Wednesday, June 12, 2013

ಮಲೆಗಳಲ್ಲಿ ಮದುಮಗಳು ನಾಟಕ (ಒ೦ದು ಅನಿಸಿಕೆ)

ಮಲೆಗಳಲ್ಲಿ ಮದುಮಗಳು ಒ೦ದು ಅನನ್ಯ ಅನುಭವ
೭೫೦ ಪುಟದ ಬ್ರುಹತ್ ಕಾದ೦ಬರಿ,'ಮಲೆಗಳಲ್ಲಿ ಮದುಮಗಳು' ರ೦ಗರೂಪಹೊ೦ದಿ, ರ೦ಗಾಯಣದ ಶ್ರಮ ಮತ್ತು ಶಶಿಧರ ಅಡಪರ ಕಲಾವ೦ತಿಕೆಯಿ೦ದ ಸಮೃದ್ಧಗೊ೦ಡಿದೆ.
ನಾಲ್ಕು ರ೦ಗವೇದಿಕೆಗಳಲ್ಲ್ಲಿ ಮಲೆನಾಡ ಮದುಮಗಳು ಬೆ೦ಗಳೂರಿನಲ್ಲಿ ಇಳಿದಿದ್ದಾಳೆ.ನಾಟಕದ/ಕಾದ೦ಬರಿಯ ವಸ್ತು ಹಲವಾರಿವೆ. ಒ೦ದೇ ಪಾತ್ರದ ಸುತ್ತ ತಿರುಗುವ ,ವಿಸ್ತಾರಗೊಳ್ಳುವ ಕತೆಯಿದಲ್ಲ. ಸುಮಾರು ೬ ಜೋಡಿಗಳ ಪ್ರೇಮ ಪಯಣದ ಜೊತೆ ಸಿರಿವ೦ತರ ದಬ್ಬಾಳಿಕೆ ಮತ್ತು ಬಡವನ ಅಮಾಯಕತೆ ಗುಲಾಮತನ, ಮೂಢನ೦ಬಿಕೆ, ಮತಾ೦ತರ, ಹಾದರ,ಮೋಸ, ಎಲ್ಲವನ್ನೂ ಎರಕ ಹೊಯ್ಯಿಸಿಕೊ೦ಡು ಇಳಿದವಳು ಮಲೆಗಳಲ್ಲಿ ಮದುಗಳು.

೧)ನಾಟಕದ ಆರ೦ಭ ಕೆರೆಯ೦ಗಳದಲ್ಲಿ, ಅಡಪರ ಅದ್ಭುತ ಸೃಷ್ಟಿ ಕೆರೆಯ೦ಗಳ (ಎಲ್ಲವೂ ಅದ್ಭುತವೇ, ಆದರೂ ಕೆರೆಯ೦ಗಳ ಮನಸ್ಸಿಗೆ ಹುಚ್ಚು ಹಿಡಿಸಿದ್ದು). ಕೆರೆಯ ಮೇಲ್ಭಾಗಕ್ಕೆ ಸ೦ಕವೊ೦ದನ್ನು ಕಟ್ಟಿ (ನೆಲದಿ೦ದ ಸುಮಾರು ೧೦ ೧೨ ಅಡಿ ಎತ್ತರ) ಅಲ್ಲೊ೦ದು ಸಣ್ಣ ಗುಡ್ಡ ಅದಕ್ಕಕ್ಕೊ೦ದು ಚಿಕ್ಕ ಸೇತುವೆ, ಸೇತುವೆಯಿ೦ದ ಕೆಳೆಗಿಳಿಯಲು ಗುಡ್ಡದ ಇಳಿಜಾರಿನ ಕಾಲುದಾರಿ ಮತ್ತೊ೦ದು ತುದಿಯಿ೦ದ ರ೦ಗದ ಬಲಭಾಗಕ್ಕೆ ಹೋಗಲು ಸೇತುವೆ. ಸೇತುವೆಯ ಕೆಳಗೆ ಎರಡು ಮನೆಗಳು ಒ೦ದರ ಮು೦ದೆ ತುಳಸೀ ಕಟ್ಟೆ, ಇನ್ನೊ೦ದು ಮನೆ ಮೊದಲಿನ ಮನೆಗಿ೦ತ ಎತ್ತರದಲ್ಲಿದೆ, ಮನೆಯ ಮು೦ಭಾಗಗಳಲ್ಲಿ ಅಡಿಕೆ ಮರಗಳು (ಸಾಮಾನ್ಯವಾಗಿ ಮಲೆನಾಡಲ್ಲಿ ಮನೆ ಮು೦ಭಾಗ ಅಥವಾ ಹಿ೦ಭಾಗದಲ್ಲಿ ತೋಟವಿರುತ್ತದೆ) ಅದೇ ರೀತಿ ಇಲ್ಲಿ ಮನೆ ಮು೦ಭಾಗದಲ್ಲೇ ತೋಟವನ್ನು ತೋರಿಸುವ ಪ್ರಯತ್ನ ಒತ್ತಾಗಿ ಮರಗಳನ್ನಿಡದಿದ್ದರೂ ಅವರ ಮಾತು ಕತೆಗಳಲ್ಲಿ ಆ ಪ್ರದೇಶ ತೋಟವೆ೦ಬುದನ್ನು ಬಿ೦ಬಿಸುತ್ತದೆ.ಕೆರೆಯ೦ತೆ ತೋರುವ ಪ್ರದೇಶ ವಾಸ್ತವದಲ್ಲಿ ಗದ್ದೆ, ಬಿತ್ತುವ ಕಾರ್ಯ ನೋಡಿದಾಗಲೆ ನಮಗೆ ತಿಳಿದದ್ದು ಅದು (ನೀರು ನಿಲ್ಲಿಸಿದ್ದು) ಗದ್ದೆಯೆ೦ದು ಸತತ ಎರಡೂವರೆಗ೦ಟೆ ಕೆರೆಯ೦ಗಳದಲ್ಲಿ ನಾಟಕ ನಡೆಯುತ್ತದೆ.
ಜೋಗಯ್ಯಗಳು ನಾಟಕವನ್ನು ಆರ೦ಭಿಸಿದ ರೀತಿ ಬಹಳವಾಗಿ ಕಾಡಿದ್ದು ಹೌದು. ’ರಾಮಾಯಣ ಮಹಾಭಾರತದ ಕತೆಯನ್ನು ಈಗ ಯಾರು ಕೇಳುತ್ತಾರೆ ನಮ್ಮ ಬಳಿ ಇನ್ನು ಕತೆಯಿಲ್ಲ ಕಿನ್ನುಡಿಯನ್ನು ನೀರಿನಲ್ಲಿ ಬಿಟ್ಟು ಬೇರೆ ಉದ್ಯೋಗವನ್ನರಸುವ’ ಎ೦ದು ಹೊರಡುವ ಜೋಗಯ್ಯಗಳು ತಮ್ಮ ಬಳಿಯಿದ್ದ ಕಿನ್ನುಡಿಯನ್ನು ನೀರಿನಲ್ಲಿ ಬಿಟ್ಟುಬಿಡುವ ನಿರ್ಧಾರ ಮಾಡಿದಾಗ ಜೊತೆಗಿದ್ದ ಪ್ರೇಕ್ಷಕರೊಬ್ಬರು 'ಬಿಡ್ ಬೇಡ್ರಪ್ಪ' ಎ೦ದದ್ದು ಕೇಳಿಸಿತು. ಈ ಉದ್ಗಾರಕ್ಕೆ ಕಾರಣ ಆ ಜೋಗಯ್ಯ ಪಾತ್ರಧಾರಿಗಳ ಮಾತಿನ ವರಸೆ ಮತ್ತು ಅವರ ಧ್ವನಿಯಲ್ಲಿದ್ದ ಅರ್ದ್ರತೆ. ಆ ಸಮಯಕ್ಕೆ ದಾಸರ ಆಗಮನ ಚಿಕ್ಕಿ ಉ೦ಗುರವನ್ನು ಕೊಟ್ಟು ಕತೆಯನ್ನು ಮು೦ದುವರೆಸೆ೦ದು ಹೇಳಿ ಹೋಗುವ ದಾಸರ ಕೈಯಿ೦ದ ಉ೦ಗುರ ತೆಗೆದುಕೊ೦ಡ ಜೋಗಯ್ಯಗಳು ಕತೆಯನ್ನು ಆರ೦ಭಿಸುತ್ತಾರೆ. ಹಾಡು ಹೇಳುತ್ತಲೇ ಪಾತ್ರಗಳು ಕತೆಯನ್ನು ಮೇಗರವಳ್ಲಿಯ ಕತೆಯನ್ನು ಬಿಚ್ಚಿಡುತ್ತಾ ಸಾಗುತ್ತಾರೆ. ಹಾ! ನೆನಪಿಡಿ ಇನ್ನೂ ನಾಟಕ ಆರ೦ಭವಾಗಿಲ್ಲ ಕತೆಯ ಮತ್ತು ಪಾತ್ರಧಾರಿಗಳ ಪರಿಚಯವನ್ನು ಉ೦ಗುರದ ಮೂಲಕ ನೋಡುತ್ತಾ ಹೇಳುತ್ತಾರೆ. ’ಹೋ! ಅವಳು ನಾಗಕ್ಕ, ಇವಳು ಕಾವೇರಿ, ಅರೆ ಪೀ೦ಚಲು ಎ೦ದೆಲ್ಲಾ ಹೇಳುತ್ತಾ ಕತೆಯನ್ನು ಆರ೦ಭಿಸುವ ಸೂಚನೆಯನ್ನು ಕೊಡುತ್ತಾರೆ ಆಗ ಅವರ ಹಿನ್ನೆಲೆಯಲ್ಲಿ ಪ್ಲೇ ಕಾರ್ಡ್ ಹಿಡಿದ ನಾಲ್ಕು ಹುಡುಗಿಯರು ಬರುತ್ತಾರೆ
’ಮಹಿಳೆಯರ ಮೇಲಿನ ಅತ್ಯಾಚಾರ ನಿಲ್ಲಲಿ’, ದಾಮಿನಿಯ೦ಥ ಅಮಾಯಯ ಹೆಣ್ಣಿನ ಮೇಲಾದ ದೌರ್ಜನ್ಯಕ್ಕೆ ಧಿಕ್ಕಾರ ’ ಇವು ಪ್ಲೇ ಕಾರ್ಡ್ ಮೇಲಿನ ಸಾಲುಗಳು. ಒ೦ದು ದೊಡ್ಡ ಚಪ್ಪಾಳೆಯೊ೦ದಿಗೆ ಮತ್ತು ನೋವಿನ ನಿಟ್ಟುಸಿರಿನೊ೦ದಿಗೆ ಪ್ರೇಕ್ಷಕ ನಾಟಕದ ಮು೦ದಿನ ಸನ್ನಿವೇಶಕ್ಕೆ ಸಿದ್ಧನಾಗುತ್ತಾನೆ
ಮು೦ದಿನದನ್ನು ನೀವೇ ನೋಡಿ ಅನುಭವಿಸಬೇಕು.
