Friday, October 24, 2014

ಜಾತಿ ಸಾಹಿತ್ಯ


**********
ಬರೆದದ್ದೇ ಸಾಲುಗಳು,
ಕೂಗಿದ್ದೇ ಕವನ,
ಪದಗಳಿಗೆ ಕೊಚ್ಚೆ ಮೆತ್ತಿ,
ಪುಸ್ತಕದೊಳಗೆ ಬಿಟ್ಟು,
ರಾಡೆಯೆಬ್ಬಿಸಿದವ ವಿಚಾರ ವಾದಿ.
ಶೋಷಿತರ (?)ಪರವೆನ್ನುವ
ಅಲ್ಲಿಂದ ಮುಂದೆಹೋಗಲೊಲ್ಲದ
ವ್ಯಭಿಚಾರಿ.
******
ಪದಗಳಿಗೆ ಅರ್ಥವಿಲ್ಲದೆ
ಕ್ರೀ ಯನ್ನು ಅಲಂಕರಿಸಿ
ಬಿಟ್ಟರೆ ಇಳಾ ಮಹತ್ತಿನ ಕಾವ್ಯ.
ಅದಕ್ಕೊಬ್ಬ ಮಂಥಕ
ಕಡಗೋಲ ಹಿಡಿದು ಕಡೆದರೂ
ಬೆಣ್ಣೆ ಸೊನ್ನೆ
ಮರಳ ಮೊಸರದು.
******
ಕುದುರೆಗೆ ಮೂರೇ ಕಾಲು,
ಮತ್ತು ಹುಸಿ ಮಮಕಾರದ ಬೆಪ್ಪು,
ತಮ್ಮ ತುರಿಕೆಗೆ ಬೆರೆಕೆ ಸೊಪ್ಪು,
ಹಚ್ಚಿದ್ದೇ ಬಂತು...
ಕೆರೆತವಿದ್ದವರು ಹಚ್ಚಿಕೊಂಡು
ಕುಣಿದಾಡಿ ಬಿದ್ದರು
ವಂದಿಮಾಗಧರ ಮಧ್ಯೆ
ಮೆರೆದಾಡಿ ಕುಣಿವರು
ಬೈದು ಬರೆದದ್ದಕ್ಕೆ ಬಹುಮಾನ
ಅದಕ್ಕೆ ಲಡಾಯಿ ಅವನು ಸಿಪಾಯಿ
ಹಗಲೂ ರಾತ್ರಿಗಳೂ ಊಳಿಟ್ಟು
ಗೀಚಿದ್ದೇ ಗೀಚಿದ್ದು
ನಿಜವೊಪ್ಪದ ಹುಸಿಯಪ್ಪುವ
ಬುದ್ದಿಜೀವಿಗಳಿಗೆ ನಮೋ ನಮೋ
******
ಅದೇಕೋ ಹಾರಾಡುತ್ತಾರೆ,
ಶಿಲುಬೆ ತೂಗಿಬಿಡುತ್ತಾರೆ,
ಮೊಳೆಗೆ ನೇತಾಡುತ್ತಾರೆ,
ಕೊಚ್ಚೆಯ ಹಂದಿಗಳಂತೆ ಗುರುಟುತ್ತಾರೆ.
ಅವರಿಗಾಗಿ ಕಾದಿವೆ ಪ್ರಶಸ್ತಿಗಳ ಸಾಲು,
ಸಿಕ್ಕದ್ದು ಬರೆದು ಅದೇ ಹಿತವೆಂದು,
ಸಹಿತವೆಂದು, ಸಾಹಿತ್ಯವೆಂದ ಧೀರತನಕ್ಕೆ ಮೆಚ್ಚಲೇಬೇಕು
**************
ತುದಿಕೊಂಬೆಯ ಮೇಲೆ ಕೂತ ಕಾಗೆ
ಸ್ವಧಾ ಎಂದರೂ ಬರದು
ಪ್ರಾಚೀನವೀತಿಗೂ ಸಿಗದು
ಅದು ಪ್ರಗತಿಪರ ಕಾಗೆಯಿರಬೇಕು
ಮೋಕ್ಷ ಕಾಣಿಸೋಣವೆಂದರೂ
ಬೇಕಿಲ್ಲದೆ ಜಾತಿರೆಕ್ಕೆ ಕಟ್ಟಿಕೊಂಡು
ಹಾರುತ್ತದೆ.
ಕಾ ಕಾ ಕೂಗುತ್ತದೆ
ಯಾವುದಾದರೂ ಅಗುಳು ಸಿಕ್ಕರೂ
ಕೂಗಿ ಕರೆಯುತ್ತದೆ ಬಳಗವನ್ನು
ಅಲ್ಲಿಗೆ ದಂಡಿನ ದಾಳಿ ಶುರು.
ನಿಂದಿಸಿದ, ಕುಂದಿಸಿದ,
ಕಾಲ ಕಾಲಕ್ಕೆ ಬದಲಾದ ಮನುವನ್ನೇ
ಮತ್ತೆ ಗೂಟಕ್ಕೆ ನೇತು ಹಾಕಿ
ಕೂಗುತ್ತದೆ ಕಾಗೆ. ಕಾ ಕಾ ಕಾ
ಪೀಠ ಕಂಡರೆ ಸಾಕು ಕಾ ಕಾ ಕಾ...
ದೇಗುಲ ಕಂಡರೆ ಸಾಕು ಕಾ ಕಾ ಕಾ
ಹುಳಿ ದ್ರಾಕ್ಷಿ ಕಂಡರೆ ಸಾಕು ಕಾ ಕಾ ಕಾ...
ಇಷ್ಟಕ್ಕೆ ಮಾತ್ರ ತನ್ನ ಕೂಗು
ಮಿಕ್ಕಂತೆ ಮೊಂಡು ಮೂಗು
*************
ಸತ್ಯ ದಮ್ಮ ವೆಂದವನಿಗೆ
ಜಾತಿಯಂಟಿಸಿ, ದೈವವಾಗಿಸಿ
ಅವನ ಹೆಸರನ್ನೇ ಬಳಸಿ
ಉಂಡು, ಅವನಿಗೆ ಮಚ್ಚೆಯಿಟ್ಟವರು
ಆದರೂ ನಗುತ್ತಾನೆ ಮೂರ್ತಿಯೊಳಗೆ
ಅವನು...

1 comment:

Badarinath Palavalli said...

ಸಾಹಿತ್ಯಕ್ಕೆ ಈ ಜಾತಿ - ಧರ್ಮಗಳ ಹಣೆಪಟ್ಟಿ ಹಚ್ಚಿ ಭ್ರಷ್ಟವಾಗಿಸಿದ ಆ ಆದ್ಯಂತ ದ್ರೋಹಿಗಳಿಗೊಂದು ಧಿಕ್ಕಾರ!