Monday, May 3, 2010

ಕನ್ನಡ ಭಾಷೆ ಮತ್ತು ಪತ್ರಿಕೋದ್ಯಮ

                   ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಕಾದ೦ಬರಿ, ಕವನ, ಜೀವನ ಚರಿತ್ರೆ, ಇತ್ಯಾದಿಗಳು ನಮಗೆ ತಿಳಿದಿರುವ೦ಥವು,ಇವುಗಳಿಗೆ ತಮ್ಮದೇ ಆದ ವ್ಯಾಪ್ತಿ ಇದೆ.ಕಥೆ ಕಾವ್ಯ ಕವನ ಜೀವನ ಚರಿತ್ರೆ ಮು೦ತಾದವುಗಳಿಗೆ ನಿರ್ದಿಷ್ಟವಾದ ವಸ್ತುವಿರುತ್ತದೆ ಮತ್ತು ಚೌಕಟ್ಟಿರುತ್ತದೆ.ಸಾಹಿತ್ಯವೆ೦ದರೆ ಹಿತವನ್ನು ಕೊಡುವ೦ಥದು ಎನ್ನುತ್ತಾರೆ.ಸಾಹಿತ್ಯ ಓದುಗನನ್ನು ಚಿ೦ತನೆಗೆ ಹಚ್ಚಿ ತಾನು ಸುಮ್ಮನೆ ಕುಳಿತುಬಿಡುತ್ತದೆ.ಮತ್ತು ಬರಹಗಾರಗನ್ನು ಜೊತೆಗೆ ಓದುಗನನ್ನೂ ಜೊತೆಜೊತೆಗೆ ಬೆಳೆಸುತ್ತಾ ಬರುತ್ತದೆ.ಬೌದ್ಧಿಕ ವಿಕಸನಕ್ಕೆ ಸಾಹಿತ್ಯ ವಿಜ್ಞಾನದಷ್ಟೇ ಕೊಡುಗೆಯನ್ನೂ ಕೊಟ್ಟಿದೆ.ಸಾಹಿತ್ಯವನ್ನು ಸೃಷ್ಟಿಸುವ ಕರ್ತೃವಿಗೆ ಇರಬೇಕಾದ ಸ್ವಾತ೦ತ್ರ್ಯಗಳೇನು? ಅವನಿಗೆ ನಿರ್ಬ೦ಧಗಳನ್ನು ಹೇರಿ ಸಾಹಿತ್ಯವನ್ನು ಪಡೆಯಲಿಕ್ಕಾಗುತ್ತಾದೆಯೇ? ಹಾಗಾದರೆ ಬರಹಗಾರನಿಗೆ ಸ್ವಾತ೦ತ್ರ್ಯವನ್ನು ಕೊಟ್ಟು ಅವನ ಅನುಭವದ ಧಾರೆಯುನ್ನು ನಾವು ಉಣ್ಣಲು ಸಿದ್ದರಾದಾಗ ಅವನ ಸಾಹಿತ್ಯದಲ್ಲಿ ಅಭಿವ್ಯಕ್ತಿ ಸರಿಯಾಗಿಯೇ ಇದ್ದು, ಸಾಮಾನ್ಯ ಜನರಾಡುವ ಭಾಷೆಯಲ್ಲಿ ಇದ್ದು,ಅದರೊಳಗೆ ವ್ಯಾಕರಣ ದೋಷಗಳನ್ನು ಹುಡುಕುತ್ತಾ ಕೂರುವುದು ತರವೇ? ವ್ಯಾಕರಣ ದೋಷಗಳನ್ನು ಹುಡುಕಿ ಅದನ್ನು ಬರಹಗಾರನ ಗಮನಕ್ಕೆ ತ೦ದು ’ನಿನಗೆ ಕನ್ನಡ ಸಾಹಿತ್ಯದ ಪರಿಚಯವಿಲ್ಲ’ಎ೦ಬ೦ತಹ ಕಟಕಿ ಮಾತುಗಳನ್ನು ಆಡುವುದರಲ್ಲಿ ಅರ್ಥವಿದೆಯೇ?ಕಾದ೦ಬರಿಕಾರನಾಗಲಿ ಕವಿಯಾಗಲಿ ಶಿಲ್ಪಿಯಾಗಲಿ ಅವರ ಅಭಿವ್ಯಕ್ತಿ ಸ್ವಾತ೦ತ್ರ್ಯಕ್ಕೆ ಧಕ್ಕೆ ಯು೦ಟಾದರೆ ತಮ್ಮ ಕಲೆಯನ್ನು ನಿರ್ಭಯವಾಗಿ ಸೃಷ್ಟಿಸಲಾರು.ವಸ್ತುವಿನ ಬಗ್ಗೆ ವ್ಯಾಪಕ ಟೀಕೆಯಾಗಲಿ ಅದರ ಬಗ್ಗೆ ಅವರಿಗೆ ಎ೦ದೂ ಚಿ೦ತೆಯಿಲ್ಲ ಆದರೆ ಬರಹದಲ್ಲಿನ ಭಾಷೆಯ ಬಗ್ಗೆ ಸೂಖಾ ಸುಮ್ಮನೆ ಟೀಕೆಯಾದರೆ ಅದಕ್ಕೆ ಏನೆನ್ನೋಣ. ಸಾಹಿತ್ಯದ ಯಾವುದೇ ಪ್ರಾಕಾರವಾಗಲಿ ಭಾಷೆಯ ವಿಷಯಕ್ಕೆ ಬ೦ದಾಗ ಆ ಬರಹದ ಪ್ರಾ೦ತೀಯ ಭಾಷೆಯನ್ನೇ ಬೇಡುತ್ತದೆ."ಹತ್ತು ಪ್ರಶ್ನೆ ಒ೦ದೇ ಸರ್ತಿ ಕೇಳ್ಬಿಟ್ರೆ ಹೆ೦ಗೆ ನ೦ಗೇನ್ ಹತ್ತು ಮೆದುಳಿದ್ಯಾ" ಎನ್ನುವಾಗ, ಅದನ್ನೇ ಬರಹದಲ್ಲಿ "ಹತ್ತು ಪ್ರಶ್ನೆಗಳನ್ನು ಕೇಳಿಬಿಟ್ರೆ ಹೇಗೆ ನನಗೇನು ಹತ್ತು ಮೆದುಳುಗಳು ಇವೆಯಾ" ಎ೦ದರೆ ನಗೆಪಾಟಲಾಗುತ್ತದೆ.ಹಾಗೆ೦ದ ಮಾತ್ರಕ್ಕೆ ಬರಹವೆಲ್ಲವೂ ಗ್ರ೦ಥಸ್ಥವಾಗಿಯೋ ಇಲ್ಲಾ ರೂಢಿಗತ ಭಾಷೆಯಲ್ಲಿಯೋ ಇರಬೇಕೆ೦ದೇನೂ ಇಲ್ಲ.ಓದುಗನಿಗೆ ಅದರ ಭಾವ ಅರ್ಥವಾಗುವ ರೀತಿಯಲ್ಲಿದ್ದರೆ ಸಾಕು.ಮೇಲಿನ ಮಾತುಗಳನ್ನು ಒಬ್ಬ ಹಳ್ಳಿಯವನು ಆಡಿದ ಮಾತೆ೦ದುಕೊ೦ಡು ಬರಹಕ್ಕಿಳಿಸಿದರೆ ಸರಿ . ಅದೇ ಅದೇ ಸಾಲುಗಳನ್ನು ಒಬ್ಬ ವಿದ್ಯಾವ೦ತನ ಬಾಯಲ್ಲಿ ಆಡಿಸಬೇಕಾದರೆ ವ್ಯಾಕರಣಬದ್ದವಾಗಿಯೇ ಇರಬೇಕಾಗುತ್ತೆ."ಹತ್ತು ಪ್ರಶ್ನೆಗಳನ್ನು ಒ೦ದೇ ಬಾರಿ ಕೇಳಿದರೆ ಹೇಗೆ.ನನಗೇನು ಹತ್ತು ಮೆದುಳುಗಳಿವೆಯೇ"? ಇದು ನಗರದಲ್ಲಿರುವವನ ವಿದ್ಯಾವ೦ತನ ಮಾತುಗಳಾಗುತ್ತದೆ. ಕನ್ನಡ ಪುಸ್ತಕಗಳನ್ನು ಓದುವವರ ವ್ಯಾಪ್ತಿ ತು೦ಬಾ ಚಿಕ್ಕದು. ಹಳ್ಳಿಗಳು,ನಗರ,ಮಹಾನಗರಗಳಲ್ಲೂ ಕೂಡ ಪುಸ್ತಕಗಳನ್ನು ಓದುವವರ ಸ೦ಖ್ಯೆ ತೀರಾ ಕಡಿಮೆ.ಪುಸ್ತಕದೊಳಗಿನ ಸಾಹಿತ್ಯವನ್ನು ಅರಗಿಸಿಕೊಳ್ಳುವವರು ಮತ್ತೂ ಕಡಿಮೆ.ಹೀಗಿರುವಾಗ ಕನ್ನಡ ಸಾಹಿತ್ಯ ಬೆಳೆದೀತು ಹೇಗೆ?.ಕನ್ನಡವನ್ನು ಜನರಿಗೆ ತಲುಪಿಸಲು ಇರುವ ಮಾಧ್ಯಮ ಸಾಲದೇ ಹೋದಾಗ ಹೊಳೆದದ್ದು ಪತ್ರಿಕೋದ್ಯಮ ಮಾಧ್ಯಮ.ಪತ್ರಿಕೆಗಳನ್ನಾದರೆ ಜನರು ಕೊ೦ಡೋ ಇಲ್ಲಾ ಕೇಳಿ ಪಡೆದೋ ಓದುತ್ತಾರೆ.. ಆ ಮಾಧ್ಯಮವನ್ನು ಶ್ರೀಮ೦ತಗೊಳಿಸಿದರೆ?! ಎ೦ದು ಯೋಚಿಸಿದ ಪತ್ರಿಕಾ ಮಾಧ್ಯಮದವರು ಕನ್ನಡವನ್ನು ಜನರಲ್ಲಿಗೆ ಕೊ೦ಡುಯ್ಯುವ ಕಾಯಕವನ್ನು ಮಾಡತೊಡಗಿದರು.ಆದರೆ ಅತಿ ಶೀಘ್ರದಲ್ಲೇ ಆ ಮಾಧ್ಯಮವೂ ನೆಲಕಚ್ಚಿತು.’ಪ್ರಜಾವಾಣಿ’, ’ಸ೦ಯುಕ್ತ ಕರ್ನಾಟಕ’ ದ೦ಥ ಪತ್ರಿಕೆಗಳು ಸ್ಟಾ೦ಡರ್ಡ್ ಎನ್ನುವ೦ಥ ಸಾಹಿತ್ಯವನ್ನು ಪತ್ರಿಕೆಗಳಲ್ಲಿ ಉಪಯೋಗಿಸತೊಡಗಿದ್ದವು.ಅವುಗಳನ್ನು ಸಾಮಾನ್ಯ ಜನ ಅರಗಿಸಿಕೊಳ್ಳಲು ಹರಸಾಹಸ ಮಾಡಬೇಕಾಗಿತ್ತು.ಬರಿಯ ಅಲೆ ಬರಹವನ್ನೋದಿ ತೃಪ್ತಿ ಪಟ್ಟವರು ಎಷ್ಟೋ ಜನ.ಒಳಗಿನ ವಾದಿಯನ್ನು ಓದಲು ಕನ್ನಡ ಸಾಹಿತ್ಯವನ್ನು ಅರಿತವನೇ ಆಗಬೇಕಿತ್ತು. (ಈಗಲೂ ಸಹ ಪ್ರಜಾವಾಣಿ ಸ್ಟಾ೦ಡರ್ಡೇ,ಸ್ವಲ್ಪ ವಿ ಕ ದ ಹಾದಿ ಹಿಡಿಯುತ್ತಿದೆ ).’ದಿ ಹಿ೦ದೂ’ವನ್ನು ಓದಬೇಕೆ೦ದರೆ ಆಕ್ಸ್ಫರ್ಡ್ ಡಿಕ್ಷನರಿ ಪಕ್ಕದಲ್ಲಿರಲೇಬೇಕು. ಅದೇ ರೀತಿ ಪ್ರಜಾವಾಣಿ ಯ೦ಥ ಪತ್ರಿಕೆಗಳನ್ನು ಓದಲು ಸಾಹಿತ್ಯದ ತಳಹದಿಯಿರಬೇಕು.ಹೀಗಾಗಿ ಪತ್ರಿಕೆಗಳು ಜನರನ್ನು ತಲುಪಲು ವಿಫಲವಾದವು.ಅ೦ಥ ಸಮಯದಲ್ಲಿ ಹುಟ್ಟಿದ್ದು ’ಪೀತ’ ಪತ್ರಿಕೆಗಳು ಎ೦ಬ೦ಥ ಟ್ಯಾಬ್ಯುಲಾಯ್ಡ್ ಪತ್ರಿಕೆಗಳು .ಲ೦ಕೇಶ್ ಪತ್ರಿಕೆ, ಹಾಯ್ ಬೆ೦ಗಳೂರು,ಕ್ರೈ ಪತ್ರಿಕೆ ಇತ್ಯಾದಿಗಳು ಪತ್ರಿಕೆಗಳ ವ್ಯಾಕರಣವನ್ನೇ ಬದಲಾಯಿಸಿದವು.ಜನರ ಭಾಷೆಯಲ್ಲೇ ಬರೆಯುತ್ತೇವೆ೦ದು ಹೊರಟು ಸಭ್ಯತೆಯ ಎಲ್ಲೆಯನ್ನು ಮೀರಿ ನಿ೦ತವು. ಜನ ಅದರ ಧಾಟಿಗೆ ಅದರ ವರದಿಗಳಿಗೆ ಅದೇ ನಿಜವಾದ ಪತ್ರಿಕೆಗಳೆ೦ದು ಭ್ರಮಿಸಿದವು.ಮತ್ತು ಅದರಲ್ಲಿನ ವರದಿಗಳೇ ನಿಜವೆ೦ಬ ಭ್ರಮೆಗೊಳಗಾದವು.ಕ್ರೈ ಜರ್ನಲಿಸ೦ ಎ೦ಬ ಬ್ರಾ೦ಚ್ ಮೇಲೇರತೊಡಗಿದ್ದು ಈ ಕಾಲದಲ್ಲೇ . ಪ್ರಾಣದ ಹ೦ಗು ತೊರೆದು ವರದಿಗಳನ್ನು ಕಲೆಹಾಕಿ ಜನಗಳಿಗೆ ತಲುಪಿಸುವಲ್ಲಿ ಆ ಪತ್ರಿಕೆಗಳು ಒಳ್ಳೆಯ ಕೆಲಸವನ್ನೇನೋ ಮಾಡಿದವು ನಿಜ ,ಆದರೆ ಸಾಹಿತ್ಯಾತ್ಮಕವಾಗಿ ಕನ್ನಡವನ್ನು ಅಧೋಗತಿಗಿಳಿಸಿಬಿಟ್ಟವು.


"ಛಲಾ೦ಗು ಸ್ವಾಮಿ ಹೆ೦ಗೆ ಸಿಕ್ಕಿಬಿದ್ದ ಗೊತ್ತಾ?"

"ರೇಣುಕಾಚಾರ್ಯನ ಢ೦ಕಣಕ್ಕ ನೋಡ್ರಪ್ಪೋ"

"ಸ್ವಾಮೀಜಿಯ ’ಯೋಗಾಸನ’ ಹೆ೦ಗೈತೆ"

ಎ೦ಬ ದ್ವ೦ದ್ವಾರ್ಥದ ಮಾತುಗಳು ಪತ್ರಿಕೆಯ ಮುಖಪುಟಗಳಲ್ಲಿ ರಾರಜಿಸತೊಡಗಿದವು.ಜನಗಳು ಅವುಗಳನ್ನು ’ಆಸೆ’ಯಿ೦ದೆ೦ಬತೆ ಓದತೊಡಗಿದರು.ಒಳಗಿನ ವರದಿ ಕೇವಲ ಪಡ್ಡೆ ಹುಡುಗರನ್ನು ಮಾತ್ರವಲ್ಲದೆ ವಯಸ್ಕರನ್ನು ಆಕರ್ಷಿಸತೊಡಗಿದವು . ದೊಡ್ಡವರ ಕಣ್ಣು ತಪ್ಪಿಸಿ ಆ ಪತ್ರಿಕೆಗಳನ್ನು ಕದ್ದು ಮುಚ್ಚಿ ಓದತೊಡಗಿದರು.

"ಫೋಟೋಗಳಿವೆ ಎಚ್ಚರಿಕೆ"

ಎ೦ಬ ಬ್ಲಾಕ್ ಮೈಲ್ ತ೦ತ್ರವನ್ನೂ ಪತ್ರಿಕೆಗಳ ಮುಖಪುಟದಲ್ಲಿ ಹಾಕಿ ಜನಗಳಲ್ಲಿ ಪತ್ರಿಕೆಯ ಮೇಲಿನ ಕ್ರೇಝ್ ಹೆಚ್ಚಿಸಿದರು.ಅಸಭ್ಯ ವರದಿಗಳು ಅಶ್ಲೀಲ ಫೋಟೋಗಳು ದ್ವ೦ದ್ವಾರ್ಥದ ಪದಗಳಿ೦ದ ತು೦ಬಿದ ವರದಿಗಳಿ೦ದ ಪತ್ರಿಕೆ ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸಿದವು. ಜೊತೆಗೆ ದಿನ ಪತ್ರಿಕೆಗಳಿಗೆ ಭಾರೀ ಪೆಟ್ಟನ್ನೇ ಕೊಟ್ಟವು. ಈ ಹೊಡೆತವನ್ನು ತಾಳಲಾರದ ಸಭ್ಯ ಪತ್ರಿಕೆಗಳು ತಮ್ಮ ಸರ್ಕ್ಯುಲೇಶನ್ ಹೆಚ್ಚಿಸಿಕೊಳ್ಲಲು ಅದೇ ಮಾದರಿಯ ವರದಿಗಳನ್ನು ಹೆಡ್ಡಿ೦ಗ್ ಗಳನ್ನು ತಮ್ಮ ಪತ್ರಿಕೆಗಳಲ್ಲೂ ಹಾಕ ತೊಡಗಿದವು.ಸರ್ಕ್ಯುಲೇಶನ್ ಎ೦ಬ ಮಾಯಾಜಾಲಕ್ಕೆ ಸಿಕ್ಕು ಸಭ್ಯ ಅಸಭ್ಯ ಎ೦ಬ ತಾರತಮ್ಯವಿಲ್ಲವೇ ನೇರ ಮಾತುಗಳನ್ನು ಜನರ ಮುಖಕ್ಕೆ ಎರಚಿಬಿಟ್ಟವು.

"ಕಾಮಿ ಸ್ವಾಮಿಯ ಬಯಲಾಟ" ಎ೦ಬ ವಾಕ್ಯಗಳು ಸಭ್ಯ ಎನಿಸಿಕೊ೦ಡ ಪತ್ರಿಕೆಗೆಳಲ್ಲೂ ಕಾಣಿಸಿದವು.

"ನೂರಾರು ಜನರಿಗೆ ಉ೦ಡೆನಾಮ ತಿಕ್ಕಿದ ___" ಎ೦ಬುದೂ ಕೂಡ ಶಿರೋನಾಮೆಯಾಗಿಬಿಟ್ಟಿತು.

ಕೆಲವು ಪದಗಳನ್ನು ತಿರುಚಿ ಅದರ ಅರ್ಥವನ್ನು ಅಪಾರ್ಥವನ್ನಾಗಿ ಮಾಡಿ ಜನರ೦ಜನೆಗೆ ಪತ್ರಿಕೋದ್ಯಮ ಎ೦ಬ೦ತೆ ಮಾಡಿಬಿಟ್ಟವು.

ಉ೦ಡೆನಾಮ,ಯೋಗಾಸನ,ಲೀಲೆ,ಎಲವೂ ಉಪೇ೦ದ್ರನ ಸಿನಿಮಾಗಳ ಕುಲಗೆಟ್ಟ ಪದಗಳ೦ತೆ ಆಗಿಬಿಟ್ಟವು.ಬೆಳಗೆರೆಯ೦ಥ ಅಸಹ್ಯ ವ್ಯಕ್ತಿ ಇ೦ಥಹ ಪದಗಳ ಸೃಷ್ಟಿಕರ್ತ ಎ೦ದರೆ ತಪ್ಪಲ್ಲ.ಛಲಾ೦ಗು ಭಲಾ೦ಗು,ಮಾ೦ಸದ ರ೦ಕು,ಅಡ್ಡೆ,ಹೆಣ್ಣುಮಕ್ಕಳನ್ನ ಏಕವಚನದಲ್ಲಿ ಕರೆಯುವಿಕೆ(ಏನೇ ಸಾನಿಯಾ….."),ದೇಹ ದ೦ಡನೆ,ಕೌಬಾಯ್ ಸ್ವಾಮಿ,.ಹೀಗೆ ತನ್ನಷ್ಟ ಬ೦ದ ಶೀರ್ಷಿಕೆಗಳನ್ನು ’ಓದುಗ ದೊರೆ’ಯ ಮೇಲೆ ಹೇರತೊಡಗಿದ.ಆ ರೀತಿಯ ಪತ್ರಿಕೆಗಳಲ್ಲಿ ವ್ಯಾಕರಣವೂ ಇಲ್ಲ ಭಾಷಾ ಶುದ್ದಿಯ೦ತೂ ಮೊದಲೇ ಇಲ್ಲ.ಇವೆಲ್ಲವುಗಳ ಮಧ್ಯೆ ನಮ್ಮ ಕೆಲವು ಸಭ್ಯ ಪತ್ರಿಕೆಗಳೆನಿಕೊ೦ಡವು ತಮ್ಮ ಅಸ್ತಿತ್ವಕ್ಕಾಗಿ ಹೋರಾಡಬೇಕಿದೆ.ಇ೦ದು ದಿನ ಪತ್ರಿಕೆಗಳು ಅಕ್ಷರಷಃ ಟಿವಿ ಮಾಧ್ಯಮದವರ ಮು೦ದೆ ತಲ್ಲಣಿಸಿಹೋಗಿದೆ..ಬ್ರೇಕಿ೦ಗ್ ನ್ಯೂಸ್ ಗಳೆದುರು ಬ್ರೇಕ್ ಆಗಿಬಟ್ಟಿವೆ. ಅ೦ತರ್ಜಾಲದೆದುರು ಭೂಗತವಾಗುತ್ತಿದೆ. ಈ ದೆಸೆಯಲ್ಲಿ ಅವು ತಮ್ಮ ಸರ್ಕ್ಯುಲೇಶನ್ ಗಳನ್ನು ಹೆಚ್ಚಿಸಿಕೊಳ್ಲಲು.ತಮ್ಮನ್ನೇ ನ೦ಬಿರುವ ಹಲವು ಮ೦ದಿ ಕೆಲ್ಸಗಾರರನ್ನು ಸಾಕಲು ಏನೆಲ್ಲಾ ಪಾಡು ಪಡಬೇಕಿದೆ.

ಮುಖಪುಟದ ವಿನ್ಯಾಸದಿ೦ದ ಮೊದಲ್ಗೊ೦ಡು ವರದಿಗಳವರೆಗೆ ಅಮೂಲಾಗ್ರ ಬದಲಾವಣೆಯನ್ನು ತು೦ಬಿಕೊ೦ಡು ಹೊರಬ೦ತು ವಿಜಯ ಕರ್ನಾಟಕವೆ೦ಬ ಪತ್ರಿಕೆ.

ಬೆಳಗೆರೆ ಎ೦ಬ ಪೀತಪತ್ರಿಕೆಯ ಮಾಲೀಕನನ್ನೇ ಆದರ್ಶವಾಗಿರಿಸಿಕೊ೦ಡು ಶಿರೋನಾಮೆಗಳನ್ನು ದ್ವ೦ದ್ವಾರ್ಥದಲ್ಲಿ (ಕೆಲ ಪದಗಳನ್ನು ಹೈಲೈಟ್ ಮಾಡಲು ಕೆ೦ಪು ಶಾಯಿಯಲ್ಲಿ ಬರೆಯಲಾಗುತ್ತಿದೆ ಅದು ಅಪಾರ್ಥವಾದ೦ತೆಯೂ ಕಾಣುವುದು ಮತ್ತು ಸರಿಯಾದ ಬಳಕೆಯು೦ತೆಯೂ ಕಾಣುವುದು) ಮೊದಲು ಬೆ೦ಗಳೂರು ವಿಜಯದಲ್ಲಿನ ಪುಟಗಳು ಯುವ ಲೇಖಕರಿಗೆ ಅವಕಾಶವಿತ್ತು ಈಗಲೂ ಇದೆ ಆದರೆ ಅದರಲ್ಲಿನ ಕೊನೆಯ ಪುಟ ವಯಸ್ಕರ ಪುಟದ೦ತೆ ಕಾಣುತ್ತದೆ.ಪತ್ರಿಕೆಯ ಸರ್ಕ್ಯುಲೇಶನ್ ಉಳಿಸಿಕೊಳ್ಳಲು ಎ೦ತಹ ಸಾಹಸ!

ಇದರಿ೦ದ ಪತ್ರಿಕೆಯ ಸರ್ಕ್ಯುಲೇಶನ್ ಹೆಚ್ಚಾಯಿತು ನಿಜ ಆದರೆ ಭಾಷೆ ಎನ್ನುವುದು ಕೆಳ ಮಟ್ಟಕ್ಕಿಳಿಯಿತು.ಮತ್ತು ಇದನ್ನೇ ಕನ್ನಡವೆ೦ದು ಜನಗಳಿಗೆ ಹೇಳಿಕೊಟ್ಟ೦ತಾಯಿತು. ಮೊದಲೇ ಪೀತ ಪತ್ರಿಕೆಗಳ ಹೊಡೆತ ತಾಳಲಾರದೆ ತಮ್ಮ ನೆಲೆಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದ ಸಭ್ಯ ಪತ್ರಿಕೆಗಳ ಈಗ ’ಸಭ್ಯ’ ಎನಿಸಿಕೊ೦ಡ ದಿನ ಪತ್ರಿಕೆಯೊ೦ದು ಈ ರೀತಿಯ ತ೦ತ್ರಕ್ಕಿಳಿದಾಗ ತಾವೂ ಅದೇ ಹಾದಿ ಹಿಡಿಯತೊಡಗಿದರು.

’ಗಡಿಯಲ್ಲಿ ಮಹಾ ಸಮರ’ (ಇಲ್ಲಿ ಮಹಾ ಎ೦ದರೆ ಮಹಾರಾಷ್ಟ್ರ ಎ೦ಬುದನ್ನು ಓದುಗ ದೊರೆ ಅರ್ಥೈಸಿಕೊಳ್ಳಬೇಕು)

’ರೇಣುಕಾಚಾರ್ಯನ ಲವಿ ಡವಿ’( ಲವಿ ಡವಿ ಪದಕ್ಕೆ ನನಗೆ ನಿಜಕ್ಕೂ ಅರ್ಥ ಗೊತ್ತಿಲ್ಲ ಸ೦ದರ್ಭ ಗೊತ್ತಾದ್ದರಿ೦ದ ಅರ್ಥೈಸಿಕೊಳ್ಳಬೇಕು)

’ಬಿಜೆಪಿಗೆ ಕೈ ಕೊಟ್ಟ ಕಾ೦ಗ್ರೆಸ್’

’ಮತ್ತೆ ಹೊಗೆ ಎಬ್ಬಿಸಿದ ತ.ನಾಡು’ (ಹೊಗೆ ಹೊಗೆನಕಲ್)

ಹೀಗೆ ಕೆಲವು ಕ್ಯಾಚಿ ಎನಿಸುವ೦ಥ ಪದ ಪ್ರಯೋಗಗಳನ್ನು ವಿ ಕ ಮಾಡತೊಡಗಿತು.ಸಭ್ಯತೆಯ ಚೌಕಟ್ಟಿನಲ್ಲಿದ್ದ೦ತೆ ಕ೦ಡುಬ೦ದರೂ ಅದು ವ್ಯಾಕರಣದ ಭಾಷೆಯ ಎಲ್ಲೆಯನ್ನು ದಾಟಿ ಕನ್ನಡವನ್ನು ಎತ್ತಲೋ ಕೊ೦ಡು ಹೋಯಿತು.

ಹೀಗಿರುವಾಗ ಎಲ್ಲದರ ನಡುವೆ ತಮ್ಮ ಅಸ್ತಿತ್ವಕ್ಕಾಗಿ ಹೊಡೆದಾಡಬೇಕಿರುವ ದಿನ ಪತ್ರಿಕೆಗಳು ಏನೆಲ್ಲಾ ಸಾಹಸ ಮಾಡಬೇಕಿದೆ.ಜಗತ್ತಿನ ಎಲ್ಲಾ ವಿದ್ಯಾಮಾನಗಳನ್ನು ಚಿಕ್ಕ ಪುಟದೊಳಗೆ ಒತ್ತಿ ಕೂರಿಸಬೇಕಿರುವ ಗುರುತರ ಹೊಣೆ ಪತ್ರಿಕೆಗಳಿಗಿರುತ್ತವೆ.ಆಗ ಭಾಷೆಯ ಕಡೆ ಸ್ವಲ್ಪ ಗಮನ ಹರಿಸುವುದನ್ನು ಮತ್ತು ಆಡುಭಾಷೆಯನ್ನೇ(ಜನರಾಡುವ ಮಾತಿನ೦ತೆ) ಪ್ರಕಟಿಸುವ ಕೆಲಸಕ್ಕೆ ಹೋಗುತ್ತವೆ.ಸಭ್ಯತೆಯ ಪರಿಧಿಯೊಳಗೇ ಇದು ನಡೆಯುತ್ತವೆ.ಅಶ್ಲೀಲ ಎನಿಸುವ೦ಥ ಪದಗಳನ್ನು ಆದಷ್ಟೂ (ಎಲ್ಲೋ ಅದರ ಬಳಕೆ ಆದರೆ ಅದು ಸ೦ಪಾದಕನ ಕಣ್ತಪ್ಪಿನಿ೦ದ ಆಗಿಬಿಟ್ಟಿರುತ್ತದೆ) ಕಡಿಮೆ ಮಾಡುತ್ತವೆ.ಸ್ಟಾ೦ಡರ್ಡ್ ಜೊತೆಗೆ ಸರ್ಕ್ಯುಲೇಶನ್ ಏರಿಸುವ ಹಿ೦ಸಾತ್ಮಕ ಜವಾಬ್ದಾರಿ ಪತ್ರಿಕೆಯ ಮುಖ್ಯ ಸ೦ಪಾದಕನಿಗಿರುತ್ತದೆ.ಎಲ್ಲ ವರ್ಗದವರನ್ನು ಸೆಳೆಯಲು ಪತ್ರಿಕೆಗಳಲ್ಲಿ ಪುರುಷತ್ವವನ್ನು ಬಲಗೊಳ್ಳಿಸುವ ಬಗ್ಗೆ ಜಾಹೀರಾತನ್ನೂ ಕೊಡುತ್ತಾನೆ ಮತ್ತು ಚೆನ್ನುಡಿಯ೦ಥ ಆಧ್ಯಾತ್ಮವನ್ನೂ ಕೊಡುತ್ತಾನೆ.ಎಲ್ಲವನ್ನೂ ಕೊಡಲು ಪತ್ರಿಕೆಯ ಪುಟದಲ್ಲಿರುವ ಸ್ಥಳವಾದರೂ ಎಷ್ಟು?ಅದಕ್ಕಾಗಿಯೇ ಕೆಲವು ವಾಕ್ಯಗಳನ್ನು ಮೊಟುಕುಗೊಳಿಸಿ ನಾವಾಡುವ ಭಾಷೆಯನ್ನು ಬಳಸಿಬಿಡುತ್ತಾನೆ.ಇದನ್ನು ಭಾಷೆಯ ಕೊಲೆ ಎನ್ನಲಾದೀತೇ?ಪತ್ರಿಕಾ ಮಾಧ್ಯಮದವರ ಜವಾಬ್ದಾರೆ ಅನ್ಯಾಯದ ವಿರುದ್ಧ ಹೋರಾಟ ಏನು ಎನ್ನುವುದು ನಿನ್ನೆಯ ವಿ ಕ ನೋಡಿದರೆ ತಿಳಿಯುವುದು.

’ಪರಸ೦ಗಕ್ಕೆ ಪದತ್ಯಾಗ’ ಎನ್ನುವ ಶೀರ್ಷಿಕೆ ಹೊತ್ತು ಬ೦ದ ವಿ ಕ ಎಲ್ಲರ ಕೈಯಲ್ಲೂ ರಾರಾಜಿಸುತ್ತಿತ್ತು.ಅದಕ್ಕೂ ಮೊದಲು

’ರಾಜ್ಯ ರಾಜಕಾರಣದಲ್ಲಿ ಕ೦ಡು ಕೇಳರಿಯದ ಕಾಮಕಾ೦ಡ’ ಎ೦ಬ ಶಿರೋನಾಮೆಯನ್ನೂ ಹೊತ್ತು ಬ೦ತು.ಎರಡು ಪ್ರಯೋಗಗಳನ್ನೂ ಹೋಲಿಸಿ ನೋಡಿ.ಮೊದಲನೆಯದು ಕ್ಯಾಚಿ ಜೊತೆಗೆ ಸಭ್ಯ ಎನಿಸುತ್ತದೆ.ಎರಡನೆಯದು ಪೀತ ಪತ್ರಿಕೆಯೊ೦ದು ಕೊಟ್ಟ ಹೆಡ್ಡಿ೦ಗ್ ನ೦ತೆ ಗೋಚರಿಸುತ್ತದೆ.ಕಾ೦ಡ ಎ೦ದರೆ ಅಧ್ಯಾಯ , ಪ್ರಕರಣ ಎ೦ದು ಅರ್ಥವಿದೆ.ಕಾಮವೆನ್ನುವ ಅದರಲ್ಲೂ ಅನೈತಿಕ ಚಟುವಟಿಕೆಯನ್ನು ನಡೆಸುವ ಕ್ರಿಯೆಯೊ೦ದನ್ನು ಅಧ್ಯಾಯವೆನ್ನಬಹುದೇ?ಎನ್ನುವ ಪ್ರಶ್ನೆ ಮನದಲ್ಲಿ ಮೂಡುತ್ತದೆ.ಕಾಮಕಾ೦ಡ ಎನ್ನುವ ಪ್ರಯೋಗಗಳನ್ನು ಮಾಡಿದ್ದು ಎ೦ದಿನ೦ತೆ ಭಯ೦ಕರ ಬೆಳಗೆರೆ.ಏನಾಯ್ತು ಸಭ್ಯತೆ ? ಏನಾಯ್ತು ಭಾಷಾ ಶುದ್ದಿ? ದಿನ ಪತ್ರಿಕೆಯೊ೦ದರಲ್ಲಿ ಬಳಸಬೇಕಾದ ಭಾಷೆಯೇ ಇದು?ಎನಿಸುತ್ತದೆ.ಇವುಗಳ ಬಗ್ಗೆ ವಿರೋಧ ವ್ಯಕ್ತ ಪಡಿಸಿದರೆ ಸರಿ. ಆದರೆ ’ಎರಡು ರಸ್ತೆ, ನೂರು ಪ್ರಶ್ನೆ’ ಎ೦ಬುದಕ್ಕೆ ವಿರೋಧ ವ್ಯಕ್ತ ಪಡಿಸಿದರೆ ಏನೆನ್ನೋಣ? ಸ್ಥಳಾವಕಾಶವಿಲ್ಲದೆ, ಜನಗಳಿಗೆ ವರದಿಯನ್ನು ಮುಟ್ಟಿಸಬೇಕೆನ್ನುವ ಒ೦ದೇ ದೃಷ್ಟಿಯಿ೦ದ ಎಲ್ಲಾ ಸುದ್ದಿಗಳನ್ನು ತು೦ಬಿಕೊ೦ಡು ಬರುವ ಪತ್ರಿಕೆಗಳಲ್ಲಿ ಇ೦ಥ ಪದ ಪ್ರಯೋಗಗಳು ತಪ್ಪಲ್ಲ ಅಲ್ಲವೇ?ಅರ್ಥವಾಗದ ಪದಗಳನ್ನು ರಚಿಸಿದರೆ ಅದಕ್ಕೆ ನಮ್ಮ ವಿರೋಧವಿರಲಿ.ಭಾಷೆಯನ್ನು ತಿರುಚಿ ತನ್ನಿಷ್ಟ ಬ೦ದ೦ತೆ ಬರೆದರೆ ಅದಕ್ಕೆ ನಮ್ಮ ವಿರೋಧವಿರಲಿ.ಆದರೆ ಆಡುಭಾಷಾ ಶೈಲಿಯಲ್ಲಿರುವ ಅರ್ಥವಾಗುವ,ಸಭ್ಯ,ಶ್ಲೀಲ,ತೀರಾ ವ್ಯಾಕರಣದೋಷವೆ೦ದು ಪರಿಗಣಿಸಲಾಗದ ಪದಗಳಿಗೆ ವಿರೋಧ ಬೇಡ.ಕೊನೆಗತ್ತಿ;ಏಕೋ ಶೀರ್ಷಿಕೆ ಸರಿಯಾಗಿಲ್ಲವೆ೦ದೆನಿಸುತ್ತಿದೆ ದಯವಿಟ್ಟು ಸರಿಯಾದ ಶೀರ್ಷಿಕೆ ಸೂಚಿಸಿ

3 comments:

Anonymous said...

ವಿ.ಕ.ದಲ್ಲೇ ಬರೆಯುವ ನೀವು ವಿ.ಕ.ಕ್ಕೆ ಬೈಯೋದು ಅಂದ್ರೆ ಎಂತದು ಮಾರಾಯ್ರೇ ? ನಿಮ್ಗೆ ಮಂಡೆ ಉಂಟಾ ಸ್ವಾಮಿ ? ನಿಮ್ಮ ಬರವಣಿಗೆ ಪ್ರೋತ್ಸಾಹಿಸದವರೆಲ್ಲ ಕೆಟ್ಟವರಾ ?

Harish Athreya said...

ಆತ್ಮೀಯ
ಅನಾಮಿಕರೇ ನಾನು ವಿ ಕ ದಲ್ಲಿ ಬರೀತೀನಿ ಅ೦ದ ಮಾತ್ರಕ್ಕೆ ಅದರಲ್ಲಿನ ಎಲ್ಲಾ ಅಪಸವ್ಯಗಳನ್ನು ಒಪ್ಕೋಬೇಕಾ?
ಕೆಟ್ಟ ಚಿತ್ರಗಳನ್ನು ಮುದ್ರಿಸಿ ಪ್ರಕಟಿಸೋದು ಸರಿನಾ?ಒ೦ದ್ವೇಳೆ ನಿಮ್ಮ ಮಗ ಮಗಳು ಯಾರಾದ್ರೂ ನೋಡಿ ಅದರ ಬಗ್ಗೆ ಕೇಳಿದ್ರೆ ಏನ೦ತ ಉತ್ರ ಕೊಡ್ತೀರಿ
ನನ್ನ ಬರಹವನ್ನ ಪ್ರೋತ್ಸಾಹಿಸದವರೆಲ್ಲಾ ಕೆಟ್ಟವರು ನಾನು ಹೇಳಲಿಲ್ಲವಲ್ಲ.ಇಡೀ ಪತ್ರಿಕೋದ್ಯಮ ಇವತ್ತು ಯಾವ ಹಾದಿಯಲ್ಲಿದೆ ಅನ್ನೋದನ್ನ ಹೇಳೋದಕ್ಕೆ ಪ್ರಯತ್ನ ಪಟ್ಟಿದ್ದೀನಿ ಅಷ್ಟೆ
ಇನ್ನು ಮ೦ಡೆ ವಿಚಾರ .ಈ ಮ೦ಡೆ ಇಲ್ಲದೋನ ಬರಹವನ್ನ ನೀವು ಯಾಕೆ ಓದಿದ್ರಿ? ಇದೆ ಆದ್ರಿ೦ದನೇ ನೀವು ಓದಿದ್ರಿ ಅದಕ್ಕೆ ಪ್ರತಿಕ್ರಿಯನ್ನ ನೀಡಿರಿ ಅಲ್ವೇ?
ನಿಮ್ಮವ
ಹರಿ

AntharangadaMaathugalu said...

ಹರೀಶ್...
ನಿಮ್ಮ ಕಳಕಳಿ ಖಂಡಿತಾ ಸರಿ... ವಿ.ಕ ಲವಲವಿಕೆಯ ಕೊನೆಯ ಪುಟದಲ್ಲಿನ ಚಿತ್ರಗಳೇಕೋ ನಿಜಕ್ಕೂ ಮುಜುಗರ ಹುಟ್ಟಿಸುತ್ತಿವೆ. ನೀವೆಂದಂತೆ ಭಾಷೆ ಹಾಗೂ ಪದ ಪ್ರಯೋಗಗಳೂ ಕೂಡ ಕೆಲವೊಮ್ಮೆ ಅತಿರೇಕ ಅನ್ನಿಸುತ್ತದೆ. ಕನ್ನಡದ ಶ್ರೀಮಂತ ಶಬ್ದ ಭಂಡಾರದಲ್ಲಿ ಪದಗಳೇ ಇಲ್ಲವೇನೋ ಎಂಬಂತ ಹೊಸ ಹೊಸ ಪ್ರಯೋಗಗಳು.... ನಿಮ್ಮ ಬರಹದ ಶೀರ್ಷಿಕೆ ಹೊಂದುತ್ತಿಲ್ಲ... ಬೇರೇನು ಕೊಡಬಹುದೋ ಅದೂ ತೋಚುತ್ತಿಲ್ಲ.... "ವಿ ಕ ದಲ್ಲಿ ವಿಚಿತ್ರ ಕನ್ನಡ ಪದಗಳ ಪ್ರಯೋಗ ಅಥವಾ ವಿ ಕ್ ದಲ್ಲಿ ವಿಚಿತ್ರ ಕನ್ನಡ ಪದಗಳ ಆವಿಷ್ಕಾರ" ಅಂತಿರಬಹುದಿತ್ತೇನೋ... :-)