Sunday, November 13, 2016

ಸ್ಥಿತಿ - 1

ಸ್ಥಿತಿ

ಒಂದು-
ಬದುಕು ಬಂದ ಹಾಗೆ ಎಂದುಕೊಂಡಿದ್ದ ಪ್ರಜ್ಞಾ ಸಿದ್ದನವಳ್ಳಿಗೆ ಇದ್ದಕ್ಕಿಂದ್ದಂತೆ ಎಲ್ಲವೂ ಬದಲಾಗತೊಡಗಿತ್ತು. ತನ್ನೆದುರಿನ ತೆಂಗಿನ ಮರಗಳು ಕೊಳೆ ರೋಗ ಹಿಡಿದು ಬೀಳತೊಡಗಿದ್ದಾಗ ತಾನು ಕಲಿಯುತ್ತಿದ್ದ ಪತ್ರಿಕೋದ್ಯಮದಲ್ಲಿ ರಾಜಕೀಯದ ಅವಶ್ಯಕತೆ ಎನಿಸಿದಾಗ ಮತ್ತು ಸ್ವಂತ ನಿಲುವುಗಳನ್ನು ಬೆಳೆಸಿಕೊಳ್ಳುವುದು ಕಷ್ಟ ಎನಿಸಿದಾಗ ತಾನು ಸಿದ್ದನವಳ್ಳಿಯ ದೊಡ್ಡ ಮನೆಯಲ್ಲಿ ಮುಲುಗುತ್ತಾ ಕೂತುಬಿಡುತ್ತಿದ್ದಳು. ಅಪ್ಪ ಸಿದ್ದನವಳ್ಳಿಯ ಹನುಮಂತ ದೇವಸ್ಥಾನದ ಅರ್ಚಕ. ಚಿಕ್ಕಂದಿನಲ್ಲೇ ತಾಯಿ ಸತ್ತದ್ದರಿಂದ ಪ್ರಜ್ಞಾಳಿಗೆ ಹೆಣ್ತನವು ಸತ್ತುಹೋಗಿತ್ತು. ಪೋಲಿ ಪುಂಡರ ಕಾಟದಿಂದ ತಪ್ಪಿಸಿಕೊಳ್ಳಲು ತಾನು ಗಂಡಾಗಿ ನಿಲ್ಲುವುದು ಅನಿವಾರ್ಯವಾಗಿತ್ತು. ಆದರೆ ಅರ್ಚಕ ಮನೆತನದ ಹುಡುಗಿ ಗಂಡಾಗಿ ಗಂಡುಬೀರಿಯಂತೆ ನಿಲ್ಲುವುದು ಆ ಹಳ್ಳಿಯಲ್ಲಿ ಸಾಧ್ಯವಿರಲಿಲ್ಲ. ಕೆಲವೊಮ್ಮೆ ಹೆಣ್ಣಾಗಿ, ಮತ್ತೊಮ್ಮೆ ಗಂಡಾಗಿ, ಆಗಾಗ ಸುತ್ತುತ್ತಾ, ಬೀಳುತ್ತಾ, ಏಳುತ್ತಾ, ಅಪ್ಪನಿಂದ ಬೈಸಿಕೊಳ್ಳುತ್ತಾ, ಕಡೆಕಡೆಗೆ ಮನೆಯಲ್ಲಿ ಮೌನವಾಗಿರುವಂಥ ಕಾಲಕ್ಕೆ ಬಂದು ನಿಂತಾಗಿತ್ತು. ಅಪ್ಪ ಮಗಳ ನಡುವಿನ ಮಾತುಕತೆಗಳು ಅಸಂಗತ ಪಾತ್ರಗಳ ಸಂಭಾಷಣೆಯನ್ನು ಹೋಲುತ್ತಿದ್ದವು. ಮತ್ತು ಅವು ಹೀಗಿರುತ್ತಿದ್ದವು...
"ದೇವಸ್ಥಾನದಲ್ಲಿ ಇವತ್ತು ಜನವೋ ಜನ"
’ಹ್ಮ್, ಪಾಪದವರು’
’ಪ್ರಸಾದಕ್ಕೆ ರಸಾಯನ ಮಾಡುತ್ತೇನೆ’
’ಹ್ಮ್, ಹಣ್ಣು ಹೆಚ್ಚಿಡುತ್ತೇನೆ’
’ನಿನಗೇಕೆ ರಸಾಯನ ಇಷ್ಟವಿಲ್ಲ?’
’ಇಲ್ಲ, ಹಾಗೇನೂ ಇಲ್ಲ’
’ಹ್ಮ್’
’ವಿವಿಧ ಹಣ್ಣುಗಳು ವಿವಿಧ ಜನರ ಪಾಪದ ಹಾಗೆ ಕಾಣಿಸುತ್ತದೆ ಅಲ್ಲವೇ?’
’ಇಲ್ಲ. ಹೆಚ್ಚಿದ ಹಣ್ಣುಗಳ ಆಕಾರ ಜನರ ಮನಸ್ಥಿತಿಯಂತೆ ಕಾಣಿಸುತ್ತದೆ’
’ಅಮ್ಮ ನಿನಗಾಗಿ ಬಿಟ್ಟು ಹೋದದ್ದು ಸೌಂದರ್ಯವೊಂದೆ’
’ಹ್ಮ್, ಈ ಕತ್ತಲಿನ ಹಳ್ಳಿಯಲ್ಲಿ, ಅದು ಕಾಣಿಸೋದೇ ಇಲ್ಲ’
’ಹ್ಮ್ ಅಂದ ಚಂದ ಬೇರೆಯವರಿಗಾ ಮಗಳೇ?’
ಫಸಲು ಬಿಡುತ್ತಿದ್ದ ತೆಂಗಿನ ಮರಕ್ಕೆ ಕೊಳೆ ಬಂದು ಸತ್ತುಹೋಯಿತು’
’ಸರಿ ಹೊರಟುಬಿಡು, ನಿನಗೆ ಜನ ಬೇಕು, ಹೆಸರುಬೇಕು, ಹೊರಟುಬಿಡು.’
’ಹ್ಮ್’

ಎರಡು-

ಸಿದ್ದನವಳ್ಳಿ ನಿಧಾನಕ್ಕೆ ಬದಲಾಗುತ್ತಿತ್ತು. ಹೊಸತಲೆಮಾರಿನ ಹುಡುಗರು ಹುಟ್ಟಿಕೊಂಡರು, ಪ್ರಜ್ಞಾಳ ಓರಗೆಯವರು ಬಿ.ಎಸ್.ಸಿ, ಎಮ್ ಎ, ಅಗ್ರಿಕಲ್ಚರ್, ಇತ್ಯಾದಿ ವಿಚಿತ್ರ ಹೆಸರುಗಳ, ಕಾಂಬಿನೇಶನ್ ಗಳ ಕೋರ್ಸುಗಳನ್ನು ಮಾಡಿ ಸುಮ್ಮನಾದರು. ಕೆಲಸಕ್ಕೆ ಸೇರಿದರು ಸಾವಿರಗಟ್ಟಲೆ ದುಡಿಯುವ ಯುವಕರು ಹೊರಗಿನ ಸ್ಪರ್ಧೆಗೆ ತಮ್ಮನ್ನು ತೆರೆದುಕೊಳ್ಳಲಾರದೆ ಹತಾಶೆಯಿಂದ ಓಡಾಡತೊಡಗಿದರು.ಗುಂಪುಗಳ ರಚನೆಯಾಯ್ತು. ಊರಿನ ಮಧ್ಯದಲ್ಲಿನ ಜಗಲಿ ಕಟ್ಟೆಯ ಮೇಲೆ ರಾಜಕೀಯ, ಹಾದರ, ಸ್ಪೋರ್ಟ್ಸ್ ಸಾಹಿತ್ಯಾದಿಗಳನ್ನು ಹರಟತೊಡಗಿದರು. ಅದರೊಲ್ಲೊಬ್ಬ ಚೊತ್ತೆ ಎನ್ನುವ ಅಡ್ಡ ಹೆಸರಿನವನು ಹಂದಿಯನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿಸಬೇಕು ಎಂದ, ಅದಕ್ಕೆ ಸಮರ್ಥನೆಗಾಗಿ ಹೀಗೆ ಹೇಳಿದ.
’ಹಂದಿ ಕೇರಿಯನ್ನು ಶುದ್ಧ ಮಾಡುತ್ತದೆ, ಅಲ್ಲಿಗೆ ಅದು ನಾಡಿನ ಶುದ್ಧತೆಯಲ್ಲಿ ಪ್ರಮುಖ ಪಾತ್ರವಹಿಸಿದಂತೆ, ಇದನ್ನು ದಾಸರೇ ಒಪ್ಪಿಕೊಂಡಿದ್ದಾರೆ. ಹಂದಿಗಳು ತಮ್ಮನ್ನು ಹೊಲಸು ಮಾಡಿಕೊಂಡು ಇಡೀ ಕೇರಿಯನ್ನು ಹೊಲಸು ಮುಕ್ತ ಮಾಡುತ್ತವೆ ಅವು ತ್ಯಾಗಜೀವಿಗಳು, ಆದರೆ ನಾಡಿನ ಜನ ಅದನ್ನು ತುಚ್ಚವೆಂದು ಪರಿಗಣಿಸಿ ಊರಿನಿಂದ ಹೊರಗಿಟ್ಟಿರುವುದು ಶುದ್ದ ತಪ್ಪು. ಇದು ಊರಿನ ಮಧ್ಯದಲ್ಲಿರಬೇಕು ಮತ್ತು ಎಲ್ಲರ ಪುರಸ್ಕಾರಕ್ಕೆ ಒಳಗಾಗಬೇಕು’, ಎಂದನು.
ಇದನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದ ಗೆಳೆಯನೊಬ್ಬ ತನ್ನ ಸೋದರ ಮಾವನ ಮಗನಿಗೆ ಫೋನ್ ಹಚ್ಚಿ ಈ ತಮಾಶೆಯ ಪ್ರಸಂಗವನ್ನು ವಿವರಿಸಿದ. ಇಂಟರೆಸ್ಟಿಂಗ್ ಎನಿಸಿ ಆ ಮಗ ಅದನ್ನು ಪತ್ರಿಕೆಯಲ್ಲಿ ’ಚಿಂತಕರ ಕಟ್ಟೆ ಮಾತು’ ಎಂಬ ಅಡಿಯಲ್ಲಿ ಹಾಸ್ಯ ಲೇಖನವನ್ನಾಗಿಸಿ ಪ್ರಕಟಿಸಿದ. ಹೀಗೆ...
ನಾಡಿನ ಸಾಕ್ಷಿಪ್ರಜ್ಞೆಗಳಂತಿರುವ ಚಿಂತಕರು ತಮ್ಮ ಕಟ್ಟೆ ಮಾತಿನಲ್ಲಿ ಹಂದಿಯನ್ನು ರಾಷ್ಟ್ರೀಯ ಪ್ರಾಣೆಯನ್ನಾಗಿ ಘೋಷಿಸಬೇಕೆಂದು ಸರಕಾರವನ್ನು ಒತ್ತಾಯಿಸಿದ್ದಾರೆ. ನಾಡಿನ ನೆಲ ಜಲ ಭಾಷೆಯನ್ನು ಆಮೂಲಾಗ್ರವಾಗಿ ಅರಗಿಸಿಕೊಳ್ಳುವ ಸೂಕರವನ್ನು ಕಡೆಗಣಿಸುವುದು ಮಹಾಪರಾಧವೆಂದು ತಿಳಿಸಿದ್ದಾರೆ. ಹಂದಿಗಳೇತಕೆ ಓಡುವುದಮ್ಮ ಎಂಬ ಕವನದ ಮೂಲಕ ತಮ್ಮ ಪ್ರೇಮವನ್ನು ಮತ್ತು ಅವುಗಳ ದಯನೀಯ ಸ್ಥಿತಿಯನ್ನು ವಿವರಿಸಿದ್ದಾರೆ
ಹಂದಿಗಳೇತಕೆ ಓಡುವುದಮ್ಮ
ಗಂಧಕೆ ಹೆದರಿಹವೇ?
ಗಂಧವು ದೇವರ ಸೋಪೇನಮ್ಮ
ದೇವರೆ ಬೇಡೆಮಗೆ.
ಹೊರಳಾಡಿ ಗುರುಗುಟ್ಟಿ
ಆಡುವೆವು ನಾವು
ನಮ್ಮಾಟ ಶುದ್ಧತೆಯ ಕಡೆಗೆ
ಇಷ್ಟಾದರೂ ಜನರೇಕೆ
ದೂರವಿಡುತಿಹರು
ಅವರಾಟ ಯಾವ ಕಡೆಗೆ?
ರೋಗವಿರಬಹುದು, ಬರಬಹುದು
ಕಾರಣ, ಕೊಳಚೆ ಚರಂಡಿ!
ಮುಗಿಬಿದ್ದು ಆಡುವೆವು ಒಳಗೆ
ನಮಗಾಗದೆ ನೆಗಡಿ ಥಂಡಿ?
ಹೊಲಸು ಮಾಡುವವರು ಅವರು
ಜಲಗಾರ ನಾವು ತಾನೆ
ನಿಲಿಸಲಿ ’ಅದ’ ನೊಮ್ಮೆ ಅವರು
ಕೊಲೆಗಾರರವರೆ ತಾನೆ
ಹತ್ತಾರು ಮಕ್ಕಳ ಹೆತ್ತು ಸಲಹಿ
ಕಷ್ಟ ಪಟ್ಟವರು ನಾವು
ಸೂಕರ ಮಾತೆಂಬ ಹೀಗಳಿಕೆಗೆ
ನೊಂದು ಬೆಂದವರು ನಾವು
ಚಿಂತಕರ ಕಟ್ಟೆಯ ಕವನಗಳು ಇಂದಿನ ಸ್ಥಿತಿಯನ್ನು ವಿವರಿಸುತ್ತವೆ ಮತ್ತು ಕಟ್ಟೆ ಚಿಂತಕರು ಈ ಶತಮಾನದ ಪ್ರಗತಿಯ ಚಿನ್ಹೆಯಾಗಿದ್ದಾರೆ.ಭವಿಷ್ಯದ ಸಮಾಜವನ್ನು ರೂಪಿಸುವಲ್ಲಿ ಇವರ ಪಾತ್ರ ದೊಡ್ಡದು. ಎಂದೆಲ್ಲಾ ಬರೆದುಬಿಟ್ಟಿದ್ದ. ಚಿಂತಕರ ಕಟ್ಟೆಯ ವರದಿ ಪತ್ರಿಕೆಯಲ್ಲಿ ಬಂದುದನ್ನು ನೋಡಿದ ಕಟ್ಟೆ ಹುಡುಗರು ಅಚ್ಚರಿಗೊಳಗಾದರೂ ತೋರ್ಪಡಿಸಿಕೊಳ್ಳದೆ ಇದು ನಮಗೆ ಸಾಮಾನ್ಯ ಎಂಬಂತೆ ವರ್ತಿಸತೊಡಗಿದರು. ಹೀಗೆ ಸಿದ್ದನವಳ್ಳಿಯಲ್ಲಿ ವಿಲಕ್ಷಣ ಗುಂಪೊಂದು ಹುಟ್ಟಿಕೊಂಡಿತು. ಪ್ರಜ್ಞಾಳಿಗೆ ಮೊದಮೊದಲು ಇವೆಲ್ಲವೂ ವಿಚಿತ್ರ ಎನಿಸತೊಡಗಿದ್ದು ಹೌದಾದರು ಕ್ರಮೇಣ ಇದರ ಪ್ರಭಾವಕ್ಕೆ ಬೀಳುವಂತಾಯ್ತು. ಚಿಂತಕರ ಕಟ್ಟೆ ಜನರಿಗೆ ಕೆಲಸವಿಲ್ಲದ ಕಾರಣ ಹರಟೆಯೇ ಕೆಲಸವಾದ ಕಾರಣ ಅವರ ಮಾತುಗಳಲ್ಲಿ ಕುತರ್ಕಗಳು ಮತ್ತು ಅದಕ್ಕೆ ಸಮರ್ಥನೆಗಳು ಕುಣಿಯತೊಡಗಿದ್ದವು. ಆ ’ಮಗ’  ಆಗಿಂದಾಗ್ಗೆ ಫೋನ್ ಹಚ್ಚಿ ಇಲ್ಲಿನ ವಿಚಾರಗಳನ್ನು ತನ್ನ ಹಾಸ್ಯಲೇಖನಕ್ಕೆ ಮೀಸಲಾದ ಕಾಲಮ್ಮಿನಲ್ಲಿ ಪ್ರಕಟಿಸುತ್ತಿದ್ದ. ಇದು ಪ್ರತಿವಾರವೂ ಬರುವಂತಾಯ್ತು. ಚಿಂತಕ ಕಟ್ಟೆಯವರು ರೂಢಿಯಲ್ಲಿನ ವಿಷಯಗಳನ್ನು ತಮಗೆ ಬೇಕಾದಂತೆ ತಿರುಗಿಸಿ ಚರ್ಚೆ ಮಾಡುತಿದ್ದರು. ಅಲ್ಲೊಂದು ಕಲ್ಪನಾ ಲೋಕ ಅನಾವರಣಗೊಳ್ಳುತ್ತಿತ್ತ್ಜು ಮತ್ತು ಅದು ಆಧಾರರಹಿತವಾಗಿತ್ತು. ಒಮ್ಮೆ ಆ ’ಮಗ’ ಈ ಚಿಂತಕರನ್ನು ಟಿವಿಯೊಂದಕ್ಕೆ ಪರಿಚಯಿಸಿಬಿಟ್ಟ, ನಿರಂತರವಾಗಿ ಬಡಬಡಿಸುವ ಆ ಟಿವಿ ಚಾನೆಲ್ಲಿನವರಿಗೆ ಇಂತಹ ಹರಟೆ ಕೋರರ ಮಾತಿನ ಮೇಲೆ ತಮ್ಮ ಟಿ ಆರ್ ಪಿ ಹೆಚ್ಚಿಸಿಕೊಳ್ಳುವ ಹಪಹಪಿಯಿದ್ದುದರಿಂದ ಇಂಥವರನ್ನು ಕರೆಸಿ ಕಾಲಕ್ಷೇಪಕ್ಕೆ ಕೂಡಿಸಿ ಸ್ಲಾಟ್ ಫಿಲ್ ಮಾಡುತ್ತಿದ್ದರು. ಹೀಗೆ ಸಿದ್ದನವಳ್ಳಿಯ ಯುವಕರು ಟಿವಿಗಳಲ್ಲಿ ಕಾಣಿಸುವಂತಾದದ್ದು


ಮೂರು-
ಪ್ರಜ್ಞಾ ತನ್ನ ಪತ್ರಿಕೋದ್ಯಮದ ಬುದ್ದಿವಂತಿಕೆಯನ್ನು ಇಲ್ಲಿ ಪ್ರಚುರ ಪಡಿಸಬೇಕೆಂದು ಹಂಬಲಿಸಿ ಚೊತ್ತೆಯ ಮುಖಾಂತರ ಚಿಂತಕರ ಕಟ್ಟೆಗೆ ತನ್ನನ್ನು ಪರಿಚಯಿಸಿಕೊಂಡಳು. ಅಗಲ ಕಣ್ಣುಗಳ, ತೆಳುಗುಲಾಬಿ ತುಟಿಗಳ, ಹಾಲಿನ ಕೆನೆ ಬಣ್ಣದ  ಹುಡುಗಿಯೊಬ್ಬಳು ತನ್ನ ಕಟ್ಟೆಗೆ ಬರುತ್ತಾಳೆ ಎಂಬುದು ಅಲ್ಲಿನ ಹುಡುಗರಿಗೆ ಹುಚ್ಚು ಹಿಡಿಸಿದಂತಾಗಿತ್ತು. ಆದರೆ ಚೊತ್ತೆ ಅವಳನ್ನು ಅಂಟಿಕೊಂಡೇ ಇರುತ್ತಿದ್ದರಿಂದ ಯಾರೂ ಬಾಯಿಬಿಡದೆ ಕಟ್ಟೆ ಪುರಾಣದಲ್ಲಿ ಮಗ್ನರಾಗಿರುವಂತೆ ನಟಿಸುತ್ತಾ ರಾತ್ರಿಗಳಲ್ಲಿ ಮುಲುಗುತ್ತಿದ್ದರು. ಸಿದ್ದನವಳ್ಳಿಯ ಹನುಮಂತನ ದೇವಸ್ಥಾನದ ಊರಿನ ತಲೆಬಾಗಿಲಲ್ಲಿದೆಯಷ್ಟೆ, ಹನುಮಂತನ ಎಡಗೈ ಉದ್ದಕ್ಕೂ ಊರು ಬೆಳೆದು ನಿಂತಿದೆ. ಹನುಮನ ದೇಗುಲದಿಂದ ಒಂದಿಪ್ಪತ್ತು ಹೆಜ್ಜೆ ದೂರದಲ್ಲಿ ಅರಳಿ ಕಟ್ಟೆ ಈಗ ಚಿಂತಕರ ಕಟ್ಟೆಯಿದೆ, ಅಲ್ಲಿಂದ ಎಡಕ್ಕೆ ತಿರುಗಿ ಎಪ್ಪತ್ತು ಹೆಜ್ಜೆ ಹಾಕಿದರೆ ಮರಗೆಲಸದ ಬಡಗಿಯ ಆಚಾರ್ರ ಮನೆ, ಅಲ್ಲಿಂದ ಬಲಕ್ಕೆ ತಿರುಗೆ ಸಣ್ಣ ದಾರಿಯಂತಹ ದಾರಿಯೇ ಇಲ್ಲದ ದಾರಿಯಲ್ಲಿ ನಡೆದು ಮುಂದುವರೆದರೆ ದೊಡ್ಡ ಗೇಟಿನ ಮನೆಯೊಂದು ಕಾಣುತ್ತದೆ. ಅದು ಅರ್ಚಕರ ಮನೆ. ನಾಲ್ಕು ಕಂಬಗಳ,ಒಮ್ಮೆಲೆ ಐವತ್ತು ಜನಕ್ಕೆ ಊಟಕ್ಕೆ ಹಾಕಬಹುದಾದ ದೊಡ್ಡ ಪಡಸಾಲೆಯ, ಎರಡು ದೊಡ್ಡ ಕೋಣೆಗಳ ಮನೆ, ಪಡಸಾಲೆಯಲ್ಲಿ ಐದು ಕಂಬಗಳು, ಪಡಸಾಲೆ ಪ್ರವೇಶಿಸಿದರೆ ಎಡಕ್ಕೆ ಅಡುಗೆ ಮನೆ, ಹಿಂದಿನ ಕಾಲದ ಮನೆಯ ಹಾಗೆ ಕಾಣುವ ಆದರೆ ಹೊಸ ಸೌಲಭ್ಯಗಳನ್ನು ರೂಢಿಸಿಕೊಂಡಿರುವ ಮನೆ, ಮನೆಯ ಬಲಭಾಗದಲ್ಲಿ ದೇವರ ಕೋಣೆ, ಸಾವಕಾಶವಾಗಿ ಹತ್ತು ಜನ ಕೂಡಬಹುದಾದಷ್ಟು ಜಾಗವಿರುವ ಮನೆ. ಅಡುಗೆ ಮನೆಯಿಂದ ದೇವರ ಮನೆಗೆ ನೇರ ದಾರಿ, ಬಾಗಿಲಿಲ್ಲ. ಗೋಡೆಗೆ ಒರಗಿ ಪ್ರಜ್ಞಾ ಮತ್ತು ಒಲೆಯ ಮುಂದೆ ಅರ್ಚಕರು, ಚೊತ್ತೆ ಮತ್ತು ಕಟ್ಟೆಯ ಸ್ಥಿತಿ ಮತ್ತು ಪರಿಸ್ಥಿತಿಯ ಬಗ್ಗೆ ತುಂಡು ತುಂಡು ಮಾತುಗಳು, ಆಕಾಶದಲ್ಲಿನ ಘಟ್ಟಿಸಲಾರದ ಮೋಡಗಳ ನಡೆಯಂತೆ, ಹನಿಗಳನ್ನು ತುಂಬಿಸಿಕೊಂಡಿದ್ದರೂ ಸುಮ್ಮನೆ ಅಲೆಯುವ ಮೋಡಗಳಂತೆ ನಡೆಯುತ್ತಿದ್ದವು.
-ಕಟ್ಟೆಯ ಪಾವಿತ್ರತೆ ಹೊರಟು ಹೋಗಿದೆ ಮಗಳೆ
-ನಾನು ಪ್ರದಕ್ಷಿಣೆ ಹಾಕುತ್ತೇನಲ್ಲ
-ಸುತ್ತುಗಟ್ಟುವಾಗ ಮನಸ್ಸಿನಲ್ಲಿ ಏನಿರುತ್ತೆ ಮಗಳೆ
-ನಾನು ಕಲಿತ ವಿದ್ಯೆ ಪ್ರಕಾಶವಾಗಲಿ ಎಂದಿರುತ್ತದೆ ಅಪ್ಪ
-ಸುತ್ತುಗಟ್ಟುವುದು ಎಂದರೆ ಬಿಂದುವಿನಿಂದ ಪರಿಧಿಯವರೆಗಿನ ಓಡಾಟ ಎಂದಷ್ಟೆ ತಿಳಿದೆಯಾ?
-ಮತ್ತೆ
-ಸ್ಥಿರವಾದ ವ್ಯಕ್ತಿತ್ವ ಮತ್ತು ಚಿಂತನೆಗಳು ಬಿಂದುವಿನಂತೆ ಮಗಳೆ, ಪರಿಧಿಯನ್ನು ವಿಸ್ತರಿಸುತ್ತಾ ಹೋಗಬಹುದು ಆದರೆ ಬಿಂದುವನ್ನು ಬಿಡುವಂತಿಲ್ಲ. ಸಾವಿರಾರು ಬಿಂದುಗಳಿಗೆ ಸಾವಿರಾರು ಪರಿಧಿಗಳಾಗಿಬಿಟ್ಟರೆ ಅದು ಸಿಕ್ಕು, ಗೋಜಲಿನಂತೆ ಮಗಳೆ, ನಿಮ್ಮ ಕಟ್ಟೆ ಜನಗಳಿವೆ ಬಿಂದುವಿಲ್ಲ, ಮನಸ್ಸು ಬಂದಂತೆ ಬಿಂದುವನ್ನೂ ಮತ್ತು ಪರಿಧಿಗಳನ್ನೂ ಹುಟ್ಟುಹಾಕಿಕೊಳ್ಳುತ್ತಾರೆ.
-ಜನ ಗುರುತಿಸುವುದು ಪರಿಧಿಯನ್ನು ಮಾತ್ರ ಬಿಂದು ಕಣ್ಣಿಗೆ ಕಾಣಲ್ಲ
-ಬಿಂದುವಿಲ್ಲದೆ ಪರಿಧಿಗೆ ಅಸ್ತಿತ್ವವಿಲ್ಲ. ಸತ್ಯಾನ್ವೇಶಕ ಬಿಂದುವನ್ನು ಗುರುತಿಸುತ್ತಾನೆ ಮತ್ತು ಆಸೆಬುರುಕ, ಪರಿಧಿಯನ್ನು. ಚೊತ್ತೆ ಎನ್ನುವ ನಿನ್ನೊಟ್ಟಿಗೆ ಓಡಾಡುವವನ ಹೆಸರು ಊರಿನಲ್ಲಿ ಅಷ್ಟು ಸರಿಯಿಲ್ಲ. ಶುದ್ಧ ಹಡಬೆ, ರೂಢಿಗೆ ವಿರುದ್ದವಾದುದನ್ನೇ ಹೇಳ್ತಾನೆ. ನಿನ್ನ ತನ್ನ ಸ್ವಂತ ಅಂದುಕೊಂಡಿದ್ದಾನೆ ಮಗಳೇ. ದೇವರ ಮುಂದೆ ನಾನು ನಿಲ್ಲುವಂತಿಲ್ಲ. ನಾಲ್ಕು ಜನಕ್ಕೆ ಮಂತ್ರಸಹಿತ ಆಶೀರ್ವಾದ ಮಾಡುವುದಕ್ಕೂ ಹೆದರಿಕೆ. ನೀತಿಗೆಟ್ಟ ಮಗಳಿಗೆ ತಂದೆಯಾದೆ ಅನ್ನೋ ವಿಕಾರ ಕಾಡುತ್ತೆ.
-ನಾನು ಊರು ಬಿಡುತ್ತೇನೆ ಅಪ್ಪ
-ನೀನು ಬಿಟ್ಟರು ಊರು ನಿನ್ನನ್ನ ಬಿಡೊಲ್ಲ ಕೂಸೆ, ಸಿದ್ದನವಳ್ಳಿ ನಿನ್ನ ಹೆಸರಿಗಂಟಿಕೊಂಡಿದೆ.ಮದುವೆಯಾಗುತ್ತೀಯ ಮಗಾ?
-ನಾನು ಚೊತ್ತೆಯನ್ನು ಹಾಗೆ ನೋಡಿಲ್ಲ ಅಪ್ಪ
-ಮತ್ತೆ ಹೇಗೆ?
-ಅವನು ಅಣ್ಣನ ಹಾಗೆ, ಹಿಂದಿಯಲ್ಲಿ ದಾದಾ ಎಂದ ಹಾಗೆ ಅಪ್ಪ
-ಅರಕ್ತದಲ್ಲಿ ಆ ಭಾವ ನಿನಗೆ ಇರಬಹುದು, ಅವನಿಗೆ ಇದೆಯಾ?
-ಅದು ಅವನ ವ್ಯಕ್ತಿತ್ವ ಬಿಡು
-ಸೋಲುತ್ತಿಯಾ ಮಗಳೆ.
-ಪವಿತ್ರವಾಗುತ್ತೇನೆ
-ಗೆಲ್ಲುವುದು ಅಫೀಮಿನಂತೆ
-ಸೋಲುವುದು ಕೂಡ
******
ಸಿದ್ದನವಳ್ಳಿಯ ಹನುಮಂತನ ದೇವಸ್ಥಾನದ ಆವರಣದಲ್ಲಿ ಹಬ್ಬದ ವಾತಾವರಣವಿತ್ತು. ಇಬ್ಬರು ಚಿಂತಕರ ಮದುವೆಗೆ ತಯಾರಿಯಾಗುತ್ತಿತ್ತು. ಆ ಈ ಮಾತುಗಳು ಗುಲ್ಲುಗಳಾಗಿ ಗಲಭೆಗಳಾಗಿ ಸಣ್ಣ ದ್ವನಿಗಳು ಸಂಭ್ರಮವಾಗಿ , ಮನೆ ಮನೆಗಳ ಮಾತುಗಳು ಗುಸುಗುಸು ಸುದ್ದಿಗಳಾಗಿ ಓಡಾಡುತ್ತಿದ್ದವು. ಇದಾದ ತಿಂಗಳಿಗೆ ಚೊತ್ತೆಯೊಂದಿಗೆ ಪ್ರಜ್ಞಾಳ ಮದುವೆಯಾಯ್ತು. ಮದುವೆಯ ದಿನ ಚಿಂತಕರ ಕಟ್ಟೆಯ ಜನವೂ ಸೇರಿದಂತೆ ಅರ್ಚಕರು ಮಂತ್ರಪೂರ್ವಕವಾಗಿ ಮದುವೆ ಮುಗಿಸಿದರು. ಆ ’ಮಗ’ ಈ ಸುದ್ದಿಯನ್ನು ತನ್ನ ಪತ್ರಿಕೆಯ ’ಚಿಂತಕರ ಕಟ್ಟೆ ಮಾತಿ’ನ ಕಾಲಮ್ಮಿನಲ್ಲಿ ’ಕಟ್ಟೆ ಮದುವೆ’ ಎಂಬ ಶೀರ್ಷಿಕೆಯಡಿಯಡಿಯಲ್ಲಿ ಹಾಸ್ಯ ಲೇಖನ ಬರೆದ. ಚೊತ್ತೆ ಮತ್ತು ಪ್ರಜ್ಞಾ, ’ಸಾಕ್ಷಿ ಪ್ರಜ್ಞೆ’ಗಳಂತೆ ಎಂಬ ರೂಪಕದ ಹಾಗಿರುವ ಉಪಮೆಯನ್ನು ಕೊಟ್ಟು ರಂಜನೀಯವಾಗಿ ವಿವರಿಸಿದ್ದ.
ಸಿದ್ದನವಳ್ಳಿಯ ದೊಡ್ಡ ಗೇಟು ಸದಾ ಸದ್ದು ಮಾಡುತ್ತಾ, ಹಿತ್ತಲಿನ ಕಡೆಗೆ ಮುಖ ಮಾಡುತ್ತಾ ಇರುತ್ತಿತ್ತು. ಅರ್ಚಕರ ಮನೆ, ನಾಲ್ಕು ಪಾಲಾಗಿ ಶವವನ್ನು ಹೊರುವ ನಾಲ್ಕು ತುಂಡು ಜನರಂತೆ ಕಾಣತೊಡಗಿತ್ತು. ಪ್ರಜ್ಞಾ ತನ್ನ ಪಾಲಿನ ಮನೆಯಲ್ಲಿ ಚೊತ್ತೆಯ ಉಡಿಗೆ ಹಾಕಿ ಆದರ್ಶ ಗೃಹಿಣಿಯಾದಳಿ. ಒಂದು ವರ್ಷದಲ್ಲಿ ಎಲ್ಲವೂ ಬದಲಾಗಿಬಿಟ್ಟಿತ್ತು. ಚೊತ್ತೆ ಆ ’ಮಗ’ ನ ಪೇಪರಿನಲ್ಲಿ ತನ್ನ ವಾಗ್ದಾಳಿಯನ್ನು ನಿಲ್ಲಿಸಿದ್ದ. ಆದರೆ ಕಟ್ಟೆಯ ಜನರು ಸಕ್ರಿಯರಾಗಿದ್ದರು. ಜನಕ್ಕೆ, ಈ ಗದ್ದಲ ದೊಂಬರಾಟ ಎನಿಸಿ ಸುತ್ತ ನೆರೆಯ ತೊಡಗಿದರು. ಪ್ರಜ್ಞಾಳ ಪತ್ರಿಕೋದ್ಯಮದ ಸರ್ಟಿಫಿಕೇಟ್ ಧುತ್ತನೆ ಎದ್ದು ನಿಂತಿತ್ತು. ಚೊತ್ತೆ- ಹೊಲ, ಗದ್ದೆ, ಸಂಪಾದನೆ ಹಸು,ವ್ಯಾಪಾರ ಹೀಗೆ ಸಂಸಾರದಲ್ಲಿ ಮುಳುಗಿದ. ಮತ್ತು  ಚೊತ್ತೆ ಮತ್ತು ಪ್ರಜ್ಞಾಳ ನಡುವೆ ಆಗಾಗ ನಡೆಯುತ್ತಿದ್ದ ಮಾತುಗಳು ಕಾದ ಕಬ್ಬಿಣ ಮತ್ತು ಸುತ್ತಿಗೆಯ ನಡುವಿನ ಶಬ್ದದಂತೆ ಕೇಳುತ್ತಿತ್ತು. ಹೀಗೆ...
-ಓಯ್
-ಹೇಳು
-ಬಾ
-ಇಲ್ಲ
-ನಡಿ
-ಸರಿ
-ಮಾತಿಗೆ ಮಾತು ಬೇಡ
-ಮಾತೇ ಬೇಡ
-ಮಾರ್ಯಾದೆಗೆಟ್ಟವಳೆ, ಕಟ್ಟೆಯ ಸಂಪರ್ಕ ಬಿಡು
-ನಿನ್ನ ಅಡಿಯಾಳಲ್ಲ
-ಸಮಾನತೆಯ ಮಾತು
-ಅಲ್ಲ ಸ್ವಾತಂತ್ರ್ಯದ ಮಾತು
-ಪತ್ರಿಕೆಯಲ್ಲಿ ನಿನ್ನ ಬರಹ ಬಂತು ಎಂಬ ಜಂಬ ನಿನಗೆ
-ಹೌದು ಅದು ವಿಜಯದ ಗರ್ವ, ನೀನು ಕಲಿಸಿದೆ , ನಿಲ್ಲಿಸಿದೆ. ನಾನು...
-ರೂಢಿಗೆ ಎದುರಾಗಿ ಹೋಗುವ ಹುಡುಗುತನ ಅದು. ಹೋದೆ. ನಿಲ್ಲಿಸಿದೆ
-ನಾನು ಅದನ್ನೆ ಅಪ್ಪಿಕೊಂಡಿದ್ದೇನೆ. ಲಂಕೇಶರನ್ನ , ಅನಂತಮೂರ್ತಿಗಳನ್ನ ಕಾರ್ಲ್ ಮಾರ್ಕ್ಸ್ ರನ್ನ, ಚಿಗುವೆರಾನನ್ನ ಓದಿದ್ದೇನೆ. ರೂಢಿಯನ್ನ ಒದೆಯದೆ ನಮಗೆ ಅಸ್ತಿತ್ವವಿಲ್ಲ
-ನಿನ್ನದೂ ಅಂತ ಸ್ವಂತ ಮಾತಿದೆಯಾ?, ವಾಕ್ಯವಿದೆಯಾ?, ಅಕ್ಷರಗಳಿವೆಯಾ?
---------
ಸಿದ್ದನವಳ್ಳಿಯ ಬೆಳಗು ಬೆಳಗಾಗುತ್ತಲೂ ಬಯಲಾಗುತ್ತಲೂ ಇತ್ತು. ಹನುಮಂತ ದೇವಸ್ಥಾನದ ಅರ್ಚಕರು ಪಾಲಾಗಿದ್ದ ತಮ್ಮ ಪಾಲಿನಲ್ಲಿ ಅರೆಹುಚ್ಚರಂತೆ ಕೂಗುತ್ತಿದ್ದರು.
’ಬೆಂಕಿ, ಓ ಬನ್ನಿ! ಬೆಂಕಿ,
ಜನ ಓಡೋಡಿ ಬಂದರು, ’ಎಲ್ಲಿ? ಹೇಗೆ? ಯಾವಾಗ?’ ಗುಸು ಗುಸು ಪ್ರಶ್ನೆಗಳು ರಾಚತೊಡಗಿದವು
ಇಲ್ಲಿ, ಹೀಗೆ, ವರ್ಷವಾಯ್ತು ಎಂಬಂತ ಉತ್ತರಗಳನ್ನು ತಮ್ಮ ಎದೆಗೆ, ತಲೆಗೆ ಮತ್ತು ಪ್ರಜ್ಞಾಳ ಚಿತ್ರದತ್ತ ಕೈ ತೋರಿಸುತ್ತಾ ಕೂಗುತ್ತಿದ್ದರು.
"ಬನ್ನಿ ಭಟ್ರೆ ಏನಾಗಿಲ್ಲ, ಸ್ವಲ್ಪ ಸುಧಾರಿಸಿಕೊಳ್ಳಿ, ನೀರು ಬೇಕಾ" ಎನ್ನುತ್ತಾ ಜನ ನೆರಳುಗಳಾಗತೊಡಗಿದರು, ಉದ್ದ ನೆರಳುಗಳು ಗಿಡ್ಡ ನೆರಳುಗಳು, ಅಡ್ಡ ನೆರಳುಗಳು ಸೊಟ್ಟ ನೆರಳುಗಳು ಹೀಗೆ ನೆರಳುಗಳು ಆಕೃತಿಯನ್ನು ಪಡೆಯಲಾರಂಭಿಸಿದವು. ಎಲ್ಲವೂ ನಿಧಾನವಾಗಿ ಸಣ್ಣಗಾಗಿ ಕೊನೆಗೆ ಇಲ್ಲವಾದವು.
ಪಡಸಾಲೆಯ ಬಾಗಿಲಿನ ಒಳಗೆ ನೆರಳೊಂದು ಉದ್ದವಾಗಿ ಮುಂದೆ ಗಿಡ್ಡವಾಗುತ್ತಾ ಭಟ್ಟರ ಹತ್ತಿರ ಬರುತ್ತಿತ್ತು,
’ಬೆಂಕಿ’ ಎಂದರು ಭಟ್ಟರು
’ನಾನಪ್ಪ ಪ್ರಜ್ಞಾ’
ಸುಡುತ್ತೆ ಕಣೆ ಹೋಗ್ಬೇಡ
ಯಾವ್ದಪ್ಪ
’ಆ ಕಟ್ಟೆ ಹತ್ರ ಬೆಂಕಿ ಇದೆ ನೋಡು, ಕಪ್ಪುಗಟ್ಟಿದ್ಯಲ್ಲ ಆ ಒಲೆ ಅಲ್ಲಿ ನೋಡು, ಇಲ್ಲಿ ಇದೋ ಇಲ್ಲಿ ನಾನು ಕೂತಿದಿನಲ್ಲ ಇಲ್ಲಿ ಬೆಂಕಿ ಇದೆ. ನಾನು ಅದರ ಮೇಲೆ ಕೂತಿದೀನಿ’.
’ಅಪ್ಪ ಏಳು, ಮಲ್ಕೊ. ನಿನಗೆ ಭ್ರಾಂತು’.
’ಇಡೀ ಪ್ರಪಂಚ ಬೆಂಕಿಲಿ ಉರಿದು ಹೋಗತ್ತೆ ನೋಡ್ತಿರು. ಅದು ಅಗ್ನಿಯಾಗಲ್ಲ ಬರೀ ಬೆಂಕಿ. ಬೆಂಕಿಯನ್ನ ಅಗ್ನಿಯಾಗ್ಸೊಕೆ ಒಬ್ಬ ಬರ್ಬೇಕು ಬರ್ತಾನೆ’.
’ಸಾಕು ನಿಲ್ಸು, ನೋಡಿದೋರು ಏನಂದುಕೋತಾರೆ’?
’ನಾನು ಬೆಂಕಿಯಾಗ್ಬೇಕು ಅದನ್ನ ಅಗ್ನಿಯಾಗಿಸ್ತಿಯಾ’?
(ಪ್ರಜ್ಞಾಳಿಗೆ ಇದರಲ್ಲಿ ಏನೋ ಇದೆ ಎನ್ನಿಸಿತು)
’ಅಪ್ಪ ಭಯವಾಗ್ತಿದೆ, ನನ್ನ ಹೊಟ್ಟೆಯಲ್ಲಿನ ಕೂಸಿಗೂ ಕೂಡ. ಖುಷಿಯಿಲ್ವಾ ಅಪ್ಪ ನಿಂಗೆ, ನೀನು ತಾತ ಆಗ್ತಿದೀಯ. ಈ ಹುಚ್ಚಾಟ ಬಿಡು ಬೆಂಕಿಗೂ ಅಗ್ನಿಗೂ ಏನು ವ್ಯತ್ಯಾಸ’?
’ಮಂತ್ರ ಪುರಸ್ಸರವಾದ ಬೆಂಕಿ ಅಗ್ನಿಯಾಗುತ್ತೆ ಇಲ್ಲದಿದ್ದರೆ ಅದು ಬೆಂಕಿ, ಬೆಂಕಿಯಿಂದ ನಾಶ ಅದೇ ಅಗ್ನಿಯಿಂದ ಉದ್ದಾರ. ನನ್ನನ್ನ ಅಗ್ನಿಯನ್ನಾಗಿ ಮಾಡ್ತೀಯ’?
ಹತ್ತಿರದಲ್ಲಿದ್ದ ಸೀಮೇ ಎಣ್ಣೆ ಸುರಿದುಕೊಂಡು ಬೆಂಕಿ ಹೊತ್ತಿಸಿಕೊಂಡ ಭಟ್ಟರ ರಾಕ್ಷಸ ಶಕ್ತಿಯೆದುರು ಮಗಳು ಅಸಹಾಯಕಳಾಗಿ ಕೂಗುತ್ತಿದ್ದಳು.
ಓಡಿ ಬಂದ ಚೊತ್ತೆಗೆ ಕಂಡದ್ದು ಉರಿ ಮತ್ತು ಕರಕಲಾಗುತ್ತಿರುವ ದೇಹ.
’ಕ್ಷಮಿಸಿಬಿಡಿ ಮಾವ, ಇವಳು ಬೆಂಕಿ ಯಾವುದನ್ನೂ ನಂಬಲಾರಳು, ಸತ್ಯವನ್ನು ಕಾಣದ ಬೆಂಕಿ, ಎಲ್ಲವನ್ನೂ ನುಂಗಿ, ಬರಿಯ ಬೂದಿಯನ್ನು ಕೊಡುವ ಬೆಂಕಿ. ಇವಳನ್ನು ಅಗ್ನಿಯಾಗಿಸುತ್ತೇನೆ ಎಂದೆ ಆಗಲಿಲ್ಲ. ಕ್ಷಮಿಸಿಬಿಡಿ. ಈ ಬೆಂಕಿಯನ್ನು ಕಟ್ಟಿಕೊಳ್ಳಲಾರೆ, ಕ್ಷಮಿಸಿಬಿಡಿ’.
ಪ್ರಜ್ಞಾ- ’ಮತ್ತೆ ಮಗು’?
’ನನಗಿರಲಿ, ಅದರ ಪೂರ್ಣ ಜವಾಬ್ದಾರಿ ನಂದು’
’ಅದ್ರೆ, ನನ್ನ ಕೈಲಿ ನೋಡ್ಕೊಳಕ್ಕಾಗಲ್ಲ, ನಾನು ಅಸಹಾಯಕಿ, ಅಬಲೆ, ಇದು ನಿನ್ನ ಮಾತು ಮತ್ತೆ ವಾದ ಅಲ್ವ?’
’ನಾನು ಹಾಗೆ ಹೇಳಿದ್ನಾ?’
’ನಿನ್ನ ಮಾತಿನರ್ಥ ಅದೇ, ಬೇಕಾಗಿಲ್ಲ ಈ ಮಗು ನನ್ನ ಹತ್ರಾನೆ ಇರುತ್ತೆ, ನಾನೆ ನೋಡಿಕೊಳ್ತೀನಿ, ನಿನ್ನಂತ ಎಡಬಿಡಂಗಿಯ ಸಂಪರ್ಕ ಆಗೋದು ಬೇಡ’.
’ನಿನ್ನಿಷ್ಟ.’
’ನಿನಗೂ ಅದೇ ಬೇಕಿತ್ತು. ಮಗು ಇದ್ರೆ ಇನ್ನೊಂದು ಮದ್ವೆಗೆ ಕಷ್ಟ, ಅಲ್ವಾ?’
’ನೆಗಟಿವ್ ಯೋಚನೆಗಳಲ್ಲಿ ಬದುಕೋಳಿಗೆ ಯಾವ ಮಾತೂ ಪಥ್ಯವಾಗೊಲ್ಲ.ಸರಿ ಅನ್ನಿಸಿದ್ದನ್ನ ಒಪ್ಪಿಕೊಳ್ಳಕ್ಕೆ ಧರ್ಯ ಇರ್ಬೇಕು ಭಂಡತನದಿಂದ ವಾದಿಸೋದು ಕುತರ್ಕದಿಂದ ಮಾತಾಡೋದು ನಿಜವಾದ ಚರ್ಚಾಪಟುಗಳ ಲಕ್ಷಣವಲ್ಲ ’
’ನಿನ್ನ ಸರ್ಟಿಫಿಕೇಟಿನ ಅಗತ್ಯ ಇಲ್ಲ’
ಎರಡು ದಿಕ್ಕುಗಳು ತಾಕಿ ಕಿಡಿಯೊಂದು ಗರ್ಭದೊಳಗೆ ಮಿಸುಕಾಡಿದ್ದು ಪ್ರಜ್ಞಾಳಿಗೆ ಗೊತ್ತಾಗಲಿಲ್ಲ ಎನ್ನುವುದು ಸತ್ಯ
**********************************
- ಇನ್ನೂ ಇದೆ

No comments: