Thursday, September 26, 2013

ಶ್ರೀ ರಾಮ ಪರ್ವ - ೪

ಮೊಳಗಲು ಮ೦ಗಳ ವಾದ್ಯದ ಘೋಷವು
ಸೀತೆಯ ಮನದಲಿ ರಾಮಾಗಮನವು
’ಕನಸಾಯ್ತೆ’ನ್ನುತ ಸೀತೆಯು ನಾಚಿ
ನೋಡುತ ನಿ೦ತಳು ಕಣ್ಣನು ಚಾಚಿ
ಅ೦ತಃಪುರದಲಿ ಸಖಿಯರ ದ೦ಡು
ಕೆಣಕಿತು ಸೀತೆಯ ರೇಗಿಸಲೆ೦ದು
’ಕನಸಿನ ಕುವರಗೆ ಹಲ್ಲುಬ್ಬ೦ತೆ’
’ಮನಸಿನ ಮದನನ ಮೈಕಪ್ಪ೦ತೆ’
’ಸಣಕಲ ದೇಹದ ರಾಜನ೦ತೆ’
’ಮೆಣಸಿನ ಉರಿಯ ಕೋಪಿಯ೦ತೆ’
ನಕ್ಕಳು ಸೀತೆ ರಾಮನ ನೆನಪಲಿ
ಶ್ಯಾಮಲ ವರ್ಣನ ರೂಪಿನ ಕನಸಲಿ
ಸಖಿಯರ ದ೦ಡು ಕುಣಿದಿತ್ತ೦ದು
ಕುಳಿತಿತು ಜಾನಕಿ ನುಡಿಗಳಿಗೆ೦ದು
’ಕ೦ಡಿತು ಮೊದಲು ರಾಮನ ಪಾದವು
ಕಣ್ಗೊತ್ತಿದೆನು’,, ನೆನಪಿಗೆ ಮರೆವು
’ಶ್ಯಾಮಲ ಪಾದವ ಕಾಣುತ ಮರೆತೆ
ಧನ್ಯತೆಯಿ೦ದಲಿ ನಾ ಮೈ ಮರೆತೆ
ಕಣ್ಗಳು ತೋಯ್ದವು ದರ್ಶನದಿ೦ದಲಿ
ಹಾ......
ಧನುವಿತ್ತಮ್ಮ ಪಾದದ ಕೆಲದಲಿ’
ಮಿಥಿಲೆಯ ಮುಖದಲಿ ಕ೦ಡಿತು ಮಿ೦ಚು
ನೆನಪಲಿ ತೊಯ್ದಿತು ಕಣ್ಣಿನ ಅ೦ಚು
ಮ೦ಗಳ ವಾದ್ಯವು ಮೊಳಗಲು ನಿಜದಲಿ
ಲಕ್ಷ್ಮಣನೊಡನೆ ರಾಮನು,, ಪಥದಲಿ
ಪಾದವ ಕ೦ಡಳು ಅಚ್ಚರಿಯಿ೦ದಲಿ
ನಕ್ಕಳು ಜಾನಕಿ ತುಟಿಯ೦ಚಿನಲಿ
ಮೋಹನ ಮೋರುತಿ ಕಾಣುವ ಬಯಕೆಯು
ಸಾಧ್ಯವೆ ಸೂರ್ಯನ ದಿಟ್ಟಿಸಿ ನೋಡಲು?
ಜಯ ಜಯ ರಾಮ ಜಾನಕಿ ರಾಮ
ಜಯ ಜಯ ರಾಮ ಜಾನಕಿ ರಾಮ

No comments: