Sunday, April 19, 2015

ಸಿರಾ ದಿಮರ ವಿನೋದ ಪ್ರಸಂಗಗಳು 2

ಕರಾಳ ರಾಜ್ಯದಲ್ಲಿ ಸಿರಾನು ನಿದ್ರಿಸುತ್ತಲೇ ಎಲ್ಲವನ್ನೂ ಮಾಡುತ್ತಿದ್ದ. ಅವನ ಮಂತ್ರಿಗಳೂ ಸದಾ ನಿದ್ರಾಮುಖರಾಗಿಯೇ ಇರುತ್ತಿದ್ದರು, ಜಾಗರೂಕನಾಗಿರುತ್ತಿದ್ದುದು ದಿಮನು ಮಾತ್ರ, ಇಡೀ ರಾಜ್ಯದಲ್ಲಿ ತನ್ನ ಹೆಸರು ಎಲ್ಲರ ಬಾಯಲ್ಲೂ ಕೇಳಬೇಕೆಂಬ ಅದಮ್ಯ ಆಸೆಯನ್ನು ಹೊತ್ತ ದಿಮನು ಎಲ್ಲರೂ ಒಪ್ಪುವ ವಿಷಯವನ್ನು ತುಚ್ಛೀಕರಿಸಿ ತನ್ನದೇ ಸಿದ್ದಾಂತವನ್ನು ಮಂಡಿಸಲು ನಿಂತನು, ಬಹುಜನರ ಮನ್ನಣೆಗೆ ಪಾತ್ರವಾದ ಯಾವ ಅಂಶವನ್ನೂ ಅವನು ಒಪ್ಪುತ್ತಿರಲಿಲ್ಲ, ಅವನ ಅನುಯಾಯಿಗಳು ಮೊಂಡ ಸೊಂಚ,ಯುದ್ದ ವೆಂಗರು ದಿಮನ ಮಾತುಗಳನ್ನು ತಲುಪಿಸುವ ಹೊಣೆ ಹೊತ್ತುಕೊಂಡಿರುವರಷ್ಟೆ. ಹೀಗಿರಲು ಒಮ್ಮೆ ಸಿರಾನು ದಿಮನ ಪರಿವಾರವನ್ನು ಊಟಕ್ಕೆ ಕರೆದನು. ದಿಮನು ಎಲ್ಲರೂ ಉಣ್ಣುವ ಊಟವನ್ನು ಬೇಡವೆಂದು ತನ್ನ ಕೋಳಿಯು ತಿನ್ನುವ ಆಹಾರವನ್ನು ತಿನ್ನಬೇಕೆಂದು ಅಪೇಕ್ಷಿಸಿದನು, ಕೋಳಿಯು ಮೊಂಡ ಸೊಂಚ ಇತ್ಯಾದಿಗಳ ತುರಿಕೆ ಕೊಂಬಿನ ಪುಡಿಯನ್ನು ತಿನ್ನುತ್ತಿತ್ತಷ್ಟೆ. ಈಗ ಪೇಚಾಟಕ್ಕೆ ಬಂದದ್ದು ದಿಮನ ಅನುಯಾಯಿಗಳಿಗೆ, ತಾವುಗಳು ತಮ್ಮ ಕೊಂಬಿನ ಪುಡಿಯನ್ನು ತಿನ್ನುವುದು ಹೇಗೆಂದು ಯೋಚಿಸುತ್ತಿದ್ದರು, ದಿಮನು ತಕ್ಷಣ ಸೊಂಚಳ ಕೊಂಬನ್ನು ಉಜ್ಜಿ ಪುಡಿಯನ್ನು ಉಂಡೆಗಟ್ಟಿದನು ಅದಕ್ಕೆ ಕೋಳಿ ಕಾಲಿನ ಉಗುರಿನ ಪುಡಿಯನ್ನೂ ಅದರ ಕೊಕ್ಕಿನ ಪುಡಿಯನ್ನೂ ಸೇರಿಸಿ ಅದಕ್ಕೊಂದಿಷ್ಟು ಉಪ್ಪು ಖಾರ ಸೇರಿಸಿ ತಿನ್ನ ತೊಡಗಿದನು, ಇದನ್ನು ಕಂಡ ಸೊಂಚ ಮೊಂಡ ಇತ್ಯಾದಿಗಳು ಒಬ್ಬರ ತುರಿಕೆ ಕೊಂಬಿನ ಪುಡಿಯನ್ನು ಮತ್ತೊಬ್ಬರು ಉಜ್ಜಿ ಉಂಡೆಗಟ್ಟಿ ಮಸಾಲೆ ಸೇರಿಸಿಕೊಂಡು ತಿನ್ನತೊಡಗಿದರು, ಸಿರಾನಿಗೆ ಇದು ವಿಚಿತ್ರವಾಗಿ ತೋರಿದರೂ ಯಾರೂ ಮಾಡದಿದ್ದುದನ್ನು ಇವರು ಮಾಡುತ್ತಿದ್ದಾರೆ, ಎಂದರೆ ಇದರ ಮಹತ್ವವೇನೋ ಇರಬೇಕು, ಮತ್ತು ಇವರು ಮಹಾತ್ಮರು ಎಂದುಕೊಂಡು ಅವರ ಬಳಿ ಮಸಾಲೆ ಉಂಡೆಯನ್ನು ಬೇಡಿ ತಿನ್ನತೊಡಗಿದನು. ಕೋಳಿಗೆ ಕೊಬ್ಬು ಹೆಚ್ಚಾದಂತೆ ಸಿರಾನಿಗೂ ಅವರ ಅನುಚರರಿಗೂ ಕೊಬ್ಬು ಹೆಚ್ಚತೊಡಗಿತು. ಕೆಲವೇ ಕ್ಷಣಗಳಲ್ಲಿ ಮೈತುಂಬಾ ವ್ಯಾಪಿಸಿದ ಕೊಬ್ಬು ಅವರ ಕೊಂಬನ್ನು ಮತ್ತೂ ಉದ್ದವಾಗಿಸಿತು. ಆಹ್ ನೋಡಿದಿರಾ ಈ ಅಲ್ಪಸಂಖ್ಯಾತ ಕೋಳಿಯ ಮಹಾತ್ಮೆ ಎನ್ನುತ್ತಾ ಹೊಸಸಂಶೋಧನೆಯನ್ನು ಮಾಡಿದವನಂತೆ ಅದನ್ನು ಡಂಗುರ ಹೊಡಿಸಿದನು. ಅದು ಹೀಗಿತ್ತು.
’ಕೇಳಿರಿ ಕೇಳಿರಿ ದೇಹದಲ್ಲಿ ಶಕ್ತಿ ಬರಲು ಮತ್ತು ನಿಮ್ಮ ತಲೆಯಲ್ಲಿ ಕೊಂಬು ಬರಲು ನಮ್ಮ ಅನುಯಾಯಿಗಳ ಕೊಂಬಿನಿಂದ ಮತ್ತು ನನ್ನ ಈ ಅಲ್ಪಸಂಖ್ಯಾತ ಕೋಳಿಯಿಂದ ತಯಾರಿಸಿದ ಮಸಾಲೆ ಪುಡಿಯನ್ನು ಸೇವಿಸಿರಿ. ಪುಡಿಯನ್ನು ಕೊಳ್ಳಲು ಹಣದ ಅವಶ್ಯಕತೆಯಿಲ್ಲ, ನೀವೊಮ್ಮೆ ಈ ಅಲ್ಪಸಂಖ್ಯಾತ ಕೋಳಿಯ ಕಡೆ ಅಯ್ಯೋ ಎಂದರೆ ಸಾಕು, ಕೇಳಿರಿ ಕೇಳಿರಿ......ಡಂಕಣಕ್ಕ ಡಂಕಣಕ್ಕ ಡಂಕಣಕ್ಕ ಡಂ ಡಂ ಡಂ’
ಇದನ್ನು ಕೇಳಿದ ಜನರು ಇದೆಲ್ಲೋ ಹುಚ್ಚು ಸಂತೆ ಎಂದು ಸುಮ್ಮನಾದರು ಆದರೆ ಕೆಲವು ಪಿಸುಪಿಸು ಗುಸುಗುಸು ಸುದ್ದಿ ಮಾಡುವವರು ಮತ್ತು ಬಚ್ಚಲುಮನೆಯ ಕತೆಯನ್ನು ಆಸ್ವಾದಿಸುವವರು ಇದನ್ನು ಕಾನೂನೆಂದುಕೊಂಡರು, ಇದನ್ನೇ ಎಲ್ಲರಿಗೂ ಹೇಳಿದರೂ ಕೂಡ, ಆದರೆ ಮಧ್ಯಮವರ್ಗದ ಮತ್ತು ಇತರೆ ವರ್ಗದ ಜನ ಹೆಚ್ಚಾಗಿ ತಲೆಗೆ ಹಾಕಿಕೊಳ್ಳಲಿಲ್ಲ. ಅವರಿಗೆ ಹೊತ್ತು ಹೊತ್ತಿಗೆ ಊಟ ಕೈತುಂಬಾ ಕೆಲಸ ಮತ್ತು ಜ್ಞಾನದ ಆಳ ಮತ್ತು ನಿದ್ದೆ ಇದ್ದರೆ ಸಾಕಿತ್ತು.
ಬಚ್ಚಲು ಜನರು ತಮ್ಮ ಕತೆಗಳ ಮೂಲಕ ಜನರಿಗೆ ತಮ್ಮ ವಾಂಛೆಗಳನ್ನು ತಲುಪಿಸತೊಡಗಿದರು ಆದರೆ ಅದು ಹೆಚ್ಚು ಪ್ರಚಾರವಾಗಲಿಲ್ಲ. ಕೊನೆಗೆ ಸುದ್ದಿಗಳನ್ನು ಗುದ್ದಿ ಒಂದು ಕಪ್ಪು ಬಿಳುಪಿನ ಕರ ಪತ್ರವನ್ನು ಹಂಚತೊಡಗಿದರು. ಆದರೆ ಅದೇ ಬಚ್ಚಲು ಕತೆಗಳು ಜನರ ಬಚ್ಚಲು ಮನೆಯ ಉರಿಗೆ ಹೊಗುತ್ತಿತ್ತು. ಬಚ್ಚಲು ಜನರು ತಮ್ಮ ಕರಪತ್ರಗಳು ಎಲ್ಲರ ಕೈ ಸೇರಿವೆ ಎಂದು ಮತ್ತು ಅದನ್ನು ಆಳವಾಗಿ ಅಧ್ಯಯನ ಮಾಡುತಿದ್ದಾರೆ ಎಂಬ ಭ್ರಮೆಯೊಂದಿಗೆ ಇದ್ದರು. ತಮ್ಮ ಕರಪತ್ರಗಳಲ್ಲಿ ತುರಿಕೆ ಕೊಂಬಿನ ಪುಡಿಯ ದೊಡ್ಡ ದೊಡ್ಡ ಜಾಹೀರಾತುಗಳನ್ನು ಹಾಕಿ ಜನರಿಗೆ ತಲುಪಿಸತೊಡಗಿದರು, ಕೊಬ್ಬು ಹೆಚ್ಚಾಗುವುದು ಯಾರಿಗೂ ಬೇಡವಾಗಿತ್ತು, ಎಲ್ಲರೂ ಸಿಕ್ಸ್ ಪ್ಯಾಕ್ ಮತ್ತು ಜ಼ೇರೋ ಸೈಝ್ ಗೆ ಜೋತು ಬಿದ್ದದ್ದರಿಂದ ಯಾವ ವರ್ಗದವರಿಗೂ ಈ ಪುಡಿಯ ಅವಶ್ಯಕತೆ ಬರಲಿಲ್ಲ, ಆದರೆ ಅವರ ಕರಪತ್ರಗಳನ್ನು ಮಾತ್ರ ತೆಗೆದುಕೊಂಡು ಒಲೆಗೆ ಹಾಕಿ ಸ್ನಾನ ಮಾಡುತ್ತಿದ್ದರು. ಹೀಗಿರುವಾಗ ಆ ಊರಿನ ಧಾರ್ಮಿಕ ಮುಖಂಡ ರಾಜ್ಯಾದ್ಯಂತ ತನ್ನ ನಿರ್ಮಲ ಮಾತುಗಳಿಗೆ ಸತ್ಯದ ವಾಕ್ಕುಗಳಿಗೆ ಹೆಸರಾಗಿದ್ದ, ಎಲ್ಲರೂ ಅವನನ್ನು ಕರೆಸಿ ಪ್ರವಚನ ಕೇಳುತ್ತಿದ್ದರು. ಜನರಿಗೆ ಅವನ ದಿನದ ವಹಿವಾಟಿಗಿಂತ ಆತನ ಆಚರಣೆ ಮತ್ತು ಸತ್ಯವನ್ನು ತೆರೆದಿಡುವ ಕ್ಷಾತ್ರ ಹೆಚ್ಚು ಇಷ್ಟವಾಗಿತ್ತು. ಎಲ್ಲ ವರ್ಗದ ಜಾತಿಯ ಜನರೂ ಅವನನ್ನು ಆದರಿಸತೊಡಗಿದರು. ಮುಖಂಡನು ತಾನು ಆಚರಿಸಿದ ಒಳ್ಳೆಯದೆನಿಸಿದ ವಿಚಾರಗಳನ್ನು ಹಂಚಿಕೊಳ್ಳತೊಡಗಿದನು, ಅದನ್ನೆಲ್ಲಾ ಯೊಚಿಸುವಷ್ಟು ಸಮಯವಿಲ್ಲದವರು ಆತನ ಮಾತುಗಳನ್ನು ಕೇಳತೊಡಗಿ ಅದರಲ್ಲಿ ಕೆಲವನ್ನಾದರೂ ಪಾಠಿಸಬೇಕೆಂದು ತಮಗೆ ತಾವೇ ನಿಬಂಧನೆಗಳನ್ನು ಹಾಕಿಕೊಳ್ಳತೊಡಗಿದರು. ವ್ಯಾಪಾರ ವಹಿವಾಟುಗಳ ನಡುವೆ ಧರ್ಮ ಸತ್ಯ ನೀತಿಗಳನ್ನು  ಆಚರಿಸತೊಡಗಿದರು. ಇದೆಲ್ಲವನ್ನೂ ಗಮನಿಸುತ್ತಿದ್ದ ದಿಮನ ತಲೆ ದಿಮ್ಮತಿರುಗಿ ಅವನ ದಿನದ ಕಾರ್ಯಗಳನ್ನು ಕರಪತ್ರದೊಳಗೆ ಸೇರಿ ಹಂಚುವಂತೆ ತನ್ನ ಅನುಯಾಯಿಗಳಿಗೆ ಹೇಳಿದ, ಮುಖಂಡನ ಮನುಷ್ಯತ್ವ ಎಂಬ ಶೀರ್ಷಿಕೆಯಡಿ ಅದು ನಾಡಿನಾಡ್ಯಂತ ತಲುಪಿತು, ಮುಖಂಡನ ಅನುಯಾಯಿಗಳಿಗೆ ಇದು ಅಸಹ್ಯವಾಗಿ ತೋರಿತು. ಮುಖಂಡನ ಮನುಷ್ಯಗುಣ ನಮಗೆ ಗೊತ್ತಿದ್ದೇ ಅದರಲ್ಲೇನಿದೆ? ಆತನ ಧಾರ್ಮಿಕ ಗುಣ ಮತ್ತು ಆತನ ನ್ಯಾಯ ಗುಣವಷ್ಟೇ ನಮಗೆ ಮುಖ್ಯ, ಮನುಷ್ಯನ ಮನುಷ್ಯಗುಣಕ್ಕಿಂತ ಅವನೊಳಗಿನ ದೈವಗುಣದ ಶ್ಲಾಘನೆಯಾಗಬೇಕೆಂದು ದಿಮನಲ್ಲಿ ಕೇಳಿದರು. ದಿಮನ ವರಾಹವದನವು ಬರಿಯ ನಗೆ ಸೂಸಿ ಅವರ ಬಯಕೆಯನ್ನು ತಳ್ಳಿಬಿಟ್ಟಿತು.
ಎಲೈ ಸಾತ್ವಿಕನೇ ಜನರು ತಮ್ಮ ನಡುವೆ ತಮ್ಮಂತೆಯೇ ಇರುವ  ಮತ್ತೊಬ್ಬರ ವ್ಯಕ್ತಿಗತ ಮನುಷ್ಯತ್ವವನ್ನು ತಿಳಿದುಕೊಳ್ಳಬೇಕೋ ಇಲ್ಲಾ ಮನುಷ್ಯತ್ವವನ್ನು ಮೀರಿ ಆತ ಮಾಡಿದ ಸಾಧನೆಯನ್ನು ತಿಳಿದು ಆತನನ್ನು ಗೌರವಿಸಬೇಕೋ? ಬಟ್ಟೆಗೆ ಬೆಲೆಯೋ? ಇಲ್ಲ ಬಟ್ಟೆಯೊಳಗಿನ ಆತ್ಮಕ್ಕೆ ಬೆಲೆಯೋ? ತಿಳಿದೂ ಹೇಳದಿದ್ದರೆ ನಿನ್ನ ಕೈಕಾಲುಗಳು ಮಸಿ ಹಿಡಿದ ಬೆಂಕಿ ಕಡ್ಡಿಗಳಾಗಿಬಿಡುತ್ತವೆ ಎಂದು ಪ್ರೇತಾಳವು ದರಿದ್ರಕನ್ನಡಿಯೊಳಗೆ ಬಿಂಬವಾಗಿಬಿಟ್ಟಿತು

No comments: