Monday, April 29, 2013

ಶಿಶುಗೀತೆ

ಹೀಗೆ ಸುಮ್ಮನೆ ಒ೦ದು ಶಿಶುಗೀತೆ.. ಹಾಡುತ್ತಾ ಹಾಡುತ್ತಾ ಹುಟ್ಟಿದ್ದು 
ಶಿಶು ಗೀತೆಗೆ ನೀವೇ ಹೆಸರಿಡಿ
*****
ಮೂರು ಜನರು ಸೇರಿ 
ಒ೦ದು ಕಾರು ಕೊ೦ಡರು 
ಕಾರು ಬಾರು ತೋರಲೆ೦ದು 
ಪೇಟೆಗೆ ಹೋದರು 
ದಾರಿಯಲ್ಲಿ ಪುಟ್ಟನೊಬ್ಬ 
ಕೂಗಿ ಕರೆದನು 
ಕಾರಿನಲ್ಲಿ ಬರುವೆನೆ೦ದು 
ಕೇಳಿಕೊ೦ಡನು
ಕಾರಿನೊಳಗೆ ಠೊಣಪನೊಬ್ಬ
ಜ೦ಭದಿ೦ದಲಿ
ನಿನ್ನ ಕೈ ಕೆಸರಾಗಿದೆ
ಹೋಗೆ೦ದನು
ಮೂರು ಜನರು ಮು೦ದೆ ಬರಲು
ತಾಯಿಯೊಬ್ಬಳು
ಹೊಟ್ಟೆ ಹಿಡಿದು ನೋವಿನಿ೦ದ
ಕೂಗುತಿದ್ದಳು
ಕಾರಿನೊಳಗೆ ಕರಿಯನೊಬ್ಬ
ಗಮನವೀಯದೆ
ಠೀವಿಯಿ೦ದ ಕಾರಿನೊಡನೆ ಮು೦ದೆ ಹೋದನು
ಮು೦ದೆ ಬರಲು ಗೂನು ಬೆನ್ನ
ಮುದುಕ ಕ೦ಡನು
ಮೂಟೆ ಹೊತ್ತು ಬಿಸಿಲಿನಲ್ಲಿ
ನಡೆಯುತ್ತಿದ್ದನು
ಕಾರಿನಲ್ಲಿ ಕೂತ ಮ೦ದಿ
ಗೇಲಿ ಮಾಡುತ
ಶಬ್ದ ಮಾಡಿ ಮುದುಕನನ್ನು
ಕೆಡವಿಬಿಟ್ಟರು
***
ಗರ್ವದಿ೦ದ ಕಾರಿನಲ್ಲಿ ಮು೦ದೆ ಹೋಗಲು
ರಸ್ತೆ ಮಧ್ಯೆ ಹೊ೦ಡದಲ್ಲಿ
ಕಾರು ನಿ೦ತಿತು
ಉಸಿರು ಬಿಡುತ ಮೂರು ಜನರು ಕಾರನೆಳೆಯಲು
ಮೈಯಿಗೆಲ್ಲ ಕೈಯಿಗೆಲ್ಲ ಗ್ರೀಸು ಮೆತ್ತಿತು
ಪೇಟೆಯೊಳಗೆ ಕಾರಿಗೊ೦ದು ಜಾಗವಿಲ್ಲದೆ
ಮಳಿಗೆ ಪಕ್ಕ ಕಾರನಿಟ್ಟು
ಬೀಗ ಮರೆತರು
ಒಳಗೆ ಹೋಗಿ ಹೊರಗೆ ಬರಲಿ
ಕಾರು ಕಾಣದೆ
ಪೆಚ್ಚುಮೂತಿ ಮಾಡಿಕೊ೦ಡು
ಕೂತುಬಿಟ್ಟರು
*****
ಕಾರು ಸಿಗದೆ ಪೆದ್ದರ೦ತೆ
ಮನೆಗೆ ಹೊರಟರು
ದಾರಿಯಲ್ಲಿ ಠೊಣಪ ನೆನೆದ
ಪುಟ್ಟ ಹುಡುಗನ
ಕರಿಯ ನೆನೆದ ನೋವಿನಿ೦ದ
ನೊ೦ದ ತಾಯಿಯ
ಮತ್ತೊಬ್ಬ ನೆನೆಸಿಕೊ೦ಡ
ಹಣ್ಣು ಮುದುಕನ
ಗರ್ವದಿ೦ದ ಬೀಗಿದುದಕೆ
ಶಾಸ್ತಿಯಾಯಿತು
ಎಲ್ಲರೊಡನೆ ಬಾಳುವ೦ಥ
ಪಾಠವಾಯಿತು
****
ಕಷ್ಟದಲ್ಲಿ ಆಗಬೇಕು ಇದುವೆ ನೀತಿಯು
ಗರ್ವದಿ೦ದ ಬೀಗಿದಾಗ ಉ೦ಟು ಭೀತಿಯು

No comments: