ಸ್ವಾರ್ಥ ನನ್ನಲ್ಲಿ ಬಲವಾಗಿ ಬೇರೂರುಬಿಡ್ತು.ನಿನ್ನೊ೦ದಿನ ಪರಿಚಯವನ್ನ ಸ್ನೇಹವಾಗಿ ಬದಲಾಯಿಸಿಕೊ೦ಡೆ.ಹುಡುಗೀರೊ೦ದಿಗೆ ಮಾತ್ರ ಹ೦ಚಿಕೋಬಹುದಾಗಿದ್ದ೦ಥ ವಿಷಯಗಳನ್ನ ನಿನ್ನೊ೦ದಿಗೆ ಹ೦ಚಿಕೋತಿದ್ದೆ ಅ೦ದ್ರೆ ನಿನ್ನನ್ನ ಎಷ್ಟು ನ೦ಬಿದ್ದೆ ಮತ್ತೆ ಪ್ರೀತಿಸಿದ್ದೆ ಅ೦ತ ಅರ್ಥ ಮಾಡ್ಕೋ.ನ೦ಗೊ೦ದು ಚೂಡಿದಾರ್ ತ೦ದಿದಾರೆ ಅ೦ದ್ರೆ ಮೊದಲು ಅದನ್ನ ನಿ೦ಗೆ ಇ೦ಥ ಕಲರ್ರು,ಇ೦ಥ ಪ್ಯಾಟ್ರನ್ನು ಅ೦ತ ಹೇಳ್ತಾ ಇದ್ದೆ.ನೀನು ’ಚೆನ್ನಾಗಿರುತ್ತೆ ನಿ೦ಗೆ ಒಪ್ಪುತ್ತೆ ಹಾಕ್ಕೋ’ ಅ೦ದ್ಮೇಲೇನೇ ನಾನು ಅದನ್ನ ಒಪ್ಪಿಕೋತಾ ಇದ್ದದ್ದು.ನೀನು ಯಾವತ್ತೂ ಯಾವ ವಸ್ತೂನೂ ಚೆನ್ನಾಗಿಲ್ಲ ಅ೦ತ ಹೇಳಿದೋನೇ ಅಲ್ಲ.ಯಾಕೇ೦ತ ಕೇಳಿದ್ರೆ ’ನಿಮ್ಮಪ್ಪ ಕಷ್ಟ ಪಟ್ಟು ಸ೦ಪಾದಿಸಿರ್ತಾರೆ ನೀನು ನನ್ನ ಕೇಳಿ ನಾನು ಅದನ್ನ ಚೆನ್ನಾಗಿಲ್ಲ ಅ೦ತಹೇಳಿ ಇನ್ಯಾವುದೋ ದುಬಾರೀ ಬೆಲೇದಕ್ಕೆ ಆರ್ಡರ್ ಕೊಟ್ರೆ ಪಾಪ ನಿಮ್ಮಪ್ಪ೦ಗೆ ಏನನ್ನಿಸುತ್ತೆ. ಯಾವ ಹುಡುಗ ಹೀಗೆ ಹೇಳ್ತಾನೆ ಹೇಳು.ಸಾಮಾನ್ಯವಾಗಿ ಎಲ್ಲ ಹುಡುಗರೂ ತಮ್ಮ ಪ್ರೇಯಸಿಯ ತ೦ದೆಯನ್ನ ವಿಲ್ಲನ್ ಥರಾನೇ ಅಲ್ವಾ ನೋಡೋದು. ಅದು ಬಿಡು,ನಿನ್ನ ಟೇಸ್ಟ್ ನನಗಿ೦ತ ಚೆನ್ನಾಗಿರ್ತಿತ್ತು.ಅಥವಾ ನಾನು ಹೇಗಿದ್ರೆ ಚೆನ್ನಾಗಿರ್ತೀನಿ ಅ೦ತನ್ನೋದು ನಿನಗೆ ತು೦ಬಾ ಚೆನ್ನಾಗಿ ಗೊತ್ತಿತ್ತು.ಪ್ರೀತಿ ಅ೦ದ್ರೆ ಮಾರು ದೂರ ಹೋಗ್ತಾ ಇದ್ದ ನನಗೆ ಅದು ಹೇಗೆ ನೀನು ಸಿಕ್ಕಿದ್ಯೋ ಗೊತ್ತಿಲ್ಲ.ಬರೀ ನಿನ್ನ ಕವನ,ನಿನ್ನ ಒಳ್ಳೆತನ ನೋಡಿ ಇಷ್ಟ ಪಟ್ನಾ? ನಿನಗಿ೦ತ ಚೆನ್ನಾಗಿರೋರು ತು೦ಬಾ ಜನ ಇದ್ರು ಯಾರ್ನೂ ನಾನು ಕಣ್ಣೆತ್ತಿ ನೋಡಿರ್ಲಿಲ್ಲ.ಅದು ಹೇಗೆ ನಿನ್ನನ್ನ ಪ್ರೀತಿಸ್ದೆ ಅ೦ತ ಗೊತ್ತಗ್ತಾ ಇಲ್ಲ.ನಮ್ಮನೇಲಿ ಇದಕ್ಕೆ ಒಪ್ಪಿಕೊಳ್ಳಲ್ಲ ಅ೦ತ ಗೊತ್ತಿದ್ದೂ ಪ್ರೀತಿಸ್ದೆ.ನಿನ್ನನ್ನ ಮೋಸ ಮಾಡೋ ಉದ್ದೇಶ ನನ್ನಲಿರಲಿಲ್ಲ.ಆದ್ರೆ ನಿನ್ನ ಪ್ರೀತಿ ನನಗೆ ಬೇಕಾಗಿತ್ತು.ಮತ್ತು ಅದು ನನಗೆ ಮಾತ್ರ ಬೇಕಾಗಿತ್ತು.ಯಾರು ಬ೦ದ್ರೂ ಎದುರಿಸ್ತೀನಿ ಅನ್ನೋ ಧೈರ್ಯ ಮೊದಮೊದಲು ನನ್ನಲ್ಲಿತ್ತು.ಅದನ್ನ ಪ್ರೀತಿ ಕೊಡುತ್ತ೦ತೆ.ಆಮೇಲಾಮೇಲೆ ಅದು ನಿಧಾನವಾಗಿ ಕರಗಿಹೋಯ್ತು.ಆದರೆ ಪ್ರೀತಿ ಕರಗಲಿಲ್ಲ.ನಿನ್ನ ಕಣ್ಣಿನಲ್ಲಿದ್ದ ನಿರ್ಮಲ ಪ್ರೀತೀನ ದೂರ ಮಾಡಿಕೊಳ್ಳೋವಷ್ಟು ಫೂಲ್ ನಾನಲ್ಲ.ನಾವಿಬ್ಬರೂ ಒ೦ದಾಗಲ್ಲ ಅ೦ತ ಗೊತ್ತಿದ್ದೂ ನಾನು ಮತ್ತೆ ಪ್ರೀತೀನ ಮು೦ದುವರೆಸಿದೆ.ತಪ್ಪು ಅದು ಗೊತ್ತಿದೆ. ಆದ್ರೆ ಏನು ಮಾಡಲಿ,ಬಿಟ್ಟು ಬದುಕೋವಷ್ಟು ಶಕ್ತಿ ನನ್ನಲ್ಲಿರಲಿಲ್ಲ.ನಾನು ಅವಕಾಶವಾದಿ ,ಮೋಸಗಾತಿ ಅ೦ತೆಲ್ಲ ನೀನು ನನ್ನನ್ನ ಬೈಯಬಹುದು.ಅನ್ನು ಪರವಾಗಿಲ್ಲ ನಿನಗೆ ಆ ಹಕ್ಕಿದೆ.

ನಾನು ನಿನಗೆ ಕಾರಣಗಳನ್ನ ಕೊಡ್ತಾ ಇಲ್ಲ.ನಿನ್ನ ಮೇಲೆ ನಾನಿಟ್ಟ ಪ್ರೀತಿಯನ್ನ ಮಾತ್ರ ಹೇಳ್ತಾ ಇದೀನಿ.ನೀನು ಒಬ್ಬ೦ಟಿಯಾಗಿ ಕಾಲ ಕಳೀತಿದೀಯ ಆದ್ರೆ ನಾನು ಎಲ್ಲರ ಜೊತೆಯಲ್ಲಿ ಒಬ್ಬ೦ಟಿಯಾಗಿದೀನಿ.ಇದರ ಕಷ್ಟ ನಿನಗರ್ಥ ಆಗುತ್ತೆ ಅನ್ಸುತ್ತೆ.ಎಲ್ಲರ ಮಧ್ಯೆ ನಾನು ಬಲವ೦ತವಾಗಿಯಾದರೂ ನೋವು ನಗಲೇ ಬೇಕು.ಒಬ್ಬಳೇ ಕೂತು ಅಳುವ ಹಾಗೂ ಇಲ್ಲ.ಒಮ್ಮೊಮ್ಮೆ ಗ೦ಟಲು ಕಟ್ಟಿ ಬೇರೆ ವಿಧಿಯಿಲ್ಲ ಅನ್ನಿಸಿದಾಗ ಮುಸುಕೆಳೆದುಕೊ೦ಡು ಶಬ್ದವಾಗದ೦ತೆ ಅತ್ತುಬಿಡ್ತೀನಿ.ನಿನಗೆ ನಾನು ಕೊಟ್ಟ ನೋವಿಗೆ, ಇದು, ನನಗೆ ನಾನೇ ಕೊಟ್ಟುಕೊಳ್ಳೋ ಶಿಕ್ಷೆ.ನಿನಗೆ ನಿನ್ನ ಒ೦ಟಿತನವನ್ನ ದೂರಾಗಿಸಿಕೊಳ್ಳೋದಕ್ಕೆ ಕವನ ಕಥೆಗಳಾದ್ರೂ ಇವೆ. ನನಗೆ ಏನೂ ಇಲ್ಲ.ಮನೆಯಲ್ಲಿ ಮದುವೆ ಪ್ರಯತ್ನಗಳು ನಡೀತಾ ಇವೆ..ಇನ್ನೊಬ್ಬರನ್ನ ನಿನ್ನ ಸ್ಥಾನದಲ್ಲಿ ಊಹಿಸಿಕೊಳ್ಳಲಾರದೆ, ನಿನ್ನನ್ನು ಸೇರಲಾರದೆ,ಇದೆಲ್ಲದರ ಮಧ್ಯೆ ನಿನ್ನ ಮೃದು ಭಾವುಕ ಮನಸ್ಸಿಗೆ ನಾನು ಕೊಟ್ಟ ನೋವು ನನ್ನನ್ನೇ ಚುಚ್ಚಿ ಹಿ೦ಡ್ತಾ ಇರುವಾಗ ಏನೂ ಮಾಡಲಾಗದೆ ಒಳಗೇ ಅನುಭವಿಸುತ್ತಿರುವ ನರಕಯಾತನೆಯನ್ನ ಯಾರ ಹತ್ತಿರ ಹೇಳಲಿ ? ಇದೆಲ್ಲವನ್ನೂ ,ನಿನ್ನನ್ನ ಕನ್ವಿನ್ಸ್ ಮಾಡಕ್ಕೆ ಹೇಳ್ತಾ ಇಲ್ಲ, ಪ್ರೀತಿಯಲ್ಲಿ ಕ್ಷಮೆ ಇರಬಾರದು ಅ೦ತಾರೆ.ನನ್ನದು ತಪ್ಪು ಅ೦ತ ನಿನಗನ್ನಿಸಿದರೆ ಕ್ಷಮಿಸು ಗೆಳೆಯ.

ನಿನ್ನ

ಸ್ಪೂತಿ ಚಿಲುಮೆ

Tuesday, November 3, 2009

ಮತ್ತದೇ ನೆನಪು

ತೆ೦ಗಿನ ಗರಿಯ


ಕಡ್ಡಿಯನ್ನು ಜೀಕಿ ಬಿಟ್ಟ೦ತೆ

ನಾನು ಸ್ವತ೦ತ್ರ’ನಾಗಿದ್ದೆ’

ಎತ್ತಲೋ ಓಟ

ಎ೦ಥದೋ ಆಟ

ಸುಮ್ಮನೆ ಅಳುತ್ತಿದ್ದೆ

ಅಪ್ಪನ ಮುತ್ತಿಗಾಗಿ

ಅಮ್ಮನ ತುತ್ತಿಗಾಗಿ



ಕು೦ಟಿ ಕು೦ಟಿ ಕಾಲು

ನೋಯುತ್ತಿದ್ದರೂ

ಮತೂ ಕು೦ಟುತ್ತಿದ್ದೆ

ಈಗ….



ತಲೆಯ ಮೇಲೊ೦ದು

ಬಟ್ಟೆ ಚೀಲ

ಒಳಗೆ ಸ್ಲೇಟು

ಚಿಕ್ಕ ಡಬ್ಬಿಯೊಳಗೆ

ಸ್ಲೇಟೊರೆಸಲು ನೀರು

ಮುರಿದ ಬಳಪಗಳು

ಮುಖದ ತು೦ಬಾ

ತು೦ಟ ನಗೆ

ಈಗ….



ನಿಜ ಬೆಳೆದಿದ್ದೇನೆ

ಬೆಳೆಯುತ್ತಲೇ ಇದ್ದೇನೆ

ಕಾಲ ಮಾಸಿದ೦ತೆ

ಮುಗ್ಧತೆಯೂ ಮಾಸಿದೆ

ಯಾರದೋ ಮಾತಿಗೆ

ಬೇಸರ

ಇನ್ಯಾತಕೋ

Tags:







Tags: