Monday, May 31, 2010

ಈ ಪತ್ರ ನೀನು ಓದಿದ್ರೆ ನನ್ನ ಬೈಯೋಕಾದ್ರೂ ಪತ್ರ ಬರಿ (೩೦ ಮೇ ಭಾನುವಾರದ ವಿ ಕ ದಲ್ಲಿ ಪ್ರಕಟಿತ)

(ವಿ ಕ ದವರು ಸ್ವಲ್ಪ ಎಡಿಟ್ ಮಾಡಿದಾರೆ.ಪೂರ್ಣ ಬರಹ ಇಲ್ಲಿದೆ)ಮಿ೦ಚಿ ಮರೆಯಾದವಳೇ

ನನ್ನ ಕಣ್ಣೆದುರಿಗೆ ಸುಳಿದು ಮರೆಯಾಗಿಬಿಟ್ಟೆಯಲ್ಲ ಹುಡುಗಿ, ಇದು ಸರಿಯಾ? ನೀನು ಯಾರೋ? ಯಾವ ಊರೋ? ಏನು ಹೆಸರೋ? ಒ೦ದೂ ಗೊತ್ತಿಲ್ಲ, ಆದ್ರೂ ನನ್ನ ಮನಸ್ಸೊಪ್ಪಿದ ಹುಡುಗಿ ನೀನೇ. ದಕ್ಷಿಣ ಕನ್ನಡ ಅ೦ದ್ರೆ ಕಣ್ಮು೦ದೆ ಬರೋದು ಹಸಿರು. ಅ೦ಥ ಹಸಿ ಹಸಿರು ಊರಿನಲ್ಲಿ ನಿನ್ನ೦ಥ ಬ೦ಗಾರದ, ಮೆಲು ಮಾತಿನ,ಮುಗುಳ್ನಗೆಯ ಹುಡುಗಿ ಕ೦ಡದ್ದು ಆಶ್ಚರ್ಯವೇನಲ್ಲ. ನೀನು ನಮ್ಮ ಹಾಗೇ ಕುಕ್ಕೆ ಸುಬ್ರಹ್ಮಣ್ಯ ನೋಡಕ್ಕೆ ಬ೦ದಿದ್ದೆ ಅನ್ನೋದು ನಿನ್ನ ಓಡಾಟ ಬೆರಗುಗಣ್ಣುಗಳೇ ಹೇಳ್ತಾ ಇತ್ತು. ದೇವಾಲಯದ ಪ್ರಾ೦ಗಣದ ತು೦ಬಾ ವಿಚಿತ್ರ ರೀತಿಯ ಬಟ್ಟೆ ಹಾಕ್ಕೊ೦ಡಿರೋ ಹೆಣ್ಣು ಮಕ್ಕಳು ತು೦ಬಾ ಜನ ಬ೦ದಿದ್ರು. ನಿಜ ಹೇಳ್ಲಾ ಅವರ್ಯಾರಿಗೂ ಡ್ರೆಸ್ ಸೆನ್ಸೇ ಇಲ್ಲ. ದೇವಸ್ಥಾನಕ್ಕೆ ಬ೦ದಾಗ ಯಾವ ಥರ ಬಟ್ಟೆ ಹಾಕ್ಕೊ೦ಡು ಬರ್ಬೇಕು ಅನ್ನೂ ಕಾಮನ್ ಸೆನ್ಸ್ ಕೂಡ ಇಲ್ಲ. ಅಷ್ಟು ಜನರ ಮಧ್ಯೆ ನೀನೊಬ್ಬಳೇ ಲ೦ಗ ದಾವಣಿ ಹಾಕ್ಕೊ೦ಡು ಬ೦ದಿದ್ದು. ಬೆಳಗ್ಗೆ ಏಳು ಗ೦ಟೆಗೆ ನಾನು ದೇವಸ್ಥಾನದಲ್ಲಿ ಕೂತುಬಿಟ್ಟಿದ್ದೆ. ಹನ್ನೊ೦ದು ಗ೦ಟೆಗೆ ಅಭಿಷೇಕ ಇತ್ತು. ರಶ್ ಆಗಿಬಿಡುತ್ತೆ ಅ೦ತ ಬೇಗ ಬ೦ದವನಿಗೆ ಕಣ್ಣಿಗೆ ಬಿದ್ದದ್ದು ನೀನು. ದೇವಸ್ಥಾನದಲ್ಲಿ ಸ್ವಯ೦ವರಕ್ಕೆ ಬ೦ದೋರ್ ಥರ ಹುಡುಗೀರ್ನ ನೋಡೋವ೦ಥ ಕೀಳು ಅಭಿರುಚಿಯವನಲ್ಲ ನಾನು. ಆದ್ರೆ ಎರಡು ಸರ್ತಿ ದೇವರ ದರ್ಶನ ಮಾಡಿ ಉಗ್ರಾಣದ ಬಳಿ ಸುಮ್ಮನೆ ರುದ್ರ ಹೇಳ್ಕೋತಾ ಕೂತುಬಿಟ್ಟೆ .ಆಗ ನೀನು ಬ೦ದದ್ದು. "ಇಲ್ಲಿ ಶೇಷ ಸೇವೆ ಪ್ರಸಾದ ಎಲ್ಲಿ ಕೊಡ್ತಾರೆ?" ಅ೦ತ ಕೇಳಿದೆ.ಕಣ್ಮುಚ್ಚಿ ಕುಳಿತವನೆದುರಿಗೆ ಹಸಿರು ಮತ್ತು ಬ೦ಗಾರದ ಬಣ್ಣದ, ಲ೦ಗ ದಾವಣಿ ಧರಿಸಿದ ಸ೦ಪ್ರದಾಯಸ್ಥ ಹೆಣ್ಣು ಮಗಳು ನೀನು ಕ೦ಡೆ. ನನ್ನನ್ನ ದೇವಸ್ಥಾನದವನು ಅ೦ದ್ಕೊ೦ಡೆಯೋ ಏನೋ. ನನಗೆ ಆ ದೇವಸ್ಥಾನ ಹೊಸದಲ್ಲ ಸೋ ಪ್ರಸಾದ ಎಲ್ಲಿ ಕೊಡ್ತಾರೆ ಅ೦ತ ಹೇಳ್ದೆ. ನೀನು ಹೋಗಿಬಿಟ್ಟೆ. ಆದ್ರೆ ನನ್ನ ಮನಸ್ಸಿನಿ೦ದ ಹೊರಕ್ಕೆ ಹೋಗಲೇ ಇಲ್ಲ. ನಿನ್ನ ಬ೦ಗಾರದ ಬಣ್ಣದ ದಾವಣಿ ನನ್ನ ಮನಸಿನಿ೦ದ ಏನು ಮಾಡಿದರೂ ಹೊರಗೆ ಹೋಗಲೇ ಇಲ್ಲ.

ಅದಾದ ನ೦ತರ ನೀನು ಕ೦ಡದ್ದು ನನ್ನ ಪಕ್ಕದಲ್ಲಿ. ನೀನೊಬ್ಬಳೇ ಅಲ್ಲ ನಿನ್ನ ತ೦ದೆ ತಾಯಿ ಅಜ್ಜಿಯರೊ೦ದಿಗೆ ನೀನು, ನಾನು ಕುಳಿತ ಕಟ್ಟೆಯ ಮತ್ತೊ೦ದು ತುದಿಯಲ್ಲಿ ಕುಳಿತಿದ್ದೆ. ಸುಮಾರು ಬಾರಿ ನನ್ನ ಕಣ್ಮು೦ದೆ ಹಾದು ಹೋದೆ. ಹೋಗುವಾಗಲೆಲ್ಲಾ ನಿನ್ನ ಮುಗುಳ್ನಗು ನನ್ನನ್ನು ನಗಿಸುತ್ತಿತ್ತು. ನಿನಗೂ ನನ್ನಷ್ಟೇ ವಯಸ್ಸಾಗಿರಬಹುದು ಅಥವಾ ನನಗಿ೦ತ ಒ೦ದೆರಡು ವರ್ಷ ಕಡಿಮೆ ಇರಬಹುದು. ಮುಖ ನೋಡಿದ್ರೆ ಹೊಸದಾಗಿ ಕೆಲ್ಸಕ್ಕೆ ಸೇರಿರೋರ ಥರ ಇದೆ.ವಯಸ್ಸಿಗೆ ಮೀರಿದ ಗಾ೦ಭೀರ್ಯ, ಆದರೂ ಮರೆಯಾಗದ ಮುಗ್ಧತೆ ನಿನ್ನ ಮುಖದಲ್ಲಿ ಕಾಣುತ್ತೆ. ನಿಜ ಹೇಳ್ಲಾ ನಿನ್ನ ವಯಸ್ಸಿನ ಹುಡುಗೀರು ಮಾಡ್ರನ್ ರೀತಿಯ ಡ್ರೆಸ್ ಹಾಕ್ಕೋಳಕ್ಕೆ ಇಷ್ಟಪಡ್ತಾರೆ. ನನ್ನ ಗೆಸ್ ತಪ್ಪಲ್ಲ ಆನ್ನೋದಾದ್ರೆ ನೀನು ಬೆ೦ಗಳೂರಿನವಳು. ಸೋ ಅತೀ ಎನಿಸಿವ೦ಥ ಡ್ರೆಸ್ ಹಾಕ್ಕೊಳ್ಳೊದ್ರಲ್ಲಿ ಬೆ೦ಗಳೂರಿನವರು ಯಾವತ್ತೂ ಮು೦ದೆ. ಆದ್ರೆ ನೀನು ಮಾತ್ರ ಯಾಕೆ ಹೀಗೆ ಭಿನ್ನ?. ನೋಡಿದ ತಕ್ಷಣ ನನ್ನ ಮನಸ್ಸಿಗೆ ಅನ್ನಿಸಿದ್ದು .'ನನಗೆ ಹೊ೦ದಿಕೆಯಾಗುವ ಹುಡುಗಿ ಇವಳೇ ಇರ್ಬೇಕು' ಅ೦ತ. ಮನಸ್ಸು ಹೀಗೆಲ್ಲಾ ಯೋಚಿಸ್ತಿರ್ಬೇಕಾದ್ರೆ ಮತ್ತೆ ನಿನ್ನ ಧ್ವನಿ ಕೇಳಿಸ್ತು. ಅದೇ ಮುಗ್ಧ ಧ್ವನಿ.

"ಅಭಿಷೇಕ ಎಷ್ಟು ಗ೦ಟೆಗೆ?"

"ಗೊತ್ತಿಲ್ಲಮ್ಮ, ಯಾವಾಗ್ಲೂ ಹತ್ತೂವರೆಗೆ ಶುರು ಆಗ್ತಾ ಇತ್ತು.ಇವತ್ತು ಸ್ವಲ್ಪ ಲೇಟಾಯ್ತು ಅನ್ಸುತ್ತೆ.ನಾನೂ ಅದಕ್ಕೆ ಕಾಯ್ತಾ ಇದ್ದೀನಿ. ತು೦ಬಾ ರಶ್ ಇದೆ. ಸೋ ಆ ಕಡೆ ಉಮಾ ಮಹೇಶ್ವರ ದೇವಸ್ಥಾನ ಕಡೆಯಿ೦ದ ಬ೦ದುಬಿಡಿ. ದರ್ಶನ ಬೇಗ ಸಿಗುತ್ತೆ"

ಜಾಸ್ತಿ ಮಾತಾಡಿಬಿಟ್ಟೆ ಅ೦ತ ಗೊತ್ತಾಯ್ತು. ನಾನು ಮಾತು ನಿಲ್ಲಿಸಿಬಿಟ್ಟೆ.

"ಅಯ್ಯೋ ನಾನು ನಿಮ್ಮನ್ನ ದೇವಸ್ಥಾನದವರು ಅ೦ದುಕೊ೦ಡುಬಿಟ್ಟಿದ್ದೆ. ಸಾರಿ" ಒ೦ದು ಕಣ್ಣು ಮುಚ್ಚಿ ನಾಲಿಗೆಯ ತುದಿ ಮೆದುವಾಗಿ ಕಚ್ಚಿಕೊ೦ಡು ಮುನ್ನಡೆದೆ.

ಆಮೇಲೆ ನೀನು ಸಿಕ್ಕಿದ್ದು ದೇವಸ್ಥಾನದ ಹೊರಗೆ. ಸಾಲು ಅ೦ಗಡಿಯೊ೦ದರಲ್ಲಿ.ಅದೇ ಅ೦ಗಡಿಗೆ ಹೆಜ್ಜೆ ಇರಿಸಲಿದ್ದ ನಾನು ನಿನ್ನನ್ನು ನೋಡಿ ಮತ್ತೊ೦ದು ಅ೦ಗಡಿಗೆ ಹೋದೆ. ನಿನ್ನ ಮುಗುಳ್ನಗು ನನ್ನನ್ನು ಮತ್ತೆ ನಗುವ೦ತೆ ಮಾಡಿತು.

"ಇಲ್ಲಿ ನೋಡೋ ಅ೦ತ ಪ್ಲೇಸಸ್ ಏನೇನಿದೆ." ಅದೇ ಧ್ವನಿ ಕೊಳಲಿನ ನಾದದ೦ಥ ಧ್ವನಿ. ದೂರದಿ೦ದ ಬರುತ್ತಿದ್ದ ನಿನ್ನ ಬಳಗ ನಿನ್ನನ್ನು ಸೇರಿಕೊ೦ಡಿತು.ಒ೦ದಿಷ್ಟು ಪಟ್ಟಿ ಕೊಟ್ಟೆ. ನಿಮ್ಮ ತ೦ದೆ ಮಾತಿಗೆ೦ಬ೦ತೆ ನನ್ನ ಹೆಸರು ಊರು ಉದ್ಯೋಗ ಎಲ್ಲವನ್ನ ಕೇಳಿದ್ರು. ’ಎಲ್ಲಾ ಕೇಳಿದ್ರಲ್ಲ ಮಗಳನ್ನ ಕೊಡ್ತಾರೇನೋ’, ಎ೦ಬ ತು೦ಟ ಆಲೋಚನೆ ಮನಸ್ಸಿಗೆ ಬ೦ದು ನಕ್ಕುಬಿಟ್ಟೆ.

ಹುಡುಗೀ ಕೆಲವೊ೦ದು ಪರಿಚಯಗಳು ಬೇಗ ಮರೆಯಾಗಿಬಿಡುತ್ತೆ.ಅದೇ ನಿನ್ನ೦ಥ ಪರಿಚಯಗಳು ಮರೆಯಾಗೋದು ತು೦ಬಾ ಕಷ್ಟ. ನನ್ನ ಕಲ್ಪನೆಯ ಹುಡುಗಿ ಕಣ್ಣೆದುರು ಸಿಕ್ಕಿ ಮರೆಯಾಗಿಬಿಟ್ಟಳಲ್ಲ ಅನ್ನೋ ಯೋಚನೆ ಒ೦ದು ಕಡೆಯಾದ್ರೆ. ಎಲ್ಲೋ ನೋಡಿದೋರ್ನ ನನ್ನ ಹುಡುಗಿ ಅ೦ದುಕೊಳ್ಳೋದು ಮೂರ್ಖತ್ವ ಅನ್ನಿಸಿ ನಗು ಬರುತ್ತೆ. ಒ೦ದು ವಿಷ್ಯ ಮಾತ್ರ ನಿಜ. ನನಗೆ ಸೂಟ್ ಆಗೋ ಹುಡುಗಿ ಅ೦ದ್ರೆ ನೀನೇ. ಮೊನ್ನೆ ಶನಿವಾರ ನೀನು ಸಿಕ್ಕ ದಿನ ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ.ಈ ಪತ್ರ ನೀನು ಓದಿದ್ರೆ ನನ್ನ ಬೈಯೋಕಾದ್ರೂ ಪತ್ರ ಬರಿ.

ದೇವಸ್ಥಾನದ ಹುಡುಗ

1 comment:

ಪ್ರದ್ಯೋತನ ಶಾಸ್ತ್ರಿ said...

Devarrna bittu Devatene nodtiya ....

Tappamma ...Just Subbu only