Sunday, May 10, 2015

ಸಾಗರದವಳಿಗೆ...

ಮತ್ತದೇ ಪ್ರೇಮಪತ್ರವೆಂದು ನಕ್ಕುಬಿಡಬೇಡ
ಏನುಂಟು ಏನಿಲ್ಲ ಪ್ರೇಮದಲಿ! ಅಭಾವ ಜಡ,
ದೂರಕೆ ಹೊರಟು ನಿಂತೆ ’ಕಣ್ಣಲ್ಲಿ ನೀರಿತ್ತೆ?’
ಕೇಳದಿರು ಹುಡುಗಿ, ವಿರಹದೂರಿನ ಕವಿತೆ

ಮಲ್ಲಿಗೆಯ ಮುಡಿದಿದೆ ನಿನ್ನ ಕತ್ತಲ ಹೆರಳು
ಹೋಗುವ ಮುನ್ನ ತಾಕಿತೇಕೆ ಬೆರಳು?
ಮೌನದಲಿ ಉಸಿರಿರಬಹುದು ಜೋಕೆಯೆಂದು
ಬೆರಳುಲಿದಿತ್ತು ’ನೀವು ಕೂಡ ಬನ್ನಿ’ರೆಂದು.

ಕಛೇರಿಯ ಒತ್ತಡದಲಿ ನೆನಪಾಗುವಳೆ ಹುಡುಗಿ?
ಕೇಳದಿರು ಈ ಪ್ರಶ್ನೆ
ಪರದೆಯ ಮುಂದೆ ಕೂತು ನೋಡುವೆನು ಕಿಟಕಿ
ಇನ್ನೆಷ್ಟು ದಿನ? ಕೈಬೆರಳು ಮಡಚಿ ಲೆಕ್ಕವಿನಿಟ್ಟೆ
’ಈಗಷ್ಟೆ ಹೊರಟವಳು’ ಬೇಸರದಿ ನಿಟ್ಟುಸಿರನಿಟ್ಟೆ

ಕೂಸಿನದು ಚಿಂತೆಯಿಲ್ಲ, ಯಾರಾದರೂ ಆದಾರು
ಅಲೆಸಿದರೆ ಆಯ್ತಲ್ಲ  ಕಾಡು, ನದಿ ತೆಪ್ಪ ಊರು,
ನೀನೊಬ್ಬಳೇ ಅಲ್ಲಿ? ನಕ್ಕು ಬಿಡುವೆ ನಾನಿಲ್ಲಿ,
ಸಾಗರವೆ ನಿನ್ನೂರು?, ನಿನ್ನೂರು ಸಾಗರವೆ!

1 comment:

Badarinath Palavalli said...

ನೀನೇ ಮಾಯೆಯೇ? ನಿನ್ನೊಳು ಮಾಯೆಯೇ ಎನ್ನುವಂತಾಯಿತು ಸಾಗರದ ಕಥೆ!