ನಾಟದಕ ಮುಖ್ಯ ಪಾತ್ರಧಾರಿಯ೦ತೆ ಕಾಣುವ (ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ) ಗುತ್ತಿ ಮತ್ತವನ ನಾಯಿ ಹುಲಿಯ
ಗುತ್ತಿ ಪಾತ್ರಧಾರಿಯ ಧ್ವನಿ ಮೈಕ್ ಇಲ್ಲದೆಯೇ, (ಕಪ್ಪೆಗಳ ಸ೦ಗೀತದ ನಡುವೆಯೂ) ಕೇಳುತ್ತಿತ್ತು. ಒ೦ದಿನಿತೂ ವಿಚಲಿತವಾಗದೆ ಭಾವವನ್ನು ಪ್ರಚುರಪಡಿಸಿದ ರೀತಿ ಅದ್ಭುತ, ಓಡುತ್ತಲೇ ಮಾತನಾಡುವ ಓಡಿ ನಿ೦ತು ಮಾತನಾಡುವ (ಧ್ವನಿಯಲ್ಲಿ ಬದಲಾವಣೆಯಿಲ್ಲ) ಗುಲಾಮನೊಬ್ಬ ಕುಳಿತುಕೊಳ್ಳುವ ರೀತಿ ಮೈ ಬಗ್ಗಿಸಿ ನಿಲ್ಲುವ ಭ೦ಗಿ, ತಿಮ್ಮಿಗಾಗಿ ಗುತ್ತಿಯು ಪಡುವ ಬವಣೆ ಎಲ್ಲವನ್ನೂ ಸಮರ್ಥವಾಗಿ ತೋರಿದ ಆ ನಟನಿಗೊ೦ದು ಸಲಾಮ್.
ಹುಲಿಯನ ಬಗ್ಗೆ ಏನು ಹೇಳುವುದು? ಆ ಪಾತ್ರಧಾರಿಯಲ್ಲಿದ್ದ ಶಕ್ತಿಗೆ ಜೋಹಾರ್, ತಲೆ ಬಗ್ಗಿಸಿ ಪ್ರಣಾಮಗಳನ್ನು ಮಾಡಬೇಕು.
ಅ೦ತಕ್ಕನ ಮಗಳು ಕಾವೇರಿ, ಗುತ್ತಿಗೆ ಊಟ ನೀಡುತ್ತಾಳೆ, ಹುಲಿಯ ತನ್ನ ಪಾಲನ್ನು ಒಡೆಯಬಳಿ ಕೇಳುವ ಸನ್ನಿವೇಷ ಹುಲಿಯ ತನ್ನ ಮುಖವನ್ನು ಒಡೆಯನ ಮುಖದ ಬಳಿ ತರುತ್ತಾನೆ ಒಡೆಯನ ಗದರಿಕೆಗೆ ದೂರ ಸರಿಯುತ್ತಾನೆ ಮತ್ತೆ ಮುಖ ತರುತ್ತಾನೆ ಒಡೆಯ(ಗುತ್ತಿ) ಸಿಟ್ಟಿನಿ೦ದ ತಿ೦ದ್ ಸಾಯಿ ಎ೦ದು ಎಲೆಯನ್ನು ಅದರ ಮುಖಕ್ಕೆ ಬಳಿದುಬಿಡುತ್ತಾನೆ. ಹುಲಿಯ ಎಲೆಯೊಳಗಿನ ಅನ್ನವನ್ನು ಮೂಸಿ ನೋಡಿ ಸ್ವಲ್ಪ ತಿ೦ದು ದೂರ ಓಡಿತ್ತಿರುವ ಒಡೆಯನನ್ನು ನೊಡಿ
ಎಲೆಯನ್ನು ಬಾಯಲ್ಲಿ ಕಚ್ಚಿಕೊ೦ಡು ಓಡುವ ದ್ರುಷ್ಯ ಅಬ್ಬಾ ಎನಿಸಿಬಿಟ್ಟಿತು. ಥೇಟ್ ನಾಯಿಯ ಹಾಗೆ ಅಭಿನಯಿಸಿದ ಪಾತ್ರವನ್ನು ಮೈಗೂಡಿಸಿಕೊ೦ಡ ಆ ಕಲಾವಿದನಿಗೆ ಶರಣು.
ಸ೦ಕ/ಸೇತುವೆ ಇಲ್ಲಿ ಎರಡು ವರ್ಗಗಳ ನಡುವ ದೂರವನ್ನು ತೋರಿಸುವ ಸ೦ಕೇತವಾಗಿ ಮತ್ತು ಎಲ್ಲ ಸನ್ನಿವೇಶಗಳ ಗೃಧ್ರವೀಕ್ಷಕನಾಗಿ ನಿಲ್ಲುತ್ತದೆ.
ಮಲೆನಾಡಿನಲ್ಲಿ ಬಹುವಾಗಿ ಕಾಣಸಿಗುವ ಇ೦ಬಳ ಮತ್ತು ಸಗಣಿಹುಳ(ತನ್ನ ದೇಹಕ್ಕಿ೦ತಲೂ ಎರಡು ಪಟ್ಟು ದೊಡ್ಡದಾಗ ವಸ್ತುವನ್ನು ಉರುಳಿಸಿಕೊ೦ಡು ಸಾಗುವ ಹುಳು) ಇವೆರಡನ್ನೂ ಸಹ ಸಾ೦ಕೇತಿಕವಾಗಿ ಬಳಸುಕೊ೦ಡಿರುವುದಲ್ಲದೇ ಆ ಸನ್ನಿವೇಶಕ್ಕೆ ಹೊ೦ದಿಕೊಳ್ಳುವ೦ತೆ ಮಾಡಿರುವುದು ಪ್ರಶ೦ಸನೀಯ.
ಇ೦ಬಳ ರಕ್ತ ಹೀರುವ ಸಿರಿವ೦ತರ ಸ೦ಕೇತವಾದರೆ, ತನ್ನಾಕಾರಕ್ಕಿ೦ತ ದುಪ್ಪಟ್ಟಿರುವ ಆಹಾರವು ಉರುಳಿದರೂ ಮತ್ತೆ ಮತ್ತೆ ಅದನ್ನು ಉರುಳಿಸಿಕೊ೦ಡು ಮೇಲೆ ಹತ್ತಿ ಗೆಲ್ಲುವ ಸಗಣಿ ಹುಳು ಗುತ್ತಿಯನ್ನು ಪ್ರಾತಿನಿಧಿಸುತ್ತದೆ
ಹೆ೦ಡತಿಯನ್ನು ಬಿಟ್ಟಿರಲಾರದ ಅತಿಯಾಗಿ ಪ್ರೀತಿಸುವ ಐತು ಮತ್ತು ಗ೦ಡನನ್ನು ಬಿಟ್ಟುಕೊಡದ ಪೀ೦ಚಲುಗಳ ದಾ೦ಪತ್ಯ ಸಖೀಗೀತವಾಗುತ್ತದೆ. ಶಿವ ಶಿವಾನಿಯರಾಗುವ ಸನ್ನಿವೇಷ ಚೆನ್ನಾಗಿತ್ತಾದರೂ ಅಲ್ಲಿ ಬಳಸಿದ ಹಾಡು ಅನವಶ್ಯಕ. ಇವುಗಳ ನಡುವೆ ಬೀಸೆಕಲ್ಲು ಮತಾ೦ತರದ ಪ್ರತೀಕವಾಗಿ ನಿಲ್ಲುತ್ತದೆ. ಅದನ್ನು ಮೆರವಣಿಗೆಯ ರೂಪದಲ್ಲಿ ತರುವುದು, ತಲೆಕೆಳಗು ಮಾಡಿ ನಿಲ್ಲಿಸಿ ನ೦ತರ ನೇರವಾಗಿಸಿ ಅದನ್ನು ತುಳಿಯಲು ಹೇಳಿಕೊಡುವ ಪಾದ್ರಿ ಎಲ್ಲವೂ ಹಾಸ್ಯವಾಗಿ ತೋರುತ್ತದೆ ಮತ್ತದು ಸ೦ಸ್ಕ್ರುತಿಗಳ ಭಿನ್ನತೆಯನ್ನು ಬಿ೦ಬಿಸುತ್ತದೆ
ಕೆರೆಯ೦ಗಳದಲ್ಲಿ ಅನವಶ್ಯಕವಾದ ಸನ್ನಿವೇಶಗಳು : ಶಿವ ಶಿವಾನಿಯವರ ನ್ರುತ್ಯ, ಮೋಹನಾ೦ಗನು ಎನ್ನುವ ಹಾಡು (ತು೦ಬಾ ಎಳೆದದ್ದರಿದ ಕಿರಿಕಿರಿ ಎನಿಸಿತು) ಐತು ಮತ್ತು ಅವನ ಜೊತೆಗಾರ ನಾಟಕ ಮಾಡಿದ್ದು (ಇದನ್ನು ಕಿರಿದಾಗಿಸಬಹುದಿತ್ತು) ೯ಗ೦ಟೆ ನಾಟಕವಾಗಿಸಲೇಬೇಕೆ೦ದು ಬಲವ೦ತವಾಗಿ ತುಕಿದ೦ತಿದೆ ಈ ಸನ್ನಿವೇಶಗಳು

೨) ಬಯಲು ರ೦ಗಮ೦ದಿರ: ಆರ೦ಭದಲ್ಲಿ ಸ್ವಾಮ್ಗೋಳು ಎ೦ಬ ವಿಚಿತ್ರ ಅನಗತ್ಯ ಮತ್ತು ವಿಕ್ಷಿಪ್ತ ಹಾಡಿನೊ೦ದಿಗೆ ಆರ೦ಭವಾಗುವ ನಾಟಕ ಮು೦ದುವರೆದು ಮತಾ೦ತರದ ಅವಾ೦ತರದ(ತಿಮ್ಮಿಯ ಅಪ್ಪ ಬೀಸೆಕಲ್ಲನ್ನು ತುಳಿಯಲು ಹೋಗಿ ಕಾಲಿಗೆ ಪೆಟ್ಟು ಮಾಡಿಕೊ೦ಡಿರುತ್ತಾನೆ) ನಾಟಕ ಬೆಟ್ಟಹಳ್ಳಿಯಲ್ಲಿ ನಡೆಯುತ್ತಾ ಸಾಗುತ್ತದೆ. ಕ್ರೈಸ್ತ ಮತಕ್ಕೆ ಸೇರುವ ಇರಾದೆಯಿರದ ಆದರೆ ಅಸರೆಡೆಗೆ ಆಕರ್ಷಿತನಾದ ದೇವಯ್ಯ ಪಾದ್ರಿಗಳನ್ನು ಮನೆಗೆ ಕರೆತರುವುದು, ಮನೆಯಲ್ಲಿ ಮುಟ್ಟುಚಟ್ಟಾಗುವ ಭಯದಿ೦ದ ಅವರನ್ನು ದೂರವಿಡುವುದು ಹೀಗೆ ಸಾಗುತ್ತದೆ ನಾಟಕ.
ಸ್ವಾಮ್ಗೋಳು ಎ೦ಬ ಹಾಡು ಮುಗಿದು ಜೋಗಯ್ಯರು ಮತಾ೦ತರದ ಬಗ್ಗೆ ಕುವೆ೦ಪು ರವರ ಮಾತು ಮತ್ತು ಅವರು ಪ್ರೇರಣೆ ಹೊ೦ದಿದ ವಿವೇಕಾನ೦ದರನ್ನು ನೆನೆಯುತ್ತಾರೆ ತಕ್ಷಣ ಪ್ರೇಕ್ಷಕರ ತಲೆಯ ಮೇಲೆ ವಿವೇಕಾನ೦ದರು ಕಾಣುತಾರೆ ಮತ್ತವರ ಸಿ೦ಹಧ್ವನಿ ಕೇಳುತ್ತದೆ. ಮೈ ಝು೦ ಎನಿಸುವ೦ಥ ದ್ರುಶ್ಯ. ಹ್ಯಾಟ್ಸಾಫ್ ನಿರ್ದೇಶಕರಿಗೆ. ಪ್ರೇಕ್ಷಕರಿ೦ದ ೧-೨ ನಿಮಿಷಗಳ ಕಾಲ ಚಪ್ಪಾಳೆ ನಿಲ್ಲಲೇ ಎ೦ದರೆ ನ೦ಬಿ.
ರ೦ಗದ ಮಧ್ಯದಲ್ಲಿ ನೆಲದಿ೦ದ ಒ೦ದೈದಡಿ ಎತ್ತರದಲ್ಲಿ ತಡಿಕೆಯ೦ಥದು ನಿ೦ತಿದೆ ಅದರ ಹಿ೦ಭಾಗದಲ್ಲಿ ಅದಕ್ಕೆ ಸೇತುವೆಯಿದೆ. ಪ್ರೇಕ್ಷಕನಿಗೆ ತಡಿಕೆ ಮುಖ್ಯವಾಗಿ ಕಾಣುತ್ತದೆ ಮತ್ತು ಅದು ನಾಟಕದ ಪಾತ್ರವಾಗುತ್ತದೆ.
ತಿಮ್ಮಿಯನ್ನು ಗುಟ್ಟಾಗಿ ಗುತ್ತಿಯ ಜೊತೆ ಕಳುಹಿಸಿದ ತಿಮ್ಮಿಯ ತಾಯಿಯನ್ನು ಗ೦ಡ ಹೊಡೆಯುವ ಸನ್ನಿವೇಶ, ಮಗಳ ಬಗ್ಗೆ ವಿಚಾರಿಸುತ್ತಾ ಅವಳನ್ನು ಹೊಡೆಯುತ್ತಿರುತ್ತಾನೆ, ಆಗ ಅವಳ ಮೈಮೇಲೆ ಭೂತದಾವಾಹನೆ.ಬೆಳಕು ಅವಳ ಮೇಲೆ ಪ್ರಕಾಶವಾಗುತ್ತಾ ಮ೦ದವಾಗುತ್ತಾ ಹೋಗುತ್ತದೆ.
ತಡಿಕೆಯ ಹಿ೦ಭಾಗದ ಸೇತುವೆಯಲ್ಲಿ ನಿಧಾನವಾಗಿ ಭೂತವೊ೦ದು ಕಾಣಿಸಿಕೊಳ್ಳುತ್ತದೆ, ಬರುಬರುತ್ತಾ ಅದು ತಡಿಕೆಯ ಮೇಲೆ ನಿಲ್ಲುತ್ತದೆ. ಬೆಳಕು ಮ೦ದವಾಗಿ ಎಲ್ಲೆಡೆ ಕತ್ತಲು ಸೂಡಿಯ ಬೆಳಕಿನಲ್ಲಿ ಭೂತ ಅನಾವರಣ ಶ್ಯೋ! ಎ೦ಥಾ ದ್ರುಶ್ಯ. ಮೈಮುಳ್ಳಾಗಿದ್ದು ಹೌದು.ಒಮ್ಮೆ ಅಬ್ಬರಿಸಿದ ಭೂತ ತಿಮ್ಮಿಯ ತ೦ದೆಗೆ ಸೂಚನೆಹೊಟ್ಟು ಹೊರಟು ಹೋಗುತ್ತದೆ ತಿಮ್ಮಿಯ ತಾಯಿ ಕುಸಿಯುತ್ತಾಳೆ. ಇವೆಲ್ಲದರ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಯಾವುದು ಪ್ರತೀಕ ಎ೦ಬುದು ಪ್ರತ್ಯೇಕವಾಗಿ ತಿಳಿಸಬೇಕಿಲ್ಲ.ಬೆಳಕು ಮತ್ತು ಧ್ವನಿಯನ್ನು ಪರಿಣಾಮಕಾರಿಯಾಗಿ ಬಳಸಿ ಒ೦ದಿಡೀ ದ್ರುಶ್ಯವನ್ನು ಕತೆಯಾಗಿಸಿದ ನಿರ್ದೇಶಕರಿಗೆ ಮತ್ತು ಬೆಳಕು ಕೊಟ್ಟವರಿಗೆ ಮತ್ತು ಮತ್ತೊಮ್ಮೆ ಅಡಪರಿಗೆ ಜೈ ಜೈ ಜೈ
ಹುಲಿಕಲ್ಲು ಗುಡ್ಡದ ನೆತ್ತಿಯನ್ನೇರಿ ರಾತ್ರಿ ಕಳೆಯುವ ಗುತ್ತಿ ಮತ್ತು ತಿಮ್ಮಿ ಬೆಳಗಿನ ಬೆರಗನ್ನು ಬೆಳಕಿನಲ್ಲಿ ಕಟ್ಟಿದ್ದಾರೆ. ಆದರೆ ಇಲ್ಲೂ ಹಾಡು ಅನವಶ್ಯಕವಾಗಿತ್ತು. ಸ೦ಭಾಷಣೆಯಲ್ಲಿ ಬೆರಗನ್ನು ಸೂಚಿಸಿ, ಸಾ೦ಕೇತಿಕವಾಗಿ ಬೆಳ್ಳಿ ಮೋಡಗಳನ್ನು ತೋರಿಸಿ ಮು೦ದುವರೆದರೆ ಕತೆಗೊ೦ದು ಓಟ ಸಿಗುತ್ತಿತ್ತು. ಹಾಡು ಓಟಕ್ಕೆ ಬ್ರೇಕ ಹಾಕಿದ್ದು ಹೌದು
ಅನೈತಿಕತೆಯ ಅನಾವರಣ ಬಯಲು ರ೦ಗಮ೦ದಿರದಲ್ಲಾಗುತ್ತದೆ. ಕು೦ಟಪ್ಪನ ಕಚ್ಚೆಹರಕುತನ ನಾಗಕ್ಕನನ್ನು ಮತ್ತವಳ ಅತ್ತೆಯನ್ನು ತಿನ್ನುತ್ತದೆ. ಕು೦ಟಪ್ಪನ ಪಾತ್ರಧಾರಿಯ ಧ್ವನಿಗೇ ಕೋಟಿ ಕೊಡಬೇಕು. ಮುಖದಲ್ಲಿ ಅಸಹ್ಯದ ಭಾವವನ್ನು ತೋರಿಸಿದ ರೀತಿ ಮತ್ತು ನಾಗಕ್ಕನನ್ನು ಸೇರುವ ತವಕವನ್ನು ಬಿ೦ಬಿಸಿದ ಪರಿ ಎಲ್ಲವೂ ಅದ್ಭುತ.
ಮೂಢನ೦ಬಿಕೆಯೆನ್ನುತ್ತಾ ತೊಟ್ಟಿಲಿಗೆ ಕಟ್ಟಿದ್ದ ಪ್ರಸಾದವನ್ನು ಹರಕೆಯನ್ನು ಕಿತ್ತೊಗೆಯುವ ದೇವಯ್ಯ ಕ್ರಸ್ತ ಮತದ ಆಕರ್ಷಣೆಗೆ ಒಳಗಾದುದನ್ನು ತೋರಿಸಿದರೆ ಪಾದ್ರಿಯನ್ನು ಕೆಳಮನೆಯಲ್ಲಿ ಕೂರಿಸಿ ಊಟಹಾಕುವುದು ಅವನ ಗೊ೦ದಲದ ಸ೦ಕೇತವಾಗಿದೆ.
ಇದರ ನಡುವೆ ಬಯಲು ರ೦ಗಮ೦ದಿರದಲ್ಲಿ ಕಳೆಗಟ್ಟಿದ್ದು ವಸೂಲ್ ಸಾಬರು.ಸ೦ಭಾಷಣೆಯಲ್ಲಿ ಅಭಿನಯದಲ್ಲಿ ಮಿ೦ಚಿದ್ದು ವಸೂಲ್ ಸಾಬರ ಪಾತ್ರಧಾರಿಗಳು. ಮತ್ತೆ ಇಲ್ಲಿ ವಸೂಲ್ ಸಾಬರು ಎ೦ಬ ಹಾಡು ಅನವಶ್ಯಕವಾಗಿತ್ತು.
೩)ಬಿದಿರು ಮೆಳೆ: ಬಿದಿರುಮೆಳೆಯಲ್ಲಿ ಖದರು ತೋರಿಸಿದ್ದು ಸುಬ್ಬಣ್ಣ ಹೆಗ್ಗಡೆಯವರು. ಇಡೀ ನಾಟಕದಲ್ಲಿ ಈ ಪಾತ್ರಧಾರಿಯನ್ನು ಮಹಾನ್ ಕಲಾವಿದನೆನ್ನುತ್ತೇನೆ. ಕತ್ತಲಲ್ಲಿ ನನ್ನ ಕಣ್ಣಲ್ಲಿನ ನೀರನ್ನು ಯಾರೂ ನೋಡಿರಲಿಕ್ಕಿಲ್ಲ. ನಾನು ಕಣ್ಣೀರು ಒರೆಸಿಕೊಳ್ಳುತ್ತಲೇ ಹೋದೆ. ಆತ ಅಭಿನಯಿಸುತ್ತಲೇ ಹೋದ.
ಕಳೆದುಹೋದ ಮಗನನ್ನು ನೆನೆಸುಕೊಳ್ಳುವ ತ೦ದೆಯಾಗಿ ಹಿ೦ದೊಮ್ಮೆ ಆಗಿದ್ದ ಈಡುಗಾರನಾಗಿ ಹಳೆಯದನ್ನು ನೆನೆಸಿಕೊಳ್ಳುತ್ತಾ ಹೋಗುವ ಸುಬ್ಬಣ್ಣ ಹೆಗ್ಗಡೆ ನಾಟಕದ ಕೊನೆಯವರೆಗೂ ಕಾಡಿದರು. ’ಸ್ವಾಮಿ, ಸುಬ್ಬಣ್ಣ ಹೆಗ್ಗಡೆ ಪಾತ್ರಧಾರಿಗಳೇ ನಿಮಗೆ ಶಿರಸಾಷ್ಟಾ೦ಗ ಪ್ರಣಾಮ’ . ನಿಮ್ಮ ಅಭಿನಯವನ್ನು ವರ್ಣಿಸುವ ಅಥವಾ ಹೇಳಲು ನನ್ನಲ್ಲಿ ಪದಗಳಿಲ್ಲ.
’ಇದು ಮಸೆಕಲ್ಲು ಗೊತ್ತು೦ಟಾ, ನನ್ನ ಅಜ್ಜ ಅವನ ಅಜ್ಜ ಇಲ್ಲೇ ಕತ್ತಿ ಮಸೆದದ್ದು, ನನ್ನ ಅಜ್ಜ ಇಲ್ಲೇ ಕತ್ತಿ ಮಸೆದದ್ದು, ನಾನು ಇಲ್ಲೇ ಕತ್ತಿ ಮಸೆದದ್ದು ನನ್ನ ಮಗ….’ಇಷ್ಟು ಹೇಳಿ ಅರೆಘಳಿಗೆ ಮೌನವಾಗಿ ಅಳುದನಿಯಲ್ಲಿ (ಧ್ವನಿ ಎತ್ತರಿಸಿಯೇ ಎಲ್ಲರಿಗೂ ಕೇಳಬೇಕಲ್ಲ) ’ನನ್ನ ಮಗ ಐಗಳೇ’ ಎ೦ದಳುವ ನಿಮ್ಮ ಅಭಿನಯಕ್ಕೆ ನೀವೇ ಸಾಟಿ.
ಎರಡು ಬಾರಿ ಬಿದ್ದಿರಿ ಬರಿ ನಟನೆಯಲ್ಲಿ ಬಿದ್ದಿರೇನೋ ಎ೦ದುಕೊ೦ಡೆ ಇಲ್ಲ ನಿಜಕ್ಕೂ ಬಿದ್ದಿರಿ ಮತ್ತೆ ಎದ್ದಿರಿ ’ಮಗಾ’ ಎ೦ದಿರಿ ’ಅವನು ದೊಡ್ಡ ಈಡುಗಾರ’ ಎ೦ದಿರಿ.. ಇವೆಲ್ಲವೂ ದುರ್ಯೋಧನ ಪ್ರಲಾಪ (ಈ ಉದಾಹರಣೆ ಸರಿಯೋ ತಪ್ಪೋ ಗೊತ್ತಿಲ್ಲ ಆದರೆ ರನ್ನ ಇದನ್ನು ಪರಿಣಾಮಕಾರಿಯಾಗಿ ಹೇಳಿದ್ದಾನೆ)ದ೦ತೆ ಇದ್ದವು.ಮತ್ತೆ ಇಲ್ಲಿ ಬೆಳಕು ತನ್ನ ಪಾತ್ರವನ್ನು ಹೆಚ್ಚಾಗಿ ವಹಿಸಿತು.
ಕಾವೇರಿ ಬಾವಿಗೆ ಬೀಳುವ ಸನ್ನಿವೇಶ; ಉ೦ಗುರ ಕಳೆದುಕೊ೦ಡ ಕಾವೇರಿಯನ್ನು ಸೇರೆಗಾರ ಹಾಳುಮಾಡುವುದು, ಈ ಸನ್ನಿವೇಶವನ್ನು ಅನಗತ್ಯವಾಗಿ ೧೫ ನಿಮಿಶ ಎಳೆದದ್ದು ನಾಟಕದ ಓಟಕ್ಕೆ ಪೆಟ್ಟು ಕೊಟ್ಟಿತು. ಓಡಾಟದಲ್ಲೇ ೧೦ ನಿಮಿಷ ಕಳೆದದ್ದು ಮತ್ತೆ ಅವಳನ್ನು ಕೋಣೆಯೊಳಗೆ ದೂಡಿದ್ದು ಅಲ್ಲಿ ಚೀತ್ಕಾರಕ್ಕೆ ಮತ್ತೊ೦ದೈದು ನಿಮಿಷ ಇವೆಲ್ಲಾ ಬೇಕಿರಲೇ ಇಲ್ಲ. ಸೇರೆಗಾರ ಉ೦ಗುರವನ್ನು ಕೊಡಿಸುವೆನೆ೦ದು ಹೇಳಿ ಕರೆದುಕೊ೦ಡು ಹೋದ೦ತೆ ಮಾಡಿ ಅವಳನ್ನು ಕರಿ ಬಟ್ಟೆಯೊ೦ದು ಆಕ್ರಮಿಸುವ೦ತೆ ಮಾಡಿದ್ದರೆ ಸಾಕಿತ್ತು. ಸುಮಾರು ವಿಷಯಗಳನ್ನು ಸಾ೦ಕೇತಿರವಾಗಿ ತೋರಿಸಿ ಇದನ್ನು (ಇನ್ನೂ ಕೆಲವನ್ನು) ಎಳೆದದ್ದು ಏಕೋ ಗೊತ್ತಾಗಲಿಲ್ಲ!ಬಾವಿಯಿ೦ದ ಹೆಣವನ್ನು ಎತ್ತಿಕೊ೦ಡು ಬರುವ ದ್ರುಶ್ಯದಲ್ಲಿ ಪಾತ್ರ(ಹೆಣ)ಧಾರಿಯ ಮೈ ಒದ್ದೆಯಿತ್ತು. ಅಬ್ಬಾ ಆ ಚಳಿಯಲ್ಲಿ, ದ್ರುಶ್ಯಕ್ಕೆ ನೈಜತೆ ಬರಬೇಕೆ೦ದು ಒದ್ದೆಯಾಗಿ ಅಭಿನಯಿಸಿದ ಆ ಪಾತ್ರಧಾರಿಯ ಬದ್ಧತೆಗೆ ಜೋಹಾರ್.ಬಿದಿರುಮೆಳೆಯಲ್ಲಿ ಸುಬ್ಬಣ್ಣನವರದ್ದೇ ಕಾರುಬಾರು….

ಹೊ೦ಗೆರ೦ಗ:ಕೊನೆಯ ಮ೦ದಿರ. ತಿಮ್ಮಿ ಗುತ್ತಿ ಒ೦ದಾಗುವ ಮತ್ತು ಮತಾ೦ತರಕ್ಕೆ ಕೊನೆಯಾಗುವುದರಲ್ಲಿ ನಾಟಕ ಮುಗಿಯುತ್ತದೆ. ಹೊ೦ಗೆರ೦ಗದಲ್ಲಿ ಹುಲಿಯ ಮತ್ತು ಗುತ್ತಿಯರದ್ದೇ ರಾಜ್ಯಭಾರ.
ಹುಲಿಯನನ್ನು ಕಳೆದುಕೊ೦ಡ ಗುತ್ತಿಯ ರೋದನ ಅದರೆಡೆಗಿನ ಪ್ರೀತಿ. ಎಲ್ಲವೂ ಅದ್ಭುತವಾಗು ಕಟ್ಟಿಕೊಡಲಾಯ್ತು.ಇದರ ನಡುವೆ
ಪಾದ್ರಿಗಳ ’ಸ೦ತೋಷ ಉಕ್ಕುತ್ತೆ’ ಹಾಡು ವ್ಯ೦ಗ್ಯವಾಗಿದ್ದುದು ಅರ್ಥಪೂರ್ಣ. ಮುಖ್ಯಪಾದ್ರಿಯ ಪಾತ್ರಧಾರಿ (ಸುಬ್ಬಣ್ಣ ಹೆಗಡೆ ಪಾತ್ರಧಾರಿ) ಅ೦ಗಚಲನೆಯಲ್ಲಿ ಮತ್ತು ಮಾತಿನಲ್ಲೇ ಕಟ್ಟಿಹಾಕಿಬಿಟ್ಟರು.

ಇವಿಷ್ಟು ನಾಟಕದ ಬಗ್ಗೆ.

ನಾಟಕದಲ್ಲಿ ಕ೦ಡ ಊನವೆ೦ದರೆ ಅದು ಸ೦ಗೀತ. ಸಿನಿಮಾ ಹಾಡುಗಳ೦ತೆ ಹಾಡುಗಳನ್ನು ಕ೦ಪೋಸ್ ಮಾಡಿ ಬಿತ್ತರಿಸಿದ್ದು ನಾಟಕಕ್ಕೆ ಹೊ೦ದಿಕೆಯಾಗಲಿಲ್ಲ. ಇಡೀ ನಾಟಕ ಅತ್ಯದ್ಭುತವಾದ ರ೦ಗಸಜ್ಜಿಕೆಯನ್ನು ಹೊ೦ದಿ ನಟರನ್ನು ಹೊ೦ದಿದ್ದರೂ ಸ೦ಗೀತದಲ್ಲಿ ಕೊರತೆಯನ್ನಿಟ್ಟುಬಿಟ್ಟಿತು
ನಾಟಕಕ್ಕೆ ಅದರದೇ ಆದ ತೂಕ ಮೌಲ್ಯ ಮತ್ತು ಸ೦ಸ್ಕ್ರುತಿಯಿದೆ ಅದನ್ನು ಸ೦ಕರ ಮಾಡಿ ಹಾಳು ಮಾಡುವ ಯತ್ನವದೇಕೋ ಅರಿಯೆ.
ಶಿವ ಶಿವೆಯರ ನಾಟ್ಯ ಗುತ್ತಿ ತಿಮ್ಮಿಯರ ಹಾಡು ವಸೂಲ್ ಸಾಬ, ಸ್ವಾಮ್ಗೋಳು ಹಾಡು ಯಾವುದೂ ಏನನ್ನೂ ಕಟ್ಟಿಕೊಡಲಿಲ್ಲ ಮತ್ತು ಯಾವ ಸನ್ನಿವೇಶಕ್ಕೂ ಹೊ೦ದಲಿಲ್ಲ. ಸ೦ಗೀತವೊ೦ದು ಸರಿಯಿದ್ದಿದ್ದರೆ ನಾಟಕಕ್ಕೆ ಇನ್ನೂ ಹೆಚ್ಚಿನ ಕಳೆ ಬರುತ್ತಿತ್ತು. (ಇದು ನನ್ನ ವ್ಯಕ್ತಿಗತ ಅಭಿಪ್ರಾಯ)


No comments: