Friday, September 23, 2016

ಭವದಾಚೆ ಬಾ...

ಭವದಾಚೆ ಬಾ...
ಇಳಿಸಿಬಿಡು ಗುರುವೆ ಎದೆಯೊಳಗಿನಹಮಿಕೆಯ
ಉಳಿಸಿಬಿಡು ನಾಲಗೆಗೆ ನಿನ್ನ ನಾಮಾಮೃತವ
ತೊರೆದು ಹೋಗಲಿ ಭವದ ಷಡ್ರಸ ಬಂಧ
ಕರಗಿ ಹೋಗಲಿ ಜಗದ ಕನ್ನಡಿಯ ಗಂಧ
ಯಾವ ರೂಪವು ನಿಲದು ಎತ್ತರದಿ ನಿಂತಾಗ
ಯಾವ ಗಂಧವು ಸಿಗದು ಆಳದೊಳಗಿಳಿವಾಗ
ಗತಿ ನೀನೆ ಎಂದೆನುವ ಗತಿಯ ಬದಿಗಿಟ್ಟು
ಸ್ಥಿತಿ ನೀನೆ ಎಂದೆನುವ ಸ್ಥಿತಿಯ ಸರಿಸಿಟ್ಟು
ಸ್ತುತಿ ನಿನ್ನದೆನ್ನುವ ಸ್ತುತಿಪಾಠವನು ಬಿಟ್ಟು
ಅದ್ವೈತವಾಗುವ ಶಿವರೂಪವನು ಹೊರಲು
ಬೆಳಕಿಹುದು ಬೆಳಕಹುದು ದಿನಬೆಳಗಿದಂತೆ
ಬೆಳಕಿಳಿವ ಮುನ್ನವೇ ನೀ ಬೆಳಗು ಗುರುವೆ
ನೀ ಬೆಳಗೆ ನಾ ಬೆಳೆವೆ, ನೀ ಬೆಳಗೆ ನಾನುಳಿವೆ
ಬೆಳಗು ಬಾ ಗುರುವೆ ಎನ್ನಾತ್ಮದೊಳಗೆ, ಜೀವಾತ್ಮದೊಳಗೆ

No comments: