Friday, December 19, 2014

ಹೂವುಗಳು


.......,...........
ನಮ್ಮಲ್ಲಿ ಹೀಗೆ
ಮೊಗ್ಗರಳುವ ಮುನ್ನವೇ
ಹೂವಾಗಿಸಿಬಿಡುತ್ತೇವೆ
ತಾನೇ ತಾನಾಗಿ ಅರಳಿ
ಬಿಸಿಲನ್ನು ಹೀರಿ
ಬೆಳಕಲ್ಲಿ ನೆಂದು
ಗಾಳಿಯೊಡನಾಡುವ ಮುನ್ನವೇ
ಅರಳಿಸಿಬಿಟ್ಟಿದ್ದೇವೆ
ಮುಗ್ಧತೆ ಕಳೆದುಕೊಂಡಿವೆ ಮುದ್ದುಗಳು
ಆಡುತ್ತವೆ ವಯಸ್ತ ಮಾತುಗಳು
ಹಾಲುಗರೆವ ಮುಖದಲ್ಲಿ
ನಾನೆ ಹೆಣ್ಣು ,
ನಾನು ಗಂಡು
ಹೋರಾಟ ದೌರ್ಜನ್ಯ ಅತ್ಯಾಚಾರ
ಅರಚುತ್ತವೆ ಪಾಪ..
ಬದುಕಿನ ಮೊದಲನೆ ಮೆಟ್ಟಿಲು
ಹೀಗೆ ಆರಂಭಿಸುತ್ತವೆ ನಮ್ಮಲ್ಲಿ
ಯಾರದೋ ವಾದದ ಮರಕ್ಕೆ
ನೇಣು ಹಾಕಿಕೊಂಡ ನಿರ್ಲಜ್ಜರು
ಅಹರ್ನಿಶಿ ಬೆವೆತುಕೊಂಡು
ಕೂಗಾಡಿದ ಮಾತುಗಳು
ಅವಕ್ಕೆ ಅದು ಹೇಗೆ ಅರ್ಥವಾಯ್ತೋ
ಹೇಗೆಲ್ಲಾ ಅರ್ಥವಾಯ್ತೋ?
ಅಂತೂ ಹೋರಾಟವೆನ್ನುತ್ತವೆ
ಹಂತ ಹಂತದ ಬೆಳವಣಿಗೆ
ನಿಂತು ಕಂತು ಹೋಗಿದೆಯಿಲ್ಲಿ
ಮತಾಂತರದಂತೆ ಇದೂ ....
ಮುದ್ದುಗಳನು ಕೊಂದು ಅದರಲ್ಲಿ
ಉತ್ಪ್ರೇಕ್ಷಿತವಾದ ಹೂತು ಬಿಡುವ
ಆತಂಕವಾದ.
******
ಅವರಲ್ಲಿ ಹಾಗೆ.
ಮನುಷ್ಯ ದೇಹ ಅಷ್ಟೆ
ಹೊಗೆಯಾಡುವ ಬಂದೂಕಿನ ನಳಿಗೆ
ಆರುವಂತಿಲ್ಲ
ಜಗತ್ತಿನೆದುರಿಗೆ ಬೆತ್ತಲಾದ ಮಂದಿ
ಬಯಲಾಗಲಿಲ್ಲ.
ಯಾವ ಕುಂಡಲಿನಿಯೂ
ಅವರ ಬಳಿ ಸುಳಿಯುವುದಿಲ್ಲ
ಇಲ್ಲಿಲ್ಲೇ ಹಬೆಯಾಡುತ್ತದೆಯಷ್ಟೆ.
ಆ ಈ ಕಾರಣ ಬೇಕಿಲ್ಲ
ವಿನಾ ಕಾರಣ, ವಿನಾಶ ಕಾರಣವಷ್ಟೆ
ಉಂಡಷ್ಟೇ ಸರಳ, ಹತ್ಯೆಗಳು
ಅಲ್ಲೂ ಮಕ್ಕಳು ಅರಳುವ ಮೊದಲೇ
ಹೂವಾಗಿಬಿಡುತ್ತವೆ
ಗೋರಿಗಳ ಮೇಲೆ.
ದೇವಲೋಕದ ಕನ್ಯೆಯರೂ
ಊಳಿಡುತ್ತಾರೆ.
ಬಂದೂಕಿನ ನಳಿಕೆ ಅಲ್ಲಿಗೂ .......
ಸ್ವರ್ಗಲೋಕದ ಒಳಗೆ
ಸ್ಥಳವಿಲ್ಲವಂತೆ
ತುಳುಕಾಡುತ್ತಿದೆ ಸ್ವರ್ಗ
ಗುಲ್ ಮೊಹರ್ ಮರಗಳಲ್ಲಿ
ಬಂದೂಕುಗಳು ಅರಳುತ್ತವೆ
ಖರ್ಜೂರದ ಬೀಜದೊಳಗೆ
ಬುಲೆಟ್ಟುಗಳು ಬೆಳೆಯುತ್ತವೆ
ಅಲ್ಲೂ ಮಕ್ಕಳು ಅರಳುವ ಮೊದಲೇ
ಹಸಿರು ಹೊದಿಕೆಗಳ ಹೊದ್ದು
ಗೋರಿಗಳ ಮೇಲೆ.
ಹೂವುಗಳಾಗಿಬಿಡುತ್ತಾರೆ.

1 comment:

Badarinath Palavalli said...

'ಅಲ್ಲೂ ಮಕ್ಕಳು ಅರಳುವ ಮೊದಲೇ
ಹೂವಾಗಿಬಿಡುತ್ತವೆ
ಗೋರಿಗಳ ಮೇಲೆ'
ನಿಜವಾಗಲೂ ಅತ್ತುಬಿಟ್ಟೆ...