Monday, November 25, 2013

ಮೊದಲ ತೊದಲು

ನೀಲಿ ಆಗಸದಿ ಚ೦ದ್ರ ಬಿ೦ಬವೋ
ಪ್ರಣತಿ ಪ್ರಭೆಯೊಳಗೆ ಪೂರ್ಣರೂಪವೊ

ಯಾವ ಮಾಯೆಯೋ ಯಾರ ಬಿ೦ಬವೋ
ಯಾವ ಲೋಕದ ದೇವ ಸಖ್ಯವೋ
ಮೂಡಿ ಬರುತಲಿದೆ ತೊದಲು ತೊದಲಾಗಿ
ಗರ್ಭಸಾಗರದಿ ಮತ್ಸ್ಯರೂಪದಲಿ
********************
ಏನು ಕಾರಣವೋ? ಏನು ತೊ೦ದರೆಯೋ
ತಿಣುಕಾಡುತಿಹನದೇಕೋ ಕಾಣೆ,
ನೆಲಯೂರಲು ನೆಲ ನೋಡುತಿಹನೇ?
ಇಲ್ಲಾ. . . ತನ್ನಿರುವಿಕೆಯನೂದಿತಿಹನೇ?
ಹೊಸ ಜಾಗವದಕೆ, ಹೊ೦ದಿಕೆಗೆ
ಉಪ್ಪು, ಹುಳಿ, ಖಾರ ಎಲ್ಲವೂ ಹೊಸದು
ಒಳಗೆ ಸೇರಿಸಲೊಲ್ಲ, ಮೇಲಕ್ಕೆ ದೂಡಿ
ಹೂ೦ಕರಿಸುತ್ತಾನೆ, ವಾಕರಿಸುತ್ತಾನೆ
’ಬೇಡೆನಗೆ’ ಎ೦ಬ೦ತೆ
ಸರಿಸಿಬಿಡುತ್ತಾನೆ.
’ಅವನೋ ... ಇಲ್ಲಾ ಅವಳೋ!’
’ಯಾವುದಾದರೇನು, ಸುಮ್ಮನಿರಿ’
*************
ಅಡುಗೆ ಮನೆಗೆ ಹೋಗಲೂ ಸಹ್ಯವಿಲ್ಲ
ಯಾವುದೂ ಸೇರದು ಇದೆ೦ಥ ಮಾಯೆ?!
ಹೇಳುತ್ತೀರಿ ನೀವು ’ ಇದು ಸೃಷ್ಟಿ ಕ್ರಿಯೆ’
ಅನುಭವಿಸಿ! ತಿಳಿಯಿರದರ ಛಾಯೆ!
(ನಗುತ್ತೇನೆ)
*************
ಕೇಳಿದಿರೇನು ಅವನೆದೆಬಡಿತದ ಗೈರತ್ತು
ಹತ್ತರದ ಎ೦ಟ೦ಶದವನ ಕರಾಮತ್ತು
ಈಗಷ್ಟೇ ಅರಳಿದೆದೆಯ ಬಡಿತವದೆಷ್ಟು!
ಅದಾವ ತಾಳ, ರಾಗ ಘರಾಣೆ ಪಟ್ಟು
*************
ಒಬ್ಬೊಬ್ಬರದೂ ಒ೦ದೊ೦ದು ವಾಕ್ಯ
ಅದು ಬೇಡ, ಇದು ತಿನ್ನು
ಹೀಗೆ ಮಲಗು, ಅ೦ಗಾತ ಬೇಡ
ಮಲಗು, ಹೆಚ್ಚು ಮಲಗದಿರು
ಎಲ್ಲ ಮಾತಿಗೊ೦ದು ಕೊನೆಮಾತು
’ಮಾಡಿದರೆ ಮಗುವಿಗೊಳಿತು’
ನನ್ನದು ಬರೀ ನಗು ಮೂಕ ಮಾತು
ಕಾಳಜಿಗೆ ನಗುತ್ತೇನೆ.ಆತ್ಮಾನ೦ದ...
ಏನೂ ದಕ್ಕದೆ ವಾಕರಿಸುತ್ತೇನೆ.
ಕಣ್ಣಲ್ಲಿ ನೀರು.
ಆನ೦ದ ಬಾಷ್ಪವೋ, ನೋವೋ
ಮುಜುಗರವೋ, ಕಣ್ತು೦ಬಿ ನಗುತ್ತೇನೆ
ಹೊಸ ಚಿಗುರಿನ ವರಾತ ನೋಡಿ
ಹೊಸ ಪದವಿಯ ಗೀತೆಯ ಹಾಡಿ

No comments: