Tuesday, September 23, 2014

ನೀಲಿಯಲ್ಲಿ ಒಲವ ಮೇಘಗಳನ್ನು ತೇಲಿಬಿಡೋಣ


ಗುಂಡಾಣಿಗೆ
ಬದುಕೆಂದರೆ ಆಕಾಶ, ಕಣ್ಣು ಹಾಯಿಸಿದಷ್ಟೂ ದೂರ ನೀಲಿ ಮತ್ತು ಖಾಲಿ.
ತುಂಬಿಕೊಳ್ಳಲು ತುಂಬಿಸಲು ನಮ್ಮ ಬಳಿ ಏನಿದೆ ಅನ್ನೋ ಪ್ರಶ್ನೆಗೆ ಉತ್ತರ. ಬಾಳಿನ ಹಲವು ಮಜಲುಗಳು. 
ಹುಟ್ಟು... ಸಂಭ್ರಮ, ನಾಮಕರಣ... ಸಂಭ್ರಮ, ಉಪನಯನ/ಋತುಮತಿಯಾಗುವಿಕೆ ಅದೂ ಸಂಭ್ರಮವೇ, ಮದುವೆ... ಸಂಭ್ರಮ, ಸಂತಾನ... ಸಂಭ್ರಮ ಅದರೊಟ್ಟಿಗಿನ ಆಟ ಪಾಠ,
ಮತ್ತೆ ಉರುಳುವ ಸಂಭ್ರಮದ ಕಾಲಚಕ್ರ ಎಲ್ಲವೂ ತುಂಬಿಸಿಕೊಳ್ಳಬಹುದಾದಷ್ಟು ಸ್ಥಳವಿದೆ- ಆ ಆಕಾಶದಲ್ಲಿ. ಖಾಲಿಯಲ್ಲಿ. ನಾವು ತುಂಬಬೇಕಷ್ಟೆ, 
ಸುಮ್ಮನೆ ಆಕಾಶ ನೋಡುವುದು ನಿನ್ನಂತೆ ನನಗೂ ಇಷ್ಟವೇ. ಅಲ್ಲಿ ಎಂದೋ ಆಡಿದ ಆಟವಿದೆ, ಮಾಡಿದ ತುಂಟತನವಿದೆ.
ಕಂಡ ಕನಸುಗಳಿದೆ, ನನ್ನ ನಿನ್ನ ಇಬ್ಬರದೇ ಅಲ್ಲ. ನಮ್ಮವರ ಜೊತೆಗಿನ ನನಪುಗಳಿವೆ.
ಅಲ್ಲೆಲ್ಲೋ ಬಿಳಿ ಮೋಡವೊಂದು. ಹಾಗೆ ಸುಮ್ಮನೆ ಹಾದು ಹೋದರೆ ಅದು ನಮ್ಮ ನೆನಪುಗಳ ಮೆರವಣಿಗೆ.
ಪ್ರಯಾಣದಲ್ಲಿ ನನ್ನ ನಿನ್ನ ಭೇಟಿ. ಪ್ರೀತಿ ಪ್ರೇಮ ಎಲ್ಲದಕ್ಕೂ ಮೀರಿ ಅದೊಂದು ಆತ್ಮೀಯತೆ. 
ಇರಬಹದಾ ಹೀಗೆ, ನನ್ನದೇ ಬಿಂಬ ನನ್ನ ಹಾಗೆ? ಅದೇ ಧಾಟಿ, ಸ್ವಲ್ಪ ಚೂಟಿ. ನಾನು ಮೌನಿ
ಇವಳು ಮೃಗನಯನಿ. ನೀನಿದ್ದುದು ಹಾಗೆ, ಪೂರಾ ನನ್ನ ಹಾಗೆ. 
ಪ್ರೇಮದ ಶಿಖರವನ್ನು ಮುಟ್ಟುವುದಕ್ಕಿಂತ ಹತ್ತುವ ಅನುಭವವೇ ಹೆಚ್ಚು ಮುದ ಕೊಡುತ್ತದೆ.
(ಭೈರಪ್ಪನವರ ಕಾದಂಬರಿಯ ಸಾಲುಗಳನ್ನು ಸ್ವಲ್ಪ ಮಾರ್ಪಾಟು ಮಾಡಿದ್ದೇನೆ)
ನನ್ನದೇ ಹುಚ್ಚಿರುವ ನಿನಗೆ ನನ್ನಂಥವನು ಸರಿ ಜೋಡಿಯೋ ಅಥವ ಅಸಮಜೋಡಿಯೋ ಗೊತ್ತಿಲ್ಲ
ಸ್ವಲ್ಪವಾದರೂ ಭಿನ್ನವಾಗಿದ್ದರೆ ಚೆಂದ ಎನಿಸಿದ್ದು ಹೌದು. ಆಲೋಚನೆಗಳಲ್ಲಿ  ಸುಮಾರು ಪಾಲು ಒಂದೇ.
ನಮ್ಮೊಟ್ಟಿಗೆ ನೀನು ಮತ್ತು ನಿನ್ನೊಂದಿಗೆ ನಾವು ಇದು ನಮ್ಮ ಸಂಸಾರ. 
ಜಗತ್ತಿನ ಎಲ್ಲ ಬಗೆಯ ಪ್ರೀತಿಯನ್ನು ತರಲಾರೆನೇನೋ ಆದರೆ ಇರುವ ಪ್ರೀತಿಯಲ್ಲಿ ಜಗತ್ತನ್ನು ತೋರಿಸಬಲ್ಲೆ.
***********************
ನಮ್ಮದೇ ಪ್ರಪಂಚದೊಳಗೆ ಕೆಲವೊಂದು ಬದಲಾವಣೆಗಳಾಗಿವೆ. ಅದು ಈ ಪಯಣದ ವಿಭೂತಿಗೆ ಪೂರಕ
ನಿನ್ನ ಓಟದಲ್ಲಿ ಸ್ವಲ್ಪ ತಿರುವು. ಬಿಡುವು. ಆಫೀಸಿನ ಗೋಜಲಿಲ್ಲ, ಅಲ್ಲಿನ ಕ್ಷಮತೆ ಮನೆಗೆ ವರ್ಗಾಯಿಸಿದ್ದು
ಕೂಸೊಂದು ಪುಟ್ಟ ಪಾದಗಳನ್ನು ಆಡಿಸತೊಡಗಿದ್ದು ಮತ್ತೊಂದು ಸೋಪಾನ. 
ಅದೊಂದು ಕನಸು. ಇನ್ನೂ ನಂಬಲಾಗದಂಥ ಸ್ಥಿತಿ. ನೋವಿನೊಳಗೆ ಹುಟ್ಟಿನ ಸುಖ.
ಬೊಚ್ಚು ಬಾಯಲ್ಲಿ ನಗುವ, ಅಳುವ ಎಳೇ ಬೊಮ್ಮಟೆ ಮೌನ ಮಾತಿನ ಪ್ರತೀಕ
ಅಂತರ್ಮುಖಿತ್ವ , ಬಹಿ’ರಂಗ’ ಪ್ರಯೋಗದ ಚಿಹ್ನೆ ಯಂತೆ ತೋರುತ್ತದೆ.
***********************
ಮದುವೆಯಾಗಿ ಇಂದಿಗೆ ಎರಡು ವರ್ಷ ಏಳು ತಿಂಗಳು .
ಪ್ರತಿ ದಿನ ಹೊಸ ಬೆಳಗು, ನೆನಪುಗಳೇ ಪ್ರತಿ ಇರುಳು
ಅಂದಂದಿನ ನೈಮಿತ್ಯಗಳ ವಿಮರ್ಶೆ, ಪರಾಮರ್ಶೆಗೆ ನಾವು ಆಯ್ದು ಕೊಂಡದ್ದು ಇರುಳುಗಳನ್ನು
ಕಾವ್ಯ, ನಾಟಕ, ಜಗತ್ತು, ವಿಜ್ಞಾನ ಹೀಗೆ ಎಲ್ಲವೂ ನಮ್ಮ ಪರಿಧಿಯೊಳಗಿದ್ದದ್ದು ಅಚ್ಚರಿ,
ಎಲ್ಲದರ ಬಗ್ಗೆ ಎಲ್ಲವುಗಳ ಬಗ್ಗೆ ಇಲ್ಲವಾಗುವ ಇಲ್ಲವೆನ್ನುವುಗಳ ಬಗ್ಗೆ ನಮ್ಮ ಮಾತು.
ಪ್ರಾಯಃ ಇದು ನಮಗೆ ಮಾತ್ರ ಸಾಧ್ಯವಾ? 
************************
ಮುಂದಿನದು ಇನ್ನೂ ಇದೆ, ಆಕಾಶಕ್ಕೆ ಕೊನೆಯಂತೂ ಇಲ್ಲ
ನಮ್ಮ ಬುತ್ತಿಯಿನ್ನೂ ಬತ್ತಿಲ್ಲ, ಒಲವ ಗಂಗೆ ಇಳಿದು ಬರಲು
ಆಕಾಶದಲ್ಲಿ ನಮ್ಮ ಕನಸುಗಳ, ನೆನಪುಗಳ, ಮೌಲ್ಯಗಳ
ಭಾವಗಳ ಮೋಡವನ್ನು ಬಿತ್ತಬೇಕಿದೆ, 
ನಾವು ತೇಲಿಬಿಡುವ ಮೋಡಗಳಿಗಾಗಿ ನೀಲಿ ಕಾಯುತ್ತಿದೆ
ಬಾ ಅದೇ ಮರದ ಬೆಂಚಿನ ಮೇಲೆ ಕೂತು ಹಾರುವ ನವಿಲನ್ನು ನೋಡುತ್ತಾ
ಕೈಯೊಳಗಿನ ಒಲವ ಮೇಘಗಳನ್ನು ತೇಲಿಬಿಡೋಣ

ಇತಿ ನಿನ್ನವ ಹರಿ

1 comment:

Badarinath Palavalli said...

ಇದಂತೂ ನನಗೆ ಶತಪ್ರತಿಶತಃ ಕರೆಕ್ಟೂ ಅನಿಸಿತು: :)
’ಪ್ರೇಮದ ಶಿಖರವನ್ನು ಮುಟ್ಟುವುದಕ್ಕಿಂತ ಹತ್ತುವ ಅನುಭವವೇ ಹೆಚ್ಚು ಮುದ ಕೊಡುತ್ತದೆ’