Monday, August 9, 2010

ಬದುಕಲಿಕ್ಕೆ ದುಡ್ಡು ಬೇಕು ಆದರೆ ದುಡ್ಡೇ ಬದುಕಾಗಬಾರದು (ಪ್ರೇಮ ಪತ್ರ)

ಗೆಳೆಯಾ


ನಿನ್ನನ್ನ ಮರೆಯಬೇಕು ಅ೦ತ ಅ೦ದುಕೊ೦ಡು ತು೦ಬಾ ದಿನಗಳಾದವು. ಇತ್ತೀಚೆಗೆ ಆಲ್ಮೋಸ್ಟ್ ಮರೆತುಬಿಟ್ಟಿದ್ದೆ. ಆದರೆ ಹಾಳಾದ ಕೆಲವು ನೆನಪುಗಳು ನನಗೆ ನಿನ್ನ ನೆನಪನ್ನ ಮತ್ತೆ ಮತ್ತೆ ಮಾಡಿಕೊಡುತ್ತೆ. ಜೊತೆಯಲ್ಲಿ ಓಡಾಡೋ ಕೆಲವು ಜೋಡಿಗಳನ್ನ ನೋಡಿದಾಗ ನಿನ್ನ ನೆನಪಾಗುತ್ತೆ, ಸುಮ್ಸುಮ್ನೆ ನಗೋ ಹುಡುಗೀರ್ನ ನೋಡಿದಾಗ ನನ್ನ ಪ್ರೀತಿಯ ಮೊದಲ ದಿನಗಳು ನೆನಪಾಗಿ ನಿನ್ನ ನೆನಪಾಗುತ್ತೆ, ಯಾರೋ ಪ್ರೀತಿಯ ಬಗ್ಗೆ ಹೇಳುವ ಮಾತು ಕೇಳಿದಾಗ ನಿನ್ನ ನೆನಪಾಗುತ್ತೆ ಮತ್ತೆ ಅಳು ಬರುತ್ತೆ. ನಿನಗೆ ನಿನ್ನದೇ ಆದ ದಾರಿ ಇತ್ತು. ಅದರೆಡೆಗೆ ಹೋಗೋ ಛಲ ಇತ್ತು. ಜೊತೆಗೆ ಎಲ್ಲರನ್ನೂ ಪ್ರೀತಿಸೋ ಅದ್ಭುತವಾದ ಗುಣವಿತ್ತು. ಇವೆಲ್ಲವನ್ನೂ ನೋಡಿಯೇ ನಾನು ನಿನ್ನನ್ನ ಪ್ರೀತಿಸಿದ್ದು. ಆದರೆ ನಿನಗೆ ನಿನ್ನ ಕೆಲಸಕ್ಕಿ೦ತ ದೊಡ್ಡದು ಯಾವ್ದೂ ಇಲ್ಲ ಅನ್ನೋದು ಮನಸಲ್ಲಿ ಕೂತುಬಿಟ್ಟಿತ್ತು. ದುಡ್ಡಿನ ಹಿ೦ದೆ ನಿಧಾನಕ್ಕೆ ಹೆಜ್ಜೆ ಹಾಕ್ತಾ ಇದ್ದೆ. ಆವಾಗ ಪ್ರೀತೀನೂ ನಿಧಾನವಾಗಿ ಹಿ೦ದೆ ಬೀಳ್ತಾ ಇತ್ತು. ಇವೆಲ್ಲವನ್ನೂ ನಾನು ಸಹಿಸಿಕೊ೦ಡೇ ಇದ್ದೆ. ಯಾಕೇ೦ದ್ರೆ ಜೀವನದಲ್ಲಿ ಪ್ರೀತಿ ಎಷ್ಟು ಮುಖ್ಯನೋ ಕೆಲಸ ಮತ್ತು ದುಡ್ಡು ಅಷ್ಟೇ ಮುಖ್ಯ. ಆದರೆ ಜೀವನದ ಗುರಿ ದುಡ್ಡು ಆಗಿಬಿಡಬಾರ್ದು. ಸ೦ಪಾದನೆ ಮಾಡೋ ವಯಸ್ಸಲ್ಲಿ ಚೆನ್ನಾಗಿ ಸ೦ಪಾದಿಸಿ ಇಟ್ಕೋಬೇಕು, ನಿಜ ಆದರೆ ಅದರ ಹಿ೦ದೆ ಬಿದ್ದು, ಬೇರೆ ವಿಷಯಗಳನ್ನ ಮರೆತುಬಿಡಬೇಕು ಅನ್ನೋ ನಿನ್ನ ಮನಸ್ಥಿತಿ ನನಗೆ ಇಷ್ಟವಾಗಲಿಲ್ಲ. ಹಾಗ೦ತ ಅದನ್ನ ನಾನು ನೇರವಾಗಿ ನಿನಗೆ ಹೇಳಲಿಲ್ಲ.

ನೀನು ಪ್ರತಿಬಾರಿ ನನ್ನ ಫೋನ್ ಕಾಲ್ ಗಳನ್ನ ನಿರ್ದಾಕ್ಷಿಣ್ಯವಾಗಿ ಕತ್ತರಿಸಿ ಹಾಕ್ತಾ ಇದ್ದಾಗಲೆಲ್ಲಾ ’ಕೆಲಸದ ಬ್ಯುಸಿ ಇರ್ಬೇಕು’ ಅ೦ತ ನನಗೆ ನಾನೇ ಸಮಾಧಾನ ಹೇಳಿಕೊಳ್ತಾ ಇದ್ದೆ. ಆದರೆ ನನಗೇನು ಗೊತ್ತಿತ್ತು ನೀನು ನನ್ನನ್ನ ಒ೦ದು ’ತೊ೦ದರೆ’ ಅ೦ತ ಭಾವಿಸಿದ್ದೀಯ ಅ೦ತ. ಎ೦ದೋ ಒಮ್ಮೆ ಸಿಕ್ಕಾಗ ಇದರ ಬಗ್ಗೆ ಕೇಳಿದ್ದೆ. ’ಸ೦ಪಾದನೆ ಮಾಡ್ತಾ ಇರೋದೆ ನಿನಗೋಸ್ಕರ ನಾವಿಬ್ರೂ ಸುಖವಾಗಿರ್ಬೇಕು ಅ೦ದ್ರೆ ಒ೦ದಷ್ಟು ದುಡ್ಡನ್ನ ಕೂಡಿಹಾಕ್ಕೋಬೇಕಲ್ವಾ? ಅದಕ್ಕಾಗಿ ಕಷ್ಟ ಪಡ್ತಾ ಇದ್ದೀನಿ. ನಾಟ್ ದಟ್ ಐ ಆಮ್ ಅವಾಯ್ಡಿ೦ಗ್ ಯು’ ಅನ್ನೋ ಸಮಾಧಾನಕರ ಮಾತುಗಳನ್ನ ಹೇಳಿದ್ದೆ. ನಾನೂ ಸಮಾಧಾನಗೊ೦ಡಿದ್ದೆ. ಆದರೆ ಬರುಬರುತ್ತಾ ಅದು ಭೇಟಿಯೂ ಇಲ್ಲ ಫೋನೂ ಇಲ್ಲ ಅನ್ನುವ ಮಟ್ಟಕ್ಕೆ ಬ೦ದಾಗ ನಾನು ಹತಾಶಳಾಗಿಬಿಟ್ಟೆ. ಮೊದಲಿದ್ದ ಪ್ರೀತಿಯ ಮಾಧುರ್ಯ ನನ್ನ ಕಣ್ಣಿಗೆ ಕೃತಕತೆಯ ಮುಖವಾಡ ಹಾಕಿಕೊ೦ಡು ಬ೦ದು ನಿಲ್ಲುತ್ತಿತ್ತು. ನಾನು ನಿನ್ನನ್ನು ಮೊದಲು ’ನನಗೆ ಪ್ರಾಮುಖ್ಯತೆ ಕೊಡು’ ಎ೦ದೇನೂ ಕೇಳಿರಲಿಲ್ಲ. ನನಗೂ ಸ್ವಲ್ಪ ಸಮ್ಯ ಕೊಡು ಇದಿಷ್ಟೇ ನನ್ನ ಬೇಡಿಕೆಯಾಗಿತ್ತು. ಅದು ನಿನ್ನ ಕಣ್ಣಿಗೆ ಹಿ೦ಸೆ ತೊ೦ದರೆಯಾಗಿ ಕ೦ಡರೆ, ನಾನು ನಿನ್ನ೦ಥವನ್ನ ಪ್ರೀತಿಸಿದ್ದು ತಪ್ಪು ಅನ್ನಿಸ್ತಾ ಇದೆ. ಹರಿ ನೀನೊಬ್ಬ ಓವರ್ ಆ೦ಬೀಶಿಯಸ್ ಫೆಲೋ ನಿನಗೆ, ನಿನ್ನ ದುಡ್ಡು ನಿನ್ನ ಕೆಲಸ ಇಷ್ಟೇ ಸಾಕು ಬೇರೇನೂ ಬೇಡ. ಹಾಗಿದ್ರೆ ನನ್ನನ್ನ ಪ್ರೀತಿಸಬಾರದಿತ್ತು ಅಲ್ವಾ? ಹೇಳ್ಕೊಳ್ಳೋಕೆ ಒಬ್ಬ ಪ್ರೇಯಸಿ ಅ೦ತ ಇರ್ಬೇಕು ಅನ್ನಿಸ್ತೇನೋ ಅದಕ್ಕೆ ನಾನೊಬ್ಳು ಕುರಿ ಸಿಕ್ಕಿದೆ ನಿನಗೆ.

ನೀನು ಮಾಡಿದ್ದು ನಿನ್ನ ಪ್ರಕಾರ ಸರಿ ಇರಬಹುದು ಆದರೆ ಇತರರ ಮನಸ್ಸನ್ನ ಅರಿಯದವ ತನ್ನನ್ನೇನು ತಿಳಿದುಕೊಳ್ಳಬಲ್ಲ. ನಿನ್ನಲ್ಲಿ ಯಾವ ದುಶ್ಚಟಗಳಿಲ್ಲ, ಕೆಟ್ಟ ಹುಡುಗರ ಸಹವಾಸವಿಲ್ಲ, ನೀನು ನನ್ನನ್ನು ಪೂರ್ಣವಾಗಿ ಪ್ರೀತಿಸಿದ್ದೂ ನಿಜ, ಹಣದ ವ್ಯಾಮೋಹ ಎ೦ದಿಗೂ ಒಳ್ಳೇದಲ್ಲ. ಇಡೀ ವಾರ ಕೆಲ್ಸ ಕೆಲ್ಸ ಅ೦ತ ಕುಣೀತೀಯ ಸರಿ ವಾರದಲ್ಲಿ ಒ೦ದೇ ಒ೦ದು ದಿನ ನನ್ನ ಜೊತೆಗೆ ಒ೦ದೆರಡು ಘ೦ಟೆ ಮಾತಾಡಿದ್ದರೆ ಎಷ್ಟೋ ಸಮಾಧಾನವಾಗ್ತಾ ಇತ್ತು, ನಿನಗೂ ನನಗೂ. ಆದರೆ ವಾರಾ೦ತ್ಯದಲ್ಲಿ ಸಿಗ್ತೀನಿ ಅ೦ತ ಬರ್ತಿದೋನು ಕಾಲಿಗೆ ಚಕ್ರ ಕಟ್ಟಿಕೊ೦ಡೇ ಬರ್ತಿದ್ದೆ. ಸರಿಯಾಗಿ ಅರ್ಧ ಘ೦ಟೆ ಅಷ್ಟೇ ಮಾತನಾಡುತ್ತಿದ್ದುದು. ನಾನಿನ್ನೂ ವಾರದ ನೂರಾರು ವಿಷಯಗಳನ್ನ ಹೇಳ್ಕೋಬೇಕು ಅ೦ತ ಅ೦ದುಕೊಳ್ಳೋವಷ್ಟರಲ್ಲಿ ನೀನು ’ಹೋಗೋಣ್ವಾ ಪುಟ್ಟ?’ ಅ೦ತ ನಿ೦ತುಬಿಡ್ತಾ ಇದ್ದೆ. ನಿ೦ಜೊತೆ ಮಾತಾಡ್ತಾನೇ ಇರ್ಬೇಕು ಅನ್ನೋದಷ್ಟೆ ನನ್ನ ಬೇಡಿಕೆಯಾಗಿತ್ತು. ಅದನ್ನೂ ನೀನು ಪೂರೈಸಲಾರದೇ ಹೋದೆ. ಅದರ ಬಗ್ಗೆ ಕೇಳಿದರೆ ’ಏನಿರುತ್ತೆ ಮಾತಾಡಕ್ಕೆ ಮದುವೆ ಆದ ಮೇಲೆ ಮಾತಾಡೋದು ಇದ್ದದ್ದೇ’ ಅ೦ತ ಹಾರಿಸಿಬಿಡ್ತಿದ್ದೆ. ಮದುವೆ ವಿಚಾರ ಕೇಳಿ ನಾನು ನಾಚಿ ಸುಮ್ಮನಾಗಿಬಿಡ್ತಿದ್ದೆ. ಆದರೆ ಮದುವೆ ಆದಮೇಲೂ ನೀನು ಬದಲಾಗದೇ ಹೋದರೆ?. ನಿನ್ನವಳಿಗೋಸ್ಕರ ಒ೦ದೆರಡು ಘ೦ಟೆ ಮೀಸಲಿಡವನದೆ೦ಥಾ ಪ್ರೇಮಿ? ಯಾ೦ತ್ರಿಕವಾಗಿ ಬದುಕೋದು ಬದುಕಲ್ಲ ಹರಿ. ನಿನ್ನ ಪಾಡಿಗೆ ನೀನು ಕೆಲಸದ ಹಿ೦ದೆ ನನ್ನ ಪಾಡಿಗೆ ನಾನು ಮನೆಯಲ್ಲಿ. ಮಾತಿಲ್ಲದೆ ಭಾವನೆಗಳ ಹ೦ಚಿಕೊಳ್ಳುವಿಕೆಯಿಲ್ಲದೆ ಸ೦ಸಾರವನ್ನು ಯಾ೦ತ್ರಿಕವಾಗಿ ಮಾಡಿದರೆ ಏನು ಪ್ರಯೋಜನ. ಜನರ ಕಣ್ಣಿಗೆ ಹೊರಗಿನ ಆಡ೦ಬರ ಕಾಣಬಹುದು ಆದರೆ ಒಳಗಿನ ವೇದನೆ ನಮಗೆ ಮಾತ್ರ ಗೊತ್ತಿರುತ್ತೆ. ಇದನ್ನೆಲ್ಲಾ ಹೇಳಿದ್ದಕ್ಕೆ ನಿನಗೆ ಸಿಟ್ಟು.

’ಇದನ್ನೆಲ್ಲಾ ಆಮೇಲೆ ಯೋಚನೆ ಮಾಡಬಹುದು ಆದರೆ ದುಡ್ಡನ್ನ ಆಮೇಲೆ ಸ೦ಪಾದನೆ ಮಾಡಕ್ಕಾಗಲ್ಲ. ಮದುವೆ ಆದಮೇಲೆ ಅದಕ್ಕೆಲ್ಲಾ ಸಮಯ ಇಡ್ತೀನಿ ಆಯ್ತಾ?’ ಅ೦ದಿದ್ದೆ.

’ಅ೦ದರೆ ನನ್ನ ಜೊತೆ ಕಳೆಯೋದಕ್ಕೂ ಶೆಡ್ಯೂಲ್ ಹಾಕಿಕೊಳ್ತೀಯ ಅ೦ತಾಯ್ತು. ಆ ಸ೦ಸಾರ ಯಾರಿಗೆ ಬೇಕು? ಇದ್ರಿ೦ದ ಇಬ್ರಿಗೂ ಸುಖ ಸಿಗಲ್ಲ, ನಿನಗೆ ಹಣದ ಹುಚ್ಚು ಹಿಡಿದುಬಿಟ್ಟಿದೆ’ ನನ್ನ ಮಾತು ತುಟಿ ಮೀರಿ ಬ೦ದಿತ್ತು ಮತ್ತು ನಿನ್ನ ಕೈ ನನ್ನ ಕೆನ್ನೆಗೆ ಘಟ್ಟಿಸಿತ್ತು.

ಇದೆಲ್ಲಾ ಕಳೆದು ಸುಮಾರು ತಿ೦ಗಳಾಯ್ತು ನಾನು ನಿನ್ನನ್ನ ಮರೆಯಲೇ ಬೇಕು ಅ೦ತ ತೀರ್ಮಾನಿಸಿದ್ದೆ ಆದರೆ ನಿನ್ನ ಜೊತೆಗಿನ ನೆನಪುಗಳು ಕಾಡ್ತಿರೋವಾಗ ಮರೆಯಲಿ ಹೇಗೆ. ಆದರೂ ನಿನ್ನನ್ನು ಮರೆತುಬಿಡ್ತೀನಿ. ಮತ್ತೆ ಹೇಳ್ತೀನಿ ಅ೦ತ ಬೇಜಾರು ಮಾಡ್ಕೋಬೇಡ ದುಡ್ಡೊ೦ದೇ ಜೀವನ ಅಲ್ಲ ಬದುಕಲಿಕ್ಕೆ ದುಡ್ಡು ಬೇಕು ಆದರೆ ದುಡ್ಡೇ ಬದುಕಾಗಬಾರದು. ಯೋಚನೆ ಮಾಡು ನೀನು ಬದಲಾದರೆ ನನಗೆ ಸ೦ತೋಷ. ನಾನಿನ್ನೂ ನಿನ್ನನ್ನು ಮರೆತಿಲ್ಲ ಮತ್ತು ಪ್ರೀತಿಸುವುದನ್ನೂ ಮರೆತಿಲ್ಲ.

ನಿನ್ನವಳು ಪ್ರಜ್ಞಾ

3 comments:

AntharangadaMaathugalu said...

ನಿನ್ನನ್ನು ಪ್ರೀತಿಸುವುದನ್ನೂ ಮರೆತಿಲ್ಲ ಎನ್ನುವ ಪ್ರಜ್ಞಾ ಇನ್ನೂ ದಾರಿ ಕಾಯುತ್ತಿದ್ದಾಳನ್ನಿಸುತ್ತೆ. ಪ್ರಜ್ಞಾಳ ಮಾತುಗಳು ಖಂಡಿತಾ ಸತ್ಯ... ಬದುಕಲಿಕ್ಕೆ ಮಾತ್ರ ದುಡ್ಡು ಬೇಕು ಎಂಬ ವಿಚಾರ ನಮ್ಮ ಮನದಿಂದ ಎಂದಿಗೂ ಮಾಸದಿದ್ದರೆ, ಬಾಳು ಸಂತೋಷವಾಗಿರತ್ತೆ. ದುಡ್ಡೇ ಬದುಕಾಗಿ ಬಿಟ್ಟರೆ... ಅಲ್ಲಿ ಬಾಳು ನಲುಗಿ ಹೋಗತ್ತೆ..... ಭಾವನೆಗಳು ಚೆನ್ನಾಗಿ ಹೇಳಲ್ಪಟ್ಟಿವೆ ಹರೀ........

ಶ್ಯಾಮಲ

ಮನಮುಕ್ತಾ said...

ನಿಜ.. ಬದುಕಲಿಕ್ಕೆ ದುಡ್ಡು ಬೇಕು..ಆದರೆ ದುಡ್ಡೆ ಬದುಕಾಗಬಾರದು.ಮನದ ಭಾವನೆಗಳು ತು೦ಬಾ ಚೆನ್ನಾಗಿ ಹೇಳಲ್ಪಟ್ಟಿದೆ.

Santhosh Acharya said...

ಈ ಹುಡುಗಿಯರೇ ಹೀಗೆ
ಇಡಿ ದಿನ ಹತ್ತಿರವಿದ್ದರೆ ಮಾಡಲೇನೂ ಕೆಲಸವಿಲ್ಲವೇ ಅಂತಾರೆ
ಬರದೆಯೇ ಇದ್ದರೆ ಒಮ್ಮೆಯಾದರೂ ಸಿಗಬಾರದೇ ಅಂತಾರೆ