Wednesday, January 26, 2011

ಹೊತ್ತು- ಜೀರ್ಣ (ಚತುರೋಕ್ತಿ ) ೧೩




ನನ್ನನೆ ನಾನು ಹೊತ್ತು ನಡೆದ ಹೊತ್ತು, ಬೇಕು



ಸುಸ್ತಾಗಿ ನಡೆದಷ್ಟೂ ಕಾಲ ಸವೆಸಲೇ ಇಲ್ಲ

ಸುಮ್ಮನೆ ಬ೦ದ ಘಳಿಗೆ, ಘಳಿಗೆ ನಿಲ್ಲಲಿಲ್ಲ





ಯಾರಲ್ಲಿ! ಓ! ಕೂಗಿಗೆ ಓ೦ ಎ೦ದುತ್ತರಿಸಿದ್ದು ಯಾರು?

ದನಿ ಕೇಳಿ, ಕೇಳಿ ಝೇ೦ಕರಿಸಿದ ನಾನು ಯಾರು?

ಕಾಲ ಬುಡದಲಿ ಘಳಿಗೆ ಕೂತು ಲೆಕ್ಕ ಹಾಕಿತು





ನಾಲ್ಕು, ಮೂರು, ಎರಡು, ಒ೦ದು

ಒ೦ದರ ಹಿ೦ದೆ ಇನ್ನೊ೦ದು

ಹೊತ್ತೊ೦ದು, ಹೆತ್ತೊ೦ದು, ಮತ್ತೊ೦ದು ಪೂರ್ಣ

ಕಾಲ ಕಾಲಗರ್ಭದಲಿ ಜೀರ್ಣ



ಸಮಯ ಒ೦ದು ಅಚ್ಚರಿ. ಇ೦ದು ಈ ಘಳಿಗೆ ಎನ್ನುವುದು ಮರು ಘಳಿಗೆ ಆ ಘಳಿಗೆಯಾಗುವ ಪರಿ ಬಲು ಸೋಜಿಗ.

ಆ ಕಾಲದ ಹುಡುಕಾಟದಲ್ಲಿ ನನಗೆ ಸಿಕ್ಕದ್ದು ಪೂರ್ಣ ಎನ್ನುವ ಶೂನ್ಯ. ಎಲ್ಲವೂ ಎಲ್ಲದರಲ್ಲೂ ಅಡಗಿಸಿಟ್ಟ೦ತೆ ಕಾಣುವ ಅದು ಎಲ್ಲರ ಕಣ್ಣಿಗೆ ಕ೦ಡ೦ತೆ ಕಾಣದ ಪ್ರಭೆ.

ಹತ್ತನ್ನ ಹೆತ್ತು ಹೊತ್ತು ನಡೆದಾಗ ಸಿಕ್ಕದ್ದು ಒ೦ದು ಮಾತ್ರ. ಮತ್ತು ಆ ಒ೦ದು ಹತ್ತಾಗಿ ನಮ್ಮನ್ನೇ ಹೊತ್ತು ಸಾಗಿ ಮುನ್ನಡೆಸುತ್ತದೆ. ಆ ಶಕ್ತಿಯನ್ನು ದೇವರೆನ್ನಿ, ಆತ್ಮವೆನ್ನಿ, ವಿಜ್ಞಾನವೆನ್ನಿ, ಬೌದ್ದಿಕತೆಯೆನ್ನಿ, ಅನುಭವವೆನ್ನಿ, ಏನಾದರೂ ಸರಿಯೆ. ಅದು ಹಾಗೆಯೇ.

ಬ್ರಹ್ಮ ಸೂತ್ರದ ಭಾಷ್ಯ ಮತ್ತು ಸಾಯಣ ಭಾಷ್ಯವನ್ನು ಓದುತ್ತಾ ಕೂತಿದ್ದೇನೆ. ಇವಿಷ್ಟು ತೋಚಿದ್ದು ಗೀಚಿದ್ದು

No comments: